ಸಾಮಾಜಿಕ ಜಾಗೃತಿಗಾಗಿ ಯುವ ಸಂಚಲನ

7

ಸಾಮಾಜಿಕ ಜಾಗೃತಿಗಾಗಿ ಯುವ ಸಂಚಲನ

Published:
Updated:

ಆ ತಂಡದವರು, ಗಿಡಗಳಿಗೆ ‘ಬರ್ತ್‌ ಡೇ’ ಮಾಡುತ್ತಾರೆ. ಜನ್ಮದಿನದಂತಹ ಕಾರ್ಯಕ್ರಮಗಳಿಗೆ ಗಿಡಗಳನ್ನೇ ಉಡುಗೊರೆಯಾಗಿ ಕೊಡುವಂತೆ ಪ್ರಚಾರ ಮಾಡುತ್ತಾರೆ. ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಹೋರಾಟ ಮಾಡಿ, ಜನ ಸಹಭಾಗಿತ್ವದಲ್ಲಿ ವನಮಹೋತ್ಸವ ಆಯೋಜಿಸುತ್ತಾರೆ. ಎಕರೆಗಟ್ಟಲೆ ಪ್ರದೇಶದಲ್ಲಿ ಅರಣ್ಯೀಕರಣಕ್ಕಾಗಿ ಸಂಕಲ್ಪ ಮಾಡುತ್ತಾರೆ.

ಶಾಲಾ ಮಕ್ಕಳಲ್ಲಿ ಮೂಢನಂಬಿಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಇನ್ನೊಂದು ಕಡೆ ವರ್ಷ ಪೂರ್ತಿ ಒಂದಲ್ಲ ಒಂದು ಗಂಭೀರ ವಿಚಾರದೊಂದಿಗೆ ರಾಜ್ಯದ ಒಂದು ಪ್ರದೇಶದಲ್ಲಿ ‘ಸೈಕಲ್ ಜಾಥ’ ಆಯೋಜಿಸುತ್ತಾರೆ.

ಇದು ವಿದ್ಯಾರ್ಥಿಗಳು, ಬೇರೆ ಬೇರೆ ಉದ್ಯೋಗದಲ್ಲಿದ್ದು ಸಾಮಾಜಿಕ ಕಾಳಜಿ ಹೊಂದಿರುವ ಯುವಜನರೇ ಸೇರಿ ಕಟ್ಟಿದ ಸಂಘಟನೆ. ಅದೇ ದೊಡ್ಡಬಳ್ಳಾಪುರದ ‘ಯುವ ಸಂಚಲನ’. ಈ ಯುವ ಬಳಗದ ಸಾಮಾಜಿಕ ಜಾಗೃತಿ ಕೈಂಕರ್ಯಕ್ಕೆ ಈಗ ಆರು ವರ್ಷ.

‘ಆಹಾರ ಹಕ್ಕು’ ಸೈಕಲ್ ಜಾಥಾ

‘ನಮ್ಮ ಆಹಾರವೇ ನಮ್ಮ ಮದ್ದಾಗಲಿ. ನಮ್ಮ ಮದ್ದು ನಮ್ಮ ಆಹಾರವಾಗಲಿ. ನಮಗೆ ಆಹಾರ ತಿನ್ನುವ ಹಕ್ಕಿದೆ. ಆದರೆ, ಬಿಸಾಡುವ ಹಕ್ಕಿಲ್ಲ’ ಇದು ‘ಯುವ ಸಂಚಲನ’ ಬಳಗದ ಈ ವರ್ಷದ ಧ್ಯೇಯವಾಕ್ಯ. ಹೀಗೆ ಆಹಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಂಗಳೂರಿನಿಂದ ಕುಂದಾಪುರದವರೆಗೂ ಸೈಕಲ್ ಜಾಥಾ ನಡೆಸಿದ್ದಾರೆ ಬಳಗದ ಯುವಕರು. ಕರಾವಳಿ ತೀರದ ಹಾದಿಗುಂಟ ನಡೆಸಿದ ಈ ಜಾಥಾದಲ್ಲಿ ಜಾಗೃತಿ ಮೂಡಿಸುವ ಜತೆಗೆ, ವಿಭಿನ್ನ ಸಂಗತಿಗಳ ಅನುಭವದ ಬುತ್ತಿಯನ್ನೂ ಹೊತ್ತು ತಂದಿದ್ದಾರೆ.

ಬಳಗದ ಚಿದಾನಂದಮೂರ್ತಿ, ಮಿತ್ರರಾದ ಬದರೀನಾಥ್‌, ಮೋಹನ್ ಕುಮಾರ್‌ ಹಾಗೂ ರಘು ದಾರಿಯುದ್ದಕ್ಕೂ ಎದುರಾದ ಜನರೊಂದಿಗೆ ‘ಜಂಕ್‌ಫುಡ್‌’ ಹಾಗೂ ‘ಆರೋಗ್ಯ ರಾಜಕೀಯ’ ಹುನ್ನಾರದ ವಿರುದ್ಧ ಜಾಗೃತಿ ಮೂಡಿಸಿದರು. ಹಾದಿಯಲ್ಲಿ ಕಂಡ ಸರ್ಕಾರಿ ಶಾಲೆಗಳ ಮಕ್ಕಳೊಂದಿಗೆ ‘ಜಂಕ್‌ಫುಡ್‌’ ದುಷ್ಪರಿಣಾಮದ ಕುರಿತು ಸಂವಾದ ನಡೆಸಿದರು. ಅವರಿಂದ ಎದುರಾದ ಚೂಟಿ ಪ್ರಶ್ನೆಗಳಿಗೂ ಉತ್ತರಿಸುತ್ತ, ಅವರ ಮನದಲ್ಲಿರುವ ಗೊಂದಲಗಳನ್ನು ಬಗೆಹರಿಸಿದ್ದಾರೆ. ಹೀಗೆ; ಶಾಲಾ ಮಕ್ಕಳೊಂದಿಗೆ ಕಾಲ ಕಳೆದು, ಅದೇ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಸವಿದು, ಮುಂದಿನ ಊರಿಗೆ ಪಯಣ.

ಗಡಿನಾಡಲ್ಲಿ ‘ಕನ್ನಡ ಜಾಗೃತಿ’

ಕಳೆದ ವರ್ಷ ಇದೇ ತಂಡ ‘ಕನ್ನಡ ಜಾಗೃತಿ’ಗಾಗಿ ಗಡಿನಾಡಿನಲ್ಲಿ ಸೈಕಲ್ ಜಾಥಾ ನಡೆಸಿತು. ದೊಡ್ಡಬಳ್ಳಾಪುರದಿಂದ ಪಾವಗಡಕ್ಕೆ ಸೈಕಲ್‌ನಲ್ಲಿ ತೆರಳಿದ ಯುವಕರ ತಂಡ ಪಾವಗಡ, ವೈ. ಎನ್‌.ಹೊಸಕೋಟೆ, ಮಡಕಶಿರಾ ಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿತು. ಗಡಿ ಭಾಗದ ಗ್ರಾಮಗಳಲ್ಲಿ ಜಾಥಾಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತಂತೆ. ದಾರಿಯುದ್ದಕ್ಕೂ ಜನರೇ ಇವರನ್ನು ಕಾಳಜಿಯಿಂದ ಮಾತನಾಡಿಸಿ ಕನ್ನಡ ಕೈಂಕರ್ಯವನ್ನು ಬೆಂಬಲಿಸಿದರು.

‘ಎಷ್ಟೋ ಮನೆಗಳಲ್ಲಿ ಜನರು ನಮ್ಮನ್ನು ಊಟಕ್ಕೆ ಆಹ್ವಾನಿಸಿ ಉದಾರತೆ ತೋರಿದರು. ಅಲ್ಲಿನ ಜನರ ಆಡುನುಡಿ ತೆಲುಗು ಭಾಷೆಯಾದರೂ ಹೃದಯದ ಭಾಷೆ ಕನ್ನಡವೇ. ತಾರತಮ್ಯ ಇಲ್ಲದೆ ಬದುಕುತ್ತಿರುವ ಭಾಷಾ ಬಹುತ್ವ ಆ ಭಾಗದ ಹೆಗ್ಗಳಿಕೆ’ ಎನ್ನುತ್ತಾರೆ ಬಳಗದ ಪ್ರಮುಖರೊಬ್ಬರಲ್ಲಾದ ಚಿದಾನಂದಮೂರ್ತಿ.

ಗಡಿನಾಡ ಸೀಮೆಯಲ್ಲಿ ಭೇಟಿ ನೀಡಿದ ಸರ್ಕಾರಿ ಶಾಲೆಗಳಲ್ಲಿ ಭಾಷಾ ಸಾಮರಸ್ಯ, ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುತ್ತಿದ್ದಾಗ, ಅಲ್ಲಿನ ಶಾಲೆಯಲ್ಲಿರುವ ಮಕ್ಕಳು ಕನ್ನಡ ಭಾಷೆ ಬಗ್ಗೆ ತೋರಿದ ಪ್ರೀತಿಯನ್ನು ಮರೆಯಲಾಗದು ಎನ್ನುತ್ತಾರೆ ಚಿದಾನಂದ್.

ಜಾಥಾ ಸಂದರ್ಭದಲ್ಲಿ ರಾತ್ರಿ ಸರ್ಕಾರಿ ಶಾಲೆಗಳಲ್ಲೇ ವಾಸ್ತವ್ಯ ಹೂಡುವ ಯುವ ಸಂಚಲನ ಬಳಗಕ್ಕೆ ಆ ಶಾಲೆಯ ಶಿಕ್ಷಕರು, ಊರಿನ ಜನರು ಆತಿಥ್ಯ ನೀಡಿದ್ದಾರೆ. ‘ಕನ್ನಡಕ್ಕಾಗಿ ಕೈಎತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎನ್ನುವ ಕವಿವಾಣಿಯಂತೆ ನಮ್ಮ ಕನ್ನಡಪರ ಜಾಗೃತಿ ಜಾಥ ನಮ್ಮಲ್ಲೊಂದು ಸಾರ್ಥಕ ಭಾವ ಮೂಡಿಸಿತು. ಆ ನೆನಪುಗಳು ‌ಎದೆಯಲ್ಲಿ ಅಚ್ಚಳಿಯದೆ ಉಳಿದಿವೆ ಎನ್ನುತ್ತಾರೆ ಅವರು.

ಫೇಲಾದವರಿಗೆ ಆಪತ್ಬಾಂಧವ

ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಫೇಲಾದವರಿಗೆ ಈ ಯುವ ಸಂಚಲನ ತಂಡ ಆಪತ್ಬಾಂಧವರಂತೆ ನೆರವಾಗುತ್ತಾರೆ. ಫೇಲಾಗಿ ಹತಾಶರಾಗುವ ಮಕ್ಕಳಿಗೆ ‘ಜೀವನ ಇನ್ನೂ ಇದೆ. ಸೋತವನಿಗಷ್ಟೇ ಗೆಲ್ಲುವ ಅವಕಾಶವಿರುತ್ತದೆ’ ಎಂದು ಆತ್ಮವಿಶ್ವಾಸ ಮೂಡಿಸುತ್ತಾರೆ. ಪ್ರತಿ ವರ್ಷ ಪರೀಕ್ಷಾ ಫಲಿತಾಂಶದ ವೇಳೆಯಲ್ಲಿ ಕರಪತ್ರಗಳಲ್ಲಿ ಇಂಥ ಸಂದೇಶಗಳನ್ನು ಮುದ್ರಿಸುವ ಮಕ್ಕಳಲ್ಲಿ ಅರಿವು ಮೂಡಿಸುತ್ತಾರೆ. ಫೇಲಾದ ಮಕ್ಕಳಿಗೆ ಊರಿನ ಶಾಲೆ ಆವರಣದಲ್ಲೋ, ಸಮುದಾಯ ಭವನದಲ್ಲೋ, ದೇವಸ್ಥಾನದ ಪ್ರಾಂಗಣದಲ್ಲೋ ಉಚಿತವಾಗಿ ಪಾಠ ಹೇಳಿಕೊಡುತ್ತಾರೆ.

ಅರಣ್ಯೀಕರಣದ ಆಂದೋಲನ

ಪರಿಸರ ಸಂರಕ್ಷಣೆ ‘ಯುವ ಸಂಚಲನ’ ತಂಡದ ಮೊದಲ ಆದ್ಯತೆ. ಅರಣ್ಯ ಇಲಾಖೆ, ರೋಟರಿ ಕ್ಲಬ್‌, ಹಲವು ಕಾಲೇಜುಗಳ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ನೆರವಿನೊಂದಿಗೆ ಕಾಡನೂರು ಕೈಮರ, ದೇವರಬೆಟ್ಟ, ಮಾಕಳಿ ಅರಣ್ಯ ಪ್ರದೇಶದ ನೂರಾರು ಎಕರೆಯಲ್ಲಿ ಬೀಜದುಂಡೆ ಅಭಿಯಾನ ಕೈಗೊಂಡು ಸಾವಿರಾರು ಸಸಿಗಳನ್ನು ನೆಟ್ಟಿದ್ದಾರೆ. ಮಳೆ ಇಲ್ಲದಾಗ ನೀರುಣಿಸಿ ಅಳೆತ್ತರ ಬೆಳೆಸಿದ್ದಾರೆ. ಸಸಿಗಳೊಂದಿಗೆ ಬಾಂಧವ್ಯ ಏರ್ಪಡಿಸಿಕೊಳ್ಳಲು ಆಗಾಗ ಸಸಿಗಳಿಗೆ ಜನ್ಮ ದಿನಾಚರಣೆ ಆಚರಿಸುವುದು, ಪರಿಸರ ಗೀತಗಾಯನ ಮೂಲಕ ಗಿಡ –ಮರಗಳೊಂದಿಗೆ ಕಾಲ ಕಳೆಯುವ ವಿಭಿನ್ನ ಅಭಿರುಚಿ ಈ ತಂಡದ್ದು.

ಇವರ ಸುತ್ತಲಿನ ಜನರು ಜನ್ಮದಿನದ ಕಾರ್ಯಕ್ರಮಗಳಲ್ಲಿ ಸಿಹಿ ಬದಲು ಸಸಿ ನೀಡುವ ದೊಡ್ಡ ‍ಪರಿವರ್ತನೆಗೆ ಈ ಯುವಕರೇ ಸ್ಫೂರ್ತಿಯಾದರು. ಮಕ್ಕಳಿಗೆ ಸಸಿಗಳನ್ನು ದತ್ತು ನೀಡಿ ಮನೆ ಅಂಗಳ, ರಸ್ತೆಯಲ್ಲಿ ನೆಟ್ಟು ಜತನದಿಂದ ಕಾಪಾಡುವ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ.

ಬಯಲೇ ಕಚೇರಿ, ಸ್ನೇಹಿತರೇ ದಾನಿಗಳು

ಇಷ್ಟೆಲ್ಲ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವ ‘ಯುವ ಸಂಚಲನ’ ತಂಡಕ್ಕೆ ಯಾವುದೇ ನಿರ್ದಿಷ್ಟ ಕಚೇರಿ ಇಲ್ಲ. ಯಾವ ಹಣಕಾಸಿನ ನೆರವೂ ಇಲ್ಲ. ಈ ತಂಡದ ಚಿಂದಾನಂದಮೂರ್ತಿ ಪರಿಸರ ಮತ್ತು ಸಂಶೋಧನೆಗೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಮುರಳಿ, ಭರತ್‌, ರಂಜಿತಾ, ಸುಮಾ ಕಾಲೇಜು ವಿದ್ಯಾರ್ಥಿಗಳು. ದಿವಾಕರ್‌ ಮತ್ತು ಅಮರಾವತಿ ಖಾಸಗಿ ಸಂಸ್ಥೆಗಳ ನೌಕರರು. ಇವರೆಲ್ಲ ತಮ್ಮ ಬಿಡುವಿನ ಸಮಯ ಮತ್ತು ದುಡಿಮೆಯ ಹಣವನ್ನು ಇಂಥ ಸಾರ್ಥಕ ಸೇವೆಗೆ ಮೀಸಲಿಟ್ಟಿದ್ದಾರೆ. ‌ಯುವ ಜನರು, ಮಹಿಳೆ, ಪರಿಸರ ಈ ಬಳಗದ ಆದ್ಯತಾ ಕ್ಷೇತ್ರಗಳಾಗಿವೆ.

‘ಸಂವಾದ ಸಂಸ್ಥೆ’ ಈ ತಂಡವನ್ನು ಪ್ರೋತ್ಸಾಹಿಸಿ ಬೆಳೆಸುತ್ತಿದೆ. ಸ್ಥಳೀಯವಾಗಿ ‘ನಾಗದಳ’ ಹಾಗೂ ‘ದೊಡ್ಡಬಳ್ಳಾಪುರ ತಾಲ್ಲೂಕು ಬಳಕೆದಾರರ ಹಿತರಕ್ಷಣಾ ಸಮಿತಿ’ ಸಹಕಾರವೂ ಈ ತಂಡಕ್ಕೆ ಇದೆ. ‘ಯುವ ಸಂಚಲನ’ದ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಮೊಬೈಲ್ ಸಂಖ್ಯೆ: 9900612185ಗೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !