ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ತೆರೆಸಿದ ‘ಮೂರನೇ ಕಿವಿ’

Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಈ  ಮಗು ಮುಖ್ಯವಾಹಿನಿಗೆ ಬರಲು  ಸಾಧ್ಯವಿಲ್ಲ’ – ಹೆಸರಾಂತ ಮಕ್ಕಳ  ತಜ್ಞ ಡಾಕ್ಟರ್ ಕಾಮತ್ ಅಂದು ಹೇಳಿದ  ಮಾತು ನೆನಪಾದರೆ ಇಂದೂ ಅದೇ ನೋವು ಮರುಕಳಿಸಿದಂತಾಗುತ್ತದೆ. ಅಂದು  ಅನುಭವಿಸಿದ ನೋವು- ವೇದನೆ ಶಬ್ದಗಳಿಗೆ  ನಿಲುಕದ್ದು.

ನನ್ನ ಮೊಮ್ಮಗು ಮೂರು ತಿಂಗಳಾದರೂ  ಕರೆದಾಗ ತಿರುಗಿ ನೋಡುತ್ತಿರಲಿಲ್ಲ. ಎರಡು  ತಿಂಗಳಿಗೇ ಶಬ್ದ ಬಂದ ಕಡೆ ತಿರುಗಬೇಕು. ಸ್ವಲ್ಪ  ತಡವಾಗಬಹುದೆಂದು ಭಾವಿಸಿದೆ. ಕಣ್ಣು - ಕಿವಿಯೆಲ್ಲಾ ಸರಿಯಾಗಿಯೇ ಕೆಲಸ ಮಾಡುತ್ತಿವೆ. ಮೂರು ತಿಂಗಳಾಯ್ತು- ನಾಲ್ಕಾಯಿತು. ನಾವು  ಕರೆದಿದ್ದು ಕೇಳಿಸಿದರೂ ಎಲ್ಲಿ  ನೋಡುತ್ತಿದೆಯೋ ಅಲ್ಲಿಂದಲೇ ನಗುತ್ತಿತ್ತು.  ಕೈಗೆ ಹತ್ತಿರವಿದ್ದ ವಸ್ತುವನ್ನು ಮಾತ್ರ  ಹಿಡಿಯುತ್ತಿತ್ತು, ಆದರೆ ಸ್ವಲ್ಪ ದೂರದಲ್ಲಿರುವ ಯಾವುದೇ ವಸ್ತುವಿಗೂ ಕೈ ಹಾಕುತ್ತಿರಲಿಲ್ಲ. 

ಕೆಟ್ಟದ್ದನ್ನು ಮನಸ್ಸು ಗ್ರಹಿಸಿದರೂ ಹೃದಯ  ಒಪ್ಪಲು ಸಿದ್ಧವಿರಲಿಲ್ಲ. ಒಮ್ಮೆ ಡಾಕ್ಟರ್ ಹತ್ತಿರ  ಇಂಜೆಕ್ಷನ್‌ಗೆಂದು ಹೋದಾಗ ಅವರಿಗೂ ಅನುಮಾನ ಬಂದು ಮಗುವಿನ ತಲೆಯ ಸುತ್ತಳತೆಯನ್ನೂ, ಮಗುವಿನ ಹಿಂದಿನ  ಆರೋಗ್ಯದ ಇತಿಹಾಸವನ್ನೂ ಮತ್ತೆ ಮತ್ತೆ  ಅವಲೋಕಿಸಿ ಇ.ಇ.ಜಿ. ಮಾಡಿಸಲು  ಹೇಳಿದರು.

ರಿಪೋರ್ಟ್‌ ಹಿಡಿದು ಹೆಸರಾಂತ  ವೈದ್ಯರಲ್ಲಿಗೆ ಹೋಗಿ ತೋರಿಸಿದೆವು. ಅವರ  ಮಾತಿಗೆ ಮಗಳು ಕುಸಿದು ಹೋದಳು. ಅಲ್ಲಿಂದ  ಶುರುವಾದ ಹೋರಾಟ ಇಂದಿಗೂ  ಮುಂದುವರಿದಿದೆ. ಲೆಕ್ಕವಿಲ್ಲದಷ್ಟು ವೈದ್ಯರನ್ನು  ನೋಡಿದ್ದಾಯ್ತು. ‘ಮಗುವಿನ ತಂದೆ ಅಥವಾ  ತಾಯಿಯ ವಂಶದಲ್ಲಿ ಈ ಸಮಸ್ಯೆ  ಯಾರಿಗಾದರೂ ಇದೆಯಾ? ರಕ್ತ  ಸಂಬಂಧದಲ್ಲಿ ಮದುವೆಯಾಗಿದೆಯಾ?’  ಎಲ್ಲರೂ ಕೇಳುವ ಮೊದಲ ಪ್ರಶ್ನೆ.

ಆದರೆ ಈ ರೀತಿಯ ಸಮಸ್ಯೆ ಎರಡೂ ಪರಿವಾರದ ಇತಿಹಾಸದಲ್ಲಿ ಇಲ್ಲ. ಮಗುವಿಗೆ  ಮಿದುಳಿನಲ್ಲಿ ಕೆಲ ನರಗಳ ಬೆಳವಣಿಗೆ  ಸರಿಯಾಗಿ ಆಗಿಲ್ಲ. ಇದಕ್ಕೆ ಯಾವುದೇ ಚಿಕಿತ್ಸೆ  ಎಂಬುದಿಲ್ಲ, ಆದರೆ ನಿರಂತರ ತರಬೇತಿ  ಬೇಕು-ಎಂಬುದು ಎಲ್ಲರ ಮಾತಿನ  ತಿರುಳಾಗಿತ್ತು.   
ಎಂಟು ವರ್ಷಗಳಿಂದ ಕೊನೆಯಿಲ್ಲದ ಈ  ನಿರಂತರ ತರಬೇತಿಯ ಕಾರ್ಯ ನಡೆಯುತ್ತಲೇ  ಇದೆ. ಮಗು ತನ್ನ ಕೆಲಸ ತಾನು  ಮಾಡಿಕೊಳ್ಳುವಷ್ಟಾದರೂ ಆಗಲಿ ಎಂಬುದು  ನಮ್ಮ ಗುರಿ.

ನಮಗೆ ಯಾವುದಾದರೂ ಸಮಸ್ಯೆ  ಬಂದಾಗಲೇ ಅದು ಚಿಕ್ಕದಿರಲಿ, ದೊಡ್ಡದಿರಲಿ- ಅಂಥ ಸಮಸ್ಯೆಯನ್ನು ಎದುರಿಸುತ್ತಿರುವವರು ನಮ್ಮ ಸುತ್ತಮುತ್ತಲೇ ಎಷ್ಟು ಜನರಿದ್ದಾರೆಂದು  ಗೊತ್ತಾಗುವುದು! ಸೆರಬ್ರಲ್ ಪಾಲ್ಸಿ (ಸಿ.ಪಿ.), ಮೆಂಟಲಿ ರಿಟಾರ್ಟೆಡ್ (ಎಂ.ಆರ್) ಶಬ್ದಗಳೆಲ್ಲಾ ದಿನಪತ್ರಿಕೆಯಲ್ಲಿ ಅಥವಾ ವಾರಪತ್ರಿಕೆ, ಯಾವುದಾದರೂ ಪುಸ್ತಕದಲ್ಲೋ ಓದಿದರೂ  ಕೆಲ ಹೊತ್ತಿನಲ್ಲಿ ಮರೆತು ಹೋಗುತ್ತಿತ್ತು. ಅವರ  ಮತ್ತು ಅವರ ಮನೆಯವರ ಅದರಲ್ಲೂ ಆ ಮಗುವನ್ನು ಹೆತ್ತ ತಾಯಿಯ ಮನಸ್ಥಿತಿಯ ಬಗ್ಗೆ  ಒಂದು ಕ್ಷಣ ಯೋಚನೆಯೂ ಬರುತ್ತಿರಲಿಲ್ಲ.    

ಈ  ನಡುವೆ ರವೀಂದ್ರ ಭಟ್ ಬರೆದ   ‘ಮೂರನೇ ಕಿವಿ’ ಎಂಬ ಪುಸ್ತಕ ಓದಲು  ಸಿಕ್ಕಿತು. ನಿಜಕ್ಕೂ ಅದ್ಭುತ ಪುಸ್ತಕ.
ಅವರ ಎರಡನೇ ಮಗು ಹುಟ್ಟು ಕಿವುಡು  ಎಂದು ತಿಳಿದಾಗ ಆ ತಾಯಿ-ತಂದೆ ಪಟ್ಟ  ವೇದನೆ-ನಂತರ ಆ ತಾಯಿ ಅದನ್ನೇ ಸವಾಲಾಗಿ  ಸ್ವೀಕರಿಸಿ ಮಗುವಿಗೆ ನಿರಂತರ ತರಬೇತಿ ನೀಡಿ, ಮಾತು ಕಲಿಸಿ, ಸಾಮಾನ್ಯ ಶಾಲೆಗೆ  ಸೇರಿಸುವಷ್ಟು ಮಾಡಿದ ಅಸಾಮಾನ್ಯ ಕೆಲಸ   ಬೆರಗು ಹುಟ್ಟಿಸುತ್ತದೆ. ಮಗುವಿಗೆ ಮಾತು , ಭಾಷೆ ಕಲಿಸಲಿಕ್ಕೆಂದೇ ಮೈಸೂರಿಗೆ ಬಂದು ನೆಲೆಸಿ ನಾಲ್ಕು ವರ್ಷ ಹಗಲಿರುಳೆನ್ನದೇ  ಯಾವುದೇ ಮನರಂಜನೆ, ಆಸೆ, ಹವ್ಯಾಸ, ಪ್ರವಾಸ-ಇತರ ಅಗತ್ಯಗಳನ್ನೆಲ್ಲಾ ಬದಿಗಿಟ್ಟು ಮಗುವಿನೊಂದಿಗೆ ಹೋರಾಡಿದ ಬಗ್ಗೆ ಬರೆದ  ಪುಸ್ತಕ ವಿಕಲಾಂಗ ಮಕ್ಕಳ ಪೋಷಕರೆಲ್ಲಾ  ಓದಲೇಬೇಕಾದ ಕೃತಿ!  

ನನಗಂತೂ ಈ ಪುಸ್ತಕವೊಂದು  ಭಗವದ್ಗೀತೆ, ಮುಳುಗುತ್ತಿರುವವನಿಗೊಂದು  ಹುಲ್ಲುಕಡ್ಡಿ. ಈ ಪುಸ್ತಕದ ಪ್ರಭಾವದಿಂದ    ಮೈಸೂರಿಗೆ ಹೋಗಿ ಎರಡು ವರ್ಷ ‘ಅಖಿಲ  ಭಾರತ ವಾಕ್ ಶ್ರವಣ ಸಂಸ್ಥೆ’ಯಲ್ಲಿ  ಮಗುವಿಗೆ  ನೀಡಬೇಕಾದ ನಿರಂತರ ತರಬೇತಿಯ ಬಗ್ಗೆ  ನಾವು ತರಬೇತಿ ಪಡೆದು ಬಂದಿದ್ದು ಈಗ  ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT