ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಅಮೆರಿಕ ಸಹಭಾಗಿತ್ವ ವಿಸ್ತರಣೆ

ಅಜಿತ್ ಡೋಭಾಲ್‌ ಮತ್ತು ಆ್ಯಂಟನಿ ಬ್ಲಿಂಕನ್‌ ದ್ವಿಪಕ್ಷೀಯ ಮಾತುಕತೆ ಫಲಪ್ರದ
Last Updated 2 ಫೆಬ್ರುವರಿ 2023, 16:08 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಭಾರತದೊಂದಿಗೆ ಕಾರ್ಯತಂತ್ರ ಸಹಭಾಗಿತ್ವದ ಸಹಕಾರ ವಿಸ್ತರಣೆಗೆ ಅಮೆರಿಕ ಬದ್ಧವಾಗಿದೆ ಎಂದು ಶ್ವೇತಭವನ ಹೇಳಿದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್‌ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳಲ್ಲಿ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವ ವಿಸ್ತರಿಸಲು ಮಹತ್ವದ ಚರ್ಚೆ ನಡೆಸಿದರು.

ಉನ್ನತಾಧಿಕಾರಿಗಳ ನಿಯೋಗ ಕೊಂಡೊಯ್ದಿರುವ ಡೋಭಾಲ್‌ ಅವರು ಇಸ್ರೇಲ್, ಈಜಿಪ್ಟ್ ಸೇರಿ ಮಧ್ಯಪ್ರಾಚ್ಯ ದೇಶಗಳ ಪ್ರವಾಸ ಮುಗಿಸಿ ಮರಳಿರುವ ಬ್ಲಿಂಕನ್ ಅವರನ್ನು ಬುಧವಾರ ಭೇಟಿ ಮಾಡಿದರು.

‘ಭಾರತದೊಂದಿಗೆ ನಮ್ಮ ಕಾರ್ಯತಂತ್ರದ ಸಹಭಾಗಿತ್ವ ಗಾಢವಾಗಿಸಲು ಡೋಭಾಲ್‌ ಅವರೊಂದಿಗೆ ಫಲಪ್ರದ ಸಭೆ ನಡೆಸಲಾಯಿತು. ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತದೊಂದಿಗೆ ನಮ್ಮ ಸಹಭಾಗಿತ್ವದ ಸಹಕಾರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ’ ಎಂದು ಬ್ಲಿಂಕನ್‌ ಸಭೆಯ ನಂತರ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಡೋಭಾಲ್‌ ಅವರು ಅಮೆರಿಕ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ಅವರನ್ನು ಭೇಟಿ ಮಾಡಿದರು. ಉಭಯ ನಾಯಕರು ನಡೆಸಿದ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ನಿರ್ಣಾಯಕ ಮತ್ತು ನವೀನ ತಂತ್ರಜ್ಞಾನದ ಉಪಕ್ರಮಗಳ (ಐಸಿಇಟಿ) ಕಾರ್ಯತಂತ್ರದ ಸಹಭಾಗಿತ್ವ ಹೆಚ್ಚಿಸಲು ನಿರ್ಧರಿಸಿದರು.

ಕೆಲವು ನಿರ್ಣಾಯಕ ವಲಯದಲ್ಲಿನ ರಫ್ತುಗೆ ಇರುವ ಅಡೆತಡೆ ನಿವಾರಿಸಲು ಅಮೆರಿಕದ ಕಡೆಯಿಂದ ಕಾನೂನಾತ್ಮಕ ಬದಲಾವಣೆ ತರುವುದಾಗಿಯೂ ಸುಲ್ಲಿವಾನ್‌ ಭರವಸೆ ನೀಡಿದರು.

ಪ್ರಜಾಸತ್ತಾತ್ಮಕ ತಂತ್ರಜ್ಞಾನ ಪರಿಸರ ವ್ಯವಸ್ಥೆ (ಡೆಮಾಕ್ರಟಿಕ್‌ ಟೆಕ್ನಾಲಜಿ ಎಕೊಸಿಸ್ಟಮ್‌) ರೂಪಿಸಲು ಉಭಯ ರಾಷ್ಟ್ರಗಳಿಗೆ ಐಸಿಇಟಿ ಮಹತ್ವದ ಕೀಲಿಕೈ ಎನ್ನುವುದರಲ್ಲಿ ಅಧ್ಯಕ್ಷ ಜೋ ಬೈಡನ್‌ ಬಲವಾದ ನಂಬಿಕೆ ಇಟ್ಟಿದ್ದಾರೆ ಎಂದು ಶ್ವೇತಭವನ ಹೇಳಿದೆ.

2022ರ ಮೇನಲ್ಲಿ ಟೋಕಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್‌ ಅವರು ದ್ವಿಪಕ್ಷೀಯ ಮಾತುಕತೆಯಲ್ಲಿ ಘೋಷಿಸಿದ್ದ ಐಸಿಇಟಿ ಕಾರ್ಯಗತಕ್ಕೆ ಮಂಗಳವಾರ ಶ್ವೇತಭವನದಲ್ಲಿ ಡೋಭಾಲ್‌ ಮತ್ತು ಜೇಕ್‌ ಸುಲ್ಲಿವಾನ್‌ ಚಾಲನೆ ನೀಡಿದರು.

ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ, ಜೆಟ್‌ ಎಂಜಿನ್‌ಗಳು, ಯುದ್ಧಸಾಮಗ್ರಿ ತಯಾರಿಕೆ ಕೇಂದ್ರಿತ ರಕ್ಷಣಾ ಕೈಗಾರಿಕಾ ಸಹಭಾಗಿತ್ವ, ಆರ್ಥಿಕ ವ್ಯವಹಾರಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಕಾರ ವಿಸ್ತರಣೆಗಾಗಿ ಮೋದಿ ಮತ್ತು ಬೈಡನ್‌ ಐಸಿಇಟಿಯನ್ನು ಘೋಷಿಸಿದ್ದರು.

ಪ್ರಿಡೇಟರ್‌ ಡ್ರೋನ್ ಖರೀದಿ ಒಪ್ಪಂದಕ್ಕೆ ಉತ್ಸುಕ:

ಭಾರತವು ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಹಿಂದೂ ಮಹಾಸಾಗರದ ಉದ್ದಕ್ಕೂ ಕಣ್ಗಾವಲು ಹೆಚ್ಚಿಸಲು ಸುಮಾರು 3 ಶತಕೋಟಿ ಡಾಲರ್‌ ಮೌಲ್ಯದ ಎಂಕ್ಯೂ –9ಬಿ ಪ್ರಿಡೇಟರ್‌ ಶಸ್ತ್ರಸಜ್ಜಿತ 30 ಡ್ರೋನ್‌ಗಳನ್ನು ಅಮೆರಿಕದಿಂದ ಖರೀದಿಸುವ ಒಪ್ಪಂದ ಅಂತಿಮ ಹಂತಕ್ಕೆ ಬಂದಿದೆ.

ಒಪ್ಪಂದ ಪೂರ್ಣಗೊಳಿಸಲು ಉಭಯ ರಾಷ್ಟ್ರಗಳು ಉತ್ಸುಕವಾಗಿವೆ. ಐದು ವರ್ಷಗಳಿಗಿಂತ ಹೆಚ್ಚು ಕಾಲ ನಡೆದ ಈ ಪ್ರಕ್ರಿಯೆಯಲ್ಲಿ ‘ಚೆಂಡು ಈಗ ಭಾರತದ ಅಂಗಳದಲ್ಲಿದೆ’ ಎಂದು ಈ ಒಪ್ಪಂದದ ಸಮಗ್ರ ಮಾಹಿತಿ ಹೊಂದಿರುವ ಅಧಿಕಾರಿಗಳು ಬುಧವಾರ ಹೇಳಿದರು.

ಭಾರತೀಯ ಸೇನೆಯ ಮೂರೂ ಪಡೆಗಳಿಗೆ ತಲಾ 10 ಎಂಕ್ಯೂ –9ಬಿ ಪ್ರಿಡೇಟರ್‌ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಒದಗಿಸುವ ಈ ಒಪ್ಪಂದವು ದೇಶದ ಭದ್ರತೆ ಮತ್ತು ರಕ್ಷಣಾ ಅಗತ್ಯಗಳ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಈ ಒಪ್ಪಂದ ಅಂತಿಮರೂಪಕ್ಕೆ ತರಲು ದೀರ್ಘ ಸಮಯ ತೆಗೆದುಕೊಂಡಿರುವುದಕ್ಕೆ ಅಧಿಕಾರಿಗಳು ನಿಖರ ಕಾರಣ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT