ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮಳಗಿನ ದೈವಿಕತೆ ಅಪ್ಪಿಕೊಳ್ಳಿ...

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಾವು ಅಂದುಕೊಂಡಿದ್ದಕ್ಕಿಂತ ನಮ್ಮಳಗೆ ದೈವಿಕತೆ ಇರುತ್ತದೆ. ನಾವು ದೈವಿಕವಾಗಿದ್ದಾಗ ಪರಿಶುದ್ಧವಾಗಿರುತ್ತೇವೆ. ಆರೋಗ್ಯದಿಂದಿರುತ್ತೇವೆ. ಅದು ಕೆಲವೇ ಕ್ಷಣವೇ ಇರಲಿ, ನಮ್ಮ ಅಹಂಕಾರ ಮಾಯವಾದಾಗ ನಾವು ದೈವಿಕವಾಗಿರುತ್ತೇವೆ. ನಿಮ್ಮ ಅಹಂಕಾರ ತಣ್ಣಗಾದಾಗ ನಾವು ಆ ದಿವ್ಯ ಬೆಳಕಿನ ಸಂಪರ್ಕಕ್ಕೆ ಬರುತ್ತೇವೆ. ನಾವು ಈ ಐದು ಸಂದರ್ಭಗಳಲ್ಲಿ ದೈವಿಕವಾಗಿರುತ್ತೇವೆ.

* ನಾವು ನಕ್ಕಾಗ ಆ ದೈವಿಕತೆಯ ಭಾಗವಾಗಿರುತ್ತೇವೆ. ನಮ್ಮ ನಗುವಿನ ಶಬ್ದ ಹವೆಯನ್ನು ಶುದ್ಧಗೊಳಿಸುವ ಮಾಧುರ್ಯದ ಅಲೆ ಹುಟ್ಟುಹಾಕುತ್ತದೆ. ಆ ಲಯಬದ್ಧ ಕಂಪನಗಳು ಸಮುದ್ರದ ಅಲೆಗಳಂತೆ ಏರಿಳಿಯುತ್ತವೆ. ಎಲ್ಲೆಡೆ ಪಸರಿಸುತ್ತವೆ. ಅದಕ್ಕಾಗಿಯೇ ನಗು ಅಂದರೆ ದೇವರು ಎನ್ನಲಾಗುತ್ತದೆ. ಹೌದು ನಾವು ನಕ್ಕಾಗ ದೈವಿಕತೆಯ ಭಾಗವಾಗಿರುತ್ತೇವೆ.

* ನಾವು ಧ್ಯಾನದಲ್ಲಿ ಮುಳುಗಿದಾಗ ನಮ್ಮ ಅಹಂಕಾರ ಮಾಯವಾಗುತ್ತದೆ. ಬಿರುಗಾಳಿಯಿಂದ ತತ್ತರಿಸಿದ ಮನಸ್ಸನ್ನು ತಂಪಾದ ಗಾಳಿ ಆವರಿಸುವಂತೆ ಶಾಂತಿ ಆವರಿಸುತ್ತದೆ. ಈ ಶ್ರೇಷ್ಠ ನಿಶ್ಶಬ್ದದಲ್ಲಿ ನಾವು ಎಲ್ಲವನ್ನೂ ಪ್ರೀತಿಯಿಂದ ನೋಡುತ್ತೇವೆ. ಎಲ್ಲವೂ ಸುಂದರವಾಗಿ ಕಾಣುತ್ತದೆ. ಗೊಂದಲದಲ್ಲೂ ಸೌಹಾರ್ದ ಕಾಣುತ್ತದೆ. ಸುಕ್ಕುಗಟ್ಟಿದ ಕೈಗಳಲ್ಲಿ, ಮುದುಡಿದ ಎಲೆಗಳಲ್ಲಿ ಸೌಂದರ್ಯ ಕಾಣುತ್ತದೆ. ಎಲ್ಲ ಚಲನೆಗಳು ನಿಂತಾಗ, ಸ್ತಬ್ಧತೆ ನೆಲೆ ನಿಂತಾಗ ನಾವು ದೈವಿಕತೆಯ ಜತೆ ಇರುತ್ತೇವೆ.

* ನಾವು ನಿದ್ದೆ ಹೋದಾಗ ಅಹಂಕಾರವೂ ನಿದ್ರಿಸುತ್ತಿರುತ್ತದೆ. ಆಗ ಯಾವ ಬಯಕೆ, ಅಸೂಯೆಯೂ ಇರುವುದಿಲ್ಲ. ನಮ್ಮ ಹುದ್ದೆ, ಸಂಪತ್ತು ಆಧರಿಸಿದ ಕೃತಕ ಸ್ಥಾನಮಾನ ಕಾಡುವುದಿಲ್ಲ. ದೇಹ, ಮನಸ್ಸು, ಚೈತನ್ಯಕ್ಕೆ ಮುಗ್ಧತೆಯ, ಪ್ರಶಾಂತತೆಯ ಟಾನಿಕ್ ದೊರಕುತ್ತಿರುತ್ತದೆ. ಈ ಸಮಾಧಿ ಸ್ಥಿತಿಯಲ್ಲಿ ಎಲ್ಲ ಕರ್ಮ, ಕೆಟ್ಟ ಭಾವನೆಗಳು ಇಲ್ಲವಾಗುತ್ತವೆ. ನಾವು ದೈವಿಕತೆಯೊಂದಿಗೆ ಒಂದಾಗಿರುತ್ತೇವೆ.

* ನಾವು ಮತ್ತೊಬ್ಬರ ಆರೈಕೆ ಮಾಡುವಾಗ ದೈವಿಕತೆಯಲ್ಲಿ ಮುಳುಗಿರುತ್ತೇವೆ. ವೃದ್ಧರು, ಮಕ್ಕಳು, ರೋಗಿಗಳ ಆರೈಕೆ ಮಾಡುವಾಗ ಈ ಲೌಕಿಕ ಜಗತ್ತಿನ ಸಮಸ್ಯೆಗಳು, ಅಭದ್ರತೆ, ಸಣ್ಣಪುಟ್ಟ ಕಿರಿಕಿರಿಗಳು ನಮ್ಮನ್ನು ಬಾಧಿಸುವುದಿಲ್ಲ. ಬೇರೆಯವರ ತೊಂದರೆ ನಿವಾರಿಸಲು ತೊಡಗುವ ಮನಸ್ಸು ತನ್ನ ತೊಂದರೆಗಳನ್ನು ಮರೆಯುತ್ತದೆ.
 
ಸೇವೆ ಎಂಬುದು ಪ್ರೀತಿಯ ಮತ್ತೊಂದು ರೂಪ. ಅದು ಕಾಯಿಲೆ ಬಿದ್ದವರಲ್ಲಿ ಆರೋಗ್ಯದ ಕಳೆ ಮೂಡಿಸುತ್ತದೆ. ನೋವಿನಿಂದ ಚಡಪಡಿಸುತ್ತಿರುವವರಿಗೆ ಸಮಾಧಾನ ನೀಡುತ್ತದೆ. ಅಭದ್ರತೆಯಿಂದ ನಡುಗುತ್ತಿರುವವರಿಗೆ ಭರವಸೆ ಹುಟ್ಟಿಸುತ್ತದೆ.

* ನಾವು ಎಲ್ಲರನ್ನೂ ಅವರಂತೆಯೇ ಸ್ವೀಕರಿಸಿದಾಗ ದೈವಿಕತೆ ಮೂಡುತ್ತದೆ. ನಮ್ಮ ದೇಹದ ಪ್ರತಿ ಜೀವಕೋಶದಲ್ಲೂ ಪ್ರೀತಿ ತುಂಬಿ ಉಕ್ಕಿಹರಿಯುತ್ತದೆ. ನಾವು ಬದುಕಿನೊಂದಿಗೆ ಜಗಳವಾಡದಾಗ ಆ ಶ್ರೇಷ್ಠ ಶಕ್ತಿಯೊಂದಿಗೆ ಒಂದಾಗಿರುತ್ತೇವೆ.

ನಾವು ಎಲ್ಲ ಋಣಾತ್ಮಕ ಸಂಗತಿಗಳು, ಬಯಕೆಗಳನ್ನು ಕಿತ್ತುಹಾಕಿದಾಗ ನಮಗೆ ದೈವಿಕ ಆಶೀರ್ವಾದ ಲಭಿಸುತ್ತದೆ. ತೃಪ್ತಿಯೇ ಸ್ವರ್ಗ ಎಂದು ನಮ್ಮ ಪವಿತ್ರ ಗ್ರಂಥಗಳೆಲ್ಲ ಹೇಳುತ್ತವೆ. ನಾವಾಗ ದೇವರ ಸೃಷ್ಟಿಯೊಂದಿಗೆ, ದೈವಿಕತೆಯೊಂದಿಗೆ ಒಂದಾಗಿರುತ್ತೇವೆ.
ಆ ದೈವಿಕತೆಯನ್ನೂ ಎಂದೂ ಕಳೆದುಕೊಳ್ಳಬೇಡಿ.
 
ಋಣಾತ್ಮಕ, ಅತೃಪ್ತ ಭಾವ ಮೂಡಿದಾಗಲೆಲ್ಲ ನಾನು ಖುಷಿಯಾಗಿದ್ದೇನೆ, ನಾನು ದೈವಿಕವಾಗಿದ್ದೇನೆ ಎಂದು ಹೇಳಿಕೊಳ್ಳಿ. ಖುಷಿಯಾಗಿರಲು ಬೇಕಾದಷ್ಟು ಕಾರಣ ನಿಮಗಿದೆ. ಇತರರು ಋಣಾತ್ಮಕ ಅಭಿಪ್ರಾಯ ರೂಪಿಸಿಕೊಂಡಿದ್ದಾಗ ಅವರ ಪ್ರಭಾವಕ್ಕೆ ಒಳಗಾಗಬೇಡಿ.

ಕೆಟ್ಟ ಸುದ್ದಿ ಕೇಳಿದಾಗ, ಇದು ಸರಿಯಾಗುತ್ತದೆ ಎಂದು ನಿಮಗೆ ನೀವೇ ಮೆಲುದನಿಯಲ್ಲಿ ಹೇಳಿಕೊಳ್ಳಿ. ಬಾಹ್ಯ ಘಟನೆಗಳು ತಾತ್ಕಾಲಿಕ. ಅವು ಬರುತ್ತವೆ, ಹೋಗುತ್ತವೆ. ನೀವು ಮಾತ್ರ ನಿಮ್ಮ ದೈವಿಕತೆಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳಿ.

ನಿಮಗೆ ಸಂತಸ, ನೆಮ್ಮದಿ, ತೃಪ್ತಿ ನೀಡುವ ಧ್ಯಾನ, ವ್ಯಾಯಾಮ, ಮಂತ್ರ ಪಠಣ, ಸಂಗೀತದಂತಹ ಚಟುವಟಿಕೆಗಳ ನಂತರ ನೀವು ಆ ವಿಶ್ವಶಕ್ತಿಯ ಜತೆ ಸೌಹಾರ್ದದಿಂದ ಇರುತ್ತೀರಿ. ನಿಮ್ಮ ಯಾವುದೇ ಪ್ರಶ್ನೆಗೆ ಆಗ ಉತ್ತರ ಸಿಗುತ್ತದೆ. ನಿಮಗೆ ಬೇಕಾದುದೆಲ್ಲ ಸಿಗುತ್ತದೆ.
 
ಏಕೆಂದರೆ ನೀವು ಆಗ ಪರಿಶುದ್ಧ ಅಯಸ್ಕಾಂತದಂತೆ ಆಗಿರುತ್ತೀರಿ. ನಿಮಗೆ ಬೇಕಾದುದೆಲ್ಲ ಯಾವುದೇ ಶ್ರಮವಿಲ್ಲದೇ ದೊರೆಯುತ್ತದೆ. ನಿಮ್ಮನ್ನು ನೀವು ಪರಿಶುದ್ಧಗೊಳಿಸಿಕೊಂಡಾಗ ನೀವು ಮತ್ತಷ್ಟು ಹಗುರವಾಗುತ್ತೀರಿ. ವಿಶ್ರಾಂತ ಭಾವ ಮೂಡುತ್ತದೆ. ನಿಮ್ಮನ್ನು ನೀವು ಪರಿಶುದ್ಧಗೊಳಿಸಿಕೊಳ್ಳಲು ಇಲ್ಲಿದೆ ಮಾರ್ಗ.

* ನಿಮಿಗಿಷ್ಟವಾದ ಮಂತ್ರವನ್ನು ಹೇಳಿಕೊಳ್ಳುತ್ತಾ ಏಕಾಂತದಲ್ಲಿ ಸೈಕ್ಲಿಂಗ್ ಮಾಡಿ. ಇದರಿಂದ ಮನಸ್ಸು ಮತ್ತು ದೇಹ ಈ ಕ್ಷಣದ ಲಯಕ್ಕೆ ಹೊಂದಿಕೊಳ್ಳುತ್ತದೆ.

* ಎಲ್ಲವೂ ಸರಿಯಾಗಿಯೇ ಇರಬೇಕು ಎಂಬ ಬಯಕೆಯನ್ನು ಬಿಟ್ಟುಬಿಡಿ. ನಾನೊಬ್ಬಳೇ ಸರಿ ಎಂಬ ಸಿಟ್ಟಿನ ಭಾವದಿಂದ ಮನಸ್ಸನ್ನು ಅದು ಮುಕ್ತಗೊಳಿಸುತ್ತದೆ. ಮುಕ್ತ ಮನಸ್ಸಿನಿಂದ ಇರಲು ತೊಂದರೆ ಏನು ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಇದು ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನೋಡಿ.

* ಇತರರು ನಿಮ್ಮಂತೆ ಇಲ್ಲ, ನಿಮ್ಮಂತೆ ಬದುಕುತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ಟೀಕಿಸಬೇಡಿ. ನಾನು ಪ್ರೀತಿಯಿಂದ ಯೋಚಿಸುತ್ತಿದ್ದೇನೆಯೇ? ನಾನು ಕರುಣೆಯಿಂದ ಯೋಚಿಸುತ್ತಿದ್ದೇನೆಯೇ? ಎಂದು ಕೇಳಿಕೊಳ್ಳಿ. ಯೋಗಿಯೊಬ್ಬ ನೀರಿನಲ್ಲಿ ಬಹುಕಾಲ ನಿಂತುಕೊಂಡಂತೆ ಬಹುಕಾಲ ಆ ಪ್ರಶ್ನೆಯಲ್ಲೇ ಮುಳುಗಿ ಯೋಚಿಸುತ್ತೀರಿ. ಉತ್ತರ ಕಂಡುಕೊಳ್ಳಿ.

* ನಿಮ್ಮ ಆಹಾರಾಭ್ಯಾಸದಲ್ಲೂ ಸಂಯಮ ತೋರಿ. ಅತಿಯಾಗಿ ತಿನ್ನುವುದು ಬೊಜ್ಜು, ಕಾಯಿಲೆಗೆ ದಾರಿ ಮಾಡಿಕೊಡುತ್ತದೆ. ಪೌಷ್ಟಿಕಾಂಶ ಭರಿತ ಅಲ್ಪಾಹಾರ ನಿಮ್ಮನ್ನು ಆರೋಗ್ಯವಂತರಾಗಿಸುತ್ತದೆ. ಪ್ರತಿ ಊಟದ ಜತೆ ಮೊಸರಿನಲ್ಲಿ ಮಿಶ್ರ ಮಾಡಿಕೊಂಡು ಹಿಂಗವಷ್ಟಕ ಚೂರ್ಣವನ್ನು ತಿನ್ನಿ. ಅದು ನಿಮ್ಮ ದೇಹವನ್ನು ಸ್ವಚ್ಛಗೊಳಿಸುತ್ತದೆ. ನೀವು ಒಳಗಿನಿಂದ ಸ್ವಚ್ಛಗೊಂಡೊಡನೆ ನಿಮ್ಮ ಆಲೋಚನೆಗಳು ಶುಭ್ರವಾಗುತ್ತವೆ.

ನಾನು ಸಂತಸದಿಂದ ಇದ್ದೇನೆ. ತೃಪ್ತಿಯಿಂದ ಇದ್ದೇನೆ. ನನಗೆ ಯಾವ ಬಯಕೆಯೂ ಇಲ್ಲ. ಯಾವ ಅಗತ್ಯವೂ ಇಲ್ಲ ಎಂದು ಹೇಳಿಕೊಳ್ಳುತ್ತೀರಿ. ನೀವು ಎಲ್ಲದರಿಂದ ಮುಕ್ತವಾಗಿದ್ದಾಗ ಶಾಂತಿಯ ನದಿ ನಿಮ್ಮಳಗೆ ಹರಿಯುತ್ತದೆ. ಅದುವೇ ದೈವಿಕತೆ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT