ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಎಂಬ ಮಾಯಾ ಬಜಾರ್!

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ನಿತ್ಯ ಅತ್ಯಾಧುನಿಕ ಉಡುಪು ಧರಿಸಿ ನಲಿಯುವ ಯುವಜನ, ಮದುವೆ ಮನೆಯಲ್ಲಿ ಮಾತ್ರ ಅಪ್ಪಟ ಸಂಪ್ರದಾಯಸ್ಥರ ಗೆಟಪ್‌ನಲ್ಲಿ ಬೀಗುತ್ತಾರೆ. ಅಂತೆಯೇ, ಸ್ವರ್ಗವೇ ಧರೆಗಿಳಿದಂಥ ಆ ರಸಲೋಕದಲ್ಲಿ ಉಣಬಡಿಸುವ ಖಾದ್ಯಗಳೋ, ಆ ವಿಚಿತ್ರ ಭಕ್ಷ್ಯಗಳೋ ಆಹಾ! ಯಾರಿಗುಂಟು ಯಾರಿಗಿಲ್ಲ? ಗಂಡು- ಹೆಣ್ಣನ್ನು ಜೊತೆಗೂಡಿಸುವ ಆ ಶುಭ ಗಳಿಗೆಯಲ್ಲಿ ಅದೆಷ್ಟೊಂದು ವಿಶಿಷ್ಟಗಳು, ವೈಚಿತ್ರ್ಯಗಳು! ಬನ್ನಿ, ಆ  ಮಾಯಾ ಲೋಕದೊಳಗಿನ ರಸನಿಮಿಷಗಳತ್ತ ಒಮ್ಮೆ ಇಣುಕಿ ಬರೋಣ.

ಮದುವೆ ಮನೆಗೆ ಹೋದರೆ ಏನೇನೆಲ್ಲ ವಿಸ್ಮಯಗಳನ್ನು ಕಾಣಬಹುದು? ಎಂತಹ ಸಂದಿಗ್ಧ ಅಥವಾ ಪೇಚಿಗೆ ಸಿಲುಕಬಹುದು? ಅಲ್ಲಿನ ಊಟ ಹೇಗಿರಬಹುದು? ಎಲ್ಲವೂ ವಿಸ್ಮಯಕಾರಿಯೇ, ವಿಚಿತ್ರವೇ. ಅಂತಹ ಮದುವೆ ಮನೆಗಳಿಗೆ ಹೋಗಿ ಅನುಭವಿಸಿ ಬಂದ ಒಂದಷ್ಟು ಮೋಜಿನ ಪ್ರಸಂಗಗಳನ್ನು ಇದೀಗ ಸವಿಯೋಣ.

ಈಚೆಗೆ ನಡೆದ ನನ್ನ ಪರಿಚಿತರೊಬ್ಬರ ಮಗಳ ಮದುವೆ ಬಗ್ಗೆ ನಿಮಗೆ ಹೇಳಲೇಬೇಕು. ಅದು ಮದುವೆ ಮನೆಯೋ ಇಲ್ಲ ಅರಮನೆಯೋ ಎಂಬಷ್ಟು ಸುಂದರವಾಗಿ, ವೈಭವೋಪೇತವಾಗಿ ಸಜ್ಜಾಗಿತ್ತು ಛತ್ರದ ಹೊರಾಂಗಣ ಮತ್ತು ಒಳಾಂಗಣ.

`ನಾವು ಸರಿಯಾದ ಜಾಗಕ್ಕೆ ಬಂದಿದ್ದೀವಿ ತಾನೇ' ಎಂದು ಪತಿಯನ್ನು ಕೇಳಿದೆ. `ಸುಮ್ಮನೆ ಬಾ, ಹೊರಡಕ್ಕೆ ಮುಂಚೆ ನೀನೇ ತಾನೇ ಛತ್ರದ ಹೆಸರು, ಅದಿರೋ ಜಾಗ ಎಲ್ಲ ಚೆಕ್ ಮಾಡಿದ್ದು. ಅಲ್ಲಿಗೇ ಕರ್ಕೊಂಡು ಬಂದಿದ್ದೀನಿ' ಎಂದರು. ಸರಿ, ಅಚ್ಚರಿ ಪಡುತ್ತಲೇ ನಾನು ಛತ್ರದ ಒಳಗೆ ಕಾಲಿರಿಸಿದೆ. ಅಂತೂ ನಾನಂದುಕೊಂಡಂತೆ ಮದುವೆ ಮನೆ `ಮಾಯಾಬಜಾರ್'ನಂತೆಯೇ ಇತ್ತು.

ನಮ್ಮ ಪರಿಚಿತರ ಸುಪುತ್ರಿ, ಅದೇ ಕನ್ಯಾರತ್ನ, ಅತ್ಯಾಧುನಿಕ ಯುವತಿ. ಕ್ರಾಪ್ ಕಟ್‌ನಂತಹ ಚಿಕ್ಕ ಕೂದಲು, ಬಿರುಗಾಳಿಯಲ್ಲಿ ಓಡಾಡಿದರೂ ಒಂದೇ ಒಂದು ಕೂದಲೂ ಅಕ್ಕಪಕ್ಕ ಸರಿಯಬಾರದು, ಹಾಗಿರುತ್ತಿತ್ತು ಅವಳ ಕೇಶ ವಿನ್ಯಾಸ. ಯಾವಾಗಲೂ ಜೀನ್ಸ್ ಪ್ಯಾಂಟು, ಸ್ಲೀವ್‌ಲೆಸ್ ಟಾಪ್ ಧರಿಸಿ ಓಡಾಡುವವಳು. ಅಂತಹವಳ ಮದುವೆ ಗೆಟಪ್ ಹೇಗಿರಬಹುದು? ಮದುವೆಯಲ್ಲಾದರೂ ಸೀರೆ ಧರಿಸಿ ಹಸೆ ಮಣೆ ಏರುವಂತೆ ಮಾಡಲು ಅವಳ ಅಮ್ಮ ಎಷ್ಟು ಕಷ್ಟ ಪಟ್ಟಿರಬಹುದು? ಅವಳ ತುಂಡು ಕೂದಲಿಗೆ ಹೇರ್‌ಸ್ಟೈಲ್ ಹೇಗೆ ಮಾಡಿರಬಹುದು ಎಂದೆಲ್ಲ ಯೋಚಿಸುತ್ತಲೇ ಒಳಗೆ ಅಡಿ ಇಟ್ಟೆ. ಕೂಡಲೇ ಕಣ್ಣಿಗೆ ಬಿದ್ದದ್ದು ಹೂವಿನಿಂದ ಅಲಂಕೃತವಾದ ಪಲ್ಲಕ್ಕಿ! ಅದನ್ನು ಹೊತ್ತು ನಡೆದಿದ್ದರು ರೇಷ್ಮೆ ಪಂಚೆ ಧರಿಸಿದ್ದ ಇಬ್ಬರು ಮಧ್ಯ ವಯಸ್ಕ ಗಂಡಸರು.

ಇದೇನು ದೇವರ ಉತ್ಸವ ಮದುವೆ ಮನೆಯಲ್ಲೇಕೆ ಎಂದು ಕ್ಷಣಕಾಲ ಯೋಚಿಸುತ್ತಾ ಮುಂದೆ ನಡೆದೆ. ಅದು ವಧುವನ್ನು ಸೋದರ ಮಾವಂದಿರು ಹಸೆಮಣೆಗೆ ಕರೆತರುವ ವೈಖರಿಯಾಗಿತ್ತು! ಬಿಟ್ಟಕಣ್ಣು ಮುಚ್ಚದೆ ಅಚ್ಚರಿಯಿಂದ ಅದನ್ನು ನೋಡಿ ಮರುಳಾದೆ. ಪಲ್ಲಕ್ಕಿಯಿಂದ ಇಳಿದು ನಾಚುತ್ತಾ ಹಸೆಮಣೆ ಏರಿದ ವಧುವಿನ ಗೆಟಪ್ ಕಂಡು ಬೆರಗಾದೆ! ಸೊಂಟ ಮುಟ್ಟುತ್ತಿದ್ದ ಮೊಗ್ಗಿನ ಜಡೆ, ಲಕ್ಷಣವಾದ ಕಚ್ಚೆ ಸೀರೆ ಉಟ್ಟು, ಸರ್ವಾಲಂಕಾರ ಭೂಷಿತೆಯಾಗಿ ವಧು ಹಸೆಮಣೆಗೆ ಬಂದಳು. ಇದ್ಹೇಗೆ ಸಾಧ್ಯ? ಅದ್ಹೇಗೆ ಈ ಮಾರ್ಪಾಟು? `ಎಲ್ಲ ಮಾಯವೋ ಹರಿಯೇ, ಎಲ್ಲ ಮಾಯವೋ' ಎಂದು ಮನಸ್ಸಿನಲ್ಲೇ ಗೊಣಗಿಕೊಂಡೆ.

ಇನ್ನು ವರನ ಅಲಂಕಾರ. ನನ್ನ ಪಕ್ಕ ಕುಳಿತಿದ್ದ ಹಿರಿಯರೊಬ್ಬರು ಪಕ್ಕದಲ್ಲಿ ಇದ್ದವರೊಂದಿಗೆ ಹೀಗೆ ಹೇಳುತ್ತಿದ್ದರು, `ಅಲ್ಲ, ಮನೇಲಿ ಯಾವಾಗ ನೋಡಿದರೂ ಬರ್ಮುಡ ಹಾಕ್ಕೊಂಡು ಓಡಾಡ್ತಿದ್ದ. ಹೊರಗೆ ಹೋಗುವಾಗ್ಲೂ ಎಷ್ಟೋ ಬಾರಿ ಅದೇ ಗೆಟಪ್ಪು. ಕಚ್ಚೆ ಪಂಚೆ ಇರಲಿ, ಒಂದು ದಿನಾನೂ ಅಪ್ಪಿತಪ್ಪಿ ದಟ್ಟಿಪಂಚೆಯನ್ನೂ ಉಟ್ಟಿದ್ದು ನೋಡಿಲ್ಲ. ಅಂತಾದ್ರಲ್ಲಿ ಇಲ್ಲಿ ನೋಡ್ರಿ, ಕಚ್ಚೆ ಪಂಚೆ ಉಟ್ಟು, ಪೇಟ ಹಾಕ್ಕೊಂಡು, ಕೈಯಲ್ಲಿ ವಾಕಿಂಗ್ ಸ್ಟಿಕ್, ಭುಜಕ್ಕೆ ಜೋಳಿಗೆ ಹಾಕ್ಕೊಂಡು ಕಾಶಿಯಾತ್ರೆ ಹೊರಟಿದಾನೆ. ಈ ಹುಡುಗರ ರೀತಿ ನೀತಿ ಅರ್ಥವೇ ಆಗೋಲ್ಲ ಅಲ್ವಾ?' ಎನ್ನುತ್ತಿದ್ದರು.

`ಇಬ್ಬರೂ ಫಾರಿನ್‌ಗೆ ಹೋಗ್ತಾರಂತೆ. ನಂಗನ್ಸುತ್ತೆ ಇಲ್ಲಿನ ಮದುವೆ ರೀತಿ ನೀತಿ ಎಲ್ಲಾನೂ ಅಲ್ಲಿ ತೋರಿಸ್ಕೋಬೇಕಲ್ಲ, ಅದಕ್ಕೇ ಇದೆಲ್ಲ ನಾಟಕ,' ಎಂದು ಉತ್ತರಿಸುತ್ತಿದ್ದರು ಪಕ್ಕದಲ್ಲಿ ಕುಳಿತಿದ್ದವರು. ಏನೇ ಆಗಲಿ, ನಮ್ಮ ಆಧುನಿಕ ಯುವಜನರು ಸಾಧಾರಣ ಗೆಟಪ್‌ನಲ್ಲಿ ಎಂತಹ ಉಡುಪು ಬೇಕಾದರೂ ಧರಿಸಲಿ, ಮದುವೆ ದಿನ ಮಾತ್ರ ಅತ್ಯಂತ ಸಾಂಪ್ರದಾಯಿಕ ವೇಷದಲ್ಲಿ ವಿಜೃಂಭಿಸುವುದು ಆ ಸಂಭ್ರಮಕ್ಕೆ ವಿಶೇಷ ಕಳೆ ಕಟ್ಟುತ್ತದೆ ಅನಿಸಿದ್ದಂತೂ ಸತ್ಯ.
* * *
ಮದುವೆ ಮನೆಯಲ್ಲಿ ಎಲ್ಲವೂ ವಿಶೇಷವೇ. ಊಟವಂತೂ ಭರ್ಜರಿಯಾಗಿತ್ತು. ನಾಲ್ಕು ಬಗೆಯ ಸಿಹಿ ಭಕ್ಷ್ಯಗಳು, ಫ್ರೂಟ್ ಸಲಾಡ್ ಜೊತೆಗೆ ಐಸ್ ಕ್ರೀಮ್ ಬೇರೆ. ನನ್ನಂತಹ ಸಿಹಿ ಪ್ರಿಯರಿಗೆ ಸುಗ್ಗಿ, ಎಲ್ಲವನ್ನೂ ರುಚಿ ನೋಡುವ ತವಕ. ಎಲೆಯಲ್ಲಿ ಎಲ್ಲವನ್ನೂ ಹಾಕಿಸಿಕೊಂಡು ಪೂರ್ತಿ ತಿನ್ನಲಾರದೆ ಬಿಟ್ಟಿದ್ದವರೇ ಹೆಚ್ಚು. ಹಾಗೆಂದು ಅವರು ಬಡಿಸಲು ತಂದಿದ್ದನ್ನು ಬೇಡ ಎನ್ನುವ ಸಂಯಮ ಇದೆಯೇ? ಉಹ್ಞೂಂ, ರುಚಿ ನೋಡಬೇಕೆಂಬ ಆಸೆ, ಆದರೆ ಎಲ್ಲವನ್ನೂ ತಿನ್ನಲಾಗದ ಸಂಕಟ.

ಎಲ್ಲ ಮುಗಿದ ಮೇಲೆ ಒಬ್ಬ ಅಡುಗೆಯವ ಎಲೆಗಳ ಮುಂದೆ ಬಟ್ಟಲು ಇಡತೊಡಗಿದ. ಮತ್ತೇನು ಎಂದು ಕುತೂಹಲದಿಂದ ಎಲ್ಲರ ಕಣ್ಣುಗಳೂ ಅರಳಿದವು. ಮತ್ತೊಬ್ಬ ಬಂದು ಬಿಸಿ ನೀರು ಸುರಿದ, ಮಗದೊಬ್ಬ ಅದರೊಳಗೆ ನಿಂಬೆ ಹಣ್ಣಿನ ಚೂರು ಹಾಕಿದ. ಆಗ ಅರ್ಥವಾಯಿತು ನೋಡಿ. ಇಷ್ಟೆಲ್ಲ ತಿಂದು ತೇಗಿದ ನಂತರ ಯಾರಿಗೂ ಎದ್ದು ಕೈತೊಳೆಯುವ ತಾಕತ್ತಿರುವುದಿಲ್ಲ, ಮೇಲೇಳಲಾರದೇ ಪರದಾಡುತ್ತಾರೆ ಎಂದು ವಧುವಿನ ತಂದೆ ತಾಯಿ ಮುಂದಾಲೋಚನೆಯಿಂದ ಅತಿಥಿಗಳಿಗೆ ಎಲೆಯ ಮುಂದೆಯೇ ಕೈತೊಳೆಯುವ ಶಾಸ್ತ್ರಕ್ಕೆ ವ್ಯವಸ್ಥೆ ಮಾಡಿದ್ದರು.

ಊಟದ ನಂತರ ರಾಜಸ್ತಾನಿ ವೇಷಧಾರಿಗಳು ಅತಿಥಿಗಳಿಗೆ ಬೀಡ ವಿತರಿಸಲು ಸಾಲಾಗಿ ನಿಂತಿದ್ದರು. ಸ್ವೀಟ್ ಬೀಡ, ಖಾರ ಬೀಡ ಇತ್ಯಾದಿ ನಾಲ್ಕು ರೀತಿಯ ಬೀಡಗಳು. ಯಾವುದು ಬೇಕು? ಯಾವುದು ಬೇಡ? ಅರೆ, ಎಲ್ಲ ವಿಧದ ಬೀಡಗಳೂ ಒಂದೊಂದಿರಲಿ ಎಂದರು ಬಹುತೇಕರು. ಹೀಗಾಗಿ ಊಟದ ನಂತರ ಬೀಡದ ಮುಂದೆ ದೊಡ್ಡ ಸರತಿ!   
* * *
ಮತ್ತೊಮ್ಮೆ ನಮ್ಮ ಬೀಗರ ಕಡೆಯ ಮದುವೆಯೊಂದಕ್ಕೆ ಹೋಗಿದ್ದೆ. ನನ್ನ ಸೊಸೆ ವರನ ಬಳಿ ಕರೆದೊಯ್ದು ಪರಿಚಯ ಮಾಡಿಸಿದಳು.
`ನೀವು ನನಗೆ ಚೆನ್ನಾಗಿ ಗೊತ್ತು. ನನ್ನ ನೆನಪಿದೆಯಾ?' ಎಂದು ಕೇಳಿದ ವರ ಮಹಾಶಯ.

`ನೀವು ಟಿ.ವಿ.ಯಲ್ಲಿ ದಿನಾ ನಮ್ಮ ಮನೆಗೆ ಬರ್ತೀರಲ್ಲ. ನೆನಪಿಲ್ಲದೆ ಏನು?' ಎಂದೆ ನಗುತ್ತಾ. ಅವನು ಜನಪ್ರಿಯ ಟಿ.ವಿ. ಹಾಗೂ ಸಿನಿಮಾ ನಟ.

`ನಾನು ಪಿಯುಸಿ ಓದೋವಾಗ ನಿಮ್ಮ ಸ್ಟೂಡೆಂಟ್ ಆಗಿದ್ದೆ.' ಎಂದ. `ಓ ಹೌದಾ! ಬಹಳ ಸಂತೋಷ' ಎಂದೆ. ಅವನು ನಟಿಸಿದ ಧಾರಾವಾಹಿಯನ್ನು ನೋಡಿದ್ದರೂ, ಅವನು ನನ್ನ ವಿದ್ಯಾರ್ಥಿ ಆಗಿದ್ದ ಅಂಶ ಮಾತ್ರ ನೆನಪಿಗೆ ಬರಲೇ ಇಲ್ಲ.

ಅದೇ ಮದುವೆಯಲ್ಲಿ ನಾನು ದಶಕಗಳಷ್ಟು ಹಿಂದೆ, ಅಂದರೆ ಕಳೆದ ಶತಮಾನದಲ್ಲಿ ಪಿಯುಸಿ ಓದುವಾಗಿನ ಸಹಪಾಠಿ ನನ್ನನ್ನು ಗುರುತಿಸಿ ಮಾತನಾಡಿಸಿದಾಗ ನಾನು, `ನಿಮ್ಮ ನೆನಪಿನ ಶಕ್ತಿಗೆ ಹ್ಯಾಟ್ಸ್ ಆಫ್ ಟು ಯೂ' ಎನ್ನುತ್ತಾ ಬೆರಗಾದೆ.

ಇನ್ನೊಂದು ಮದುವೆಗೆ ಹೋದಾಗ ನನ್ನ ಹೈಸ್ಕೂಲ್ ಸಹಪಾಠಿ ಮದುಮಗಳ ತಾಯಿ ಎಂದು ಗೊತ್ತಾಯಿತು. ನನ್ನನ್ನು ಗುರುತು ಹಿಡಿದಿದ್ದೂ ಅವಳೇ! ಪ್ರತಿ ದಿನವೂ ನಾವಿಬ್ಬರೂ ಜೊತೆಯಲ್ಲಿ ಶಾಲೆಗೆ ಹೋಗುತ್ತಿದ್ದೆವು. ಮನಸಾರೆ ಹರಟಲು ಅವಕಾಶ ಇಲ್ಲದಿದ್ದರೂ ಆಪ್ಯಾಯಮಾನವಾಗಿ ಮಾತನಾಡಿದ್ದು ಮದುವೆ ಸಂಭ್ರಮಕ್ಕೆ ಕಳೆ ಕಟ್ಟಿತ್ತು.

ಸ್ವಲ್ಪ ಹೊತ್ತು ಕಳೆದಿರಬಹುದು. ವಧುವಿನ ಸಂಬಂಧಿಯಾದ ಒಬ್ಬ ಜನಪ್ರಿಯ ಟಿ.ವಿ. ಕಲಾವಿದರೊಬ್ಬರು ಆಗಮಿಸಿದ್ದು ಮದುವೆ ಮನೆಯಲ್ಲಿ ಮಿಂಚಿನ ಸಂಚಾರ ಆದಂತಾಯಿತು. ಅಲ್ಲಿಯವರೆಗೆ ವಧು-ವರರ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿದ್ದ ವಿಡಿಯೊದವರು ಹಾಗೂ ಛಾಯಾಗ್ರಾಹಕರು ಮಂತ್ರಮುಗ್ಧರಾಗಿ ಕೂಡಲೇ ಆ ಕಲಾವಿದನತ್ತ ತಂತಮ್ಮ ವಿಡಿಯೊ ಹಾಗೂ ಕ್ಯಾಮೆರಾ ತಿರುಗಿಸಿದರು!

ಜನ ಕೂಡ ಕುತೂಹಲಭರಿತ, ಆಸಕ್ತಿಪೂರ್ಣ ದೃಷ್ಟಿಯನ್ನು ಅವರತ್ತ ಹರಿಸಿ, ಅವರು ಅನ್ಯಗ್ರಹ ವಾಸಿಯೇನೋ ಎಂಬಂತೆ ಅವರನ್ನೇ ನೋಡತೊಡಗಿದರು. ಇತ್ತ ವಧು-ವರರನ್ನು ಕೇಳುವವರೇ ಇಲ್ಲ. ನಾನು ಮತ್ತು ನನ್ನ ಗಂಡ ಇದೇ ಸಮಯ ಸಾಧಿಸಿ ವಧು ವರರನ್ನು ಅಭಿನಂದಿಸಿ ಒಂದೆರಡು ನಿಮಿಷ ನಿರಾಳವಾಗಿ ಅವರೊಂದಿಗೆ ಹರಟಿದೆವು. ಖ್ಯಾತನಾಮರನ್ನು ಕಂಡರೆ ನಮ್ಮ ಜನಗಳಿಗೆ ಅದೇನು ಮೋಹವೋ? ಜನರ ಈ ಹುಚ್ಚು ನೋಡಿ `ಜನ ಮರುಳೋ, ಜಾತ್ರೆ ಮರುಳೋ' ಎನಿಸುತ್ತದೆ.

ಪ್ರತಿ ಮದುವೆಯಲ್ಲೂ ಧಾರೆ ಸಮಯದಲ್ಲಿ ಕನಿಷ್ಠ ಐನೂರರಿಂದ ಸಾವಿರಕ್ಕೂ ಹೆಚ್ಚು ಜನರ ಊಟವಾಗಬೇಕು. ಸುಮಾರು ಹನ್ನೆರಡು ಗಂಟೆ ಸಮಯದಲ್ಲಿ ವಧುವಿನ ಕಡೆಯವರು ಬಂದು ಆಹ್ವಾನಿತರನ್ನು ಊಟಕ್ಕೆ ಎಬ್ಬಿಸಲು ಪ್ರಯತ್ನಪಟ್ಟರೂ ಯಾರಿಗೂ ಊಟ ಮಾಡಲು ಮನಸ್ಸಿರುವುದಿಲ್ಲ. ಯಾಕೆಂದರೆ ಮದುವೆ ಮನೆಯಲ್ಲೇ ಬೆಳಿಗ್ಗೆ ಸುಮಾರು 10 ಗಂಟೆಗೆ ಇಡ್ಲಿ, ಪೊಂಗಲ್, ಶ್ಯಾವಿಗೆ ಭಾತ್, ಕೇಸರಿ ಭಾತ್, ದಮ್‌ರೋಟ್ ಹೀಗೆ ವಿಧವಿಧವಾದ ತಿಂಡಿಗಳನ್ನು ಪೊಗದಸ್ತಾಗಿ ತಿಂದಿರುತ್ತೇವಲ್ಲ! ಇನ್ನು ಹನ್ನೆರಡು ಗಂಟೆಗೆಲ್ಲಾ ಊಟ ತಾನೇ ಹೇಗೆ ಸೇರೀತು?

ಸರಿ, ಹೇಗೋ ಕಷ್ಟಪಟ್ಟು ಮೊದಲ ಪಂಕ್ತಿ ತಪ್ಪಿದ ಮೇಲೆ ಜನರಿಗೆ ಜ್ಞಾನೋದಯ ಆಗುತ್ತದೆ. ಇನ್ನು ತಡ ಮಾಡಿದರೆ ಸರಿ ಹೋಗಲ್ಲ, ಮೂರು-ನಾಲ್ಕನೆಯ ಪಂಕ್ತಿ ವೇಳೆಗೆ ನೀರ‌್ಹಾಕಿ ಒದಗಿಸಿದ ಕೂಟು, ಅರೆಬರೆ ಬೆಂದ ಬಿಸಿಬಿಸಿ ಅನ್ನ ತಿನ್ನಬೇಕಾದೀತು ಎಂದು ಆತುರಾತುರದಿಂದ ಊಟದ ಮನೆಯ ಕಡೆ ನುಗ್ಗುತ್ತಾರೆ. ಅಷ್ಟರಲ್ಲಿ ಇವರಿಗಿಂತ ಚುರುಕಾದ ಜನ ಆ ವೇಳೆಗಾಗಲೇ ಎಲೆಗಳ ಮುಂದೆ ಕುಳಿತು, ಬಡಿಸುವುದನ್ನೇ ಕಾಯುತ್ತಿರುತ್ತಾರೆ. ಸರಿ, ಇವರಿಗೆ ಚಡಪಡಿಕೆ ಆರಂಭ. ಇನ್ನು ಏಮಾರಿದರೆ, ಮುಂದಿನ ಪಂಕ್ತಿಯೂ ಮಿಸ್ ಆದೀತೆಂಬ ಹೆದರಿಕೆಯಿಂದ, ಊಟದ ಮನೆಯ ಬಾಗಿಲಲ್ಲಿ ಕಾಯುತ್ತಾ ನಿಲ್ಲುತ್ತಾರೆ. ಇನ್ನೂ ಅವರೆಲ್ಲರ ಊಟ ಮುಗಿದಿರುವುದೇ ಇಲ್ಲ, ಅಡುಗೆಯವರು ಮೊಸರನ್ನಕ್ಕೆ ಅನ್ನ ಬಡಿಸುವುದು ಕಾಣುತ್ತಲೇ ಜನ ಒಳಗೆ ನುಗ್ಗುತ್ತಾರೆ, ಊಟ ಮಾಡುತ್ತಿರುವವರ ಮುಂದೆ ನಿಂತು ಅವರು ಊಟ ಮುಗಿಸಿ ಏಳುವುದನ್ನೇ ಕಾಯುತ್ತಾ ನಿಲ್ಲುತ್ತಾರೆ!

ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಊಟ ಮಾಡುವವರ ಹಿಂದೆ ಹೋಗಿ ನಿಲ್ಲುತ್ತಾರೆ. ಅವರು ಎದ್ದ ತಕ್ಷಣ, ಆ ಜಾಗ ಆಕ್ರಮಿಸಿ ಧನ್ಯರಾಗುತ್ತಾರೆ. ಎಂಜಲೆಲೆ ತೆಗೆಯುವವರೆಗೆ ಕಾಯಲು ಅವರಿಗೆ ವ್ಯವಧಾನವಿಲ್ಲ. ಒಂದು ವೇಳೆ, ಎಲೆ ಎತ್ತಲಿ ಚೊಕ್ಕಟಗೊಳಿಸಲಿ ಎಂದು ಕಾಯುತ್ತಾ ದೂರ ನಿಂತರೆ, ಬೇರೆಯವರು ಜಾಗ ಆಕ್ರಮಿಸಿಕೊಂಡು, ಆ ಪಂಕ್ತಿಯೂ ಮಿಸ್ ಆಗುತ್ತದಲ್ಲ ಎಂಬ ವಿಪರೀತ ಹೆದರಿಕೆ! ಇವರೆಲ್ಲ ಖಂಡಿತವಾಗಿ ಮನೆಯಲ್ಲಿ ಊಟವಿಲ್ಲದೆ ಬಂದವರಲ್ಲ, ಘನತೆವೆತ್ತ ಆಹ್ವಾನಿತ ವರ್ಗದವರು. ಆಹ್ವಾನಿತರೆಲ್ಲರಿಗೂ ಊಟ ಹಾಕಬೇಕೆಂಬ ಅರಿವು, ಉದ್ದೇಶ ಆತಿಥೇಯರಿಗೆ ಖಂಡಿತಾ ಇರುತ್ತದೆ. ಅವರು ಆ ಬಗ್ಗೆ ಕಾಳಜಿ ವಹಿಸುತ್ತಾರೆ ಕೂಡ. ಆದರೂ ಈ ಮಧ್ಯೆ ಜನರೇಕೆ ಹೀಗಾಡುತ್ತಾರೋ ತಿಳಿಯದು.

ಇತ್ತೀಚೆಗೆ ಇದೇ ವರ್ತನೆ ಹೋಟೆಲ್‌ಗಳಲ್ಲೂ ಕಂಡು ಬರುತ್ತದೆ. ಆರಾಮಾಗಿ ಹರಟುತ್ತಾ ಊಟ ಮಾಡಬೇಕೆಂದು ಹೋಟೆಲಿಗೆ ಹೋದರೆ ಅಲ್ಲಿ ದೊಡ್ಡ ಸರತಿ ಕಂಡು ಬರುತ್ತದೆ. ಪ್ರತಿ ಟೇಬಲ್ ಮುಂದೆಯೂ ನಾಲ್ಕು ಜನ ನಿಂತಿರುತ್ತಾರೆ. ಅಲ್ಲಿ ಕುಳಿತಿರುವವರು ಊಟ ಮುಗಿಸುವುದನ್ನೇ ಕಬ್ಬಕ್ಕಿಗಳಂತೆ ಕಾಯುತ್ತಾ ನಿಂತಿರುವ ದೃಶ್ಯ ನೋಡಲು ಮುಜುಗರವಾಗುತ್ತದೆ. ಇನ್ನು ಊಟ ಮಾಡುವವರಿಗೆ ಏನನ್ನಿಸಬಹುದು?

ಕಳೆದ ವಾರ ಪರಿಚಿತರೊಬ್ಬರ ಮಗನ ಮದುವೆ ರಿಸೆಪ್ಶನ್‌ಗೆ  ಹೋಗಿದ್ದೆ. ಅಲ್ಲಿ ಎಂದಿನಂತೆ ಭಕ್ಷ್ಯಭೋಜ್ಯಗಳು ಸಾಲುಗಟ್ಟಿ ನಿಂತು ಆಹ್ವಾನಿತರನ್ನು ಆಕರ್ಷಿಸುತ್ತಿದ್ದವು. ಅದು ಬಿಡಿ, ಮಾಮೂಲು. ನನ್ನನ್ನು ಆಕರ್ಷಿಸಿದ್ದು ಸಾಮಾನ್ಯವಾದ ಊಟದ ತಟ್ಟೆಯ ಎರಡರಷ್ಟು ಅಗಲವಿದ್ದ ದೊಡ್ಡ ದೊಡ್ಡ ಊಟದ ತಟ್ಟೆಗಳು. ಆಹ್ವಾನಿತರು ತೃಪ್ತಿಯಾಗಿ ತಟ್ಟೆಯ ತುಂಬಾ ಬಡಿಸಿಕೊಂಡು, ಒಂದೆಡೆಯಿಂದ ಮತ್ತೊಂದೆಡೆಗೆ ಪರಿಚಿತರನ್ನು ಮಾತನಾಡಿಸಲು ಆ ತಟ್ಟೆಯನ್ನು ಹಿಡಿದು, ಮತ್ತೊಬ್ಬರಿಗೆ ತಾಕದಂತೆ ಓಡಾಡುತ್ತಿದ್ದ ಪರಿ, ಇಲ್ಲವೇ ಪಕ್ಕದಲ್ಲಿ ಇರುವವರು ಇವರ ತಟ್ಟೆ ತಮ್ಮ ದುಬಾರಿ ಬಟ್ಟೆಯ ಮೇಲೆ ಊಟದ ಅಭಿಷೇಕ ಮಾಡೀತು ಎಂಬ ಹೆದರಿಕೆಯಿಂದ ಕೂಡಲೇ ಪಕ್ಕಕ್ಕೆ ಸರಿಯುತ್ತಿದ್ದುದು ಇವೆಲ್ಲ ಮೋಜೆನಿಸಿತು.

ನೀವು ಬೆಂಗಳೂರು ವಾಸಿಯಾಗಿದ್ದರೆ ಮದುವೆ ಆಮಂತ್ರಣಗಳ ಮಹಾಪೂರವನ್ನೇ ಪಡೆದಿರಬಹುದು. ಪ್ರತಿ ವರ್ಷ ಈ ಮದುವೆ ಸೀಸನ್ ಯಾಕಾದರೂ ಬರುತ್ತೋ ಎನಿಸಿರಲೂ ಬಹುದು. ಸುಮಾರು 30 ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿರುವ ನಮಗೆ, ಮದುವೆ ಸೀಸನ್ ಬಂತೆಂದರೆ ಸಾಕು ನೆಂಟರಿಷ್ಟರು, ಸ್ನೇಹಿತರ ಬಳಗದಿಂದ ಒಂದು ಇಪ್ಪತ್ತೈದಾದರೂ ಮದುವೆ ಮತ್ತಿತರ ಆಮಂತ್ರಣಗಳು ಬರುವುದು ಖಂಡಿತ. ಆ ಸಂದರ್ಭಗಳಲ್ಲಿ ಭರ್ಜರಿ ಊಟವನ್ನು ಪೊಗದಸ್ತಾಗಿ ಮುಗಿಸಿ, ಒಂದೈದು ಕೆ.ಜಿ ದೇಹ ತೂಕ ಹೆಚ್ಚಿಸಿಕೊಳ್ಳುವುದೂ ಸಾಮಾನ್ಯ ಸಂಗತಿ. ಜನರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಗೆ ಈ ಸಮಾರಂಭಗಳ ಊಟದ ಕೊಡುಗೆ ಸುಮಾರು ಶೇ 30ಕ್ಕೂ ಹೆಚ್ಚು ಎಂಬುದು ನನ್ನ ಅಂದಾಜು. ಇದರಿಂದಾಗಿ ಜನರ ಬೊಜ್ಜು ಇಳಿಸುತ್ತೇವೆಂದು ಭ್ರಮೆ ಹುಟ್ಟಿಸಿ, ತಮ್ಮ ಪರ್ಸಿನ ಬೊಜ್ಜನ್ನು ಹೆಚ್ಚಿಸಿಕೊಳ್ಳುತ್ತಿರುವ ಜನರ ಸಂಖ್ಯೆ ಹೆಚ್ಚಾಗಿರುವುದೂ ಅಷ್ಟೇ ನಿಜ.

ಮದುವೆ ಸೀಸನ್ ಮುಗೀತು. ಸದ್ಯ, ಇನ್ನು ಸ್ಪಲ್ಪ ಡಯಟ್ ಮಾಡಿ ತೂಕ ಇಳಿಸಬೇಕೆಂದು ಈ ಆಷಾಢ ಮಾಸದಲ್ಲಿ ಯೋಚಿಸುತ್ತಿದ್ದರೆ, ನಾಮಕರಣ, ಷಷ್ಟಿ ಪೂರ್ತಿ ಶಾಂತಿ, ಮತ್ಯಾವುದೋ ಹೋಮ, ಬರ್ತ್‌ಡೇ ಸಮಾರಂಭಗಳಿಗೆ ಆಮಂತ್ರಣ! ಅಂತೂ ನಮ್ಮ ಡಯಟ್ ಯೋಚನೆ ಸರ್ಕಾರಿ ಯೋಜನೆಗಳಂತೆ ಜಾರಿಗೆ ಬರುವುದೇ ಇಲ್ಲ ಬಿಡಿ.

ಫ್ಯಾಷನ್ ಕ್ವೀನ್ ಆದಳು ಪುಟ್ಟಗೌರಿ!
ಮದುವೆ ಮನೆಯೊಂದರಲ್ಲಿ `ಹಾಯ್ ಆಂಟಿ, ಹೇಗಿದೀರಾ?' ಎಂದು ಯುವತಿಯೊಬ್ಬಳು ಕೇಳುತ್ತಾ ನನ್ನತ್ತ ಬಂದಳು. ಯಾರಿವಳು ಸುಂದರಿ? ಗುರುತೇ ಸಿಗದಲ್ಲಾ? ಲಕ್ಷಣವಾಗಿ ಕಾಂಜೀವರಂ ಸೀರೆ, ಕಿವಿಯಿಂದ ಭುಜದವರೆಗೆ ನೇತಾಡುತ್ತಿದ್ದ ಲೋಲಾಕುಗಳು, ಕುತ್ತಿಗೆಯಲ್ಲಿ ಮಣಿಮಾಲೆ, ಮೂಗುತಿ, ಮುಖಕ್ಕೆ ಒಂದಿಂಚು ಮೇಕಪ್!

`ನಾನು ಆಂಟಿ, ಶ್ರೀಲತಾ. ಮರೆತೇಬಿಟ್ರಾ? ಸ್ವಲ್ಪ ದಿನ ನಿಮ್ಮ ಮನೆ ಎದುರು ಮನೇಲಿದ್ವಿ.' ಅಂದಾಗ, `ಓ, ನೆನಪಿಗೆ ಬಂತು. ಹಾಳು ಮರೆವು, ನೀನೂಂತ ಗೊತ್ತೇ ಆಗಲಿಲ್ಲ,' ಎಂದೆ ದೇಶಾವರಿ ನಗೆ ಬೀರುತ್ತಾ. ಹೇಗೆ ಗುರುತು ಸಿಕ್ಕೀತು? ಲೋ ವೇಸ್ಟ್ ಜೀನ್ಸ್, ಶರ್ಟ್ ಬಿಟ್ಟರೆ ಬೇರೆ ಉಡುಪಿನಲ್ಲಿ ಎಂದೂ ಅವಳನ್ನು ನಾನು ನೋಡೇ ಇರಲಿಲ್ಲ. ನಾಲ್ಕು ವರ್ಷಗಳ ನಂತರ, ಇಂದು ಸಾಂಪ್ರದಾಯಿಕವಾಗಿ ಅಲಂಕಾರ ಮಾಡಿಕೊಂಡು ದಿಢೀರನೆ ನನ್ನೆದುರು ಬಂದು ನಿಂತರೆ ನನ್ನ ಗತಿ ಏನಾಗಬೇಡ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT