ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ನಂಬಿಕೆ ದ್ರೋಹಕ್ಕೆ ಬೈಗುಳ ಇದೆ, ಪುರುಷನಿಗಿಲ್ಲ!

Last Updated 15 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಇಡೀ ಪ್ರಪಂಚದಲ್ಲಿ ಮಹಿಳಾ ದೌರ್ಜನ್ಯ ಅತಿ ಹೆಚ್ಚಾಗಿರೋದು ನಮ್ಮೀ ಪುಣ್ಯಭೂಮಿ ಭಾರತ ದೇಶದಲ್ಲಿಯೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಬೇರೆ ದೇಶಗಳಲ್ಲಿ ಸ್ತ್ರೀಜಾಗೃತಿ ಆದಂತೆ ಹಳ್ಳಿಗಳ ಭಾರತದಲ್ಲಿ ಆದ ಹಾಗೆ ಕಾಣಿಸುತ್ತಿಲ್ಲ. ವರದಕ್ಷಿಣೆಯ ಪದ್ಧತಿ ಈಗಲೂ ಇದೆ. ಪತ್ರಿಕೆಗಳು ಎರಡನೇ ಮೂರನೇ ಪುಟಗಳಲ್ಲಿ ವರದಕ್ಷಿಣೆಯ ದೌರ್ಜನ್ಯ, ಕಿರುಕುಳ, ಸಾವುಗಳ ಸಂಗತಿಗಳನ್ನು ನಿತ್ಯವೂ ಹೇಳುತ್ತಿವೆ. ದೃಶ್ಯ ಮಾಧ್ಯಮಗಳು ವರದಕ್ಷಿಣೆಯ ಕೊಲೆಗಳನ್ನು ಹೆಂಗಸರು ಮಕ್ಕಳು ಕಿಟಾರನೆ ಕಿರುಚುವಂತೆ ಭಯಾನಕವಾಗಿ ತೋರಿಸುತ್ತಿವೆ. ಗಂಡು ಹೆಣ್ಣಿನ ಜಗಳಗಳನ್ನು ಪುನಃ ಅಭಿನಯಿಸುವುದಕ್ಕೆ ಕೋರ್ಟು ಕಚೇರಿಗಳಿವೆ.

ಇದು ಈಗೀಗ ಶುರುವಾದ ಪೀಡೆಯಲ್ಲ. ವೇದಕಾಲದಿಂದಲೂ ಸ್ತ್ರೀಯರು, ಶೂದ್ರರನ್ನು ಪ್ರತ್ಯೇಕವಾಗಿಟ್ಟು ಮಡಿ ಮೈಲಿಗೆಯನ್ನು ಕಾಪಾಡಿಕೊಂಡು ಬಂದ ದೇಶ ನಮ್ಮದು.

ಜಾನಪದ ಅಧ್ಯಯನದಿಂದ ಒಂದು ಮಾತು ಸ್ಪಷ್ಟವಾಗುತ್ತದೆ: ನಮ್ಮ ಬೈಗಳದಲ್ಲಿ ಬರುವ ನೂರಕ್ಕೆ ತೊಂಬತ್ತರಷ್ಟು ಭಾಗ ಮಹಿಳೆಯನ್ನು ಕುರಿತೇ ಇವೆ. ಈ ತೊಂಬತ್ತರಲ್ಲಿ ಶೇಕಡಾ ತೊಂಬತ್ತೈದು ಮಹಿಳೆ ಪುರುಷನಿಗೆ ಮಾಡುವ ನಂಬಿಕೆ ದ್ರೋಹವನ್ನು ಕುರಿತಾಗಿಯೇ ಇವೆ; ಹಾಗೆ ಮಾಡುವ ಅವಳ ಲಜ್ಜೆಗೇಡಿತನ, ಚಂಚಲತೆಗಳಿಗೆ ಗುರಿಯಾದ ಗುಪ್ತಾಂಗದ ಸ್ತ್ರೀಲಿಂಗ ವಾಚಿಗಳೇ ಇವೆ. ಪುರುಷರನ್ನು ಕುರಿತ ಬೈಗಳ ಇಲ್ಲವೆಂತಲ್ಲ, ಇವು ಸ್ತ್ರೀ ಪುರುಷರಿಬ್ಬರೂ ಪರಸ್ಪರ ಬಳಸುವಂಥವು. ಆದರೆ ಪುರುಷ ಮಾಡುವ ನಂಬಿಕೆ ದ್ರೋಹದ ಬಗ್ಗೆ ಒಂದೂ ಬೈಗಳಿಲ್ಲ! ಅದಕ್ಕೆ ಬದಲು ಬೇಕಾದಷ್ಟು ಕಣ್ಣೀರಿವೆ.

ಜಾನಪದದಲ್ಲಿ ಕಲ್ಗಿ ಮತ್ತು ತುರಾಯಿ ಎಂಬ  ಹಾಡುಗಾರಿಕೆಯ ಸಂಪ್ರದಾಯವು 14 - 15ನೇ ಶತಮಾನದ ಸುಮಾರಿಗೆ ಹುಟ್ಟಿಕೊಂಡಿತು. ಅದರಲ್ಲಿ ಗಂಡಿಗಿಂತ ಹೆಣ್ಣು ಹೆಚ್ಚು ಮತ್ತು ಹೆಣ್ಣಿಗಿಂತ ಗಂಡು ಹೆಚ್ಚು ಎಂದು ವಾದಿಸುವ ಹಾಡುಗಾರಿಕೆ ಇದೆ. ಹೆಣ್ಣು ಹೆಚ್ಚು ಎಂದು ಹೇಳುವವರು ಸಾಮಾನ್ಯವಾಗಿ ಸ್ತ್ರೀಯರೇ ಆಗಿರುತ್ತಾರೆ. ಗಂಡು ಹೆಚ್ಚು ಎಂದು ಹೇಳುವವರು ಸಾಮಾನ್ಯವಾಗಿ ಪುರುಷರೇ ಆಗಿರುತ್ತಾರೆ.ಪುರುಷರ ಹಾಡುಗಳನ್ನು ಬರೆದ ಕವಿಗಳು ಹಾಡಿನ ಅಂತ್ಯದಲ್ಲಿ ತಮ್ಮ ಹೆಸರು ಹೇಳುತ್ತಾರೆ. ಗೋಕಾವಿಯಲ್ಲಿ ಸಾತು ಕ್ಯಾಮಣ್ಣ ಅಂತ ಗಂಡು ಹೆಚ್ಚು ಎಂದು ಹೇಳುವ ಕವಿ ಒಬ್ಬ ಇದ್ದ. ಹಾಗೇಯೆ ಇನ್ನೂ ಅನೇಕರು ಇದ್ದಾರೆ.

ಬಯಲಾಟಗಳಲ್ಲೂ ಅಲ್ಲಮಪ್ರಭು, ನಿಜಗುಣ ಶಿವಯೋಗಿ ಮುಂತಾದ ಗಂಡು ಹೆಚ್ಚು ಎಂದು ಹೇಳುವ ಸಣ್ಣಾಟಗಳೂ; ಹೆಣ್ಣು ಹೆಚ್ಚು ಎಂದು ಹೇಳುವ ದಾಸರಾಟ, ರಾಧಾನಾಟ (ಗಲಪೋಜಿ ಆಟ) ಮುಂತಾದ ಸಣ್ಣಾಟಗಳು ಇವೆ. ಆದರೆ ಈಗೀಗ ಅವೂ ಕಡಿಮೆಯಾಗಿವೆ.

ಕುಟುಂಬ ಕಟ್ಟಿದವಳೇ ಮಹಿಳೆ. ಆದರೆ ಮದುವೆಯಾದ ಮೇಲೆ ಅವಳ ಬುಡಕಟ್ಟಿನ ಬೆಡಗಾಗಲಿ, ಹೆಸರಾಗಲಿ ಮುಂದುವರಿಯುವುದಿಲ್ಲ- ಮಾತೃಪ್ರಧಾನ ಕುಟುಂಬಗಳನ್ನು ಬಿಟ್ಟು. ಮಹಿಳೆ ಮನೆತನ ನಡೆಸುತ್ತಾಳೆ. ಮಕ್ಕಳು ಮರಿಗಳನ್ನು ಹೆತ್ತು ಹೊತ್ತು ಪಾಲನೆ ಪೋಷಣೆ ನೋಡಿಕೊಂಡು ಕುಟುಂಬದ ಎಲ್ಲರ ಯೋಗಕ್ಷೇಮಕ್ಕೆ ಜವಾಬ್ದಾರಳಾಗಿರುತ್ತಾಳೆ. ಆದರದು ದುಡಿಮೆ ಅಲ್ಲ! ಅವಳು ಗಂಡಿನ ಸಮ ಕೆಲಸ ಮಾಡಿದರೂ ಕೂಲಿ ಮಾತ್ರ ಗಂಡಿನ ಅರ್ಧ. ಸಂಬಳ ಸೌಲಭ್ಯಗಳಲ್ಲಿ, ಸಮಾಜದ ಸ್ಥಾನಮಾನದಲ್ಲಿ ಕೂಡ ಲಿಂಗ ತಾರತಮ್ಯ ಇದೆ. ನೌಕರಿಯಲ್ಲಿದ್ದವರಿಗೆ ಹೆರಿಗೆ ರಜೆಯನ್ನು ಔದಾರ್ಯವೆಂಬಂತೆ ಕೊಡಲಾಗುತ್ತದೆ. ಆದರೆ ಅದೂ ಒಂದು ಉತ್ಪಾದಕ ಕ್ರಿಯೆಯೆಂದು ಒಪ್ಪಿಕೊಳ್ಳುವುದಕ್ಕೆ ಯಾವ ಸಂಸ್ಥೆಯೂ ತಯಾರಿಲ್ಲವೆಂದು ಅರ್ಥಶಾಸ್ತ್ರಜ್ಞರೇ ಹೇಳುತ್ತಾರೆ.

ಅಭಿಜಾತ ಸಾಹಿತ್ಯದಲ್ಲಿ ಪತಿವ್ರತೆ, ಪತಿದೇವ, ಸತೀ ಮುಂತಾದ ಕಲ್ಪನೆಗಳು ಬಂದಂತೆ ಸತೀವ್ರತ, ಸತಿದೇವ ಮುಂತಾದ ಕಲ್ಪನೆಗಳು ಬರುವುದಿಲ್ಲ. ‘ಶಿಲಪ್ಪದಿಗಾರಂ’ನ ಕನ್ನಗಿ, ‘ಪಾಡ್ದನ’ದ ಸಿರಿ, ವಚನ ಸಾಹಿತ್ಯದ ಅಕ್ಕಮಹಾದೇವಿ- ಇವರಂಥ ಒಬ್ಬ ನಾಯಕಿಯೂ ಅಭಿಜಾತ ಸಾಹಿತ್ಯದಲ್ಲಿಲ್ಲ. ರೇಣುಕಾ, ಮಾರಿ ಮುಂತಾದ ನಾಯಕಿಯರನ್ನು ಸಂಸ್ಕೃತೀಕರಣಗೊಳಿಸಿ ಕೈಯಲ್ಲಿ ಮರದ ಆಯುಧಗಳನ್ನು ಕೊಟ್ಟು ಆಶೀರ್ವದಿಸುವ ಹಸ್ತ ಮಾಡಿ ಕೂರಿಸಲಾಗಿದೆ.

ಮಹಿಳೆಗೆ ಸ್ವಂತ ಐಡೆಂಟಿಟಿ ಇಲ್ಲ. ತನ್ನ ಹೆಸರಿನೊಂದಿಗೆ ಗಂಡನ ಇಲ್ಲವೆ ತಂದೆಯ ಹೆಸರು ಅಂಟಿಸಿಕೊಂಡರೇ ಅವಳಿಗೊಂದು ಐಡೆಂಟಿಟಿ ಉಂಟು. ಕೆಲವು ಭಾಷೆಗಳಲ್ಲಿ ಮಹಿಳೆಯನ್ನು ಅದು ಇದು ಎಂದೇ ಸಂಬೋಧಿಸಲಾಗುತ್ತದೆ. ಮಹಿಳೆ ದಂಡಿಯಾಗಿ ಜನಪದ ಕಾವ್ಯ ಸೃಷ್ಟಿ ಮಾಡಿದ್ದಾಳೆ, ಒಂದು ಹಾಡಿನಲ್ಲೂ ರಚಿಸಿದವಳ ಹೆಸರಿಲ್ಲ. ಆಶ್ಚರ್ಯವೆಂದರೆ ಜನಪದ ಸಾಹಿತ್ಯದ ಶೇಕಡಾ ಅರವತ್ತು ಭಾಗ ಸ್ತ್ರೀ ರಚನೆಯಾದರೂ ಪ್ರತಿಭಟನೆಯ ಸೊಲ್ಲೇ ಇಲ್ಲ, ಸಿರಿಯೊಬ್ಬಳನ್ನು ಬಿಟ್ಟು!

ಇದ್ದುದರಲ್ಲಿ ದ್ರಾವಿಡ ಸಂಸ್ಕೃತಿಯೇ ಮೇಲು. ಯಾಕೆಂದರೆ ಅದು ತಾಯಿಯನ್ನು ತನ್ನ ಪ್ರಜ್ಞಾ ಕೇಂದ್ರದಲ್ಲಿಟ್ಟು ಪೂಜಿಸುವ ಸಂಸ್ಕೃತಿ. ಸಂಸ್ಕೃತದಲ್ಲೂ ‘ಮಾತೃದೇವೋಭವ’ ಎಂಬಂಥ ಸುಂದರವಾದ ಹೇಳಿಕೆಗಳಿವೆ. ಆದರೆ ಅದೇ ತಾಯಿಗೆ, ಅಂದರೆ ಮಾತಿನ ಮಾತೆಗೆ, ಅಂದರೆ ಮಾತೃಭಾಷೆಯನ್ನು ಸೃಷ್ಟಿಮಾಡಿದ ತಾಯಿಗೆ ಸಂಸ್ಕೃತವನ್ನು ಮಾತನಾಡುವ ಅಥವಾ ಕಿವಿಯಿಂದ ಕೇಳುವ ಅಧಿಕಾರವಿಲ್ಲ. ನಮ್ಮ ಲೋಕಸಭೆಯಲ್ಲೇ ಮಹಿಳಾ ಮೀಸಲಾತಿ ಬಿಲ್ಲಿಗೆ ಒಪ್ಪಿಗೆ ಸಿಕ್ಕಿಲ್ಲ. ‘ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು, ಪೆಣ್ಣಲ್ಲವೇ ನಮ್ಮನೆಲ್ಲ ಪಡೆದ ತಾಯಿ?’ ಎಂಬ ಸಂಚಿ ಹೊನ್ನಮ್ಮನ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಲಿಂಗ ತಾರತಮ್ಯ, ಅಸ್ಪೃಶ್ಯತೆ- ಈ ದೇಶದಿಂದ ತೊಲಗಬೇಕಾದರೆ ಇನ್ನೂ ಒಂದಿಷ್ಟು ಚಳವಳಿಗಳು ಬೇಕು. ಅಂಥ ಚಳವಳಿಗಳು ಬುದ್ಧ, ಬಸವಣ್ಣ, ಗಾಂಧೀಜಿ- ಇವರ ನೇತೃತ್ವದಲ್ಲಿ ನಡೆದವಾದರೂ, ಎಲ್ಲಿ ಹೆಜ್ಜೆ ತಪ್ಪಿತೋ -ಸ್ವರ್ಗಕ್ಕೆ ಬಂದೆವೆಂದು ನೋಡಿದರೆ- ಮೊದಲಿದ್ದ ಚರಂಡಿಯಲ್ಲೇ ಇದ್ದೇವೆ.
ಈಗೀಗ ಮಹಿಳೆಯರಿಗೆ ಶಿಕ್ಷಣ ಸಿಗುತ್ತಿರುವುದೊಂದು ಸಂತೋಷದ ವಿಚಾರ. ಸುಶಿಕ್ಷಿತ ಮಹಿಳೆಯರಲ್ಲಿ ಬದುಕನ್ನೆದುರಿಸುವ ಹೊಸ ಹುರುಪು, ಕೆಚ್ಚು ಮೂಡತೊಡಗಿದೆ. ಅದು ಸಾಲದೆಂದು ಗೊತ್ತಿದ್ದೂ ಅದನ್ನೇ ಹೃತ್ಪೂರ್ವಕವಾಗಿ ಸ್ವಾಗತಿಸೋಣ. ಅವರೇ, ಅವರು ಮಾತ್ರ ಹೊಸ ಜಗತ್ತನ್ನು ಸೃಷ್ಟಿಸಬಲ್ಲರು.

ಸಂದರ್ಶನ: ಗುಡಿಹಳ್ಳಿ ನಾಗರಾಜ

ಹೆಣ್ಣು
ಹೆಣ್ಣೆಂದರೆ ನೀರು.
ಹನಿ ಹನಿ ಕೂಡಿ ಹಳ್ಳವಾಗಿ ಹೊಳೆಯಾಗಿ ಹರಿದು
ಗುಡ್ಡ ಬೆಟ್ಟಗಳಲ್ಲಿ, ಹೊಲ ಗದ್ದೆಗಳಲ್ಲಿ ಹಸಿರಾಗಿ,
ಹಿತ್ತಲ ಬೇಲಿಗೆ ಹಾಗಲ ಬಳ್ಳಿಯಾಗಿ,
ಕಾಯಾಗಿ ಮಕ್ಕಳ ತಾಯಾಗಿ
ಅತ್ತೆ ಕತ್ತೆಯೂ ಆಗಿ,
ನೆರೆ ಬಂದು ಕೊಳೆ ಕಸ ಕೊಚ್ಚಿ ಸಾಗರ ಸೇರಿ
ಮತ್ತದೇ ಇತ್ಯಾದಿ ಉಗಿಯಾಗಿ ಹೊಗೆಯಾಗಿ
ಋತುವಾಗಿ ಋತುಮತಿಯಾಗಿ ಮನೆ ಬೆಳಗಿ
ಪದಾರ್ಥದ ಕವನವಾಗಿ
ಕರ್ತೃ ಕರ್ಮ  ಕ್ರಿಯಾ ಪದವಾಗಿ,
ಅರೆ ಕೊರೆಗಳ ಪೂರ್ಣ ವಿರಾಮವಾಗಿ
ಕೊಚ್ಚಿಕೊಂಬ ಮಕ್ಕಳ ವಿಶೇಷಣವಾಗಿ
ತಾನು ಮಾತ್ರ ಆರಕ್ಕೇರದೆ, ಮೂರಕ್ಕಿಳಿಯದೆ
ಮನೆಯ ನಿಭಾಯಿಸುತ್ತಾಳೆ,
ಎಲ್ಲವೂ ಗಂಡಿನಿಂದಲೇ ಆಯಿತೆಂಬಂತೆ
ಗಂಡಿನಹಂಕಾರದ ಹೂಂಕಾರವಾಗಿ,
ಲೋಕದ ಓಂಕಾರವಾಗಿ!

ಚಂದ್ರಶೇಖರ ಕಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT