ಮಂಗಳವಾರ, ಫೆಬ್ರವರಿ 25, 2020
19 °C

ಮದುವೆಯ ನಂತರ‘ಅವಳು’ ಮಾತ್ರ ಬದಲಾಗಬೇಕೆ?

ಶೃತಿ ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ರಿಲೇಷನ್‌ಶಿಪ್‌: ಮದುವೆಯಾದ ನಂತರ ಪತಿಯ ನಿರೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಆಸೆ– ಆಕಾಂಕ್ಷೆಗಳನ್ನು ಬದಲಾಯಿಕೊಳ್ಳುವುದು ಎಷ್ಟೋ ಹೆಣ್ಣುಮಕ್ಕಳಿಗೆ ತನ್ನತನವನ್ನು ಬಿಟ್ಟುಕೊಟ್ಟಂತೆ ಎನಿಸಬಹುದು; ಸಂಬಂಧಕ್ಕೆ ಗುಡ್‌ಬೈ ಹೇಳುವ ಪ್ರಸಂಗ ಎದುರಾಗಬಹುದು.

ಆಕೆ ಸಂಜನಾ. ಸಹೋದ್ಯೋಗಿ ಅಮಿತ್‌ನನ್ನು ಪ್ರೀತಿಸಿ ಮದುವೆಯಾದವಳು. ಮದುವೆಗಿಂತ ಮುಂಚೆ ವಾರಾಂತ್ಯದಲ್ಲಿ ಸ್ನೇಹಿತೆಯರ ಜೊತೆ ಕರೋಕೆ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಖುಷಿ ಪಡುತ್ತಿದ್ದಳು. ಆದರೆ ಮದುವೆಯ ನಂತರ ಪತಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಆ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಕೈ ಬಿಡಬೇಕಾಯಿತು. ಇದೊಂದೇ ವಿಷಯವಲ್ಲ, ಆಕೆ ಬರೆಯುತ್ತಿದ್ದ ಕವನಗಳನ್ನು ಹೊಗಳುತ್ತಿದ್ದ ಅಮಿತ್‌, ನಂತರ ಎಲ್ಲರೆದುರಿಗೆ ಅಪಹಾಸ್ಯ ಮಾಡತೊಡಗಿದ್ದ. ಒಳಗೊಳಗೇ ಬೇಸರ, ನೋವು ಅನುಭವಿಸುತ್ತಿದ್ದ ಸಂಜನಾಳ ನಿರಾಶೆ ಒಂದು ದಿನ ಸ್ಫೋಟವಾಗಿ ಜಗಳ ತಾರಕಕ್ಕೇರಿತು. 

ಗಂಡ- ಹೆಂಡತಿ ನಡುವಿನ ಸಂಬಂಧದಲ್ಲಿ ಪರಸ್ಪರ ಪ್ರೀತಿ, ನಂಬಿಕೆ, ಹೊಂದಾಣಿಕೆ ಅಷ್ಟೊಂದು ಸುಲಭವಲ್ಲ; ಸಂಬಂಧವನ್ನು ನಿಭಾಯಿಸುವುದು ಈ ಆಧುನಿಕ ದಿನಮಾನದಲ್ಲಿ, ನಗರದ ಸಂಕೀರ್ಣ ಬದುಕಿನಲ್ಲಿ ಇನ್ನೂ ಕಷ್ಟವೇ. ಹಾಗಂತ ಪತಿಯನ್ನೋ ಅಥವಾ ಸಂಗಾತಿಯನ್ನೋ ಖುಷಿಯಾಗಿಡಲು ಎಷ್ಟು ಅಂತ ಪ್ರಯತ್ನಪಡಬೇಕು, ಮನಸ್ಸಿಲ್ಲದಿದ್ದರೂ ಹೊರನೋಟಕ್ಕೆ ಖುಷಿಯಾಗಿದ್ದಂತೆ ತೋರ್ಪಡಿಸಿಕೊಳ್ಳಬೇಕು? ಇದು ಹಲವು ವಿವಾಹಿತ ಯುವತಿಯರನ್ನು ಕಾಡುವ ಪ್ರಶ್ನೆ.

ಉದಾಹರಣೆಗೆ ಮದುವೆಗಿಂತ ಮುನ್ನ ಕಾಲೇಜಿನಲ್ಲಿ ಸ್ನೇಹಿತರೆಂದೋ, ಕಚೇರಿಯಲ್ಲಿ ಸಹೋದ್ಯೋಗಿಗಳೆಂದೋ ಪುರುಷರೊಂದಿಗೆ ಸಲೀಸಾಗಿ ಮಾತನಾಡುತ್ತ ಬೆರೆಯುತ್ತಿದ್ದ ಯುವತಿ ಮದುವೆಯ ನಂತರ ತನ್ನ ಪತಿಗೆ ಇಷ್ಟವಾಗುವುದಿಲ್ಲ ಎಂದು ಮಾತನ್ನೂ ಆಡದೆ ಮೋರೆ ತಿರುವಿ ಹೋಗುವ ಪ್ರಸಂಗಗಳು ಎದುರಾಗಬಹುದು. ಆದರೆ ಪತಿ ಮಾತ್ರ ತನ್ನ ಹಿಂದಿನ ಗೆಳತಿಯರೊಂದಿಗೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಳ್ಳುವುದು ಮಾಮೂಲು. ‘ಗಂಡನಿಗೆ ನೋವಾಗಬಹುದು ಅಥವಾ ನಂತರ ಜಗಳವಾಡಿದರೆ ಎಂಬ ಭಯದಿಂದ ಇಂತಹ ನಡವಳಿಕೆ ಸಾಮಾನ್ಯ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ರಮ್ಯಾ ದೇಶಮಾನೆ.

ಸಮತೋಲನದ ಬದುಕು

ಆದರೆ ಯಾರಿಗೇ ಆಗಲಿ, ಸಾಮಾಜಿಕ ಬದುಕು ಅತ್ಯಂತ ಮುಖ್ಯ. ವೈಯಕ್ತಿಕ ಹಾಗೂ ಸಾಮಾಜಿಕ ಬದುಕನ್ನು ಸಮತೋಲನ ಮಾಡಬೇಕಾಗುತ್ತದೆ. ಇದನ್ನು ಪತಿಗೆ ಮನದಟ್ಟು ಮಾಡಿ ಎಂಬುದು ಅವರ ಸಲಹೆ. ಆದರೂ ಪತಿ ಅನುಮಾನ ವ್ಯಕ್ತಪಡಿಸಿದರೆ ಆಪ್ತ ಸಮಾಲೋಚಕರ ನೆರವು ಪಡೆಯಿರಿ.

ಉದ್ಯೋಗಸ್ಥ ಯುವತಿಯರ ಸಾಮಾನ್ಯ ಸಮಸ್ಯೆ ಎಂದರೆ ತಮ್ಮ ಉದ್ಯೋಗದ ಬಗ್ಗೆ ಪತಿಗೆ ಅಷ್ಟೊಂದು ಸಮಾಧಾನವಿಲ್ಲ ಎಂಬುದು. ಆದರೆ ಆ ಉದ್ಯೋಗದ ಬಗ್ಗೆ ನಿಮಗೆ ನಿಜವಾಗಿಯೂ ಆಸಕ್ತಿ ಇದೆಯಾ ಎಂದು ನಿಮ್ಮನ್ನು ಪ್ರಶ್ನೆ ಮಾಡಿಕೊಳ್ಳಿ. ಹೌದು ಎಂದಾದರೆ ಪತಿ ಯಾಕೆ ಅದರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸಿ. ಅದರಿಂದ ಮನೆಯಲ್ಲಿ ನಿಜವಾಗಿಯೂ ವಾತಾವರಣ ಕೆಡುತ್ತಿದೆ ಎಂದರೆ ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಲು ಯತ್ನಿಸಿ. ಆದರೆ ಸುಖಾಸುಮ್ಮನೆ ನಿಮ್ಮ ಉದ್ಯೋಗ ಅಥವಾ ನಿಮ್ಮ ಹವ್ಯಾಸವನ್ನು ತಮಾಷೆ ಮಾಡುವ ಪ್ರವೃತ್ತಿ ನಿಮ್ಮ ಪತಿಗಿದ್ದರೆ, ಬೇರೆಯವರ ಎದುರು ಅವಮಾನ ಮಾಡಿದರೆ ಕುಳಿತು ಮಾತನಾಡುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಆಸಕ್ತಿದಾಯಕ ಉದ್ಯೋಗ ಕಳೆದುಕೊಂಡು ಪರಿತಪಿಸಬೇಕಾಗುತ್ತದೆ. ಇದು ಖಿನ್ನತೆಗೂ ಬದಲಾಗಬಹುದು.

ವೈಯಕ್ತಿಕ ಭಾವನೆಗೆ ಬೆಲೆ

ಈಗಂತೂ ಪ್ರೇಮ ವಿವಾಹಗಳೇ ಜಾಸ್ತಿ. ಮದುವೆಗಿಂತ ಮುನ್ನ ಪರಸ್ಪರ ಅರಿತುಕೊಂಡಿರುತ್ತಾರೆ. ಪರಸ್ಪರರ ಹವ್ಯಾಸ, ನಡವಳಿಕೆ, ಮನೋಧರ್ಮ, ದೌರ್ಬಲ್ಯ.. ಹೀಗೆ ಅರ್ಥ ಮಾಡಿಕೊಂಡಿರಬಹುದು. ಎಲ್ಲೋ ಪಾರ್ಟಿಯಲ್ಲಿ ಮದ್ಯ ಸೇವಿಸಿರಬಹುದು. ಆಗ ಅದನ್ನು ಲಘುವಾಗಿ ತೆಗೆದುಕೊಂಡವರು ಮದುವೆ ನಂತರ ಆ ನಡವಳಿಕೆಯನ್ನು ಛೇಡಿಸಲು, ದೂಷಿಸಲು ಆರಂಭಿಸಬಹುದು. ಇದು ನಿಮಗೆ ಸಹಜವಾಗಿಯೇ ನೋವು ಕೊಡಬಹುದು ಅಥವಾ ಸಿಟ್ಟು ತರಿಸಬಹುದು.

ಆಗ ನಿಮ್ಮ ಇಷ್ಟಾನಿಷ್ಟಗಳನ್ನು ನೆನಪಿಸಿ. ಸಂಬಂಧದಲ್ಲಿ ವೈಯಕ್ತಿಕ ಭಾವನೆಗಳಿಗೆ ಬೆಲೆ ನೀಡಬೇಕೆಂದು ಹೇಳಿ. ನಿಮ್ಮ ಭಾವನೆಗಳನ್ನು ಗೌರವಿಸದಿದ್ದರೆ, ನಂಬಿಕೆಗಳಿಗೆ ಬೆಲೆ ಕೊಡದಿದ್ದರೆ ಸಂಬಂಧ ಮುಂದುವರಿಯುವುದಾದರೂ ಹೇಗೆ? ಅರ್ಥ ಮಾಡಿಕೊಂಡರೆ ಸರಿ, ಇಲ್ಲದಿದ್ದರೆ ಸ್ವಂತಿಕೆಯನ್ನು ಬಲಿಕೊಟ್ಟು ಸಂಬಂಧ ಉಳಿಸಿಕೊಳ್ಳುವುದರಲ್ಲಿ ಅರ್ಥವೇನಿದೆ ಹೇಳಿ!

# ವೈಯಕ್ತಿಕ ಕನಸು, ಆಕಾಂಕ್ಷೆಗಳಿಗೆ ಬೆಲೆ ಇರಲಿ

# ಪರಸ್ಪರರ ಭಾವನೆಗಳಿಗೆ ಗೌರವ ಇರಲಿ

# ಸಣ್ಣಪುಟ್ಟ ಹೊಂದಾಣಿಕೆಗಳು ಅನಿವಾರ್ಯ

# ಸಂಗಾತಿಯ ನಿರೀಕ್ಷೆಗಳು ಹೆಚ್ಚಾದರೆ ಕುಳಿತು ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು