ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಅಫ್ಗಾನಿಸ್ತಾನ ಅಯೋಮಯ: ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭ

ತಾಲಿಬಾನ್ ಬಿಗಿಹಿಡಿತ; ಅಧ್ಯಕ್ಷ ಅಶ್ರಫ್ ಘನಿ ಪಲಾಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್ (ಪಿಟಿಐ/ಎಎಫ್‌ಪಿ/ಎಪಿ): ಅಫ್ಗಾನಿಸ್ತಾನ ಈಗ ತಾಲಿಬಾನ್ ಬಂಡುಕೋರರ ಬಿಗಿ ಹಿಡಿತದಲ್ಲಿದೆ. ಅವರು ರಾಜಧಾನಿ ಕಾಬೂಲ್ ಪ್ರವೇಶಿಸುತ್ತಿದ್ದಂತೆಯೇ, ಅಧ್ಯಕ್ಷ ಅಶ್ರಫ್ ಘನಿ ಅವರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಘನಿ ದೇಶದಿಂದ ಓಡಿಹೋಗಿರುವುದನ್ನು ಇಬ್ಬರು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಫ್ಗನ್ ರಾಷ್ಟ್ರೀಯ ಸಾಮರಸ್ಯ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಇದನ್ನು ದೃಢಪಡಿಸಿದ್ದಾರೆ. ‘ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಅವರು ಪಲಾಯನ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ.

ತಾಲಿಬಾನ್ ಉಗ್ರರಿಗೆ, ಕಾಬೂಲ್ ಹೊರವಲಯದಲ್ಲೇ ಇರುವಂತೆ ಸೂಚಿಸಲಾಗಿದೆ. ಅಫ್ಗಾನಿಸ್ತಾನ ಸರ್ಕಾರದ ಆಡಳಿತವನ್ನು ತಾಲಿಬಾನ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ, ಕಾಬೂಲ್‌ನ ಭದ್ರತೆಯ ಜವಾಬ್ದಾರಿ ಅಫ್ಗನ್ ಸರ್ಕಾರದ್ದು ಎಂದು ತಾಲಿಬಾನ್ ವಕ್ತಾರರು ಟ್ವೀಟ್ ಮಾಡಿದ್ದಾರೆ. 

ಕಾಬೂಲ್‌ನಲ್ಲಿ ರಕ್ತಪಾತವನ್ನು ತಪ್ಪಿಸಲು ಮತ್ತು ತಾಲಿಬಾನ್‌ಗೆ ಅಧಿಕಾರವನ್ನು ಹಸ್ತಾಂತರಿಸಲು ಮಾತುಕತೆಗಳು ನಡೆಯುತ್ತಿವೆ ಎಂದು ಅಫ್ಗಾನ್ ಸರ್ಕಾರ ಮೊದಲೇ ತಿಳಿಸಿತ್ತು. ‘ಅಫ್ಗನ್ ಜನರು ಚಿಂತಿಸಬಾರದು, ನಗರದ ಮೇಲೆ ಯಾವುದೇ ದಾಳಿ ನಡೆಯುವುದಿಲ್ಲ. ಶಾಂತಿಯುತವಾಗಿ ಅಧಿಕಾರ ವರ್ಗಾವಣೆ ಆಗುತ್ತದೆ’ ಎಂದು ಆಂತರಿಕ ಸಚಿವ ಅಬ್ದುಲ್ ಸತ್ತಾರ್ ಮಿರ್ಜಕ್ವಾಲ್ ಅವರು ಧ್ವನಿಮುದ್ರಿತ ಭಾಷಣದಲ್ಲಿ ಹೇಳಿದ್ದರು. 

ತಾಲಿಬಾನ್‌ನ ಸಂಧಾನ ತಂಡದ ಭಾಗವಾಗಿರುವ ಕತಾರ್‌ನಲ್ಲಿ ನೆಲೆಸಿರುವ ಸುಹೇಲ್ ಶಾಹೀನ್ ಅವರು, ಶೀಘ್ರ ಅಧಿಕಾರ  ಹಸ್ತಾಂತರಕ್ಕೆ ಬೇಡಿಕೆ ಇಟ್ಟಿದ್ದಾರೆ. ‘ಮುಂದಿನ ಒಂದು ವಾರದಲ್ಲಿ ಶಾಂತಿಯುತ ಹಸ್ತಾಂತರ ಆಗಬೇಕು’ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಮಝರ್-ಎ-ಶರೀಫ್ ಮತ್ತು ಜಲಾಲಾಬಾದ್ ಅನ್ನು ತಾಲಿಬಾನ್ ಅತಿಕ್ರಮಿಸಿದ ನಂತರ ಘನಿ ಸರ್ಕಾರವು ಸಂಪೂರ್ಣವಾಗಿ ನಿರುತ್ತರವಾಗಿತ್ತು. ತಾಲಿಬಾನ್ ಪರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ ವಿಡಿಯೊಗಳಲ್ಲಿ, ಶಸ್ತ್ರಸಜ್ಜಿತ ಬಂಡುಕೋರರು ಧ್ವಜ ಬೀಸುತ್ತಾ, ಸ್ಥಳೀಯರನ್ನು ಅಭಿನಂದಿಸುತ್ತಾ, ನಗರ ಸುತ್ತುತ್ತಿರುವ ದೃಶ್ಯಗಳಿವೆ.

ತಾಲಿಬಾನ್‌ ಉಗ್ರರು ಕ್ರೂರ ನಿಯಮವನ್ನು ಪುನಃ ಜಾರಿಗೆ ತರಬಹುದು ಎಂಬ ಭೀತಿ ನಾಗರಿಕರಲ್ಲಿ ಹರಡಿದೆ. ಹೀಗಾಗಿ ದೇಶವನ್ನು ತೊರೆಯಲು ಹವಣಿಸುತ್ತಿದ್ದಾರೆ. ಕೂಡಿಟ್ಟಿದ್ದ ಹಣವನ್ನು ಪಡೆಯಲು ಎಟಿಎಂಗಳ ಮುಂದೆ ಸಾಲುಗಟ್ಟಿದ್ದಾರೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ರಾಜತಾಂತ್ರಿಕ ಸಿಬ್ಬಂದಿಯನ್ನು ತೆರವುಗೊಳಿಸುವ ಯತ್ನಗಳು ನಡೆಯುತ್ತಿವೆ. 

ಅಮೆರಿಕ ಸೇನೆ ವಾಪಸ್ ಆಗಿದ್ದರಿಂದ ತಾಲಿಬಾನ್‌ ಪ್ರತಿರೋಧವನ್ನು ತಡೆಯಲು ಅಫ್ಗನ್ ಸೇನೆಗೆ ಸಾಧ್ಯವಾಗಿಲ್ಲ. 2001ರಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಆಡಳಿತ ಕೊನೆಗೊಳಿಸಿದ್ದ ಅಮೆರಿಕವು ಸುಮಾರು ಎರಡು ದಶಕಗಳ ಕಾಲ ಸೇನೆ ನಿಯೋಜಿಗಿಸಿತ್ತು. ಇದೀಗ ಇಸ್ಲಾಮಿಕ್ ಸಂಘಟನೆಯು ಅಧಿಕಾರವನ್ನು ಮರಳಿ ಪಡೆಯುವ ಸನಿಹದಲ್ಲಿದೆ.
 

ಕಾಬೂಲ್‌ನಿಂದ ಹೊರಟ ಏರ್ ಇಂಡಿಯಾ ವಿಮಾನ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಭಾರತದಿಂದ ತೆರಳಿದ್ದ ಏರ್ ಇಂಡಿಯಾ ವಿಮಾನಕ್ಕೆ ಎಟಿಸಿ ಅನುಮತಿ ಸಿಗುವವರೆಗೆ ಒಂದು ಗಂಟೆ ಕಾಲ ಆಗಸದಲ್ಲಿ ಹಾರಾಟ ನಡೆಸಬೇಕಾಯಿತು. ಅನುಮತಿ ಸಿಕ್ಕ ಬಳಿಕ ಇಳಿದ ವಿಮಾನವು 129 ಜನರೊಂದಿಗೆ ಕಾಬೂಲ್‌ನಿಂದ ಭಾರತದತ್ತ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ-ಕಾಬೂಲ್-ದೆಹಲಿ ವಿಮಾನವನ್ನು ರದ್ದುಗೊಳಿಸುವ ಯಾವುದೇ ಯೋಜನೆ ಇಲ್ಲ. ಸೋಮವಾರವೂ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ಏರ್ ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು