ಸ್ಯಾನ್ ಫ್ರಾನ್ಸಿಸ್ಕೊ: ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಕಾಣೆಯಾದ ಬೆನ್ನಲ್ಲೇ ಪ್ರತ್ಯೇಕತಾವಾದಿಗಳ ಖಾಲಿಸ್ತಾನ ಪರ ಕೂಗು ಹೆಚ್ಚಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಇದರ ಕಿಚ್ಚು ಹೊತ್ತಿದೆ. ಲಂಡನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಪ್ರತ್ಯೇಕತಾವಾದಿಗಳು ಖಾಲಿಸ್ತಾನದ ಪರ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.
ಖಾಲಿಸ್ತಾನ ಪರ ಪ್ರತಿಭಟನೆ ಕೈಗೊಂಡಿದ್ದ ಪ್ರತ್ಯೇಕತಾವಾದಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದರು. ಈ ಘಟನೆಯನ್ನು ಖಂಡಿಸಿ ಸಿಖ್ ಸಮುದಾಯಕ್ಕೆ ಸೇರಿದ ಬ್ರಿಟನ್‌ನ ಚಾಣಕ್ಯಪುರಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಎದುರು ಸೋಮವಾರ ಪ‍್ರತಿಭಟನೆ ನಡೆಸಿದ್ದಾರೆ.
ಆಸ್ಟ್ರೇಲಿಯಾ, ಕೆನಡಾದಲ್ಲಿ ಕೂಡ ಇತ್ತೀಚೆಗೆ ಭಾರತ-ವಿರೋಧಿ ಪ್ರತಿಭಟನೆಗಳು ನಡೆದಿವೆ. ಭಾರತ ವಿದೇಶದಲ್ಲಿನ ಪ್ರತ್ಯೇಕತಾವಾದಿಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿರುವ ಪ್ರತ್ಯೇಕತಾವಾದಿಗಳು ಖಾಲಿಸ್ತಾನ ಧ್ವಜ ಹಾರಿಸಿದ್ದಾರೆ.
ಭಾರತ ಸೋಮವಾರ ನವದೆಹಲಿಯಲ್ಲಿನ ಅಮೆರಿಕದ ಹಿರಿಯ ರಾಜತಾಂತ್ರಿಕರ ಎದುರು ಪ್ರಬಲ ಪ್ರತಿಭಟನೆಯನ್ನು ದಾಖಲಿಸಿದೆ.
ಇನ್ನೊಂದೆಡೆ ಅಮೆರಿಕ ಕೂಡ ಈ ಪ್ರತಿಭಟನೆಯನ್ನು ಖಂಡಿಸಿದೆ. ಈ ಎಲ್ಲ ದೇಶಗಳ ವಿದೇಶಾಂಗ ಸಚಿವಾಲಯದ ಜತೆಗೆ ಭಾರತ ಸಂಪರ್ಕದಲ್ಲಿದ್ದು ಈ ನಡೆಗೆ ತನ್ನ ತೀವ್ರವಾದ ಖಂಡನೆ ವ್ಯಕ್ತಪಡಿಸಿದೆ. ಅಮೆರಿಕ ಸೇರಿದಂತೆ ಉಳಿದ ರಾಷ್ಟ್ರಗಳು ಈ ರೀತಿ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಭಾರತ ವಿರೋಧಿ ಧೋರಣೆ ಸಹಿಸುವುದಿಲ್ಲ ಎಂಬ ಭರವಸೆ ನೀಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.