ಗುರುವಾರ , ಮೇ 28, 2020
27 °C

ಯುವ ಬಾಣಸಿಗರ ಕೈರುಚಿಗೊಂದು ಸವಾಲ್

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

Prajavani

ಶ್ವೇತವರ್ಣದ ಉಡುಗೆ, ತಲೆಯ ಮೇಲೊಂದು ಬಿಳಿ ಟೋಪಿ ತೊಟ್ಟು ಸೌಟು ಹಿಡಿದು ಅಡುಗೆ ಮಾಡುವುದರಲ್ಲಿ ಯುವಕ ಯುವತಿಯರು ತಲ್ಲೀನರಾಗಿದ್ದರು. ಹೆಚ್ಚಿದ, ತುರಿದ, ಸೋಸಿದ, ನಾದಿದ, ನಯವಾಗಿ ರುಬ್ಬಿದ ವಸ್ತುಗಳನ್ನು ಮಿದುವಾದ ಕೈಗಳಿಂದ ಹದವಾಗಿ ಬೆರೆಸಿ ಪಾಕ ಸಿದ್ಧಪಡಿಸುತ್ತಿದ್ದ ಅವರ ತನ್ಮಯತೆಯನ್ನು ನೋಡುತ್ತಿದ್ದರೆ, ಅಡುಗೆ ಮನೆಯೆಂಬ ಅದ್ಭುತ ಲೋಕದ ದೇವತೆಗಳಂತೆ ಕಂಡುಬಂದರು.

ಈ ದೃಶ್ಯ ಕಂಡಿದ್ದು ಇಂದಿರಾನಗರದ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ.

ಜಗತ್ತಿನ ಅತ್ಯಂತ ದೊಡ್ಡ ಅಡುಗೆ ಸ್ಪರ್ಧೆ ‘ಯಂಗ್ ಶೆಫ್ ಒಲಿಂಪಿಯಾಡ್ 2019’ರ 5ನೇ ಆವೃತ್ತಿಯ ಎರಡನೇ ಸುತ್ತಿನ ಸ್ಪರ್ಧೆ ಎರಡು ದಿನಗಳ ಕಾಲ ನಡೆಯಿತು. ಹತ್ತು ದೇಶಗಳಿಂದ ಬಂದಿದ್ದ ಯುವ ಬಾಣಸಿಗರು ರುಚಿಕರವಾದ ತಿನಿಸುಗಳನ್ನು ಸಿದ್ಧಪಡಿಸಿದರು. ಒಂದೇ ಕಿಚನ್‌ನಲ್ಲಿ ಪುಟ್ಟ ವಿಶ್ವವೇ ಇತ್ತು. ಅಲ್ಲಿದ್ದ ಸ್ಪರ್ಧಿಗಳು ಹತ್ತು ದೇಶದವರಾದರೆ, ತೀರ್ಪುಗಾರರು ನೂರಾರು ದೇಶ ಸುತ್ತಿ ಬಂದವರು. 

ಹತ್ತು ದೇಶಗಳ ಪ್ರವರ್ಧಮಾನಕ್ಕೆ ಬರುತ್ತಿರುವ ಶೆಫ್‌ಗಳು ಬೆಂಗಳೂರಿಗೆ ಆಗಮಿಸಿದ್ದರು. ಮಿಷಲಿನ್ ಸ್ಟಾರ್ ಪಡೆದಿರುವ ಶೆಫ್ ಗಳಾದ ಜಾನ್ ವುಡ್, ಸ್ಕಾಟ್ ಬೇಶ್ಲೆರ್, ಎನ್ರಿಕೊ ಬ್ರಿಕಾರೆಲೊ, ಗ್ಯಾರಿ ಹಂಟರ್, ಅಭಿಜಿತ್‍ಸಹಾ ಮತ್ತು ಅವಿಜಿತ್‍ಘೋಶ್‍ರಂತಹ ಖ್ಯಾತರು ತೀರ್ಪುಗಾರರಾಗಿದ್ದರು. ಜಗತ್ತಿನ ಎಲ್ಲೆಡೆಯ ತರಬೇತಿ ಪಡೆಯುತ್ತಿರುವ ಯುವ ಶೆಫ್‍ಗಳಿಗಾಗಿ ಪರಸ್ಪರ ಸಂವಾದ ನಡೆಸಲು ಹಾಗೂ ಪ್ರತಿಭೆ ಪ್ರದರ್ಶಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ.

55ಕ್ಕೂ ಹೆಚ್ಚಿನ ದೇಶಗಳು ಈ ಪ್ರತಿಷ್ಠಿತ ಯಂಗ್ ಶೆಫ್ ಒಲಿಂಪಿಯಾಡ್ ಟ್ರೋಫಿಗಾಗಿ ಮತ್ತು ₹10,000 ಡಾಲರ್‌ ನಗದು ಬಹುಮಾನಕ್ಕಾಗಿ ಪೈಪೋಟಿ ನಡೆಸಿವೆ. ಬೆಂಗಳೂರು ಐಐಎಚ್‍ಎಂನ ಮಧುಮಿತಾ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಯಂಗ್ ಶೆಫ್‌ ಎಂಬುದು ಗಮನಾರ್ಹ.

ಯುವ ಶೆಫ್‍ಗಳೊಂದಿಗೆ ಅವರ ಮಾರ್ಗದರ್ಶಕರೂ ಬಂದಿದ್ದರು. ದಿಲ್ಲಿ, ಬೆಂಗಳೂರು, ಪುಣೆ ಮತ್ತು ಕೋಲ್ಕತ್ತಾಗಳಲ್ಲಿ ನಡೆಯುವ ನಾಲ್ಕು ಸುತ್ತುಗಳಲ್ಲಿ ಪೈಪೋಟಿ ನಡೆಸಲಿದ್ದು, ಇವರನ್ನು ಕೌಶಲ, ರುಚಿ, ಸಾದರಪಡಿಸುವ ರೀತಿ, ಶುದ್ಧತೆ ಮುಂತಾದ ಹಲವು ವಿಷಯಗಳಲ್ಲಿ ಅಳೆಯಲಾಗುತ್ತದೆ. 

ಐಐಎಚ್‍ಎಂನ ನಿರ್ದೇಶಕರಾದ ಸಂಚಾರಿ ಚೌಧರಿ ಅವರು ಮಾತನಾಡಿ, ‘ಬೆಂಗಳೂರಿನಲ್ಲಿ ಈ ಸ್ಪರ್ಧೆಗೆ ಆತಿಥ್ಯವಹಿಸಲು ಸಾಧ್ಯವಾಗಿರುವುದು ಬಹಳ ಉತ್ಸಾಹಕರ ವಿಷಯವಾಗಿದೆ. ಯಂಗ್ ಶೆಫ್ ಒಲಿಂಪಿಯಾಡ್ ಎಂಬ ಕಾರ್ಯಕ್ರಮ ಎಲ್ಲಾ ವಯಸ್ಸಿನ ಜಾಗತಿಕ ಅಡುಗೆ ಸ್ಪರ್ಧಿಗಳನ್ನು ಒಂದಡೆ ಸೇರಿಸುತ್ತದೆ. ಭಾರತೀಯ ಆತಿಥ್ಯ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಅಡುಗೆ ಶೈಲಿಗಳು, ಹೊಸತನಕ್ಕೆ ತೆರೆದುಕೊಳ್ಳಲು ಅವಕಾಶ ನೀಡುವುದಲ್ಲದೆ, ಜಗತ್ತಿನ ಅಗ್ರಮಾನ್ಯ ಅಡುಗೆ ತಜ್ಞರೊಂದಿಗೆ ಸಂವಾದ ನಡೆಸಲು ಅವಕಾಶ ಮಾಡಿಕೊಡುತ್ತದೆ. ಕೋಲ್ಕತ್ತಾದಲ್ಲಿ ನಡೆಯುವ ಅಂತಿಮ ಸುತ್ತಿನ ನಂತರ ವಿಜೇತರು ಯಾರಾಗುತ್ತಾರೆಂಬ ಕುತೂಹಲದಲ್ಲಿದ್ದೇವೆ’ ಎಂದರು.

ಮಲೇಷ್ಯಾ, ಥಾಯ್ಲೆಂಡ್‌, ಹಾಂಕಾಂಗ್, ನ್ಯೂಜಿಲೆಂಡ್‌, ಐರ್ಲೆಂಡ್, ಭೂತಾನ್, ಇಟಲಿ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಯುವ ಸ್ಪರ್ಧಿಗಳು ಕಣದಲ್ಲಿದ್ದಾರೆ.  ಅವರ ಅಡುಗೆ ಕೌಶಲಗಳು ಮತ್ತು ತಂತ್ರಗಳು, ಸುರಕ್ಷತೆ ಮತ್ತು ನೈರ್ಮಲ್ಯ ಅಭ್ಯಾಸಗಳು, ಕೆಲಸದ ಕ್ರಮ, ಕನಿಷ್ಠ ತ್ಯಾಜ್ಯ, ವಸ್ತುಗಳ ಅತ್ಯುತ್ತಮ ಬಳಕೆ, ವೃತ್ತಿಪರ ನೋಟ, ಮನೋವೃತ್ತಿ, ತಿಂಡಿಗಳನ್ನು ಸಾದರಪಡಿಸುವ ರೀತಿ, ರುಚಿ ಮತ್ತು ಸ್ವಾದ ಮುಂತಾದ ಅಂಶಗಳನ್ನಾಧರಿಸಿ ಮೌಲ್ಯಮಾಪನ ನಡೆಸಲಾಯಿತು. ಫೆಬ್ರುವರಿ 6ರಂದು ಅಂತಿಮ ಸುತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು