ಶುಕ್ರವಾರ, ಸೆಪ್ಟೆಂಬರ್ 25, 2020
29 °C

ಕೋಯಿಕ್ಕೋಡ್‌ ವಿಮಾನ ಅಪಘಾತ: ಸ್ಥಳೀಯರಿಂದ ಒಂದೇ ಕುಟುಂಬದ ಏಳು ಮಂದಿ ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ತಮ್ಮ ಕುಟುಂಬದ ಏಳು ಸದಸ್ಯರು ಕೊಯಿಕ್ಕೋಡ್‌ಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುರಂತಕ್ಕೀಡಾದ ಸುದ್ದಿ ಕೇಳಿ, ದುಬೈನಲ್ಲಿದ್ದ ಭಾರತ ಮೂಲದ ಶೆಮಿರ್ ವಡಕ್ಕನ್ ಪಠಪ್ಪಿರಿಯಮ್ ‌ಒಂದು ಕ್ಷಣ ಆಘಾತಕ್ಕೆ ಒಳಗಾದರು.

ಏಕೆಂದರೆ, ಆ ವಿಮಾನದಲ್ಲಿ ಶಮೀರ್ ಕುಟುಂಬ ಮತ್ತು ಅವರ ಸಹೋದರರ ಕುಟುಂಬ ಸೇರಿ ಏಳು ಮಂದಿ ಅದೇ ವಿಮಾನದಲ್ಲಿ ಕೊಯಿಕ್ಕೋಡ್‌ಗೆ ಪ್ರಯಾಣ ಬೆಳೆಸಿದ್ದರು.

ಊರಿಗೆ ತಲುಪಿದ್ದೇವೆಂಬ ಸುದ್ದಿ ಕೇಳುವ ಹೊತ್ತಲ್ಲಿ, ವಿಮಾನ ಅಪಘಾತದ ಸುದ್ದಿ ಕೇಳಿದ 41ರ ಹರೆಯದ ಶಮೀರ್‌‌ ಆಘಾತಕ್ಕೆ ಒಳಗಾದರು. ಸ್ವಲ್ಪ ಹೊತ್ತಿನ ನಂತರ ಆಘಾತದಿಂದ ಚೇತರಿಸಿಕೊಂಡು, ಕುಟುಂಬ ಸದಸ್ಯರ ಬಗ್ಗೆ ವಿಚಾರಿಸಲು ಕೊಯಿಕ್ಕೋಡ್‌ನ  ಎಲ್ಲಾ ತುರ್ತು ಅಪಘಾತ ಚಿಕಿತ್ಸಾ ಕೇಂದ್ರಗಳಿಗೆ ಫೋನ್‌ ಮಾಡಿದರು.

ಎಲ್ಲೂ ಮಾಹಿತಿ ಸಿಗಲಿಲ್ಲ. ಕೊನೆಯ ಪ್ರಯತ್ನವಾಗಿ, ವಿಮಾನದಲ್ಲಿ ಪ್ರಯಾಣಿಸಿದ್ದ ಅವರ ಪತ್ನಿಯ ಮೊಬೈಲ್‌ಗೆ ಕರೆ ಮಾಡಲು ಪ್ರಯತ್ನಿಸಿದರು. ನಿರಂತರ ಪ್ರಯತ್ನದ ನಂತರ, ಪತ್ನಿ ಫೋನ್‌ಗೆ ಸಿಕ್ಕರು, ‘ಅಪಘಾತದಲ್ಲಿ ಸಿಲುಕಿದ್ದ ನಮ್ಮ ಕುಟುಂಬದ ಎಲ್ಲರನ್ನೂ ಸ್ಥಳೀಯ ನಾಗರಿಕರು ರಕ್ಷಿಸಿದ್ದಾರೆ‘ ಎಂದು ಹೇಳಿದರು. ಸುದ್ದಿ ಕೇಳಿ ನಿಟ್ಟುಸಿರುಬಿಟ್ಟ ಶಮೀರ್, ಕುಟುಂಬವನ್ನು ರಕ್ಷಿಸಿದ ಸ್ಥಳೀಯ ನಾಗರಿಕರಿಗೆ, ಕೇರಳದ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಹೇಳಿದರು.

ಶುಕ್ರವಾರ ರಾತ್ರಿ ವಿಮಾನ ಅಪಘಾತಕ್ಕೀಡಾದ ನಂತರ, ವಿಪತ್ತು ನಿರ್ವಹಣಾ ಪಡೆಯವರು ಮಳೆಯ ನಡುವೆಯೂ ಬಿರುಸಿನಿಂದ ಪರಿಹಾರ ಕಾರ್ಯಕ್ಕೆ ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಯಿಕ್ಕೋಡ್‌ನ ಸ್ಥಳೀಯ ನಾಗರಿಕರು, ವಿಪತ್ತು ನಿರ್ವಹಣಾ ತಂಡದ ಜತೆಗೆ ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇಂಥ ‘ಸಿವಿಲ್ ವಾರಿಯರ್‘ಗಳೇ ಶಮೀರ್ ಅವರ ಕುಟುಂಬ ಸದಸ್ಯರನ್ನು ರಕ್ಷಣೆ ಮಾಡಿದ್ದಾರೆ.


ಕೊಯಿಕ್ಕೋಡ್‌ನಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಪ್ರಯಾಣಿಕರನ್ನು ರಕ್ಷಿಸುತ್ತಿರುವುದು

ಇಬ್ಬರು ದೊಡ್ಡವರು, ಐವರು ಮಕ್ಕಳು
ಶಮೀರ್ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಸಹೋದರ ಸಫ್ವಾನ್‌ ಅವರ ಪತ್ನಿ ಮತ್ತು ಅವ ಪುತ್ರಿ, ಪುತ್ರ– ಇವರೆಲ್ಲ ವಿಮಾನದಲ್ಲಿದ್ದವರು. ಸಫ್ವಾನ್ ದುಬೈನ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ‘ನನ್ನ ಸಹೋದರನ ವೀಸಾ ಅವಧಿ ಮುಗಿದಿತ್ತು. ಹಾಗಾಗಿ, ಎರಡು ಕುಟುಂಬಗಳು ಸೇರಿಸಿ ಊರಿಗೆ ಕಳುಹಿಸಲು ತೀರ್ಮಾನಿಸಿದೆವು‘ ಎಂದು ಶಮೀರ್ ಹೇಳಿದರು. 

ಅಪಘಾತದಿಂದ ಪಾರಾಗಿರುವ ಏಳು ಮಂದಿಗೂ ಗಾಯಗಳಾಗಿವೆ. ಅವರು ಕೋಯಿಕ್ಕೋಡ್ ಮತ್ತು ಮಲ್ಲಪ್ಪುರಂನ ಮೂರು  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಯಾರಿಗೂ ಪ್ರಾಣಾಪಾಯವಾಗುವಂತಹ ಗಂಭೀರ ಗಾಯಗಳಾಗಿಲ್ಲ‘ ಎಂದು ಶಮೀರ್ ಹೇಳಿದರು.

ದುಬೈನಿಂದ ಕೊಯಿಕ್ಕೋಡ್‌ಗೆ ಹಾರಾಟ ನಡೆಸಿದ್ದ ಏರ್‌ ಇಂಡಿಯನ್ ಎಕ್ಸ್‌ಪ್ರೆಸ್‌ ವಿಮಾನದಲ್ಲಿ 184 ಮಂದಿ ಪ್ರಯಾಣಿಕರಿದ್ದರು. ಜತೆಗೆ ಇಬ್ಬರು ಪೈಲಟ್‌ ಮತ್ತು ನಾಲ್ವರು ಕ್ಯಾಬಿನ್ ಕ್ರ್ಯೂಗಳಿದ್ದರು. ಇದರಲ್ಲಿ ಇಬ್ಬರು ಪೈಲಟ್ ಸೇರಿ 18 ಮಂದಿ ಸಾವನ್ನಪ್ಪಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು