ಪುದುಚೇರಿ ಅಚ್ಚರಿ..!

7

ಪುದುಚೇರಿ ಅಚ್ಚರಿ..!

Published:
Updated:
Prajavani

ಅಲ್ಲಿ ಈಗ ಫ್ರೆಂಚರು ಆಳುವುದಿಲ್ಲ, ಆದರೂ ಅದೊಂದು ರೀತಿಯ ಫ್ರೆಂಚರ ಸಾಮ್ರಾಜ್ಯ. ಮಹರ್ಷಿ ಅರವಿಂದರು ಈಗ ಅಲ್ಲಿ ಇಲ್ಲವಾದರೂ ಅವರು ಅಲ್ಲೇ ಎಲ್ಲೋ ಇದ್ದಾರೇನೋ ಎಂಬಂತೆ `ಆರೋವಿಲ್ಲೆ'ಯ ಧ್ಯಾನಕೆಂದ್ರಕ್ಕೆ ಬಂದು ಹೋಗುವ ದೇಶವಿದೇಶಗಳ ವಿಹಾರಿಗಳು. ಶಾಂತವಾದ ಕಡಲು, ಸಮೀಪದಲ್ಲೇ ಗಾಂಧಿಯ ಪ್ರತಿಮೆ, ತಿಳಿಯಾದ ಆಕಾಶ... ಪುದುಚೇರಿಗೊಮ್ಮೆ ಹೋಗಿಯೇ ಅನುಭವಿಸಬೇಕು.

ಚೆನ್ನೈ ನಗರವನ್ನು ಪ್ರವಾಸಕ್ಕಾಗಿ ಸಂದರ್ಶಿಸುವವರು ಮಹಾಬಲಿಪುರವನ್ನೂ, ಪಾಂಡಿಚೇರಿಯನ್ನೂ ಸಂದರ್ಶಿಸಿಯೇ ಬರುತ್ತಾರೆ. ಚೆನ್ನೈಯಿಂದ ದಕ್ಷಿಣಕ್ಕೆ ಸುಮಾರು 150 ಕಿ.ಮೀ ದೂರದಲ್ಲಿರುವ ಪಾಂಡಿಚೇರಿ ಅಥವಾ ಪುದುಚೇರಿಗೆ ಹೋಗುವುದೇ ಒಂದು ವಿಶಿಷ್ಟ ಅನುಭವ. ಬಂಗಾಳಕೊಲ್ಲಿಯ ಸಮುದ್ರದ ಬದಿಯಲ್ಲೇ ಸಾಗುವ ಈ ರಾಜಮಾರ್ಗ `ಈಸ್ಟ್ ಕೋಸ್ಟ್ ರೋಡ್' ಅಥವಾ `ಇಸಿಆರ್'. ತಮಿಳರಿಗಿದು `ಕಿಳಕ್ಕ್ ಕಡಲ್‍ಕರೈ ಸಾಲೈ'ಅಂದರೆ `ಪೂರ್ವ ಸಮುದ್ರ ಬದಿಯ ರಸ್ತೆ'.

ದ್ವಿಚಕ್ರ, ನಾಲ್ಚಕ್ರ ವಾಹನ ಚಾಲಕರಿಗೂ, ಪ್ರಯಾಣಿಕರಿಗೂ ಸುಂದರ ಪಯಣ. ಅತ್ತ ಒಂದು ಬದಿಗೆ ಕಡಲು, ಇನ್ನೊಂದು ಬದಿಗೆ ಎತ್ತಲೂ ಕಾಣಿಸುವ ತಾಳೆಮರಗಲ ಸಾಲು... ನಡುವೆ ಸಿಗುವ ಹಿನ್ನೀರಿನ ಬಳಿಯಲ್ಲಿ `ಕಟಮರಾನ್' ಬಳಸಿ ಮೀನು ಹಿಡಿಯುವ ದೃಶ್ಯ ನಿಮ್ಮ ಕ್ಯಾಮೆರಾಕ್ಕೆ ಸಿಗಲೂಬಹುದು. ಎತ್ತ ನೋಡಿದರೂ ಉಪ್ಪಿನ ಗದ್ದೆಗಳೇ ಕಾಣಿಸುವ `ನಾರವಾಕ್ಕಂ'ನಲ್ಲಿ ಒಂದಿಷ್ಟು ಬಿಡುವು ಮಾಡಿಕೊಂಡರೆ ನಾವು ನೀವೆಲ್ಲ ತಿನ್ನುವ ಸಾಮಾನ್ಯ ಉಪ್ಪು ಹೇಗೆ ತಯಾರಿಸುತ್ತಾರೆಂದು ನೋಡಬಹುದು.

ಮದ್ರಾಸ್ ಹೋಗಿ ಚೆನ್ನೈ ಆದಂತೆ ಪಾಂಡಿಚೇರಿ ಈಗ ಪುದುಚೆರಿ ಆಗಿದೆ. ಆದರೂ ಅಲ್ಲಿನ ಜನರಿಗೆ ಈಗಲೂ ಫ್ರೆಂಚ್ ಪ್ರಭಾವದಿಂದ ಸಂಪೂರ್ಣ ಹೊರಬರಲು ಸಾಧ್ಯವಾಗಿಲ್ಲ. ಫ್ರೆಂಚರು ನಿಮಗೆ ಅಲ್ಲಲ್ಲಿ ಕಾಣಸಿಗುತ್ತರೆ. ಯಾಕೆಂದರೆ ಅವರಿಗೆ ಪುದುಚೇರಿಯಲ್ಲಿ ಭೂಮಿ ಇದೆ!

ಪುದುಚೇರಿಯ ವೈಶಿಷ್ಟ್ಯವೆಂದರೆ ಅಲ್ಲಿನ ಜನರ ಬೈಸಿಕಲ್ ಹುಚ್ಚು. ಸೈಕಲ್ ಮತ್ತು ಸೈಕಲ್ ರಿಕ್ಷಾಗಳು ಇಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಲು ಸಿಗುತ್ತವೆ. ಮನುಷ್ಯರೇ ತುಳಿಯುವುದಾದರೂ, ಸೈಕಲ್ ರಿಕ್ಷಾಗಳು ಕೋಲ್ಕತಾದ ಮಾನವ ರಿಕ್ಷಾಗಳಂತೆ ಬೇಸರ ಹುಟ್ಟಿಸುವುದಿಲ್ಲ. ರಸ್ತೆಗಳೂ ಹಾಗೇ, ಕಸಕಡ್ಡಿಗಳಿಲ್ಲದೆ ಬಹಳ ಅಚ್ಚುಕಟ್ಟು. ಸಂಚಾರಿ ಶೌಚಾಲಯಗಳೂ ಇಲ್ಲಿ ಅಲ್ಲಲ್ಲಿವೆ.

ಗಾಂಧಿ ಪ್ರತಿಮೆ ಇರುವ ಬೀಚ್‍ನಲ್ಲಿನ ಸೂರ್ಯೋದಯ ಬಹಳ ಸುಂದರ. ವರ್ಷದ ಹೆಚ್ಚಿನ ಋತುಗಳಲ್ಲೂ ಇಲ್ಲಿ ಜನರು ಬರುತ್ತಿರುತ್ತಾರೆ. ಪ್ರವಾಸಿಗರಿಗಾಗಿ ಅಲ್ಲಲ್ಲಿ ತೆಂಗಿನ ಗರಿ ಹೊದೆಸಿದ ಪುಟ್ಟ ಪುಟ್ಟ ಕುಟೀರಗಳಿವೆ. ತಿನ್ನಲು ಮಂಡಕ್ಕಿ, ಚುರುಮುರಿ ಲಭ್ಯ. ಪಾಂಡಿಚೇರಿಯನ್ನು ಪರಿಚಯಿಸುವ ಗೈಡ್‍ಗಳೂ ಸಿಗುತ್ತಾರೆ. ಸಂಜೆಯಾಗುತ್ತಿದ್ದಂತೆ ಬೀಚ್‍ನಲ್ಲಿನ ಜನಸಂದಣಿ ಇನ್ನೂ ಹೆಚ್ಚುತ್ತದೆ.

ಪಾಂಡಿಚೇರಿಯನ್ನು ಸಂದರ್ಶಿಸುವವರು ಮಹರ್ಷಿ ಅರವಿಂದರು ಬಾಳಿ ಬದುಕಿದ `ಆರೋವಿಲ್ಲೆ' ಗ್ರಾಮವನ್ನು ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ. ಈ ಗ್ರಾಮದ ಅಚ್ಚರಿಯೆಂದರೆ ಇದೊಂದು ಗ್ಯಾಲಕ್ಸಿಯ ರೂಪದಲ್ಲಿದ್ದು, ಇದರ ಕೇಂದ್ರಬಿಂದು ಮಾತೃಮಂದಿರದ ಬಂಗಾರದ ಬಣ್ಣದ ಗೋಲ. ಇದೊಂದು ಧ್ಯಾನಮಂದಿರ. ಪಿರಮಿಡ್‍ನೊಳಗೆ ಧ್ಯಾನಕ್ಕೆ ಕುಳಿತಂತೆ ಇದರಲ್ಲೂ ವಿಶಿಷ್ಟ ಅನುಭವವಾಗುತ್ತದೆನ್ನುತ್ತಾರೆ.

ಭಾರತದ ಹಲವಾರು ಭಾಗಗಳಿಂದ ಬಂದ ಪ್ರವಾಸಿಗರಲ್ಲದೆ ಜಪಾನೀಯರು, ಕೊರಿಯನ್ನರು, ಫ್ರೆಂಚರು ಇಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಆರೋವಿಲ್ಲೆಯ ಆಲದ ಮರ, ಬಂಗಾರ ಬಣ್ಣದ ಗೋಲ... ಎಲ್ಲವೂ ಅವಿಸ್ಮರಣೀಯ ಅನುಭವ ನೀಡುತ್ತವೆ. ನೆನಪಿಗಾಗಿ ಮನೆಗೊಯ್ಯಲು ಅಗರಬತ್ತಿಗಳು, ಸುಗಂಧಗಳ ಪ್ಯಾಕೆಟ್‍ಗಳು, ಸುಗಂಧಿತ ಮೇಣದಬತ್ತಿಗಳು, ಟಿ-ಶರ್ಟ್‍ಗಳು ಆರೋವಿಲ್ಲೆಯಲ್ಲಿ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !