ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳ ನೋವು ಬಲ್ಲಿರೇನು?

Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ಹೆಣ್ಣಿನ ಅತ್ಯಾಚಾರ ಇಡೀ ಮನುಕುಲಕ್ಕೆ ಅಸಹ್ಯ ಕೃತ್ಯ. ಇದೊಂದು ಖಂಡನೀಯ, ಖೇದನೀಯ ಮತ್ತು ಅಕ್ಷಮ್ಯ ಹಿಂಸಾತ್ಮಕ ಘೋರ ಅಪರಾಧ.  ನೈತಿಕತೆಯ ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿ ಕೆಸರಿನ ಕಂದಕದಲ್ಲಿ ಕುಸಿದಿದೆ ಎನ್ನುವುದರ ದ್ಯೋತಕ. ಒಂದರ ಹಿಂದೊಂದು ಈ ಪೈಶಾಚಿಕ ಬರ್ಬರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅತ್ಯಾಚಾರಕ್ಕೊಳಗೊಂಡು ಘಾಸಿಗೊಂಡಿರುವ ಹೆಣ್ಣಿನ ಜೀವದ ಶಾರೀರಿಕ ನೋವನ್ನು ಇನ್ನೂ ಹತ್ತಿರದಿಂದ ಅರಿಯಬೇಕು.

ಇದರಿಂದಾಗುವ ಮಾನಸಿಕ ಆಘಾತವಂತೂ ಹೇಳತೀರದು. ಆದರೆ ಈಕೆ ಇವೆಲ್ಲವನ್ನು ಮೆಟ್ಟಿ ಸಮಾಜದಲ್ಲಿ ತಲೆಯೆತ್ತಿ ಬಾಳಿ ಬದುಕಬೇಕು. ಅಂತಹ ವಾತಾವರಣವನ್ನು ಸೃಷ್ಟಿಸುವ ದಾಯಿತ್ವ ಇಡಿ ಸಮಾಜದ ಮೇಲಿದೆ. ಆದಷ್ಟು ಬೇಗ ಆಕೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸುಸ್ಥಿತಿಗೆ ತರಲು ಪ್ರಯತ್ನಿಸಬೇಕು. ಆಕೆಯನ್ನು ನೋಡಿಕೊಳ್ಳುವವರು ಹಾಗೂ ಕ್ರಮೇಣ ಆಕೆಗೂ ಈ ಆಘಾತದಿಂದ ಆಕೆಯ ದೇಹದಲ್ಲಾಗಬಹುದಾದ ತೊಂದರೆಗಳ ಬಗ್ಗೆ ವಿಸ್ತಾರವಾಗಿ ತಿಳಿಹೇಳಬೇಕು.
 
ಅತ್ಯಾಚಾರಕ್ಕೆ ಬಲಿಯಾದ ಎಲ್ಲ ಸ್ತ್ರೀಯರು ವೈದ್ಯರಲ್ಲಿ ತೋರಿಸಿಕೊಳ್ಳದೇ ಇರಬಹುದು. ಅಥವಾ ಅದರಿಂದುಂಟಾದ ಬೇರೆ ಶಾರೀರಿಕ ತೊಂದರೆಗಳಿಗೆ ವೈದ್ಯರ ಸಲಹೆ ಪಡೆಯಲು ಬರಬಹುದು. ಆಗ ಕೂಲಂಕಷವಾಗಿ ತಿಳಿದುಕೊಂಡು ಪರೀಕ್ಷೆ ನಡೆಸುವುದು ಮುಖ್ಯ. ಹೆಚ್ಚಾಗಿ ಘಟನೆಯಾದೊಡನೆ ಆಕೆಯಲ್ಲಿ ಈ ಕೆಳಗಿನ ತೊಂದರೆಗಳಿರುವ ಸಾಧ್ಯತೆ ಹೆಚ್ಚಿರುತ್ತದೆ.

* ಬಲಪ್ರಯೋಗದಿಂದ ಹಾಗೂ  ರಕ್ಷಿಸಿಕೊಳ್ಳುವ ಯತ್ನದಿಂದ ದೈಹಿಕ ನೋವು, ಜಜ್ಜಿದ ಗಾಯಗಳು, ಒಳ ಅಂಗಾಂಗಗಳಲ್ಲಿ ರಕ್ತಸ್ರಾವ.

* ಯೋನಿ, ಗುದದ್ವಾರದಲ್ಲಿ ರಕ್ತಸ್ರಾವ

* ಮೂರ್ಛೆ, ಅರೆಮೂರ್ಛೆ ಸ್ಥಿತಿ.

* ಅವಳ ಮೇಲೆ ಹಲ್ಲೆ ನಡೆದಿದೆಯೇ ಎಂಬುದನ್ನೂ ತಿಳಿದುಕೊಳ್ಳಬೇಕು. ಈ ಸ್ಥಿತಿಯಲ್ಲಿ ಆಕೆಯ ರಕ್ತಭಾರ, ಹೃದಯಗತಿ, ರಕ್ತಸ್ರಾವದ ನಿಯಂತ್ರಣ ಇತ್ಯಾದಿ ಮುಖ್ಯ ಜೀವಧಾರಕಗಳನ್ನು ತುರ್ತಾಗಿ ಸಮಸ್ಥಿತಿಗೆ ತರಿಸಲು  ಸುಸಜ್ಜಿತ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ. ಅಲ್ಲದೇ ಆಕೆ ಗರ್ಭಿಣಿಯಾಗುವ ಅಥವಾ ಲೈಂಗಿಕ ರೋಗಗಳಿಗೆ ಬಲಿಯಾಗುವ ಸಾಧ್ಯತೆ ತಿಳಿದು ಸೂಕ್ತ ಕ್ರಮ ಕೈಗೊಳ್ಳಬೇಕು.

ಆರಂಭದ ಆಘಾತದಿಂದ ಆಕೆ ಹೊರಬಂದ ಮೇಲೆ ಆಕೆಗೆ ಮುಂದೆ ಒದಗಿ ಬರುವ ಸಮಸ್ಯೆಗಳ ಬಗ್ಗೆ ಅಂತ:ಕರಣಪೂರ್ವಕ ಅರಿವು ನೀಡಬೇಕು. ಗರ್ಭಧಾರಣೆಯಾದ ಸ್ಥಿತಿಯಲ್ಲಿ (ತಡೆಯಲು ಸಾಧ್ಯವಾಗದಿದ್ದಲ್ಲಿ) ಕಾನೂನು ಬದ್ಧವಾಗಿ ಗರ್ಭಪಾತ ಮಾಡಿಸಬಹುದು. ಅಲ್ಲದೇ ಅವಳು ಚೇತರಿಸಿಕೊಳ್ಳುವ ಸಂದರ್ಭ ಮತ್ತು ಮುಂದೆ ಈ ಕೆಳಗಿನ ತೊಂದರೆಗಳು ಉಂಟಾಗಬಹುದು.

* ಯೋನಿ ಅಥವಾ ಗುದದ್ವಾರದಿಂದ ರಕ್ತಸ್ರಾವ

* ಯೋನಿ, ಮೂತ್ರಗತ ಅಥವಾ ಗುದದ್ವಾರದ ಸೋಂಕು

* ಯೋನಿಯಲ್ಲಿ ಉರಿಯೂತ, ನೋವು ಮರುಕಳಿಸಬಹುದು

* ಶ್ರೋಣಿ (ಪೆಲ್ವಿಕ್) ಭಾಗದಲ್ಲಿ ಸೋಂಕು

* ಕಿಬ್ಬೊಟ್ಟೆಯಲ್ಲಿ ಅಪಾರ ನೋವು

* ಅತಿಯಾದ ಬಿಳಿಸೆರಗು

* ಲೈಂಗಿಕ ನಿರಾಸಕ್ತಿ ಮತ್ತು ಸಂಭೋಗದ ಸಮಯದಲ್ಲಿ ನೋವು. ಅಲ್ಲದೇ ‘ಯೋನಿ’ ಅತಿಯಾಗಿ ಸಂಕುಚಿತಗೊಂಡು ‘ವ್ಯಾಜಿನಿಸ್ಮಸ್’ ಎಂಬ ತೊಂದರೆಯುಂಟಾಗಿ ಸಾಮಾನ್ಯ ಲೈಂಗಿಕ ಕ್ರಿಯೆಗೆ ತೊಂದರೆಯಾಗಬಹುದು.

* ಗೊನೋರಿಯಾ, ಸಿಫಿಲಿಸ್, ಏಡ್ಸ್ ಮುಂತಾದ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕುಗಳು

* ನಿದ್ರೆಯ ತೊಂದರೆ ಮತ್ತು ಕರಾಳ ಸ್ವಪ್ನ ಜಾಸ್ತಿಯಾಗಬಹುದು

* ಸ್ನಾಯು ಮತ್ತು ಮೂಳೆಗಳಲ್ಲಿ ಹೇಳಲಾಗದ ವೇದನೆಗಳು

* ಗುದದ್ವಾರ ಮತ್ತು ಗುದನಾಳದ ಆಘಾತದಿಂದ ಮಲವಿಸರ್ಜನೆಯಲ್ಲಿ ತೊಂದರೆಯಾಗಬಹುದು.

* ಮಾನಸಿಕ ಆಘಾತದಿಂದ ಆಕೆಯಲ್ಲಿ ಹಸಿವೆ ಕ್ಷೀಣಿಸಬಹುದು. ಆಕೆಯಲ್ಲಿ ವ್ಯಾಧಿಕ್ಷಮತ್ವ ಹದಗೆಡಬಹುದು.

* ಈ ಆಘಾತ ಚಿಕ್ಕ ಹೆಣ್ಣುಮಗುವಿನ ಮೇಲಾದಲ್ಲಿ ಎಲ್ಲರಿಂದ ದೂರವಿದ್ದು, ಮಂಕಾಗಿ ಭಯ, ನೋವು, ಮಾನಸಿಕ ತುಮುಲಗಳೊಂದಿಗೆ ಬೆಳೆಯುತ್ತದೆ. ಬೌದ್ಧಿಕ ಬೆಳವಣಿಗೆಯಲ್ಲಿ ಕುಂಠಿತ.

ಆಕೆಯ ಯಾತನೆ ಅವಳಷ್ಟೇ ಬಲ್ಲಳು. ಪೂರ್ಣ ಸಮಾಜದಿಂದ ರೋಸಿಹೋಗಿ ಎಲ್ಲರ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾಳೆ. ಸಿಟ್ಟು, ದ್ವೇಷ, ಅಸಹನೆ, ಭಯ ಮುಂತಾದವುಗಳಿಂದ ಹೊರಬರಲಾಗದೆ ಮಾನಸಿಕ ರೋಗಿಯಾಗುವ ಸಾಧ್ಯತೆಯಿರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಬಹುದು.
ಆಕೆಯ ಶರೀರ ಮತ್ತು ಮನಸ್ಸಿನಲ್ಲಾಗಬಹುದಾದ ತೊಂದರೆಗಳ ಚೆನ್ನಾಗಿ ಅರಿತುಕೊಂಡು ಆಕೆಯನ್ನು ಅತ್ಯಂತ ಸಂವೇದನಾಶೀಲತೆಯಿಂದ ನೋಡಿಕೊಂಡು ಅವಳು ಪುನ: ತನ್ನ ಜೀವನವನ್ನು ಸಾಮಾನ್ಯ ರೀತಿಯಲ್ಲಿ ನಡೆಸಲು ಸಹಾಯ ಮಾಡುವತ್ತ ಸಮಾಜ ಕಂಕಣಬದ್ಧವಾಗಬೇಕು. ಹೆಣ್ಣಿನ ಮೇಲೆ ನಡೆದ ಅತ್ಯಾಚಾರ ಆಕೆಯ ಗೌರವಕ್ಕೆಂದೂ ಕುಂದಲ್ಲ. ಅದು ಅವಳ ಮಾನಭಂಗವಲ್ಲ. ಈ ಹೇಯ ಕೃತ್ಯಗೈದ ಗಂಡಸಿನದ್ದು. ಈ ವಿಷಯವನ್ನೆಲ್ಲರೂ ಅರಿತುಕೊಂಡು ಆಕೆಗೆ ಪೂರ್ಣಬೆಂಬಲ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT