ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟೋಣ ಹೊಸ ಬದುಕು

Last Updated 28 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿದ್ದೇವೆ. ಕಳೆದುಹೋದ ವರ್ಷದುದ್ದಕ್ಕೂ ಜೊತೆ ಜೊತೆಗೆ ಸಾಗಿಬಂದ ಸಿಹಿ ಕಹಿ ಸಂಗತಿಗಳು ನೆನಪಿನ ಆಳದಲ್ಲಿ ಅಚ್ಚೊತ್ತಿವೆ. ಭವಿಷ್ಯದ ನಡೆಗೊಂದು ಭದ್ರ ಬುನಾದಿ ಹಾಕಿವೆ. ಬನ್ನಿ, ಅಂತಹದ್ದೊಂದು ಅರಿವಿನ ತಳಪಾಯದ ಮೇಲೆ ಭವಿಷ್ಯದ ಸೌಧ ನಿರ್ಮಿಸೋಣ. ಒಂದಷ್ಟು ವಿಶಾಲ ಹೃದಯ, ಒಂದಿಷ್ಟು ಮನೋ ನಿಗ್ರಹ, ಕೊಂಚ ಹೊಂದಾಣಿಕೆ, ಮಗದೊಂದಿಷ್ಟು ಸಹನಾ ಶಕ್ತಿ ಎಲ್ಲವೂ ಮೇಳೈಸಿದ ಹೊಸ ಬದುಕನ್ನು ಕಟ್ಟಿಕೊಳ್ಳೋಣ.

ಹೊಸ ವರ್ಷದಲ್ಲಿ ಎಲ್ಲವೂ ಹೊಸತಾಗಿರಲಿ, ಬದುಕು ಸುಂದರವಾಗಿರಲಿ ಎನ್ನುವ ಹಾರೈಕೆ ಎಲ್ಲರದು. ಹೊಸತೆಂದರೆ ಹಾಗೆ... ಉತ್ಸಾಹ ಪುಟಿದೇಳುತ್ತದೆ, ಹೊಸ ಆಸೆಗಳು ಚಿಗುರೊಡೆಯುತ್ತವೆ, ಹೊಸ ಕನಸುಗಳು ಕಣ್ಣ ಮುಂದೆ ತೇಲುತ್ತವೆ.

ಹೊಸ ವರ್ಷದಲ್ಲಿ ಹಳೆಯ ನೋವುಗಳಿಗೆ ನೆಲೆಯಿಲ್ಲ. ಏನಿದ್ದರೂ ಹೊಸ ಬದುಕು, ಹೊಸ ಬೆಳಕು...
ಎಲ್ಲದಕ್ಕೂ ಹೊಸ ವರ್ಷ ಬರಲಿ ಎಂದು ಕಾಯುವ ನಾವು, ಕಳೆದ ವರ್ಷ ಹಾಕಿಕೊಂಡ ಯೋಜನೆಗಳೆಷ್ಟೋ. ತೆಗೆದುಕೊಂಡ ಹೊಸ ನಿರ್ಧಾರಗಳೆಷ್ಟೋ.

ಅವೆಲ್ಲವೂ ಕಾರ್ಯರೂಪಕ್ಕೆ ಬಂದವೇ ಅಥವಾ ಆರಂಭಶೂರತ್ವವಾಗಿಯೇ ಉಳಿದು ಹೋದವೇ? ಹಾಗಿದ್ದರೆ ನಾವೆಲ್ಲಿ ತಪ್ಪಿದ್ದೇವೆ?ನಮಗೆ ಎರಡು ರೀತಿಯ ವ್ಯಕಿತ್ವಗಳು ಇರುತ್ತವೆ. ಒಂದು ನೈಜ ವ್ಯಕ್ತಿತ್ವ ಮತ್ತೊಂದು ಆದರ್ಶಪ್ರಾಯ ವ್ಯಕ್ತಿತ್ವ. ನಮ್ಮ ಒಳಗೆ ನಾವು ಹೇಗೆ ಇರುತ್ತೇವೆಯೋ ಅದು ನೈಜ ವ್ಯಕ್ತಿತ್ವ. ಇನ್ನೊಬ್ಬರ ಎದುರು ಕಾಣಿಸಿಕೊಳ್ಳುವುದು ಆದರ್ಶಪ್ರಾಯ ವ್ಯಕ್ತಿತ್ವ.

ನಮ್ಮ ನಿರ್ಧಾರಗಳು ಇವೆರಡಕ್ಕೂ ನಿಕಟವಾಗಿ ಇರಬೇಕು. ಆಗ ಮಾತ್ರ ಅವು ಸಾಕಾರಗೊಳ್ಳಲು ಸಾಧ್ಯ.ಹೊಸ ವರುಷದಲ್ಲಿ ಹೊಸ ನಿರ್ಧಾರಗಳು ಬೇಡವೇ? ಖಂಡಿತಾ ಬೇಕು. ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ಹುಮ್ಮಸ್ಸಿನೊಂದಿಗೆ, ಹೊಸ ಸಂಕಲ್ಪದೊಂದಿಗೆ ಹೊಸ ಬದುಕನ್ನು ಮುನ್ನಡೆಸಲು ಎಲ್ಲರೂ ನಿರ್ಧಾರ ತೆಗೆದುಕೊಳ್ಳೋಣ.

ಹೊಸ ವರುಷದಲ್ಲಿ ನಮ್ಮ ವ್ಯಕ್ತಿತ್ವವನ್ನೇ ಕೊಂಚ ಬದಲಾಯಿಸಿಕೊಂಡು ಕೆಲವು ವಿಷಯಗಳತ್ತ ಹೆಚ್ಚಿನ ಆಸಕ್ತಿ ವಹಿಸೋಣ. ಉತ್ತಮ ಬದುಕಿಗೆ ಮುನ್ನುಡಿ ಬರೆಯೋಣ. ಇಗೊಳ್ಳಿ, ಅದಕ್ಕೆ ಪೂರಕವಾದ ಒಂದಿಷ್ಟು ಟಿಪ್ಸ್‌ಗಳು:

ಸಕಾರಾತ್ಮಕ ಭಾವನೆಗಳು: ಜೀವನದಲ್ಲಿ ಎಂದೂ ಸಕಾರಾತ್ಮಕ (ಪಾಸಿಟಿವ್) ಭಾವನೆ ಉಳ್ಳವರಾಗಿರಿ. ಅಂತಹ ಭಾವನೆಗಳನ್ನು ಹೊಂದಿದವರೊಂದಿಗೆ ಗೆಳೆತನ ಬೆಳೆಸಿ. ಅಂಥವರ ಸಾನ್ನಿಧ್ಯ ನಮಗರಿವಿಲ್ಲದೇ ನಮ್ಮಳಗೆ, ನಮ್ಮ ಸುತ್ತ ಸಕಾರಾತ್ಮಕ ಶಕ್ತಿಯ ವಲಯವನ್ನು ನಿರ್ಮಿಸುತ್ತದೆ. ನಕಾರಾತ್ಮಕವಾದ ಚಿಂತನೆಗಳೆಲ್ಲವನ್ನೂ ಹೊಡೆದೋಡಿಸಿ, ಸಕಾರಾತ್ಮಕ ಚಿಂತನೆಗಳಿಗೆ ಮಾತ್ರ ಮನಸ್ಸಿನ ಬಾಗಿಲನ್ನು ತೆರೆಯಿರಿ. ಯಾರೇ ಆಗಲಿ ಅವರಲ್ಲಿನ ಸಕಾರಾತ್ಮಕ ಅಂಶಗಳತ್ತ ಮಾತ್ರ ಗಮನಹರಿಸಿ.

ನಗು ಮನುಷ್ಯನಿಗೆ ದೊರೆತ ದೊಡ್ಡ ವರದಾನ. ಮುಖದಲ್ಲಿ ಸದಾ ಮಂದಹಾಸ ಇರಲಿ. ಎದುರಿಗೆ ಯಾರೇ ಬರಲಿ ಅವರತ್ತ ಮುಗುಳ್ನಗೆ ಬೀರಿ. ಕಚೇರಿಯೊಳಗೆ ಪ್ರವೇಶಿಸುವಾಗಲೂ ನಗುಮುಖ ಇರಲಿ, ಮನೆಗೆ ಹೊರಟಾಗಲೂ ಆ ಮಂದಹಾಸ ಮಾಯವಾಗದಿರಲಿ.

ಉತ್ತಮ ಸ್ನೇಹಿತರು: ಬದುಕಿನುದ್ದಕ್ಕೂ ಉತ್ತಮ ಸ್ನೇಹಿತರು ನಮಗೆ ಅಗತ್ಯ. ಕಷ್ಟಕಾಲದಲ್ಲಿ ನೆರವಿಗೆ, ಬತ್ತಿಹೋದ ಜೀವನೋತ್ಸಾಹವನ್ನು ಪುಟಿದೆಬ್ಬಿಸಲು ಸ್ನೇಹಿತರು ಬೇಕೇ ಬೇಕು. ಸದಾ ಒತ್ತಡ ಎನಿಸುವ ಯಾಂತ್ರಿಕ ಜೀವನದಲ್ಲಿ ಸ್ನೇಹಿತರಿಗಾಗಿ ಎಲ್ಲಿದೆ ಸಮಯ ಎಂದು ಕೇಳುವ ಬದಲು, ಅವರಿಗಾಗಿ ಒಂದಷ್ಟು ಸಮಯ ಮೀಸಲಿಡಿ.

ಕೇವಲ ಅಗತ್ಯ ಬಂದಾಗ ಮಾತ್ರ ಅವರನ್ನು ಮಾತನಾಡಿಸದೆ, ಆಗಾಗ್ಗೆ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳಿ. ಅವರನ್ನು ಮನೆಗೆ ಆಹ್ವಾನಿಸಿ, ರಜಾ ದಿನಗಳಲ್ಲಿ ಪಿಕ್‌ನಿಕ್‌ಗೆ ತೆರಳಿ.
ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗಲೂ ನೀವು ಉತ್ತಮ ಕೇಳುಗರಾಗಿ. ನಿಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರಲು ಪ್ರಯತ್ನಿಸಬೇಡಿ. ಸ್ನೇಹಿತರ ಸಲಹೆ ನಮಗೆ ಅಗತ್ಯವಾದರೂ, ಅವರು ಹೇಳಿದ್ದೆಲ್ಲವೂ ವೇದವಾಕ್ಯ ಎಂದು ಪರಿಗಣಿಸುವ ಬದಲು ಅಗತ್ಯವಾದುದನ್ನು ಮಾತ್ರ ಸ್ವೀಕರಿಸಿ.

ಗುರಿ ತಲುಪಲು ಕನಸು: ಹೊಸ ವರ್ಷದಂದು ಹೊಸ ಗುರಿಯೊಂದಿಗೆ ನಿಮ್ಮ ದೃಢ ನಿಶ್ಚಯಗಳ ಪಟ್ಟಿ ಆರಂಭವಾಗಲಿ. ಜೀವನಕ್ಕೊಂದು ಗುರಿ ಬೇಕು. `ಗುರಿ ಇಲ್ಲದ ಬದುಕು ನಾವಿಕನಿಲ್ಲದ ನಾವೆಯಂತೆ' ಎಂಬ ಮಾತು ಕೇವಲ ಮಾತಲ್ಲ, ಅದು ಅಕ್ಷರಶಃ ಸತ್ಯವೂ ಹೌದು.

ಬದುಕಿನ ಔನ್ನತ್ಯಕ್ಕೇರಲು ಗುರಿ ಬೇಕು. ಕೆರಿಯರ್‌ನಿಂದ ಆರಂಭಿಸಿ ಪ್ರತಿ ಕ್ಷೇತ್ರದಲ್ಲೂ ಹೊಸ ಕನಸಿರಲಿ, ಕನಸು ನನಸಾಗುವ ವಿಶ್ವಾಸವೂ ನಿಮಗಿರಲಿ. ಆ ದಾರಿಗೆ ಅಡ್ಡಿ ಆಗುವ ವಿಷಯಗಳನ್ನು ಪಟ್ಟಿ ಮಾಡಿ ಮೊದಲು ಅವುಗಳನ್ನು ನಿವಾರಿಸಿಕೊಳ್ಳಿ. ಗುರಿ ಸಾಧನೆಗೆ ಕಾಲಮಿತಿ ಹಾಕಿಕೊಳ್ಳಿ. ಎಷ್ಟೇ ಕಷ್ಟವಾದರೂ ಕಾಲಮಿತಿಯ ಒಳಗೇ ಗುರಿ ಸಾಧಿಸುತ್ತೇನೆ ಎಂದು ದೃಢ ನಿರ್ಧಾರ ಮಾಡಿ.

ವಿಶಾಲ ಮನೋಭಾವ: ಓದುವ ಹವ್ಯಾಸ ಬೆಳೆಸಿಕೊಳ್ಳಿ. ಆಸಕ್ತಿ ಹುಟ್ಟಿಸುವ, ಉತ್ಸಾಹ ವರ್ಧಿಸುವ, ಪ್ರೇರಕಶಕ್ತಿ ಆಗಬಲ್ಲ ಪುಸ್ತಕಗಳನ್ನು ಓದಿ, ಪತ್ರಿಕೆ ಓದಿ, ದಿನನಿತ್ಯದ ವಿದ್ಯಮಾನಗಳತ್ತ ಕಣ್ಣು ಹಾಯಿಸಿ. ಟಿ.ವಿ.ಯಲ್ಲಿ ಬರುವ ಉತ್ತಮ ಕಾರ್ಯಕ್ರಮಗಳನ್ನು ವೀಕ್ಷಿಸಿ. ಸುತ್ತಲಿನ ಜಗತ್ತು ವಿಶಾಲವಾದುದು ಎಂದು ತಿಳಿದುಕೊಳ್ಳಿ. ಉತ್ತಮ ಮಾಹಿತಿಗಳು ಎಲ್ಲಿಂದಲೇ ಬರಲಿ ಸ್ವೀಕರಿಸಿ. ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವ ತರಗತಿಗಳಲ್ಲಿ ಪಾಲ್ಗೊಳ್ಳಿ.

ವ್ಯಕ್ತಿತ್ವ, ಉಡುಪು: ನಾವು ಧರಿಸುವ ಉಡುಪು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. `ಫಸ್ಟ್ ಇಂಪ್ರೆಶನ್ ಈಸ್ ದಿ ಬೆಸ್ಟ್ ಇಂಪ್ರೆಶನ್' ಎನ್ನುವಂತೆ ನಮ್ಮ ಉಡುಪು ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವಂತೆ ಇರಲಿ.

ಯಾವಾಗಲೂ ಮನಸ್ಸಿಗೆ ಹಿತ ಎನಿಸುವ ಉಡುಪುಗಳನ್ನು ಧರಿಸಿ. ಎಲ್ಲರೂ ಧರಿಸುತ್ತಾರೆ ಎಂದು ಅನುಕರಣೆ ಮಾಡಲು ಹೋಗಿ ನಿಮಗೆ ಹೊಂದಿಕೆಯಾಗದ ಉಡುಪು ಧರಿಸಿ ನಗೆಪಾಟಲಿಗೆ ಗುರಿಯಾಗಬೇಡಿ. ಮಾರುಕಟ್ಟೆಯಲ್ಲಿ ಅದೆಷ್ಟೋ ನಮೂನೆಯ, ಬಣ್ಣದ ವಸ್ತ್ರಗಳು ಇವೆ. ಬದಲಾವಣೆ ಬೇಕೆಂದಲ್ಲಿ ಧರಿಸುವ ವಸ್ತ್ರಗಳಲ್ಲೇ ಸ್ವಲ್ಪ ಬದಲಾವಣೆ ಮಾಡಿ ನೋಡಿ. ಆದರೆ ಏಕಾಏಕಿ ಫ್ಯಾಷನಬಲ್ ಆಗಬೇಡಿ. ನಿಧಾನವಾಗಿ ಬದಲಾವಣೆಗಳಿಗೆ ತೆರೆದುಕೊಳ್ಳಿ.

ಮನೆಯಿಂದ ಹೊರಗೆ ಕಾಲಿಡುವಾಗ ಮಾತ್ರವಲ್ಲ, ಮನೆಯಲ್ಲಿ    ಇರುವಾಗಲೂ ಶುಭ್ರವಾದ ವಸ್ತ್ರ ಧರಿಸಿ ಚೆಂದವಾಗಿರಲು ಪ್ರಯತ್ನಿಸಿ. ಮನೆಯಲ್ಲವೇ ಹೇಗಿದ್ದರೂ ನಡೆಯುತ್ತದೆ ಎಂಬ ಮನೋಭಾವವನ್ನು ಈ ಹೊಸ ವರ್ಷದಲ್ಲಿ ಬದಲಾಯಿಸಿ ನೋಡಿ, ನಿಮ್ಮ ಮನಸ್ಸು ಎಷ್ಟು ಗೆಲುವಾಗಿ ಇರುತ್ತದೆ ಎಂಬುದು ನಿಮಗೆ ತಿಳಿಯುತ್ತದೆ. ಸುಗಂಧ ದ್ರವ್ಯಗಳ ಆಯ್ಕೆಯಲ್ಲಿಯೂ ವೈವಿಧ್ಯ ಇರಲಿ. ಇತರರಿಗೆ ಕಿರಿಕಿರಿ ಉಂಟು ಮಾಡುವ ಪರ್‌ಫ್ಯೂಮ್‌ಗಳು ಬೇಡ.

ಹವ್ಯಾಸ ಬೆಳೆಸಿ: ಬಿಡುವಿನ ವೇಳೆಯನ್ನು ನಿಮ್ಮ ಇಷ್ಟದ ಹವ್ಯಾಸಗಳಿಗಾಗಿ ವಿನಿಯೋಗಿಸಿ. ಹಿಂದೆಂದೋ ಕಲಿತು ಅರ್ಧಕ್ಕೆ ಬಿಟ್ಟುಹೋದ ಹವ್ಯಾಸಗಳಿದ್ದರೆ ಅದನ್ನು ಮುಂದುವರಿಸುವ ದೃಢ ತೀರ್ಮಾನ ತೆಗೆದುಕೊಳ್ಳಿ. ವಾರದಲ್ಲಿ ನಿಮಗೆಂದೇ ಕೆಲವು ಗಂಟೆಗಳನ್ನು ಮೀಸಲಿಡಿ. ಆ ಸಮಯದಲ್ಲಿ ನಿಮಗಿಷ್ಟದ, ರಿಲ್ಯಾಕ್ಸ್ ನೀಡುವ ಕೆಲಸಗಳನ್ನು ಮಾಡಿ.

ಸಿನಿಮಾ ವೀಕ್ಷಣೆ ಒಂದು ಉತ್ತಮ ಹವ್ಯಾಸ. ಅಡುಗೆ ಇಷ್ಟವಾದಲ್ಲಿ ನಿಮಗಿಷ್ಟದ ಅಡುಗೆ ಮಾಡಿ, ಹೊಸ ರುಚಿಗಳನ್ನು ಪರೀಕ್ಷಿಸಿ. ಅಡುಗೆ ಉತ್ತಮ `ಸ್ಟ್ರೆಸ್ ಬಸ್ಟರ್' ಎಂಬುದನ್ನು ಮರೆಯಬೇಡಿ.
ವ್ಯಾಯಾಮ, ಧ್ಯಾನ: ಇಂದಿನ ಬಹುಪಾಲು ಕಾಯಿಲೆಗಳು ಜೀವನಶೈಲಿಯಿಂದಲೇ ಬರುವುದರಿಂದ ಮುಂಜಾನೆಯ ಅರ್ಧ ಗಂಟೆಯನ್ನು ನಡಿಗೆಗೆ, ಸೈಕ್ಲಿಂಗ್‌ಗೆ ಅಥವಾ ಟ್ರೆಡ್‌ಮಿಲ್‌ಗಾಗಿ ಬಳಸಿ.

ನೀವೊಬ್ಬರೇ ನಡೆಯಲು ಬೇಸರವಾದರೆ ಮನೆಮಂದಿಯನ್ನು ಅಥವಾ ನೆರೆಹೊರೆಯವರನ್ನು ಕರೆದುಕೊಂಡು ಹೋಗಿ. ಆರೋಗ್ಯದ ವಿಷಯದಲ್ಲೂ ಕಾಳಜಿ ಅಗತ್ಯ. ಮಧುಮೇಹ, ಕೊಲೆಸ್ಟ್ರಾಲ್ ಇರುವವರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದ್ದರೆ ಹೊಸ ವರ್ಷದಲ್ಲಿ ಅದನ್ನು ಕಡಿಮೆ ಮಾಡುವ ಗುರಿ ಹೊಂದಿ.

ದಣಿದ ದೇಹಕ್ಕೆ ವಿಶ್ರಾಂತಿಯೂ ಅಗತ್ಯ, ಪ್ರತಿ ದಿನ ಕನಿಷ್ಠ ಆರು ಗಂಟೆ ನಿದ್ರೆಯಾದರೂ ಅಗತ್ಯ. ಆರೋಗ್ಯ ಕೆಟ್ಟಾಗ ಸ್ವಯಂ ವೈದ್ಯರಾಗಬೇಡಿ. ಅಂತೆಯೇ ಕಾಯಿಲೆಗಳ ನಿರ್ಲಕ್ಷ್ಯವೂ ಬೇಡ. ಮನಸ್ಸನ್ನು ನಿಯಂತ್ರಣದಲ್ಲಿಡಲು ಧ್ಯಾನ ಅಗತ್ಯ. ನಕಾರಾತ್ಮಕ ಭಾವನೆಗಳಾದ ಕೋಪ, ಅಸೂಯೆ ದ್ವೇಷ, ಅಸಹಿಷ್ಣುತೆ ಮುಂತಾದವುಗಳನ್ನು ಮನಸ್ಸಿನಿಂದ ದೂರ ಓಡಿಸಲು ಧ್ಯಾನಕ್ಕೆ ಸಾಧ್ಯ.

ಭವಿಷ್ಯಕ್ಕಾಗಿ ನಿಕ್ಷೇಪ: ಭವಿಷ್ಯವನ್ನು ಯಾರೂ ಅರಿಯರು. ಏನು ಬೇಕಾದರೂ ಸಂಭವಿಸಬಹುದು. ವರ್ಷಗಳು ಕಳೆದಂತೆ ನಿವೃತ್ತಿ ಹತ್ತಿರ ಬರುವಂತೆ ಜವಾಬ್ದಾರಿಗಳೂ ಹೆಚ್ಚಾಗುತ್ತವೆ. ಅದಕ್ಕೆ ಉಳಿತಾಯ ಮನೋಭಾವ ನಮ್ಮಲ್ಲಿ ಮೂಡಬೇಕು.

ತಿಂಗಳ ಕೊನೆಯಲ್ಲಿ ಸಿಕ್ಕಿದ್ದೆಲ್ಲವನ್ನೂ ಖರ್ಚು ಮಾಡುವ ಬದಲು ಅದನ್ನು ವಿವಿಧ ಅಗತ್ಯಗಳಿಗಾಗಿ ಉಳಿತಾಯ ಮಾಡಬೇಕಾದದ್ದು ಎಲ್ಲರ ಕರ್ತವ್ಯ. ಹಣ ಹೆಚ್ಚು ಪಡೆಯುವ ಆಸೆಯಿಂದ ಷೇರು ಮಾರುಕಟ್ಟೆಯಲ್ಲಿ ತೊಡಗಿಸುವ ಮುನ್ನ ಜಾಗರೂಕರಾಗಿರಬೇಕು.

ಅಧಿಕ ಬಡ್ಡಿ ದೊರೆಯುವ ಸಲುವಾಗಿ ಬ್ಯಾಂಕ್ ಹೊರತುಪಡಿಸಿ ಇತರೆಡೆಗಳಲ್ಲಿ ಠೇವಣಿ ಇಡುವವರು, ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಅರಿತು ಹಣ ತೊಡಗಿಸಬೇಕು. ಬರುವ ಆದಾಯದಲ್ಲೇ ನಿವೃತ್ತ ಜೀವನಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ, ಮನೆ ಕಟ್ಟಲು ನಿಗದಿತ ಮೊತ್ತವನ್ನು ತೆಗೆದಿರಿಸುತ್ತಾ ಬಂದಲ್ಲಿ ಭವಿಷ್ಯವನ್ನು ಚಿಂತೆ ಇಲ್ಲದೆ ಸಲೀಸಾಗಿ ಎದುರಿಸಬಹುದು.

ಹಟ ಬಿಡಿ; ಬದಲಾವಣೆ ನೋಡಿ
ಎಂದೂ ಹಟಮಾರಿ ಆಗಬೇಡಿ. ಜೀವನ ಕ್ಷಣಿಕವಾದುದು ಎಂದು ತಿಳಿದು ಹಟಮಾರಿ ಧೋರಣೆಗೆ ವಿರಾಮ ಹಾಕಿ. ಇನ್ನೊಬ್ಬರನ್ನು ಮಾತುಗಳಿಂದ ನೋಯಿಸಬೇಡಿ. ಮುಖಕ್ಕೆ ಹೊಡೆದಂತೆ ಮಾತನಾಡುವ ಬದಲು ಒಂದರೆಕ್ಷಣ, ಹೀಗೆ ಹೇಳಬಹುದೇ ಎಂದು ಚಿಂತಿಸಿ. ನಾನು ಯಾರಿಗೂ ಹೆದರುವುದಿಲ್ಲ ಎಂಬ ಅಹಂಕಾರದ ವರ್ತನೆ ಬೇಡ.

ಸಣ್ಣ ಸಣ್ಣ ಘಟನೆಗಳಿಗೂ ಬೆಟ್ಟದಷ್ಟು ಚಿಂತೆ ಬೇಡ. ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಅವುಗಳನ್ನು ಧೈರ್ಯದಿಂದ ಎದುರಿಸಿ. ಸುಮ್ಮನೆ ಚಿಂತಿಸುತ್ತಾ ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಡಿ. ಇತರರ ಬಗ್ಗೆ ಸಹಾನುಭುತಿ ಉಳ್ಳವರಾಗಿ. ನಿಮ್ಮ ಆದಾಯದ ಸ್ವಲ್ಪ ಹಣವನ್ನು ಅನಾಥಾಶ್ರಮಗಳಿಗೆ ದಾನವಾಗಿ ನೀಡಿ.

ಸಂಬಂಧದ ಮಹತ್ವ ಅರಿಯಿರಿ

ಹೊಸ ವರ್ಷದಲ್ಲಿ ಕುಟುಂಬದ ಸದಸ್ಯರ ಜೊತೆ ಹೆಚ್ಚಿನ ಕಾಲ ಕಳೆಯುವ ತೀರ್ಮಾನ ತೆಗೆದುಕೊಳ್ಳಿ. ನೀವೊಬ್ಬ ಉತ್ತಮ ಕೇಳುಗರಾಗಿರಿ. ಹಾಗೆಯೇ ನೀವು ಹೇಳಬೇಕಾದುದನ್ನೂ ಹೇಳಿ. ಸುಮ್ಮನೆ ಉಪದೇಶ ನೀಡುವ ಅಭ್ಯಾಸ ನಿಮಗಿದ್ದಲ್ಲಿ ಅದನ್ನು ಇಂದೇ ದೂರವಿಡಲು ಪ್ರಯತ್ನಿಸಿ. ಹೊಸ ವರ್ಷದಿಂದ ಎಲ್ಲರೊಂದಿಗೆ ಸಂತೋಷದಿಂದ ನಡೆದುಕೊಳ್ಳುವ ತೀರ್ಮಾನ ತೆಗೆದುಕೊಳ್ಳಿ. ತನ್ನಿಷ್ಟದಂತೆಯೇ ಎಲ್ಲರೂ ನಡೆಯಬೇಕೆಂಬ ಹಟ ಬೇಡ.

ನಿಮ್ಮ ಸಂಗಾತಿ ನಿಮ್ಮ ಕನಸಿನ ಸಂಗಾತಿ ಅಲ್ಲದೇ ಇರಬಹುದು. ಹಾಗೆಂದು ಅವರನ್ನು ನಿಮ್ಮ ಇಚ್ಛೆಗನುಸಾರ ಬದಲಾಯಿಸಲು ಪ್ರಯತ್ನಿಸಬೇಡಿ. ಅದು ಕ್ರಮೇಣ ಪರಸ್ಪರ ಕಲಹಕ್ಕೆ ಕಾರಣವಾಗಬಹುದು. ಕುಟುಂಬದ ಸದಸ್ಯರಿಗೆ ಆಗಾಗ ಅಚ್ಚರಿಯ ಗಿಫ್ಟ್‌ಗಳನ್ನು ನೀಡುವ ಅಭ್ಯಾಸ ಬೆಳೆಸಿಕೊಳ್ಳಿ.

ಪರಸ್ಪರರ ಸಂಬಂಧ ಇನ್ನಷ್ಟು ಗಾಢವಾಗಲು ಇಂತಹ ಕೊಡುಗೆಗಳಿಂದ ಸಾಧ್ಯ. ಮಕ್ಕಳೇ ಆಗಲಿ, ಸಂಗಾತಿಯೇ ಆಗಲಿ ಉತ್ತಮ ಕೆಲಸಗಳನ್ನು ಮಾಡಿದಾಗ ಅಭಿನಂದಿಸಿ. ಅದು ಅವರಿಗೆ ಇನ್ನಷ್ಟು ಉತ್ತೇಜನವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT