ಮಂಗಳವಾರ, ನವೆಂಬರ್ 19, 2019
26 °C
ಪಿಆರ್‌ಇಡಿ ಎಂಜಿನಿಯರ್‌ಗಳಿಗೆ ಎಚ್ಚರಿಕೆ; ಸೆ.18ರ ಬುಧವಾರ ನಿಗದಿಯಾದ ಸಭೆ

ಕೋರಂ ಕೊರತೆ; ವಿಶೇಷ ಸಭೆ ಮುಂದೂಡಿಕೆ

Published:
Updated:
Prajavani

ಮೈಸೂರು: ಸಭೆ ನಡೆಸಲು ಅಗತ್ಯವಿರುವ ನಿಗದಿತ ಸಂಖ್ಯೆಯ ಸದಸ್ಯರು ಜಿಲ್ಲಾ ಪಂಚಾಯಿತಿಯ ವಿಶೇಷ ಸಭೆಗೆ ಗೈರಾಗಿದ್ದರಿಂದ, ಅಧ್ಯಕ್ಷೆ ಪರಿಮಳಾ ಶ್ಯಾಮ್‌ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಭೆಯನ್ನು ಮುಂದೂಡಿದರು.

ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಿಕ್ಕಾಗಿಯೇ ಸೋಮವಾರ ಸಂಜೆ 4 ಗಂಟೆಗೆ ವಿಶೇಷ ಸಭೆ ಆಯೋಜಿಸಲಾಗಿತ್ತು. ಸಕಾಲಕ್ಕೆ ಸದಸ್ಯರು ಹಾಜರಾಗದಿದ್ದಕ್ಕೆ ಅರ್ಧ ಗಂಟೆ ಮುಂದೂಡಲಾಗಿತ್ತು.

ಮುಸ್ಸಂಜೆಯಾದರೂ ಕೋರಂ ಭರ್ತಿಯಾಗದಿದ್ದರಿಂದ, ವೃಥಾ ಕಾಲಹರಣ ಮಾಡೋದು ಬೇಡ. ಮತ್ತೊಂದು ದಿನಕ್ಕೆ ಸಭೆ ನಿಗದಿಪಡಿಸಿ. ನಿಮ್ಮ ತಾಲ್ಲೂಕುಗಳ ಸದಸ್ಯರನ್ನು ಕರೆ ತನ್ನಿ ಎಂದು ಅಳಗಂಚಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯ ವೆಂಕಟಸ್ವಾಮಿ ಮನವಿಗೆ ಸ್ಪಂದಿಸಿದ ಅಧ್ಯಕ್ಷರು ತಮ್ಮ ನಿರ್ಧಾರ ಪ್ರಕಟಿಸಿದರು.

ಸಭೆ ಮುಂದೂಡುವುದಕ್ಕೂ ಮುನ್ನಾ ಸಿಇಒ ಕೆ.ಜ್ಯೋತಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಂಜಿನಿಯರ್‌ನನ್ನು ತರಾಟೆಗೆ ತೆಗೆದುಕೊಂಡರು. ‘ನಿಮ್ಮ ವಾರ್ಷಿಕ ಕ್ರಿಯಾಯೋಜನೆ ಇನ್ನೂ ಏಕೆ ರೂಪುಗೊಂಡಿಲ್ಲ. ನಾಳೆ ಸಲ್ಲಿಸುತ್ತೀರಾ. ರಾತ್ರಿಯಿಡಿ ಕೂತು ಯೋಜನೆ ತಯಾರಿಸಿ’ ಎಂದು ತಾಕೀತು ಮಾಡಿದರು.

ಸದಸ್ಯ ಬೀರಿಹುಂಡಿ ಬಸವಣ್ಣ ಇದಕ್ಕೆ ಸಹಮತ ವ್ಯಕ್ತಪಡಿಸಿ, ‘ನಿಮ್ಮ ಇಲಾಖೆಗೆ ಅಂಗವಿಕಲ ಕೋಟಾದ ಅನುದಾನ ಹೊರತುಪಡಿಸಿ ₹ 6.06 ಕೋಟಿ ಹಣ ನಿಗದಿಯಾಗಿದೆ. ಪ್ರತಿಯೊಬ್ಬ ಸದಸ್ಯರಿಗೆ ಹಂಚಿದರೆ ತಲಾ ₹ 12 ಲಕ್ಷ ಸಿಗಲಿದೆ. ಕ್ರಿಯಾಯೋಜನೆ ತಯಾರಿಸಲು ನಿಮಗೇನು ಸಮಸ್ಯೆ’ ಎಂದು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭ ಸಭೆಯನ್ನು ಬೆಳಿಗ್ಗೆ ಕರೆಯುವಂತೆ ಅಧ್ಯಕ್ಷರನ್ನು ಕೋರಿದರು.

ಪ್ರತಿಕ್ರಿಯಿಸಿ (+)