ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಮೇಲೆ ಐರೋಪ್ಯ ಒಕ್ಕೂಟ, ಕೆನಡಾ ನಿರ್ಬಂಧ

‘ದೇವರ ವಿರುದ್ಧದ ದ್ವೇಷ’ದ ಆರೋಪ ಪ್ರತಿಭಟನಕಾರನಿಗೆ ಮರಣದಂಡನೆ
Last Updated 10 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಇರಾನ್‌ನಲ್ಲಿ ಮೂರು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯ ನಡುವೆಯೇ ಗುರುವಾರ ಪ್ರತಿಭಟನಕಾರನಿಗೆ ಮರಣದಂಡನೆ ವಿಧಿಸಿದ ಬೆನ್ನಲ್ಲೇ ಅಲ್ಲಿನ ಜನರು ಹೊಸದಾಗಿ ಪ್ರತಿಭಟನೆಗೆ ಕರೆ ನೀಡಿದ್ದು, ಐರೋಪ್ಯ ಒಕ್ಕೂಟ (ಇಯು), ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ದೇಶಗಳು ಶುಕ್ರವಾರ ಇರಾನ್‌ ವಿರುದ್ಧ ನಿರ್ಬಂಧಗಳನ್ನು ವಿಧಿಸಿವೆ.

‘ದೇವರ ವಿರುದ್ಧದ ದ್ವೇಷ’ದ (ಮೊಹರೆಬೆ) ಆರೋಪದ ಮೇರೆಗೆ ಪ್ರತಿಭಟನಕಾರ ಮೊಹಸೀನ್‌ ಶೇಕರಿ ಅವರಿಗೆ ಗುರುವಾರ ಮರಣದಂಡನೆ ವಿಧಿಸಲಾಗಿದೆ.

‘ಮಹಿಳೆಯರಿಗೆ ಕಡ್ಡಾಯ ವಸ್ತ್ರಸಂಹಿತೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಕಾರರ ವಿರುದ್ಧ ಇರಾನ್‌ನ ಅಧಿಕಾರಿಗಳು ಅತ್ಯಂತ ಕ್ರೂರವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿರುವ ಬ್ರಿಟನ್ ಕೂಡ 30 ವಿಚಾರಗಳಿಗೆ ಸಂಬಂಧಿಸಿದಂತೆ ಇರಾನ್‌ ಮೇಲೆ ನಿರ್ಬಂಧ ವಿಧಿಸಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹಾಗೂ ನ್ಯಾಯಾಂಗದ 22 ಹಿರಿಯ ಸದಸ್ಯರು, ಜೈಲು ಹಾಗೂ ಪೊಲೀಸ್ ವ್ಯವಸ್ಥೆ ವಿರುದ್ಧ ಕೆನಡಾ ಕೂಡಾ ನಿರ್ಬಂಧ ವಿಧಿಸಿದೆ. ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಇರಾನ್‌ ಮತ್ತು ರಷ್ಯಾ ವಿರುದ್ಧ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ.

ಓಸ್ಲೋ ಮೂಲದ ಗುಂಪು ಇರಾನ್ ಮಾನವ ಹಕ್ಕುಗಳ (ಐಎಚ್‌ಆರ್‌) ಪ್ರಕಾರ, ‘60ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಕನಿಷ್ಠ 458 ಜನರನ್ನು ಕೊಂದಿರುವ ಮಾರಣಾಂತಿಕ ದಮನದ ಮೇಲೆ ಐರೋಪ್ಯ ಒಕ್ಕೂಟವು ಇರಾನ್ ಮೇಲೆ ಹೆಚ್ಚಿನ ದಂಡನಾತ್ಮಕ ಕ್ರಮಗಳನ್ನು ವಿಧಿಸಲು ಸಿದ್ಧವಾಗಿದೆ’ ಎಂದು ಯುರೋಪಿಯನ್ ರಾಜತಾಂತ್ರಿಕರು ಹೇಳಿದ್ದಾರೆ.

2022ರಲ್ಲಿ ಇರಾನ್‌ನಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಲ್ಲಿಗೇರಿಸಿದವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಪ್ರತಿಭಟನೆ ಸಂಬಂಧಿ ಮರಣದಂಡನೆಯ ಬಳಿಕ ಕನಿಷ್ಠ 12 ಮಂದಿ ಈಗ ಮರಣದಂಡನೆಯ ಅಪಾಯದಲ್ಲಿದ್ದಾರೆ ಎಂದೂ ಐಎಚ್ಆರ್ ಆತಂಕ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT