ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಸೀರೆಗೆ ಅಡಿಕೆ ಚೊಗರಿನ ಹೊಳಪು

Published 27 ಅಕ್ಟೋಬರ್ 2023, 23:53 IST
Last Updated 27 ಅಕ್ಟೋಬರ್ 2023, 23:53 IST
ಅಕ್ಷರ ಗಾತ್ರ

ತಿಳಿಯಾದ ಮೈಬಣ್ಣ, ಗಾಢ ವರ್ಣದ ಕಡಿದಾದ ಅಂಚು, ಮುತ್ತಿನ ಗೆರೆಯ ಚೌಕಳಿ, ಹಣೆಯ ಬೊಟ್ಟಿನಂಥ ಪುಟ್ಟಪುಟ್ಟ ಬುಟ್ಟಾ, ಅಮ್ಮನ ಸ್ಪರ್ಶದಷ್ಟೇ ಮೃದುವಾದ ಸೀರೆಯೊಂದನ್ನು ಕೈಗಿಟ್ಟರೆ, ಅದು ಕರಾವಳಿಯ ಕೈಮಗ್ಗದ ಉಡುಪಿ ಸೀರೆ ಎಂದು ಥಟ್ಟನೆ ಹೇಳಿಬಿಡಬಹುದು.

ಉಡುಪಿ ಸೀರೆಯ ವೈಶಿಷ್ಯವೇ ಅದು. ಬಾಸೆಲ್ ಮಿಷನ್ ‍ಪರಿಚಯಿಸಿರುವ ಮಲಬಾರ್ ಫ್ರೇಮ್‌ ಮಗ್ಗ, ಅದಕ್ಕೆ ಒಪ್ಪವಾಗಿ ಪೋಣಿಸಿರುವ ಒಂದೆಳೆ ಹತ್ತಿ ನೂಲಿನ ಸಾಲು, ಮಗ್ಗದ ಮೇಲಿರುವಾಗಲೇ ಗಂಜಿ ಹಾಕಿ ಹದಗೊಳಿಸುವ ನೇಕಾರರ ಚಮತ್ಕಾರ, ಕೈಯಿಂದ ಅಡ್ಡ ನೂಲನ್ನು ಹಾಯಿಸಿ ನೇಯುವ ತಂತ್ರಗಾರಿಕೆ ನೋಡುವುದೇ ಸೊಗಸು. 

ಕಡಲ ತಡಿಯ ವಾಣಿಜ್ಯ ನಗರಿಯಲ್ಲಿ ತಯಾರಾಗುವ ಈ ಕೈಮಗ್ಗದ ಸೀರೆಗಳಿಗೆ ದೊಡ್ಡ ಪರಂಪರೆಯಿದೆ. ಕಾಲಚಕ್ರದಲ್ಲಿ ಮಸುಕಾಗಿದ್ದ ದೇಸಿ ಉತ್ಪನ್ನಕ್ಕೆ ಈಗ ಮತ್ತೆ ಉಚ್ಛ್ರಾಯ ಕಾಲ. ಜಿಐ ಮಾನ್ಯತೆಯನ್ನು ಮುಡಿಗೇರಿಸಿಕೊಂಡಿರುವ ಉಡುಪಿ ಸೀರೆ ನೇಕಾರರ ಬದುಕಿಗೆ ನೆಲೆ ಕಲ್ಪಿಸಿದೆ. ಅಜ್ಜಿಯರು ಉಡುವ ಸೀರೆ ಎಂಬ ವೈರಾಗ್ಯದ ಭಾವ ಬದಿಗೆ ಸರಿದು, ತರುಣಿಯರು, ತಾರೆಯರ ಹೃದಯಕದ್ದ ಉಡುಪಿ ಸೀರೆ, ಮಾರುಕಟ್ಟೆಯಲ್ಲಿ ತನ್ನದೇ ಬ್ರ್ಯಾಂಡ್‌ ಸೃಷ್ಟಿಸಿದೆ. ಇತ್ತೀಚೆಗೆ ನಡೆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಗಳ ಮದುವೆಯಲ್ಲೂ ಉಡುಪಿ ಸೀರೆ ಮೆರೆದಿದೆ.

ಕಿನ್ನಿಗೋಳಿಯಲ್ಲಿರುವ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದಲ್ಲಿ ಪ್ಲೇನ್‌ ಸೀರೆ, ಚೌಕಳಿ ಸೀರೆ, ಬುಟ್ಟಾ ಸೀರೆ, ಗೆರೆಯ ಸೀರೆ, ಯಕ್ಷಗಾನದ ಕಸೆ ಸೀರೆಗಳು ವೈವಿಧ್ಯ ವರ್ಣಗಳಲ್ಲಿ ಸಿದ್ಧವಾಗುತ್ತವೆ. ಹೊಸದಾಗಿ ಪ್ರಯೋಗಿಸಿರುವ ಅಡಿಕೆ ಚೊಗರಿನ ನೈಸರ್ಗಿಕ ಬಣ್ಣವು ಉಡುಪಿ ಸೀರೆಯ ಹೊಳಪನ್ನು ಹೆಚ್ಚಿಸಿ, ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿದೆ. ಆನ್‌ಲೈನ್‌ನಲ್ಲೂ ಇವು ಲಭ್ಯ ಇವೆ. ಉಡುಪಿ ಸೀರೆ ಖರೀದಿಸಿದವರಿಗೆ ಅದರ ಲೇಬಲ್‌ನ ವೈಶಿಷ್ಟ್ಯ ಮುದ ನೀಡುತ್ತದೆ. ಲೇಬಲ್‌ನಲ್ಲಿ ನೇಕಾರರ ಚಿತ್ರವನ್ನೇ ಅಚ್ಚುಹಾಕಿ ಸೀರೆಯ ತಯಾರಕರನ್ನು ಪರಿಚಯಿಸಲಾಗುತ್ತಿದೆ.

ತಾಳಿಪಾಡಿ ಸಂಘದ ಎಲ್ಲ ಹಿರಿಮೆಗಳ ಹಿಂದೆ ಅವಿರತ ಕೆಲಸ ಮಾಡಿದ್ದು ಕಾರ್ಕಳದ ಕದಿಕೆ ಟ್ರಸ್ಟ್. ಉಡುಪಿ ಸೀರೆ ಉಳಿಸುವ ತುಡಿತದಿಂದ ಅಭಿಯಾನ ಕೈಗೆತ್ತಿಕೊಂಡು ಸುತ್ತಮುತ್ತಲಿನ ಜನರಿಗೆ ನಿರಂತರ ತರಬೇತಿ ನೀಡಿ, ಅವರ ಬೆನ್ನಿಗೆ ನಿಂತು ಹುರಿದುಂಬಿಸುತ್ತಿದೆ. ಹಿಂದೆ ಎಂಟು ನೇಕಾರರಿದ್ದ ತಾಳಿಪಾಡಿ ನೇಕಾರರ ಸಂಘದಲ್ಲಿ ಈಗ 35ಕ್ಕೂ ಹೆಚ್ಚು ಮಂದಿ ನೇಯ್ಗೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಪುನಶ್ಚೇತನ ಯಜ್ಞದ ರೂವಾರಿ ಕದಿಕೆ ಟ್ರಸ್ಟ್ ಸ್ಥಾಪಕಾಧ್ಯಕ್ಷೆ ಮಮತಾ ರೈ ಮತ್ತು ಅವರಿಗೆ ಹೆಗಲಾದವರು ಅವರ ಪತಿ ಬಿ.ಸಿ.ಶೆಟ್ಟಿ. 

ತಾಳಿಪಾಡಿ ಸಂಘದ ಜೊತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಿವಳ್ಳಿ, ಪಡುಪಣಂಬೂರು, ಬ್ರಹ್ಮಾವರ ಮತ್ತಿತರ ಐದಾರು ನೇಕಾರರ ಸಹಕಾರ ಸಂಘಗಳಲ್ಲಿ ಉಡುಪಿ ಸೀರೆಗಳು ತಯಾರಾಗುತ್ತವೆ. ಹಿರಿಯರಿಗೆ ಸೀಮಿತವಾಗಿದ್ದ ಕಸುಬಿನಲ್ಲಿ ಹೊಸ ತಲೆಮಾರು ತೊಡಗಿಕೊಂಡಿದ್ದು, 100ಕ್ಕೂ ಹೆಚ್ಚು ಜನರಿಗೆ ಮಗ್ಗದ ನಡುವೆ ಬಾಂಧವ್ಯ ಬೆಸೆದಿದೆ.

 ಅಡಿಕೆ ಚೊಗರಿನ ಬಣ್ಣದಲ್ಲಿ ತಯಾರಾದ ಉಡುಪಿ ಸೀರೆ  – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
 ಅಡಿಕೆ ಚೊಗರಿನ ಬಣ್ಣದಲ್ಲಿ ತಯಾರಾದ ಉಡುಪಿ ಸೀರೆ  – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
 ಮನಸೆಳೆಯುವ ಗಾಢ ವರ್ಣದ ಸೆರಗಿನ ಉಡುಪಿ ಸೀರೆ  – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
 ಮನಸೆಳೆಯುವ ಗಾಢ ವರ್ಣದ ಸೆರಗಿನ ಉಡುಪಿ ಸೀರೆ  – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸೀರೆ ನೇಯ್ದವರಿಗೆ ಪ್ರದರ್ಶಿಸುವ ಸಂಭ್ರಮ  – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸೀರೆ ನೇಯ್ದವರಿಗೆ ಪ್ರದರ್ಶಿಸುವ ಸಂಭ್ರಮ  – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
 ಉಡುಪಿ ಸೀರೆಯಲ್ಲಿ ಬುಟ್ಟಾದ ಸೊಬಗು  – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT