ಪ್ರವಾಸ ಯಾಕೆ?

ಏಕತಾನತೆ? ಕಲಿಕೆ? ಹೊಸತಿನ ಹುಡುಕಾಟ? ಸಂಶೋಧನೆ?

ಎಲ್ಲವೂ ಹೌದು...

ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ಪ್ರವಾಸ. ಒಂದು ಸಮಸ್ಯೆಯನ್ನು ಅನೇಕ ಮಗ್ಗುಲುಗಳಿಂದ ನೋಡುವ ಸಾಧ್ಯತೆಗಳು ಅನಾವರಣಗೊಳ್ಳುವ ಸಂಭವನೀಯತೆ ಪ್ರವಾಸ. ಸಂಪುಷ್ಠದಲ್ಲಿ ಕಟ್ಟಿಟ್ಟ ಹಿಂಜರಿಕೆ, ನಿರ್ಬಂಧಗಳಿಗೆ ಸೃಜನಶೀಲ ಆಲಾಪಗಳ ವೇದಿಕೆ ಪ್ರವಾಸ.

ಏಕಾಂತದಲ್ಲಿ ಏಕಾಗ್ರತೆಯಿಂದ ಜಪಿಸುವ, ಸೇವಿಸುವ, ನೇಮ ಹಿಡಿಯುವ, ದೇಹ-ಮನಸ್ಸನ್ನು ದಂಡಿಸುವ ಪ್ರವಾಸ ಯಾತ್ರೆಯೆನಿಸೀತು. ಉತ್ಪಾದನೆಯ ಸರಕಿಗೆ ಮಾರುಕಟ್ಟೆಯ ಹುಡುಕಾಟದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗುವುದು ‘ವ್ಯಾಪಾರ ಪ್ರವಾಸ’ (ಬಿಸಿನೆಸ್ ಟೂರ್). ವಿದ್ಯಾಭ್ಯಾಸದ ಹಂತದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಸಿದ್ಧಾಂತ(ಥಿಯರಿ)ಗಳನ್ನು ಪ್ರಯೋಗಿಕವಾಗಿ ನೋಡಿ ಮಾಡಿ ಕಲಿಯುವುದು ಶೈಕ್ಷಣಿಕ ಪ್ರವಾಸ. ಪರ್ವತಾರೋಹಣ, ವೇಗವಾಗಿ ಹರಿಯುವ ನೀರಿನಲ್ಲಿ ದೋಣಿ ನಡೆಸುವುದು (ರ್‍ಯಾಪ್ಟಿಂಗ್), ಅಲೆಗಳ ಮೇಲೆ ಸವಾರಿ(ಸರ್ಫಿಂಗ್), ಕಾಡು-ಮೇಡು, ಝರಿಗಳಲ್ಲಿ ಸಾಗುವ ಟ್ರೆಕ್ಕಿಂಗ್ - ಎಲ್ಲವೂ ಪ್ರವಾಸದ ಭಾಗಗಳೇ.

ಪ್ರವಾಸ ಎರಡು ಬಗೆಯದು. ವಾಸ ಮಾಡುವ ಊರಿನಿಂದ ದೂರವಾಗಿ ವಿಶ್ರಾಂತಿಗೋಸ್ಕರ ನಿಸರ್ಗದ ಮಡಿಲಿನಲ್ಲಿ ಎರಡು–ಮೂರು ದಿನ ತಂಗಿದ್ದು ಬರುವುದು ಒಂದು ರೀತಿಯಾದರೆ, ಐತಿಹಾಸಿಕವಾಗಿಯೋ ಪೌರಾಣಿಕವಾಗಿಯೋ ಭೌಗೋಳಿಕವಾಗಿಯೋ - ಮಹತ್ವದ್ದೆಂದು ಊರೊಂದನ್ನು ಆಯ್ಕೆ ಮಾಡಿಕೊಂಡು ಒಂದೊಂದರ ಮಹತ್ವವನ್ನೂ ಕೇಳಿ ನೋಡಿ ತಿಳಿದು ಬರುವುದು ಇನ್ನೊಂದು ಬಗೆಯದು.

ಪಂಪನು ‘ಆರಂಕುಸವಿಟ್ಟೊಡಂ, ನೆನವುದೆನ್ನ ಮನಂ ಬನವಾಸಿ ದೇಸಮಂ’ ಎಂದು ಬನವಾಸಿ ದೇಶದ ಕನಸು ಬಿತ್ತಿದರೆ, ನಿಸಾರ್ ಅಹಮ್ಮದರ ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯ ಹರಿದ್ವರ್ಣವನದ ತೇಗಗಂಧ ತರುಗಳಲ್ಲಿ ನಿತ್ಯೋತ್ಸವ’ ಎಂದು ಜೋಗ, ಸಹ್ಯಾದ್ರಿ, ನಿತ್ಯ ಹರಿದ್ವರ್ಣದ ಕಾಡುಗಳನ್ನು ಸಂದರ್ಶಿಸುವ ಕನಸಿಗೆ ನೀರೆರೆದಿದ್ದಾರೆ. ‘ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ’ ಎಂದು ದಾಸರು, ‘ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ’ ಎಂದು ಕವಿಗಳು ಕೈಚಾಚಿ ಪ್ರವಾಸಿಗರನ್ನು ಆಹ್ವಾನಿಸಿದ್ದಾರೆ.

ಹೆಣ್ಣಿಗೆ ಶಾಲಾ–ಕಾಲೇಜು ದಿನಗಳಲ್ಲಿ ಪ್ರವಾಸ ಹೋಗಲು ಪೋಷಕರ ಕಟ್ಟುಪಾಡುಗಳು, ಮದುವೆಯ ನಂತರ ಮನೆ-ಮಕ್ಕಳು ಜವಾಬ್ದಾರಿ. ಅವಳು ನಲವತ್ತೈದರ ಆಸಿಪಾಸಿನಲ್ಲಿರುವಾಗ ಮಕ್ಕಳು ಒಂದು ಹಂತಕ್ಕೆ ತಮ್ಮನ್ನು ತಾವು ನಿಭಾಯಿಸಿಕೊಳ್ಳುವಂತಿರುತ್ತಾರೆ. ನಗರದ ಹೆಣ್ಣು ಬೆಳಗಿನಿಂದ ರಾತ್ರಿಯವರೆಗಿನ ದುಡಿತದ, ಗಡಿಯಾರದ ಮುಳ್ಳಿನ ಮೇಲಿನ ಬದುಕಿನಿಂದ ಒಂದು ಸಣ್ಣ ವಿರಾಮ ಪಡೆದು ಪ್ರವಾಸಕ್ಕೆ ಹೊರಡುವುದು ಅವಳ ಪಾಲಿಗೆ ಐಷಾರಾಮವೇ ಹೌದು. ಮದುವೆ, ಮುಂಜಿ, ಗೃಹಪ್ರವೇಶ ಎಂದೋ, ಮಕ್ಕಳಿಗೆ ರಜೆ ಎಂದೋ ಗಂಡ-ಮಕ್ಕಳೊಂದಿಗೆ ಊರುಗಳನ್ನು ಸಂದರ್ಶಿಸುವ ಸಂದರ್ಭ ಸ್ವಾಭಾವಿಕವಾಗಿ ಬಂದೇ ಇರುತ್ತದೆ. ಒಂದೊಮ್ಮೆ ಒಬ್ಬಳೇ ಪ್ರವಾಸ ಮಾಡಬೇಕೆನಿಸಿದರೆ? ಇಲ್ಲೇ ಸುತ್ತಮುತ್ತಲ ಊರಲ್ಲ, ಪಕ್ಕದ ರಾಜ್ಯವಲ್ಲ. ಉತ್ತರದ ರಾಜಾಸ್ಥಾನದ ಜೈಸಲ್ಮೇರ್!!

ಎಷ್ಟು ದಿನದ ಪ್ರವಾಸ? ಬಜೆಟ್ ಏನು? ಪ್ರಯಾಣ ಹೇಗೆ? ವಿಮಾನ, ರೈಲು, ಬಸ್ಸು? ಉಳಿಯುವುದೆಲ್ಲಿ? ಊಟ ತಿಂಡಿಯ ವ್ಯವಸ್ಥೆ ಹೇಗೆ? ಭಾಷೆ ಗೊತ್ತಿದೆಯಾ? ಎಲ್ಲಕ್ಕಿಂತ ಹೆಚ್ಚು ಫಜೀತಿ ಎಂದರೆ ನನ್ನ ಅನುಪಸ್ಥಿತಿಯಲ್ಲಿ ಮಕ್ಕಳು ಗಂಡನ ಊಟ ತಿಂಡಿಯ ವ್ಯವಸ್ಥೆ. ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಪಕ್ಕದ ದರ್ಶಿನಿಯಲ್ಲಿ ತಿಂಡಿ ತಿನ್ನುವುದು. ಕಾಲೇಜಿನ ಕ್ಯಾಂಟೀನಿನಲ್ಲಿ ಮಧ್ಯಾಹ್ನದ ಆಹಾರ, ರಾತ್ರಿ ಮನೆಗೆ ಬಂದು ಅಡುಗೆ ಮಾಡಿಕೊಳ್ಳಬೇಕೆಂದು ಮನವೊಲಿಸಲಾಯಿತು.

ಮೊದಲಿಗೆ: ಹೋಗಬೇಕೆಂದಿರುವ ಊರಿನ ಕುರಿತು ಗೂಗಲ್ ಗುರುವಿನ ಸಹಾಯ ಪಡೆದು, ನೋಡಬೇಕಾಗಿರುವ ಸ್ಥಳಗಳ ಒಂದು ಪಟ್ಟಿ ಸಿದ್ಧಮಾಡಬೇಕು.

ಊರಿನ ಹೆಸರು, ಹೋಟೆಲ್ ಎಂದು ಗೂಗಲಿಸಿದರೆ ನಮ್ಮ ಬಜೆಟ್ಟಿನಲ್ಲಿ ಬರುವ ಹೋಟೆಲುಗಳು, ಕೊಠಡಿಯ ಚಿತ್ರಗಳು ಜಾಲತಾಣಗಳಲ್ಲಿ ಸಿಗುತ್ತವೆ. ಅಂತರ್ಜಾಲದ ಮೂಲಕವೇ ಕೊಠಡಿಯನ್ನು ಕಾಯ್ದಿರಿಸಬಹುದು. ಹೊಟೇಲಿನವರಿಂದಲೇ ನಾವು ನೋಡಬೇಕಾಗಿರುವ ಸ್ಥಳಗಳಿಗೆ ಕರೆದೊಯ್ಯಲು ವಾಹನವನ್ನು ಗೊತ್ತು ಮಾಡುವುದು ಸೂಕ್ತ. ‘ಕಡಿಮೆ ಲಗೇಜು ಹೆಚ್ಚು ಆರಾಮದಾಯಕ’ ಉಕ್ತಿಯ ಜೊತೆಗೆ ಅವಶ್ಯಕವಾಗಿ ಬೇಕಾಗಿರುವ ಕೆಲವು ವಸ್ತುಗಳನ್ನು ಜೊತೆಗೊಯ್ಯಬೇಕು, ತಂಪುಕನ್ನಡಕ, ಟೋಪಿ, ಸಾಕ್ಸ್, ಸಣ್ಣದೊಂದು ಟಾರ್ಚ್, ನೀರಿನ ಬಾಟಲು, ಸಣ್ಣ ಡೈರಿ, ಪೆನ್ನು, ಆರಾಮದಾಯಕ ಉಡುಪುಗಳು. ಕೆಲವೊಮ್ಮೆ ನಾವು ಸಿದ್ಧಪಡಿಸಿಕೊಂಡ ಪಟ್ಟಿಗೂ, ಅಲ್ಲಿ ತಲುಪಿದ ಮೇಲೆ ಸಿಗುವ ಮಾಹಿತಿಗೂ ವ್ಯತ್ಯಾಸವಾಗುವುದುಂಟು. ಸಮಯಕ್ಕನುಗುಣವಾಗಿ ನಮ್ಮ ರೂಪುರೇಖೆಗಳನ್ನು ಬದಲಾಯಿಸಿಕೊಂಡು ಸ್ಥಳೀಯರ ಮಾಹಿತಿಯಿಂದ ಹೆಚ್ಚು ಉಪಯೋಗ ಪಡೆಯಬಹುದು. ನಾವು ಸಿದ್ಧಪಡಿಸಿಕೊಂಡ ಪಟ್ಟಿಯ ಜೊತೆಗೆ, ಆ ಊರಿಗೆ ಸಂಬಂಧಿಸಿದ ಮಾಹಿತಿ ಪುಸ್ತಕ, ನಕ್ಷೆಯನ್ನು ಜೊತೆಗಿಟ್ಟುಕೊಳ್ಳುವುದು ಸೂಕ್ತ.
ಮೊಬೈಲ್. ಚಾರ್ಜರ್‌ಗಳನ್ನು ಮರೆಯದೇ ತೆಗೆದುಕೊಳ್ಳಬೇಕು.

ಆಹಾರ: ಊಟ–ತಿಂಡಿಯ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮವಿಟ್ಟುಕೊಂಡಿರುವವರು ಮನೆಯಿಂದಲೇ ತಮಗೆ ಬೇಕಾಗಿರುವ, ಹೆಚ್ಚು ದಿನ ಕೆಡದೆ ಉಳಿಯುವ ತಿನಿಸುಗಳನ್ನು ಜೊತೆಗೆ ಕೊಂಡೊಯ್ಯಬೇಕಾಗುವುದು. ಚೂಡಾವಲಕ್ಕಿ, ಬೇಸನ್ನುಂಡೆ, ರವೆ ಉಂಡೆ, ಚಕ್ಕಲಿ ಇತ್ಯಾದಿ. ಹಣ್ಣು, ಸೌತೆಕಾಯಿ, ಕ್ಯಾರೆಟ್, ಎಳೆನೀರು ಎಲ್ಲ ಕಡೆಯೂ ಸಿಗುತ್ತದೆ. ಸ್ಥಳೀಯ ಖಾದ್ಯಗಳನ್ನು ಸವಿಯಬೇಕೆಂದುಕೊಂಡವರಿಗೆ ಆಯ್ಕೆಯ ಅವಕಾಶ ಯಥೇಚ್ಛವಾಗಿರುತ್ತದೆ.

ಭಾಷೆ: ಕೆ.ವಿ.ಸುಬ್ಬಣ್ಣನವರು ಹೇಳುವಂತೆ – ‘ಬಲಿಷ್ಠ ಅನ್ಯಭಾಷೆಯ ಆಕರ್ಷಣೆಯು ಹೆಚ್ಚಾಗಿ ಅದರ ಮರುಳಿಗೆ ಸೋತರೆ ನಾವು ನಮ್ಮ ಭಾಷೆಯ ಸ್ವಂತಿಕೆಯನ್ನು ಕಳಕೊಳ್ಳುತ್ತೇವೆ; ಅದನ್ನು ಕಂಡು ಹೆದರಿದರೆ ಸ್ವಂತಿಕೆಯ ಕೋಟೆ ಕಟ್ಟಿ ಅದರೊಳಗೆ ಮುರುಟಿಕೊಳ್ಳುತ್ತೇವೆ’. ಕನ್ನಡ ಭಾಷೆ ಗೊತ್ತಿದ್ದರೆ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಹೋಗಬಹುದು, ಹಾಗೇ ಹಿಂದೀಭಾಷೆ (ಅಲ್ಪ ಸ್ವಲ್ಪವಾದರೂ) ಗೊತ್ತಿದ್ದರೆ ಭಾರತದಾದ್ಯಂತ ಸಂಚರಿಸಬಹುದು. ಕರ್ನಾಟಕದ ಮಕ್ಕಳು ಶಾಲಾದಿನಗಳಲ್ಲಿ ಅನಿವಾರ್ಯವಾಗಿ ಕಲಿತ ಹಿಂದಿ ಇಲ್ಲಿ ಸಹಾಯಕ್ಕೆ ಬರುತ್ತದೆ. ವಾಹನಚಾಲಕ, ಹೊಟೇಲು ಸಿಬ್ಬಂದಿ, ವ್ಯಾಪಾರಿಗಳೊಂದಿಗೆ ಮಾತಾಡಲೇಬೇಕಾಗುತ್ತದೆ.

-ಸಾಂದರ್ಭಿಕ ಚಿತ್ರ

ಖರೀದಿ: ಎಲ್ಲ ಪ್ರವಾಸಿ ಕೇಂದ್ರಗಳಲ್ಲೂ ಸರ್ಕಾರದ ವತಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಮಾರಾಟ ಕೇಂದ್ರವೊಂದು ಇದ್ದೇ ಇರುತ್ತದೆ. ನಾವು ಗೊತ್ತು ಮಾಡಿಕೊಂಡಿರುವ ವಾಹನ ಚಾಲಕ ಅಲ್ಲಿಗೆ ಖಂಡಿತ ಕರೆದೊಯ್ಯುತ್ತಾನೆ. ಅಲ್ಲಿ ಖರೀದಿ ಮಾಡಿದರೆ ಗುಡಿಕೈಗಾರಿಕೆಗೆ, ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ ರಸೀದಿ ಪಡೆದಿದ್ದರೆ, ಊರಿಗೆ ಹೋದ ನಂತರ ಕೊಂಡ ವಸ್ತುವಿನಲ್ಲಿ ಏನಾದರೂ ನ್ಯೂನತೆಯಿದ್ದರೆ ಅಂಚೆ ಮೂಲಕವಾಗಿಯೂ ಅದನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಅದರ ಸಂಪೂರ್ಣ ಜವಾಬ್ದಾರಿಯನ್ನು ಆ ಮಾರಾಟ ಕೇಂದ್ರ ಹೊರುತ್ತದೆ. ಸ್ವಲ್ಪ ದುಬಾರಿ ಹೌದು, ಕೊಳ್ಳುವಂತೆ ಬಹಳ ಒತ್ತಾಯಿಸುತ್ತಾರೆ; ಜಾಗರೂಕತೆಯಿಂದಿರಬೇಕು.

ಪ್ರಮುಖ ಪ್ರವಾಸಿ ತಾಣಗಳ ಆಸುಪಾಸಿನಲ್ಲಿ ಸಾಲು ಅಂಗಡಿಗಳಲ್ಲಿ ಸ್ಥಳೀಯ ಕರಕುಶಲ ವಸ್ತುಗಳು ಸುಲಭ ದರದಲ್ಲಿ ಸಿಗುತ್ತವೆ. ಚೌಕಾಸಿ (ಪ್ರಿಯವಾದದ್ದು!) ಮಾಡಬಹುದು. ಸ್ನೇಹಿತರಿಗೆ ಹತ್ತಿರದ ಬಂಧುಗಳಿಗೆ ನೆನಪಿನ ಕಾಣಿಕೆಗಳನ್ನು ಖರೀದಿಸುವಾಗ ನಾಲ್ಕಾರು ಕಡೆ ವಿಚಾರಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ಅಂಗಡಿಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಬಹುದಾದರೂ, ಸಣ್ಣ ಪುಟ್ಟ ವ್ಯಾಪಾರಗಳಿಗೆ ಹಣ ಇಟ್ಟುಕೊಂಡು ಹೋಗುವುದು ಒಳಿತು.

ಕೆಲವು ಪ್ರವಾಸೀತಾಣಗಳಲ್ಲಿ ಅಲ್ಲಿಯ ಜಾನಪದ ಪೋಷಾಕುಗಳನ್ನು ಬಾಡಿಗೆಗೆ ಪಡೆದು ಫೋಟೊ ಕ್ಲಿಕ್ಕಿಸಿಕೊಳ್ಳಬಹುದು. ತಕ್ಷಣವೇ ಪ್ರಿಂಟ್ ಹಾಕಿ ಕೊಡುತ್ತಾರಾದರೂ ಗುಣಮಟ್ಟ ಸುಮಾರಾಗಿರುತ್ತದೆ. ನಿಮ್ಮದೇ ಕ್ಯಾಮರಾ ಅಥವಾ ಮೊಬೈಲಿನಲ್ಲಿ ಫೋಟೊ ತೆಗೆಸಿಕೊಳ್ಳಬಹುದು. ಸ್ವಲ್ಪ ಹೊತ್ತು ಅಲ್ಲಿಯ ವಿಭಿನ್ನ ಪೋಷಾಕು, ಒಡವೆಗಳನ್ನು ಧರಿಸಿದಾಗ ಸಿಗುವ ವಿಭಿನ್ನವಾದ ಅನುಭೂತಿಯನ್ನು ಅನುಭವಿಸಿಯೇ ತೀರಬೇಕು.

ಕೆಲವು ಕಡೆ ಚಿಕ್ಕ ಚಿಕ್ಕ ಬೋಟಿಂಗ್ ವ್ಯವಸ್ಥೆ ಇರುತ್ತದೆ, ಅದರಲ್ಲೇನೂ ಮಹತ್ವದ್ದಿಲ್ಲ ಎನಿಸಿದರೆ ಆ ಸಮಯವನ್ನು ಸುತ್ತಮುತ್ತಲಿನ ಸ್ಥಳದ ಭೇಟಿಗೆ ವಿನಿಯೋಗಿಸಬಹುದು.

ಮ್ಯೂಸಿಯಂ: ರಾಜ-ರಾಣಿ, ಅವರ ಜೀವನ; ಅದನ್ನೇನು ನೋಡುವುದು ಎಂದೆನಿಸಬಹುದು. ಆದರೆ ವಸ್ತುಸಂಗ್ರಹಾಲಯಗಳು ಆ ಸ್ಥಳದ ಒಟ್ಟು ಇತಿಹಾಸವನ್ನು ಕಟ್ಟಿಕೊಡುತ್ತವೆ. ಇತಿಹಾಸದಲ್ಲಿ ಆಸಕ್ತಿ ಇಲ್ಲದವರಿಗೂ ಅಂದಿನ ಜನಜೀವನದ ಶ್ರೀಮಂತಿಕೆ, ವಸ್ತು ವೈವಿಧ್ಯ, ಆಚರಣೆ, ಯುದ್ಧದ ಪರಿಕರಗಳು, ಪ್ರಸಾಧನ ಸಲಕರಣೆಗಳು, ಅಡುಗೆಮನೆಯ ಭಾಂಡಿಗಳು, ಸಂಗೀತವಾದ್ಯಗಳು, ಪಗಡೆ ಚದುರಂಗದ ಹಾಸುಗಳು – ಹೀಗೆ ಕೆಲವು ಶತಮಾನಗಳಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ದು ಬೇರೆಯೇ ಲೋಕದಲ್ಲಿ ನಿಲಿಸುತ್ತವೆ.

ಕಲ್ಚರಲ್ ವಿಲೇಜ್: ಪ್ರವಾಸಿಗರಿಗೆಂದೇ ಸಾಂಸ್ಕೃತಿಕ ಗ್ರಾಮಗಳನ್ನು ಸೃಷ್ಟಿಸಿರುತ್ತಾರೆ. ಜಾನಪದ ಗೀತೆ, ಜಾನಪದ ನೃತ್ಯ, ಸ್ಥಳೀಯ ತಿನಿಸುಗಳು, ಅದನ್ನು ಬಡಿಸುವ ಪದ್ಧತಿ, ಪ್ರವಾಸಿಗರನ್ನೂ ಹಾಡು ನೃತ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತದೆ. ಒಂಟೆ ಸವಾರಿ, ಸೂತ್ರದ ಗೊಂಬೆಯಾಟ, ಢೋಲಕ್, ಸಾರಂಗಿ, ಮೋರ್ಚಿಂಗ್, ಏಕ್‍ತಾರಾ ರಾಜಾಸ್ಥಾನದ ಪರಿಮಳವನ್ನು ನೆನಪಿನಲ್ಲಿ ಸದಾ ಬೆಚ್ಚಗುಳಿಯುವುದು.

ನನಗಿದ್ದ ಬಹುದೊಡ್ಡ ತಕರಾರು ಸಮಯ ಪರಿಪಾಲನೆ. ಎಷ್ಟೇ ತಯಾರಿ ಮಾಡಿಕೊಂಡರೂ ಸರಿಯಾದ ಸಮಯಕ್ಕೆ ಎಲ್ಲಿಗೂ ತಲುಪಲಾಗದ ಮಾದರಿ(ಪ್ಯಾಟರ್ನ್)ಗೆ ಪಕ್ಕಾಗಿದ್ದೆ. ಆದರೆ ಈ ಪ್ರವಾಸದ ಸಂದರ್ಭದಲ್ಲಿ ಕೂಡಲೇ ತೆಗೆದುಕೊಂಡ ತೀರ್ಮಾನಗಳೋ, ಖರ್ಚುವೆಚ್ಚದಲ್ಲಿ ಸಮತೋಲನವೋ, ಅಪರಿಚಿತ ಸ್ಥಳದಲ್ಲಿ ಅಪರಿಚಿತ ಜನರೊಡನೆ ವ್ಯವಹರಿಸುವಾಗ ವಹಿಸಿದ ಎಚ್ಚರಿಕೆಯೋ ಯಾವುದೋ ಅದು ಹೇಗೋ ಸಮಯವಿರುವಂತೆಯೇ ತಯಾರಾಗಿರುವಂತೆ ನನ್ನನ್ನು ಬದಲಾಯಿಸಿದೆ. ಭೇಟಿ ಕೊಟ್ಟ ಸ್ಥಳದಿಂದ ಹೊರಡುವಾಗ ಇನ್ನೊಮ್ಮೆ ಇಲ್ಲಿಗೆ ಬರಬೇಕೆಂದು ಅನಿಸುವುದುಂಟು, ಪಂಪ ಹೇಳಿದಂತೆ ಮರಿದುಂಬಿಯಾಗಿಯೋ ಕೋಗಿಲೆಯಾಗಿಯೋ, ಮತ್ತೊಮ್ಮೆ ಮುಟ್ಟಿ ಬರಬೇಕು.

ಕೊಸರು: ಎಲ್ಲ ಕಡೆಯೂ ಇರುವುದು ಅದೇ ಕಲ್ಲು, ಅದೇ ಮರಳು, ಅದೇ ನೀರು ಅದನ್ನೇನು ನೋಡುವುದು – ಎನ್ನುವವರು ಪ್ರವಾಸಪ್ರೇಮಿಗಳ ಹಿತಶತ್ರುಗಳು.

-ಸಾಂದರ್ಭಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.