ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಿಗೆ ಹೆಣ್ತನದ ಕೋನ...

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೆನಪಿಸಿಕೊಳ್ಳಿ, ಹಾಗೇ ಸುಮ್ಮನೆ!

ಸ್ಟುಡಿಯೊಗಳಲ್ಲಿ ‘ನಗ್ರೀ ಸ್ವಲ್ಪ’ ಎಂಬ ಗದರಿಕೆಯ ಜೊತೆಗೇ ಕ್ಲಿಕ್‌ ಎಂದು ಮಿಂಚುವ ಕ್ಯಾಮೆರಾ ಹಿಂದೆ, ಮದುವೆಮನೆಗಳಲ್ಲಿ ಪುರೋಹಿತರಿಗಿಂತ ಪ್ರಬಲ ಆಕರ್ಷಣೆಯ ಕೇಂದ್ರಬಿಂದುವಾದ ಉರಿಬೆಳಕಿನ ಲೈಟು ಮತ್ತು ಉದ್ದಮೂತಿಯ ವಿಡಿಯೊ ಕ್ಯಾಮೆರಾ ಹಿಡಿದು ದಡಬಡ ಓಡಾಡುತ್ತಿರುವವರಲ್ಲಿ, ವಿಶ್ವಮಟ್ಟದ ಛಾಯಾಗ್ರಹಣ ಸಂಸ್ಥೆಗಳ ಮುಖ್ಯಸ್ಥಾನಗಳಲ್ಲಿ – ಇಲ್ಲೆಲ್ಲಾದರೂ ಒಂದಾದರೂ ಹೆಣ್ಣು ಮುಖ ಕಂಡ ನೆನಪಿದೆಯೇ? ಜಗಮಗ ಜಗವಾದ ಸಿನಿಮಾ ಕ್ಷೇತ್ರದಲ್ಲಿಯೂ ಮಹಿಳಾ ಸಿನಿಮಾಟೊಗ್ರಾಫರ್‌ ಯಾರು ಎಂದರೆ ಒಂದು... ಎರಡು... ಹೀಗೆ ಮುಂದಿನ ಸಂಖ್ಯೆಗೆ ಬೆರಳು ಮಡಿಸಿಕೊಳ್ಳಲೊಪ್ಪುವುದಿಲ್ಲ.

ಹಾಗಾದರೆ ಛಾಯಾಗ್ರಹಣ ಎನ್ನುವುದು ಮಹಿಳೆಗೆ ನಿಷೇಧ ವಲಯವೇ? ಹಾಗೇನೂ ಇಲ್ಲ. ಪ್ರಸ್ತುತ ಸಾಕಷ್ಟು ಮಹಿಳೆಯರು ಕ್ಯಾಮೆರಾ ಕಣ್ಣಿನಲ್ಲಿ ಜಗತ್ತನ್ನು ನೋಡುತ್ತಿದ್ದಾರೆ. ತಾವು ಅದೇ ಮಸೂರದಿಂದ ಭಿನ್ನ ಜಗತ್ತನ್ನು ಕಾಣಿಸಬಲ್ಲೆವು ಎಂಬುದನ್ನೂ ಸಾಬೀತುಗೊಳಿಸುತ್ತಿದ್ದಾರೆ. ಆದರೆ ಪುರುಷರಿಗೆ ಹೋಲಿಸಿದರೆ ಆ ಸಂಖ್ಯೆ ತುಂಬ ಕಡಿಮೆ. ಕಾರಣಗಳನ್ನು ಇಲ್ಲಿ ವಿವರಿಸಹೊರಟರೆ ಅದು ಮತ್ತದೇ ಕ್ಲಿಷೆಯ ಚರ್ಚೆಯಾದೀತು. ಅದರ ಬದಲು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಈ ಬಗ್ಗೆ ಕೇಳಿದರೆ ಅವರ ಮಾತುಗಳಲ್ಲಿ ಹೊಸ ಹೊಳಹುಗಳು ಸಿಕ್ಕೀತು.

(ನವ್ಯಾ ಕಡಮೆ)

ಕಳೆದ ಒಂದೆರಡು ವರ್ಷಗಳಿಂದ ಛಾಯಾಗ್ರಹಣವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮ ಎಂದು ಗಂಭೀರವಾಗಿ ಗಣಿಸಿರುವ ಉಷಾ ಬಿ.ಎನ್‌. ಅವರು ಹಲವು ಛಾಯಾಚಿತ್ರ ಸರಣಿಗಳನ್ನು ಮಾಡಿದ್ದಾರೆ. ನಗರ ಬದುಕಿನ ಹಲವು ಮುಖಗಳು ಅವರ ಮಸೂರದ ಕಣ್ಣಿನಲ್ಲಿ ಸೆರೆಯಾಗಿವೆ.

‘ಮಹಿಳೆಯರು ಛಾಯಾಗ್ರಹಣ ಕ್ಷೇತ್ರದಲ್ಲಿ ಬೆಳೆಯಲು ಕಷ್ಟವಾದ ವಾತಾವರಣವಿದೆ’ ಎಂಬ ಅಥವಾ ‘ಮಹಿಳೆಯರಿಗೆ ಯಾವ ತೊಂದರೆಯೂ ಇಲ್ಲ’ ಎಂಬ ಎರಡೂ ಅತಿಶಯದ ಹೇಳಿಕೆಗಳನ್ನೂ ಅವರು ನಿರಾಕರಿಸುತ್ತಾರೆ.

‘ಅದು ತುಂಬ ಸೂಕ್ಷ್ಮವಾದ ವಿಚಾರ. ಮಹಿಳಾ ಛಾಯಾಗ್ರಾಹಕಿ ಆಗಿರುವ ಕಾರಣಕ್ಕೆ ನನಗೆ ಎಲ್ಲ ರೀತಿಯ ತೊಂದರೆಗಳು ಬರುತ್ತಿವೆ ಎಂದು ಹೇಳಿದರೆ ಅದು ಸುಳ್ಳು. ಹಾಗೆಯೇ ಮಹಿಳೆ ಯಾವ ತೊಂದರೆಯೂ ಇಲ್ಲದೆ ಹೊರಗೆ ಹೋಗಿ ಫೋಟೊಗ್ರಫಿ ಮಾಡಿಕೊಂಡು ಬರಬಹುದು ಎಂಬುದೂ ನಿಜವಲ್ಲ. ಆ ಎರಡು ಅತಿಗಳ ನಡುವೆ ವಾಸ್ತವವಿದೆ’ ಎನ್ನುತ್ತಾರೆ ಅವರು. ‘ನಾನು ಹೋಗಿ ಫೋಟೊ ತೆಗೆದರೆ ಯಾರೂ ನನ್ನ ಮೇಲೆ ದಾಳಿ ಮಾಡುವುದಿಲ್ಲ. ಕಾಟ ಕೊಡುವುದಿಲ್ಲ. ಆದರೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಛಾಯಾಗ್ರಹಣ ಮಾಡುವಾಗ ಒಬ್ಬ ಪುರುಷನಷ್ಟು ಮಹಿಳಾ ಛಾಯಾಗ್ರಾಹಕಿ ಕಂಫರ್ಟ್‌ ಆಗಿ ಫೋಟೊ ತೆಗೆಯುವುದು ಸಾಧ್ಯವಾಗುವುದಿಲ್ಲ’ ಎಂದು ಸೂಕ್ಷ್ಮವಾಗಿಯೇ ಮಹಿಳಾ ಛಾಯಾಗ್ರಾಹಕಿಯರು ಎದುರಿಸುವ ಸವಾಲುಗಳ ಕುರಿತು ಅವರು ಮಾತನಾಡುತ್ತಾರೆ.

ಛಾಯಾಗ್ರಹಣ ಒಳ್ಳೆಯ ಹವ್ಯಾಸ ಮಾತ್ರವಲ್ಲ, ಸಂಪಾದನೆಯ ವೃತ್ತಿಯೂ ಹೌದು. ಆದರೆ ಇದನ್ನು ವೃತ್ತಿಯನ್ನಾಗಿ ಸ್ವೀಕರಿಸಿದವರಲ್ಲಿಯೂ ಮಹಿಳೆಯರು ವಿರಳಾತಿವಿರಳ. ಇದಕ್ಕೆ ಕಾರಣಗಳು ಹಲವು. ಹೆಣ್ಣಿಗೆ ಇರುವ ಹಲವು ರೂಢಿಗತ ಚೌಕಟ್ಟುಗಳನ್ನು ಪೂರ್ತಿಯಾಗಿ ಮುರಿಯಲು ಇನ್ನೂ ಸಾಧ್ಯವಾಗಿಲ್ಲ. ಇದು ಹೊರಜಗತ್ತಿನ ಒತ್ತಡ ಮತ್ತು ಮಹಿಳೆಯ ಮನೋಲೋಕದ ಆತಂಕ ಎರಡರ ಮಟ್ಟಿಗೂ ನಿಜ.

(ಮಾನಸಾ ಶರ್ಮ)

ನವ್ಯಾ ಕಡಮೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು. ಅದು ಅವರ ಪ್ರವೃತ್ತಿಯಷ್ಟೇ ಅಲ್ಲ, ವೃತ್ತಿಯನ್ನಾಗಿಯೂ ಮಾಡಿಕೊಳ್ಳಬೇಕು ಎಂಬ ಹಂಬಲ. ಆದರೆ ಅದು ಅಷ್ಟು ಸುಲಭ ಅಲ್ಲ ಎನ್ನುವುದರ ಅರಿವೂ ಅವರಿಗಿದೆ. ‘ನನ್ನದೇ ವಯಸ್ಸಿನ, ನನ್ನ ಜೊತೆಯೇ ಫೋಟೊಗ್ರಫಿಯನ್ನು ಕಲಿಯಲು ಆರಂಭಿಸಿದ ಸ್ನೇಹಿತ ಯಾವುದೇ ಫೋಟೊಗ್ರಫಿ ಪ್ರಾಜೆಕ್ಟ್ ಬಂದರೂ ಹಿಂದುಮುಂದು ನೋಡದೇ ಒಪ್ಪಿಕೊಂಡುಬಿಡುತ್ತಾನೆ. ಆದರೆ ನನಗೆ ಅದು ಸಾಧ್ಯವಾಗುವುದೇ ಇಲ್ಲ. ಮೊದಲು ಆ ಪ್ರಾಜೆಕ್ಟ್‌ ಯಾವುದು ಎಂದು ನೋಡಬೇಕು. ಫೋಟೊಶೂಟ್‌ ಮಾಡುವ ಸ್ಥಳ ಯಾವುದು ಎಂಬುದನ್ನು ನೋಡಿಕೊಳ್ಳಬೇಕು. ಅಲ್ಲಿ ಉಳಿದುಕೊಳ್ಳಲು ಒಳ್ಳೆಯ ವ್ಯವಸ್ಥೆ ಇದೆಯೇ ಎಂದು ನೋಡಬೇಕು. ಇಷ್ಟೆಲ್ಲ ಯೋಚನೆಗಳ ಆಚೆಗೂ ನನಗೆ ಸುರಕ್ಷಿತ ಅನಿಸಿದರೆ ಮಾತ್ರ ಆ ಪ್ರಾಜೆಕ್ಟ್‌ ಒಪ್ಪಿಕೊಳ್ಳಬಹುದು. ಹಾಗೆ ಒಪ್ಪಿಕೊಂಡ ನಂತರವೂ ಅಲ್ಲಿಯ ವಾತಾವರಣದ ಬಗ್ಗೆ, ಜನರ ಬಗ್ಗೆ ಒಳಗೊಳಗೇ ಸಣ್ಣ ಹೆದರಿಕೆ ಇದ್ದೇ ಇರುತ್ತದೆ. ಆದರೆ ಅವನಿಗೆ ಆ ಯಾವ ನಿರ್ಬಂಧವೂ ಇಲ್ಲ, ಅವನು ಆರಾಮವಾಗಿ ಪಂಜಾಬ್‌ಗೂ ಹೋಗಿ ಫೋಟೊಶೂಟ್‌ ಮಾಡಿಕೊಂಡು ಬರಬಲ್ಲ’ ಎಂದು ಛಾಯಾಗ್ರಹಣವನ್ನು ವೃತ್ತಿಯಾಗಿ ಸ್ವೀಕರಿಸುವಾಗ ಹೆಣ್ಣು ಎದುರಿಸುವ ಸಮಸ್ಯೆಗಳ ಕಡೆಗೆ ನವ್ಯಾ ಗಮನ ಸೆಳೆಯುತ್ತಾರೆ.

ಹುಡುಗಿಯೊಬ್ಬಳು ಕ್ಯಾಮೆರಾ ಹಿಡಿದು ಹೊರಟರೆ ‘ಮಾಡಬಾರದ್ದೇನೋ ಮಾಡುತ್ತಿದ್ದಾಳೆ’ ಎಂಬಂತೆ ಜನ ನೋಡುವುದು, ‘ಇವಳೇನು ಮಾಡಬಲ್ಲಳು’ ಎಂದು ಉಪೇಕ್ಷೆಯಿಂದ ವರ್ತಿಸುವುದೂ ಅವರ ಅನುಭವಕ್ಕೆ ಬಂದಿದೆ. ಈ ರೀತಿಯ ವರ್ತನೆ ತೋರುವವರಲ್ಲಿ ಸ್ತ್ರೀ-ಪುರುಷರು ಎಂಬ ಭೇದವಿಲ್ಲ ಎನ್ನುವುದು ಅವರ ಅನುಭವದ ಮಾತು.

ಬಹುತೇಕ ಸಂದರ್ಭಗಳಲ್ಲಿ ಹೆಣ್ಣಿನ ಉಳಿದೆಲ್ಲ ಹವ್ಯಾಸಗಳಂತೆ ಛಾಯಾಗ್ರಹಣವೂ ‘ಮದುವೆ’ಯೊಟ್ಟಿಗೆ ಮುಕ್ತಾಯವಾಗುವುದೇ ಹೆಚ್ಚು. ‘‘ಹೆಣ್ಣುಮಕ್ಕಳು ಏನೇ ಮಾಡಿದರೂ ಅಷ್ಟೆ. ಕೊನೆಗೂ ಮದುವೆ ಮಾಡಿ ಕಳಿಸುವುದಷ್ಟೆ’ ಎಂಬ ಸ್ಟಿರಿಯೊಟೈಪ್‌ ಆಲೋಚನೆ ಇನ್ನೂ ಇದೆ’’ ಎನ್ನುತ್ತಾರೆ ಛಾಯಾಗ್ರಹಣ ಮತ್ತು ಸಿನಿಮಾಟೋಗ್ರಫಿ ಎರಡರಲ್ಲಿಯೂ ತೊಡಗಿಕೊಂಡಿರುವ ಮಾನಸಾ ಶರ್ಮ. ಆದರೆ ಅವರ ವಿಷಯದಲ್ಲಿ ಈ ಸಿದ್ಧ ಮಾದರಿಯ ಆಲೋಚನೆಯೇ ಅನುಕೂಲವಾಗಿ ಪರಿಣಮಿಸಿದೆಯಂತೆ.

‘ಏನೇ ಮಾಡಿದ್ರೂ ಕೊನೆಗೆ ಮದುವೆ ಮಾಡಿ ಕಳಿಸಬೇಕು ಎಂಬ ಆಲೋಚನೆ ನನ್ನ ಅಪ್ಪ– ಅಮ್ಮನಿಗೂ ಇತ್ತು. ಅದಕ್ಕಾಗಿಯೇ ಮದುವೆ ಆಗುವವರೆಗೆ ಅವಳಿಗೆ ಏನು ಬೇಕೋ ಅದು ಮಾಡಿಕೊಂಡಿರಲಿ. ಆಮೇಲಂತೂ ಏನೂ ಮಾಡಲಿಕ್ಕಾಗುವುದಿಲ್ಲ ಎಂದು ನನ್ನ ಆಸೆಗಳಿಗೆ ಅಡ್ಡಿಬರದೆ ಸುಮ್ಮನಿದ್ದರು. ಹಾಗಾಗಿಯೇ ನಾನು ಬಿ.ಎಸ್‌ಸಿ ಮಾಡಿದದರೂ ನನ್ನಿಷ್ಟದ ಫೋಟೊಗ್ರಫಿ ಆಯ್ದುಕೊಂಡೆ. ನಂತರ ಸಿನಿಮಾಟೊಗ್ರಫಿಯನ್ನೂ ಕಲಿತೆ. ಇದೀಗ ಕಿರುಚಿತ್ರವನ್ನೂ ನಿರ್ದೇಶಿಸಿದ್ದೀನಿ’ ಎಂದು ನಗುವ ಮಾನಸಾ ತಮ್ಮ ಕಿರುಚಿತ್ರಕ್ಕೆ ತಾವೇ ಛಾಯಾಗ್ರಹಣ ಮಾಡಿದ್ದಾರೆ.

(ಉಷಾ ಬಿ. ಎನ್‌)

‘ಈಗಲೂ ನಿಮ್ಮ ತಂದೆ ತಾಯಿ ಅಂದುಕೊಂಡಂತೆ ನಿಮ್ಮೆಲ್ಲ ಆಸಕ್ತಿಗಳನ್ನೂ ಬಿಟ್ಟುಕೊಟ್ಟು ಮದುವೆಯಾಗುವುದು ಅನಿವಾರ್ಯ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂದು ಕೇಳಿದರೆ - ‘ಖಂಡಿತ ಇಲ್ಲ, ನಾನು ಸಿನಿಮಾ ನಿರ್ದೇಶನ ಮಾಡಬೇಕು. ದೇಶದಲ್ಲಿನ ಕೆಲವೇ ಕೆಲವು ಮಹಿಳಾ ನಿರ್ದೇಶಕರ ಪಟ್ಟಿಯಲ್ಲಿ ನನ್ನ ಹೆಸರೂ ಸೇರಿಕೊಳ್ಳಬೇಕು’ ಎಂದು ಖಚಿತವಾಗಿ ಹೇಳುತ್ತಾರೆ. ಹಾಗೆಂದು ಈ ಕೆಲಸ ತುಂಬ ಸುಲಭದ್ದು ಎಂದು ಅವರಿಗೂ ಅನಿಸಿಲ್ಲ. ಛಾಯಾಗ್ರಹಣ ಎಂದರೆ ಹೊರಗಿನ ಸ್ಥಳಗಳಲ್ಲಿಯೇ ಕೆಲಸ ಹೆಚ್ಚಿರುತ್ತದೆ. ಅದಕ್ಕೆ ಹೊತ್ತು ಗೊತ್ತು ಇರುವುದಿಲ್ಲ. ಆರಂಭದ ದಿನಗಳಲ್ಲಿ ಸರಿಯಾದ ಸಂಬಳವಿರುವುದಿಲ್ಲ. ರಾತ್ರಿ ಎಂಟುಗಂಟೆ ದಾಟುತ್ತಿದ್ದಂತೆಯೇ ತಡವಾಯ್ತು ಎಂಬ ಕಳವಳ ಆರಂಭವಾಗುತ್ತದೆ’ ಎಂದು ಆರಂಭದ ಹೆಜ್ಜೆಗಳ ಅಳುಕುಗಳ ಬಗ್ಗೆ ಹೇಳುತ್ತಾರೆ.

ಕ್ರಿಯಾಶೀಲ ವಿಸ್ತರಣೆ: ಒಂದು ಕಲಾಪ್ರಕಾರದಲ್ಲಿ ಹೊಸ ಸಂವೇದನಾಪ್ರಜ್ಞೆ ಹುಟ್ಟಿಕೊಂಡಾಗ ಆ ಪ್ರಜ್ಞಾವಲಯವಷ್ಟೇ ಅಲ್ಲ, ಆ ಕಲಾಪ್ರಕಾರವೂ ಹೊಸ ಆಯಾಮಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತದೆ. ತನ್ನ ದಿಗಂತಗಳನ್ನು ವಿಸ್ತರಿಸಿಕೊಳ್ಳುತ್ತದೆ. ಛಾಯಾಚಿತ್ರ ಮತ್ತು ಛಾಯಾಗ್ರಹಣದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಬೇಕು ಎಂಬ ಮಾತನ್ನು ಈ ದೃಷ್ಟಿಕೋನದಿಂಲೂ ನೋಡಬೇಕಾದ ಅವಶ್ಯಕತೆ ಇದ್ದೇ ಇದೆ.

ಹೆಣ್ಣಿನ ಅಭಿವ್ಯಕ್ತಿಯ ಅವಶ್ಯಕತೆಯಷ್ಟೇ ಅಲ್ಲ, ಛಾಯಾಗ್ರಹಣದ ಕಣ್ಣಿಗೆ ಹೆಣ್ತನದ ಹೊಸ ಪ್ರಜ್ಞೆಯ ನೋಟ ಸಿಗಬೇಕಾದ ಅಗತ್ಯವೂ ಇದೆ. ಹೆಣ್ಣೊಬ್ಬಳು ಕ್ಯಾಮೆರಾ ಹಿಡಿದು ನಿಂತಾಗ ಅವಳ ಅಂತರಂಗದ ಸ್ತ್ರೀಪ್ರಜ್ಞೆ ಯಾವ ರೀತಿ ಕೆಲಸ ಮಾಡುತ್ತಿರುತ್ತದೆ? ಛಾಯಾಗ್ರಹಣದಲ್ಲಿಯೂ ‘ಸ್ತ್ರೀಪ್ರಜ್ಞೆ’ ಎಂದು ಪ್ರತ್ಯೇಕವಾಗಿ ಗುರ್ತಿಸಿ ಹೇಳಲು ಸಾಧ್ಯವೇ? ‘ಮಹಿಳಾ ಸಂವೇದನೆ ಎನ್ನುವುದು ತೀರಾ ಎದ್ದು ಕಾಣುವಂತೆ ಇರದಿದ್ದರೂ ಒಳಗೆಲ್ಲೋ ನಾವು ನೋಡುವ ವಸ್ತು, ವಿಷಯ, ಅದನ್ನು ಗ್ರಹಿಸುವ ರೀತಿ, ಅದನ್ನು ಚಿತ್ರಗಳಲ್ಲಿ ಬಿಂಬಿಸುವ ರೀತಿಗಳಲ್ಲಿ ನಮಗೇ ಗೊತ್ತಿಲ್ಲದೆ ಬಹುಸೂಕ್ಷ್ಮವಾಗಿ ಸ್ತ್ರೀತನ ಕೆಲಸ ಮಾಡುತ್ತಿರುತ್ತದೆ’ ಎಂದು ಉಷಾ ಮತ್ತು ಮಾನಸಾ ಇಬ್ಬರೂ ಒಪ್ಪಿಕೊಳ್ಳುತ್ತಾರೆ.

‘ನಾನು ಯಾಕೆ ಫೋಟೊ ತೆಗೆಯುತ್ತೇನೆ’ ಎನ್ನುವ ಮೂಲಭೂತ ಪ್ರಶ್ನೆಗೆ ಸ್ತ್ರೀಯರು ಮುಖಾಮುಖಿಯಾಗುವ ಬಗೆಯೇ ಪುರುಷರಿಗಿಂತ ಭಿನ್ನ ಎನ್ನುವುದು ಉಷಾ ಅವರ ಅಭಿಮತ.

‘ಎಲ್ಲಿ ಹೋದರೂ ನನಗೆ ಅದು ಅನುಭವಕ್ಕೆ ಬರುತ್ತದೆ. ಕೆಲವು ವಿಷಯಗಳು, ಸೂಕ್ಷ್ಮ ವಿವರಗಳನ್ನು ಹೆಣ್ಣು ಮಾತ್ರ ಗುರ್ತಿಸಬಲ್ಲಳು. ಅದು ನನ್ನ ಅನುಭವಕ್ಕೆ ಹಲವು ಬಾರಿ ಬಂದಿದೆ. ವಸ್ತು –ವಿಷಯಗಳನ್ನು ಗ್ರಹಿಸುವ ರೀತಿ, ಅದಕ್ಕೆ ನಮ್ಮನ್ನು ಕನೆಕ್ಟ್‌ ಮಾಡಿಕೊಳ್ಳುವ ರೀತಿ ಎಲ್ಲ ವಿಷಯಗಳಲ್ಲಿಯೂ ಮಹಿಳೆ ಪುರುಷನಿಗಿಂತ ಭಿನ್ನ. ಆದ್ದರಿಂದ ಅದು ಸಹಜವಾಗಿಯೇ ನಮ್ಮ ಛಾಯಾಚಿತ್ರಗಳಲ್ಲಿಯೂ ಬಿಂಬಿತವಾಗುತ್ತದೆ’ ಎನ್ನುತ್ತಾರೆ ಉಷಾ.

(ಉಷಾ ಚಿತ್ರ)

‘ನಾವು ಜಗತ್ತನ್ನು, ಒಂದು ಕಥನದ ಎಳೆಯನ್ನು ನೋಡುವ ರೀತಿಯೇ ಬೇರೆ ಆಗಿರುವುದರಿಂದ ಅದನ್ನೇ ಛಾಯಾಗ್ರಹಣದಲ್ಲಿ ಕಟ್ಟಿಕೊಡಲು ಪ್ರಯತ್ನಿಸುತ್ತಿರುತ್ತೇವೆ. ಅದು ಇದುವರೆಗೆ ಕಾಣಿಸದೇ ಇರುವಂಥ ಆಯಾಮ. ಯಾಕೆಂದರೆ ಒಂದೇ ದೃಶ್ಯವನ್ನು ಒಬ್ಬ ಹುಡುಗ ಮತ್ತು ಹುಡುಗಿ ನೋಡುವ ರೀತಿ ಬೇರೆಯೇ ಆಗಿರುತ್ತದೆ’ ಎನ್ನುತ್ತಾರೆ ಮಾನಸಾ. ಇಲ್ಲಿ ಅವರು ಹೇಳುತ್ತಿರುವ ‘ಬೇರೆ ರೀತಿ’ ಎನ್ನುವುದು ಸ್ತ್ರೀವಾದದ ಪ್ರತಿಪಾದನೆಯಷ್ಟೇ  ಅಲ್ಲ, ಬದಲಿಗೆ ಅವಳಿಗೆ ಮಾತ್ರ ದಕ್ಕುವ ಸಂವೇದನೆಯ ಅಸ್ಮಿತೆಗೆ ಸಂಬಂಧಿಸಿದ್ದು ಎನ್ನುವುದನ್ನೂ ಗಮನಿಸಬೇಕು. ಈ ಸಂವೇದನೆ ಆ ಕಲಾಪ್ರಕಾರವನ್ನೂ ಬೆಳೆಸುವಂಥದ್ದು. ಆದರೆ ಹೀಗೆ ಒಂದು ಚಿತ್ರ ತೆಗೆಯುವ ಸೃಜನಶೀಲ ಪ್ರಕ್ರಿಯೆ ಸ್ತ್ರಿ-ಪುರುಷರಲ್ಲಿ ಭಿನ್ನವಾಗಿರುತ್ತದೆ ಎನ್ನುವುದನ್ನು ನವ್ಯಾ ಕಡಮೆ ಸುತಾರಾಂ ಒಪ್ಪುವುದಿಲ್ಲ. ಯಾವುದೇ ವಸ್ತುವನ್ನು ನೋಡುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎನ್ನುವುದನ್ನು ಒಪ್ಪಬಹುದೇ ಹೊರತು ನಾನು ಹುಡುಗಿ ಎನ್ನುವ ಕಾರಣಕ್ಕಾಗಿಯೇ ಹೊಸದೇನೋ ಪ್ರಜ್ಞೆ ನನಗೆ ಸಿಗುತ್ತಿದೆ ಎಂದು ನನಗಂತೂ ಅನಿಸಿಲ್ಲ’ ಎನ್ನುವುದು ಅವರ ಸ್ಪಷ್ಟ ಅಭಿಮತ.

ಈ ಚರ್ಚೆಗಳೇನೇ ಇದ್ದರೂ ಮಹಿಳೆಯ ಜಗತ್ತು ಮತ್ತು ಮಹಿಳೆ ಜಗತ್ತನ್ನು ನೋಡುವ ರೀತಿ ಎರಡೂ ಪುರುಷನಿಗಿಂತ ಭಿನ್ನವಾದದ್ದು ಮತ್ತು ಅಷ್ಟೇ ಅನನ್ಯವಾದದ್ದು ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಈ ಹೆಣ್ತನದ ದೃಷ್ಟಿ ಕ್ಯಾಮೆರಾ ಕೋನಗಳಿಗೂ ಸಿಕ್ಕಿದರೆ ಇದುವರೆಗೆ ಅಷ್ಟಾಗಿ ಬೆಳಕಿಗೆ ಬರದ ಹೊಸ ಜಗತ್ತೊಂದರ ಛಾಯೆ ಚಿತ್ರಪಟಗಳಲ್ಲಿ ಒಡಮೂಡುವ ಸಾಧ್ಯತೆ ಇರುವುದಂತೂ ಸತ್ಯ. ಆ ಸಾಧ್ಯತೆಯಲ್ಲಿ ಪುರುಷ ಜಗತ್ತಿನ ಕಣ್ತೆರೆಸುವ ಹಲವು ಬೆಳಕಿನ ಬೀಜಗಳೂ ಇರಬಹುದು.

**

ಅಡತೆಗಳು ಇವೆ; ದಾಟಿಕೊಳ್ಳುವ ಶಕ್ತಿಯೂ ಇದೆ

ಮಹಿಳಾ ಸಿನಿಮಾಟೊಗ್ರಾಫರ್‌ ತುಂಬ ವಿರಳ. ನಮ್ಮಲ್ಲಷ್ಟೇ ಅಲ್ಲ, ಹಾಲಿವುಡ್‌ನಲ್ಲಿಯೂ ಪರಿಸ್ಥಿತಿ ಹೀಗೆಯೇ ಇದೆ. ಇದಕ್ಕೆ ಮುಖ್ಯ ಕಾರಣ ಚಿತ್ರರಂಗದ ಬಗ್ಗೆ ಇರುವ ಪೂರ್ವಗ್ರಹವೇ ಕಾರಣ ಎನಿಸುತ್ತದೆ. ಇದು ಪುರುಷ ಪ್ರಧಾನವಾದದ್ದು. ಮಹಿಳೆಯರು ಇಲ್ಲಿ ಬೆಳೆಯುವುದಕ್ಕೆ ಸಾಧ್ಯವಿಲ್ಲ. ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬೆಲ್ಲ ಪೂರ್ವಗ್ರಹಗಳಿಂದಲೂ ಮಹಿಳೆಯರು ಸಿನಿಮಾಟೊಗ್ರಫಿಯಿಂದ ದೂರವೇ ಉಳಿದಿದ್ದಾರೆ. ಆದರೆ ಪರಿಸ್ಥಿತಿ ಅಷ್ಟೇನೂ ಕೆಟ್ಟದಾಗಿಲ್ಲ.

(ಮಾನಸಾ ಶರ್ಮಾ ಚಿತ್ರ)

ನಾನು ಸಿನಿಮಾ ಇನ್‌ಸ್ಟಿಟ್ಯೂಟ್‌ನಲ್ಲಿದ್ದಾಗ ನಮ್ಮ ಬ್ಯಾಚ್‌ನಲ್ಲಿ ನಾನೊಬ್ಬಳೇ ಹುಡುಗಿ. ನಾನು ಅಸಿಸ್ಟೆಂಟ್‌ ಆಗಿ ಕೆಲಸ ಮಾಡುತ್ತಿರುವಾಗಲೂ ನಾನೊಬ್ಬಳೇ ಹುಡುಗಿ. ಆದರೂ ನಾನು ನನ್ನ ಕನಸನ್ನು ಬಿಟ್ಟುಕೊಡಲು ಸಿದ್ಧಳಿರಲಿಲ್ಲ. ಒಬ್ಬಳೇ ಹುಡುಗಿ ಇರುವುದು ಕಷ್ಟ ಅನಿಸುವುದಿಲ್ಲವಾ? ಎಂದು ಹಲವರು ನನ್ನನ್ನು ಕೇಳುತ್ತಾರೆ. ಆದರೆ ನನಗೆ ನನ್ನ ಕನಸು ಎಲ್ಲಕ್ಕಿಂತ ಮುಖ್ಯ. ಅದನ್ನು ಹೊರತುಪಡಿಸಿ ನಾನು ಉಳಿದ ಪ್ರಶ್ನೆಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲು ಹೋಗುವುದಿಲ್ಲ. ಹೆಚ್ಚು ಯೋಚಿಸದೇ ನನಗೆ ಇಷ್ಟವಾಗುವ ಕೆಲಸವನ್ನು ಮಾಡುತ್ತ ಹೋಗುತ್ತೇನೆ.

ಸಿನಿಮಾಟೊಗ್ರಫಿ ಎನ್ನುವುದು ದೈಹಿಕ ಮತ್ತು ಮಾನಸಿಕವಾಗಿ ಹಲವು ಸವಾಲುಗಳನ್ನು ಒಡ್ಡುವ ವೃತ್ತಿ. ಚಿತ್ರರಂಗದ ಸ್ಪರ್ಧೆಗೆ ನಿಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಮದುವೆಯಾದರೆ, ಮಕ್ಕಳಾದ ಮೇಲೆ ಕುಟುಂಬದ ಪ್ರಬಲ ಬೆಂಬಲ ಇಲ್ಲದೇ ಈ ವೃತ್ತಿಯಲ್ಲಿ ಮುಂದುವರಿಯುವುದು ಕಷ್ಟ. ಇದಕ್ಕೆ ಸಮಯದ ಪರಿವು ಇರುವುದಿಲ್ಲ. ಇಂಥ ಕಾರಣಗಳಿಂದಲೇ ಈ ಕ್ಷೇತ್ರಕ್ಕೆ ಬರುವ ಎಷ್ಟೋ ಮಹಿಳೆಯರು ಬಹುಕಾಲ ಉಳಿಯದೇ ಹೋಗಿಬಿಡುತ್ತಾರೆ.

ಆದರೆ ಸಿನಿಮಾಟೊಗ್ರಫಿ ಮಹಿಳೆಯರಿಗೆ ಒಗ್ಗುವ ವೃತ್ತಿ ಅಲ್ಲ ಎನ್ನುವುದಂತೂ ಪೂರ್ತಿ ಸುಳ್ಳು. ಅವರಲ್ಲಿಯೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಸಮರ್ಥರಿದ್ದಾರೆ. ಅವರಿಗೆ ಅವಕಾಶ ಸಿಗಬೇಕಾಗಿದೆ. ಕುಟುಂಬದಿಂದಲೂ ಅವರನ್ನು ನಂಬಿ ಬೆಂಬಲಿಸಬೇಕು. ಚಿತ್ರರಂಗದ ಒಳಗೂ ಮಹಿಳೆಗೆ ಅಂಥದ್ದೊಂದು ಬೆಂಬಲ ಬೇಕಾಗುತ್ತದೆ.

ಪುರುಷನಷ್ಟೇ ಸಮರ್ಥವಾಗಿ ಮಹಿಳೆಯೂ ದೃಶ್ಯಗಳನ್ನು ಚಿತ್ರೀಕರಿಸಬಲ್ಲಳೇ ಎಂಬ ಪ್ರಶ್ನೆಯೇ ಅಪ್ರಸ್ತುತವಾದದ್ದು. ನಾನು ಹುಡುಗಿ ಅಂದಾಕ್ಷಣ ಏನೂ ಬದಲಾಗುವುದಿಲ್ಲ. ನಾನು ಫೈಟ್‌ ಚಿತ್ರೀಕರಿಸಬಲ್ಲೆ, ರೊಮಾನ್ಸ್‌ ಚಿತ್ರೀಕರಿಸಬಲ್ಲೆ, ಭಾವನಾತ್ಮಕ ದೃಶ್ಯಗಳನ್ನೂ ಸೆರೆಹಿಡಿಯಬಲ್ಲೆ. ಬೆಳಕಿನ ವಿನ್ಯಾಸ ಗೊತ್ತು ನನಗೆ. ಕ್ಯಾಮೆರಾ ಸಲಕರಣೆಗಳ ಬಗ್ಗೆ ತಿಳಿವಳಿಕೆ ಇದೆ. ಲೆನ್ಸ್‌ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿದೆ, ಇಷ್ಟು ಸಾಕು. ಉಳಿದದ್ದು ವ್ಯಕ್ತಿಯ ಸೃಜನಶೀಲತೆಯನ್ನು ಅವಲಂಬಿಸಿದ್ದು. ಮಹಿಳೆಯೋ ಪುರುಷನೋ ಎಂಬುದು ಮುಖ್ಯ ಅಲ್ಲವೇ ಅಲ್ಲ.

ಇನ್ನೂ ಹೇಳಬೇಕು ಎಂದರೆ ಕೆಲವು ಸೂಕ್ಷ್ಮ ವಿಷಯಗಳನ್ನು, ಸಂಗತಿಗಳನ್ನು ಹೆಣ್ಣು ಮಾತ್ರವೇ ಸೆರೆಹಿಡಿಯಬಲ್ಲಳು. ಅದು ಅವಳಿಗೆ ಮಾತ್ರ ದಕ್ಕುವ ದೃಷ್ಟಿಕೋನ. ನಾನು ಸೆರೆಹಿಡಿಯುವ ದೃಶ್ಯಗಳಲ್ಲಿಯೂ ಅದು ಪ್ರತಿಬಿಂಬಿತವಾಗಬಹುದು. ಅದು ಇದ್ದೇ ಇದೆ. ಆದರೆ ಆ ಪ್ರಜ್ಞೆಯನ್ನು ಎತ್ತಿ ತೋರಿಸುವುದು ಕಷ್ಟವಾಗಬಹುದು. ಬಿಡಿಸಿ ತೋರಿಸಲಾಗದ ಹಾಗೆ ಅದು ನನ್ನೊಳಗೇ ಅಂತರ್ಗತವಾಗಿದೆ. ನಾನು ಮಹಿಳೆಯನ್ನು ಯಾವುದೇ ಪುರುಷ ಫೋಟೊಗ್ರಾಫರ್‌ಗಿಂತಲೂ ಹೆಚ್ಚು ಸಮರ್ಥ ಎಸ್ತೆಟಿಕ್‌ ಪ್ರಜ್ಞೆಯಲ್ಲಿ ಸೆರೆಹಿಡಿಯಬಲ್ಲೆ ಎಂದು ನನಗೆ ಯಾವಾಗಲೂ ಅನಿಸುತ್ತದೆ.
ಇದೇ ಕಾರಣಕ್ಕೆ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸಿನಿಮಾಟೊಗ್ರಫಿ ಕ್ಷೇತ್ರಕ್ಕೆ ಬಂದರೆ ಕಥೆಯನ್ನು ‘ಕಾಣಿಸುವ’ ಹೊಸ ನೋಟವೊಂದು ರೂಪುಗೊಳ್ಳಬಹುದು.

-ಪ್ರೀತಾ ಜಯರಾಮನ್‌, ಸಿನಿಮಾಟೊಗ್ರಾಫರ್‌

(ಪ್ರೀತಾ ಜಯರಾಮನ್‌ ಕನ್ನಡ ಚಿತ್ರರಂಗದ ಮುಖ್ಯವಾಹಿನಿಯಲ್ಲಿನ ಏಕಮಾತ್ರ ಸಿನಿಮಾಟೊಗ್ರಾಫರ್‌. ‘ಒಗ್ಗರಣೆ’, ‘ನಾನು ಮತ್ತು ವರಲಕ್ಷ್ಮಿ’, ‘ಬಾಕ್ಸರ್‌’ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ ಅನುಭವ ಅವರಿಗಿದೆ. ಈಗ ತಮಿಳು ನಿರ್ದೇಶಕಿ ಪ್ರಿಯಾ ನಿರ್ದೇಶಿಸುತ್ತಿರುವ, ರಾಧಿಕಾ ಪಂಡಿತ್‌ ಮತ್ತು ನಿರೂಪ್‌ ಭಂಡಾರಿ ಅಭಿನಯದ ಹೊಸ ಸಿನಿಮಾವೊಂದಕ್ಕೆ ಛಾಯಾಗ್ರಾಹಣ ಮಾಡುತ್ತಿದ್ದಾರೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT