ಬಲ್ಲಾಳರಾಯ ದುರ್ಗದ ಬೆರಗು

ಮಂಗಳವಾರ, ಮಾರ್ಚ್ 26, 2019
33 °C

ಬಲ್ಲಾಳರಾಯ ದುರ್ಗದ ಬೆರಗು

Published:
Updated:
Prajavani

ಏಕ್‌ದಮ್ ಸಾಲು ಸಾಲು ರಜೆಗಳು ಬಂದಿದ್ದರಿಂದ, ಗೆಳೆಯರೆಲ್ಲ ಸೇರಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿರುವ ಬಲ್ಲಾಳರಾಯನ ದುರ್ಗಕ್ಕೆ ಬೈಕ್‌ನಲ್ಲಿ ಪ್ರವಾಸ ಹೊರಡುವ ನಿರ್ಧಾರ ಕೈಗೊಂಡೆವು.

ಕೊಟ್ಟಿಗೆಹಾರದಿಂದ ಪ್ರಯಾಣ ಆರಂಭ. ಬೆಳಕು ಕಣ್ಣು ಬಿಡುವ ಮುನ್ನ ಬೈಕ್ ಏರಿ, ಅದರ ಕಿವಿ ಹಿಂಡುತ್ತಾ, ಕಾಫಿ ಕಾಡಿನ ತಿರುವುಗಳಲ್ಲಿ ಸಾಗಿದೆವು. ಹಿಂದಿನ ದಿನ ಬಿದ್ದ ಮಳೆಯ ಘಮಲು ಮುಖವನ್ನು ಸವರುತ್ತಿತ್ತು. ಕುದುರೆಮುಖ ಬೆಟ್ಟಗಳನ್ನು ಹಿಂದಿಕ್ಕಿ ಬಲಕ್ಕೆ ತಿರುಗಿ, ಕಡಿದಾದ ಗುಡ್ಡದ ಕಡೆ ಹೊರಟಾಗ ತ್ರಿಪಾಠಿ ಎಸ್ಟೇಟ್‍ನ ಮ್ಯಾನೇಜರ್ ಬಂಗೇರಾ ಅವರು ಎದುರಾದರು. ಅವರಿಂದ ಕೋಟೆಯ ಇತಿಹಾಸ ಕಥೆ ಕೇಳುತ್ತಾ, ನಿಸರ್ಗದ ನಡುವೆ ಸೆಲ್ಪಿ ತೆಗೆದುಕೊಳ್ಳುತ್ತಾ ತಲ್ಲೀನರಾದೆವು.

ನಾವು ನಿಂತ ಸ್ಥಳ ಹೇಗಿತ್ತೆಂದರೆ, ಹತ್ತು ಹೆಜ್ಜೆ ಮುಂದಿಟ್ಟರೆ ಕಡಿದಾದ ಪ್ರಪಾತ. ಮುಂದಕ್ಕೆ ದಕ್ಷಿಣ ಕನ್ನಡ. ಆದರೆ ನಾವಿದ್ದಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಅಲ್ಲೇ ನಿಂತು ಕಣ್ಣು ಹಾಯಿಸಿದರೆ ದೂರದಲ್ಲಿ ಜಮಾಲಾಬಾದ್ ಕೋಟೆ ಮಂಜಿನೊಂದಿಗೆ ಮುದ್ದಾಡಿದಂತೆ ಕಾಣುತ್ತಿದೆ.

ನಮ್ಮ ಎಡಕ್ಕೆ ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ ಹೋಗುವ 8 ಕಿ. ಮೀ. ನ ಕಾಲುಹಾದಿ.  ಎಡ ದಿಕ್ಕಿನಲ್ಲಿ ಹೊರಟರೆ ಮತ್ತೊಂದು ಸ್ವರ್ಗ ಶಿಖರ. ಅದರ ನಡುವಿರುವ ಸೀಳಿದ ದಾರಿಯಲ್ಲಿ ನಡೆದರೆ ಬಲ್ಲಾಳರಾಯನ ಕೋಟೆ ದಾರಿ ಬಿಡಿಸಿಕೊಳ್ಳುತ್ತಾ ಹೋಗುತ್ತದೆ.

ಪ್ರವಾಸದ ಮೊದಲ ಅರ್ಧ ಗಂಟೆ ಕಾಡಿನ ಏರು ದಾರಿ. ಕಚ್ಚಿಕೊಳ್ಳುವ ಜಿಗಣೆಗಳ ಕಾಟ. ಅವು ಯಾರಿಗೆ ಕಡಿಮೆ ಕಚ್ಚುತ್ತವೋ ಎಂಬ ಪೈಪೋಟಿಯಲ್ಲೇ ಕಾಡು ದಾಟಿದೆವು. ಜಾರುವ ಅಂಟು ಮಣ್ಣಿನ ಏರು ದಾರಿಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ, ಭರತನಾಟ್ಯ. ಎಡಕ್ಕೆ ಮಹಾ ಪ್ರಪಾತ. ಹಸಿರು ವೆಲ್ವೆಟ್ ಬಟ್ಟೆಯನ್ನು ಹೊದ್ದಂತೆ ಕಾಣುವ ಬೆಟ್ಟದ ಸಾಲುಗಳು. ಇಕ್ಕೆಲಗಳಲ್ಲಿ ಹಸಿರ ರಾಶಿಯ ನಡುವಿನ ಹಾದಿಯಲ್ಲಿ ಸಾಗುತ್ತಿದ್ದರೆ ಮೋಡಗಳು ತಮ್ಮ ಬಾಹುಗಳಲ್ಲಿ ಶಿಖರಗಳನ್ನು ಹಿಡಿದು ಮುದ್ದಿಸುತ್ತಾ, ಒಮ್ಮೆಲೆ ಬಿಟ್ಟು ಬಿಡುವಂತೆ ಭಾಸವಾಗುತ್ತಿತ್ತು. ನಂತರ ಚಕ್ಕನೆ ಕಣ್ಣೆದುರು ಬಂದು ಆಶ್ಚರ್ಯ ಮೂಡಿಸಿ ಮತ್ತೆ ಮಂಜಿನೊಂದಿಗೆ ಸರಸಕ್ಕಿಳಿಯುತ್ತಿದ್ದವು. ನಾವು ಹೋದಲ್ಲೆಲ್ಲ ನಮ್ಮ ಬೆನ್ನಟ್ಟಿ ಬರುತ್ತಿದ್ದವು ಮೋಡಗಳು. ಸ್ವಲ್ಪ ಹೊತ್ತು ಕಳೆಯುವುದರಲ್ಲಿ ನಾವು ಬಲ್ಲಾಳರಾಯ ದುರ್ಗದ ನೆತ್ತಿಯ ಮೇಲಿದ್ದವು.

ಅದ್ಬುತ ಕೋಟೆ ಇದು
ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿರುವ ಬಲ್ಲಾಳರಾಯನದುರ್ಗ. ಇಲ್ಲಿ ಹೊಯ್ಸಳರ ರಾಜ ಬಲ್ಲಾಳರಾಯ ಎಂಬ ದೊರೆ ಕೋಟೆ ನಿರ್ಮಿಸಿರುವುದರಿಂದ ಬಲ್ಲಾಳರಾಯನದುರ್ಗ ಎಂಬ ಹೆಸರು ಬಂದಿದೆ.

ಈ ಕೋಟೆಯ ನೆತ್ತಿಯ ಮೂರು ನಾಲ್ಕು ಕಡೆ ಕಾವಲು ಬುರುಜಿದೆ. ದಕ್ಷಿಣ ಕನ್ನಡದ ಕಡೆಗೆ ತೀರಾ ಕಡಿದಾದ ಪ್ರಪಾತವಿದೆ. ಚಾರ್ಮಾಡಿಯ ‘ಏರಿಕಲ್ಲು’ ಅಥವಾ ‘ಹುಲಿದನ’ ಬೆಟ್ಟ, ಕುದುರೆಮುಖ ಶಿಖರ ಇಲ್ಲಿಂದ ನಿಚ್ಚಳವಾಗಿ ಕಾಣುತ್ತದೆ. ಬೆಟ್ಟದ ತುದಿಯಲ್ಲಿ ಗೋಡೆ ನಿರ್ಮಿಸಿದ್ದಾರೆ. ನೆತ್ತಿಯನ್ನು ಸಪಾಟುಗೊಳಿಸಿ ಮನೆಯಂತಹ ರಚನೆಗಳಿವೆ. ಕೆಲ ಪ್ರವಾಸಿಗರು ಎಂದಿನಂತೆ ಆ ಮನೆಗಳಲ್ಲಿ ಪ್ಲಾಸ್ಟಿಕ್ ಶೀಶೆಗಳನ್ನು ಬಿಸಾಡಿ ಹೋಗಿದ್ದಾರೆ. ಅವರ ಪರಿಸರ ಪಜ್ಞೆ ಇನ್ನೂ ಪಾತಾಳದಲ್ಲಿದೆ. ಆದರೆ ಅವರಿಗೆ ಬೆಟ್ಟವೇರುವ ಕನಸು ಮಾತ್ರ ಉತ್ತುಂಗದಲ್ಲಿದೆ !

ಬೆಟ್ಟದ ಕಲ್ಲುಗಳನ್ನೇ ಕೋಟೆಗೆ ಬಳಸಿ, ಬೃಹತ್ ಕಡೆಯುವ ಕಲ್ಲು, ಬೀಸುವ ಕಲ್ಲು ತಯಾರಿಸಿದ್ದಾರೆ. ಅವುಗಳು ಬಲ್ಲಾಳರಾಯನ ಕಾಲದ ಸಾಕ್ಷ್ಯವಾಗಿ ಇನ್ನೂ ನಿಂತಿವೆ. ಶಿವನ ಬಾಗಿಲೆಂಬ ಶಿಲೆಯ ಮಹಾದ್ವಾರ ನೆತ್ತಿಯ ಸ್ವಲ್ಪ ಕೆಳಗಿನ ಕಾಡುಗಳಲ್ಲಿ ಅನಾಥವಾಗಿ ಬಿದ್ದಿವೆ. ಬಾಗಿಲು ಮಾಡುವಷ್ಟು ದೊಡ್ಡ ಬಂಡೆ ಸುತ್ತಲ್ಲೆಲ್ಲೂ ಇಲ್ಲ. ಕೆಳಗಿನ ಕಣಿವೆಯಿಂದ ಕ್ರೇನು, ಟ್ರಕ್ಕುಗಳಿಲ್ಲದ ಕಾಲದಲ್ಲಿ ಹೊತ್ತುಕೊಂಡೇ ಬರಬೇಕು. ಅಂಥ ಬೃಹತ್ ಬಾಗಿಲು ಅದು. ಅದನ್ನು ಕಂಡು ನಮ್ಮ ಹಿರಿಯರ ಪರಿಶ್ರಮಕ್ಕೆ ಮನದಲ್ಲೇ ನಮಸ್ಕರಿಸಿದೆ.

ಒಂದು ಬುರುಜಿನಿಂದ ಮತ್ತೊಂದಕ್ಕೆ ದಾಟಲು ಕನಿಷ್ಠ ಅರ್ಧ ಗಂಟೆ ಬೇಕು. ಅಷ್ಟೂ ಉದ್ದಕ್ಕೂ ಕಲ್ಲಿನ ಪಾಗಾರ ಕಟ್ಟಿದ್ದಾರೆ. ಬಂಡಾಜೆ ಅಬ್ಬಿ, ಸುಂಕಸಾಲೆ ಅಬ್ಬಿ ಇಲ್ಲಿಂದ ಬಹಳ ಸನಿಹದಲ್ಲಿದೆ. 360 ಡಿಗ್ರಿ ಕೋನದಲ್ಲೂ ಎತ್ತ ನೋಡಿದರು ಬೆಟ್ಟಗಳ ರಾಶಿ.

ಬಲ್ಲಾಳರಾಯನ ದುರ್ಗ ನೋಡಿ ಬಂದು ತಿಂಗಳಾದರೂ ಮನದ ತುಂಬಾ ಆ ಕೋಟೆಯ ನೆನಪುಗಳ ತೋರಣ ಕಟ್ಟಿಕೊಂಡಿತು. ಮನಸ್ಸು ಮತ್ತೊಮ್ಮೆ ಅಲ್ಲಿ ಲಗ್ಗೆ ಇಡಲು ಕಾತುರವಾಗಿದೆ! ನೀವೂ ಬರುವಿರಾ?

**

ಹೋಗುವುದು ಹೇಗೆ ?
ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಭಾಗದಲ್ಲಿದೆ ಬಲ್ಲಾಳರಾಯನ ದುರ್ಗ. ಬೆಂಗಳೂರು ಕಡೆಯಿಂದ ಹೋಗುವವರು ಚಿಕ್ಕಮಗಳೂರು – ಮೂಡಿಗೆರೆ ಮೂಲಕ ಕೊಟ್ಟಿಗೆಹಾರ ತಲುಪಬಹುದು. ಸಕಲೇಶಪುರದ ಕಡೆಯಿಂದಲೂ ಕೊಟ್ಟಿಗೆಹಾರಕ್ಕೆ ಬರಲು ದಾರಿ ಇದೆ.

ಕೊಟ್ಟಿಗೆಹಾರದಿಂದ ಕಳಸಕ್ಕೆ ಸಾಗುವ ಮಾರ್ಗದಲ್ಲಿ ಸುಂಕಸಾಲೆ ಗ್ರಾಮವಿದೆ. ಇಲ್ಲಿಗೆ ಸಮೀಪದಲ್ಲಿ ಎಡಕ್ಕೆ ರಸ್ತೆ ಇದೆ. ಆ ರಸ್ತೆಗುಂಟ ಸಾಗಿದರೆ ಬಲ್ಲಾಳರಾಯನ ದುರ್ಗ ತಲುಪಬಹುದು. ಇಲ್ಲಿಂದ ಕೋಟೆ ಮೂರು ಕಿ.ಮೀ ದೂರವಿದೆ. 

ನಡಿಗೆ, ಬೈಕ್‌ ದಾರಿ: ಸುಂಕಸಾಲೆ ಗ್ರಾಮದಿಂದ ಬೆಟ್ಟಸಾಲುಗಳ ನಡುವೆ ಕೋಟೆ ತಲುಪಬಹುದು. ಇಲ್ಲಿಂದ ಬಸ್‌ ವ್ಯವಸ್ಥೆ ಇಲ್ಲ. ಹಾಗಾಗಿ ನಡೆದೇ ಹೋಗಬೇಕು. ಇಲ್ಲವೇ, ಬೈಕ್‌ ಅಥವಾ ಖಾಸಗಿ ವಾಹನಗಳಲ್ಲಿ ಹೋಗಬಹುದು. 

ಇದು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಹಾಗಾಗಿ ಅರಣ್ಯ ಇಲಾಖೆ ಅನುಮತಿ ಪಡೆಯಕು. ಇದೊದು ಅರಣ್ಯ ಸೂಕ್ಷ್ಮ ಪ್ರದೇಶ. ಇಲ್ಲಿ ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೇ ಸ್ವಚ್ಛತೆ ಕಾಪಾಡುವುದು ಪ್ರವಾಸಿಗರ ಜವಾಬ್ದಾರಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !