ಆರೋಗ್ಯ ಉಪಕೇಂದ್ರಗಳಲ್ಲಿ ನರ್ಸ್‌ಗಳ ಕೊರತೆಗೆ ಅತೃಪ್ತಿ

7
ಜಿಲ್ಲಾ ಪಂಚಾಯಿತಿ ವಿಶೇಷ ಸಭೆ: ವಿವಿಧ ಇಲಾಖೆಗಳ ಕಾರ್ಯನಿರ್ವಹಣೆ ಚರ್ಚೆ

ಆರೋಗ್ಯ ಉಪಕೇಂದ್ರಗಳಲ್ಲಿ ನರ್ಸ್‌ಗಳ ಕೊರತೆಗೆ ಅತೃಪ್ತಿ

Published:
Updated:
Deccan Herald

ಚಾಮರಾಜನಗರ: ‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಸರಿಯಾಗಿ ಸಿಗುತ್ತಿಲ್ಲ. ಉಪ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ’ ಎಂದು ಆರೋಪಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ನಡೆದ ಜಿಲ್ಲಾ ಪಂಚಾಯಿತಿಯ ವಿಶೇಷ ಸಭೆಯಲ್ಲಿ ಈ ವಿಚಾರವನ್ನು ಪಕ್ಷಭೇದ ಮರೆತು ಪ್ರಮುಖವಾಗಿ ಪ್ರಸ್ತಾಪಿಸಿದ ಸದಸ್ಯರು, ತಕ್ಷಣವೇ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂ‌ದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್‌. ಪ್ರಸಾದ್‌ ಅವರು ಇಲಾಖೆಯ ಪ್ರಗತಿ ವಿವರಗಳನ್ನು ಮಂಡಿಸಿದರು.

‘ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಪ ಕೇಂದ್ರಗಳಲ್ಲಿ ನರ್ಸ್‌ಗಳ ಕೊರತೆ ಇದೆ. 256 ನರ್ಸ್‌ಗಳ ಪೈಕಿ 112 ಮಾತ್ರ ಇದ್ದಾರೆ. ಲಭ್ಯವಿರುವ ಸಿಬ್ಬಂದಿಯನ್ನೇ ಬಳಸಿ ಎಲ್ಲ ಕಡೆ ಸೇವೆ ನೀಡಲಾಗುತ್ತದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಬ್ಬಳ್ಳಿ ಕ್ಷೇತ್ರದ ಕೆ.ಎಸ್‌. ಮಹೇಶ್‌, ‘ನನ್ನ ಕ್ಷೇತ್ರದಲ್ಲಿರುವ ಆರೋಗ್ಯ ಉಪಕೇಂದ್ರಗಳಲ್ಲಿ ಸಿಬ್ಬಂದಿಯೇ ಇಲ್ಲ. ಜನರಿಗೆ ಸರಿಯಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ. ಆದರೆ, ನೀವು ಏನೂ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದೀರಿ’ ಎಂದರು.

ಬಿಜೆಪಿ ಸದಸ್ಯೆ ಡಿ. ಲೇಖಾ ಅವರು ತಮ್ಮ ಕ್ಷೇತ್ರದಲ್ಲೂ ಇದೇ ರೀತಿ ಸಮಸ್ಯೆ ಇದೆ ಎಂದು ಪ್ರಸ್ತಾಪಿಸಿದರು.

ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೀಶ ಮೂರ್ತಿ ಅವರು ಮಾತನಾಡಿ, ‘ತಾಲ್ಲೂಕಿನಾದ್ಯಂತ ಇದೇ ಸಮಸ್ಯೆ ಇದೆ. ಪ್ರತಿ ಹೋಬಳಿಯಲ್ಲೂ ಶುಶ್ರೂಷಕಿಯರ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಜನರಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್, ‘ಜಿಲ್ಲೆಯಲ್ಲಿ 365 ಆರೋಗ್ಯ ಉಪಕೇಂದ್ರಗಳಿವೆ. ಅದರಲ್ಲಿ 150ರಲ್ಲಿ ಸಿಬ್ಬಂದಿ ಇಲ್ಲ. ಇರುವ 112 ನರ್ಸ್‌ಗಳಲ್ಲಿ ಒಬ್ಬೊಬ್ಬರನ್ನು ಮೂರು ಕೇಂದ್ರಗಳಿಗೆ ನಿಯೋಜಿಸಲಾಗಿದೆ’ ಎಂದರು.

ಹಿರಿಯ ಸದಸ್ಯ ಚೆನ್ನಪ್ಪ ಮಾತನಾಡಿ, ‘ಕನ್ನೇಗಾಲ, ಬರಗಿ, ಭೀಮನಬೀಡುಗಳಲ್ಲಿರುವ ಆರೋಗ್ಯ ಕೇಂದ್ರಕ್ಕೆ ನರ್ಸ್‌ಗಳು ವಾರಕ್ಕೆ ಎರಡು ದಿನವೂ ಬರುವುದಿಲ್ಲ. ಅವರು ಯಾವಾಗ ಬರುತ್ತಾರೆ ಎಂಬ ಬಗ್ಗೆ ಜನರಿಗೆ ಮಾಹಿತಿಯೂ ಇರುವುದಿಲ್ಲ. ಕೇಳಿದರೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಇದೆ ಎಂದು ಹೇಳುತ್ತಾರೆ’ ಎಂದರು.

ಹಿರಿಯ ಸದಸ್ಯನ ಮಾತಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ಸದಸ್ಯರು ದನಿಗೂಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಅವರು, ‘ಸಿಬ್ಬಂದಿ ಕೊರತೆ ಇರುವುದು ಎಲ್ಲರಿಗೂ ಗೊತ್ತು. ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಹೇಗೆ ಪರಿಣಾಮಕಾರಿಯಾಗಿ ಸೇವೆ ನೀಡುತ್ತೀರಿ ಎಂಬುದನ್ನು ತಿಳಿಸಿ’ ಎಂದು ಪ್ರಸಾದ್‌ ಅವರಿಗೆ ಸೂಚಿಸಿದರು.

ಅಲ್ಲದೇ, ‘ಇನ್ನು ಮುಂದೆ ಸಭೆ ನಡೆಸುವಾಗ ಮಧ್ಯಾಹ್ನ 4 ಗಂಟೆಯ ನಂತರವೇ ನಡೆಸಿ. ಆಗ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಬಹುದು’ ಎಂದರು.

‘ನರ್ಸ್‌ಗಳು ಯಾವಾಗ ಉಪಕೇಂದ್ರಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿಯನ್ನು ಆಯಾ ಕೇಂದ್ರದ ಫಲಕದಲ್ಲಿ ಹಾಕಲು ‌ಕ್ರಮಕೈಗೊಳ್ಳಲಾಗುವುದು’ ಎಂದು ಡಾ.ಪ್ರಸಾದ್‌ ತಿಳಿಸಿದರು.

ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ: ಕಾಂಗ್ರೆಸ್‌ ಸದಸ್ಯ ಕೆರೆಹಳ್ಳಿ ನವೀನ್‌ ಮಾತನಾಡಿ, ‘ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಮಂಜೂರಾದ ಹುದ್ದೆಗಳಿಗೆ ಬರುವ ವೇತನದಲ್ಲಿ ಅರ್ಧದಷ್ಟು ಕಾಯಂ ಸಿಬ್ಬಂದಿ ಇಲ್ಲದೇ ಇರುವುದರಿಂದ ವಾಪಸ್‌ ಹೋಗುತ್ತಿದೆ. ಆ ಡುಡ್ಡನ್ನು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಕ ಮಾಡಿದರೆ ಅವರ ವೇತನಕ್ಕೆ ಬಳಸಿಕೊಳ್ಳಬಹುದಲ್ಲವೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಡಾ. ಪ್ರಸಾದ್‌ ಮತ್ತು ಜಿಲ್ಲಾ ಮುಖ್ಯ ಲೆಕ್ಕಪರಿಶೋಧನಾಧಿಕಾರಿ ಹೇಳಿದರು.

‘ಬೇರೆ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಗೂ ಮಾಡಬಹುದಲ್ಲವೇ’ ಎಂದು ಕೆರೆಹಳ್ಳಿ ನವೀನ್‌ ಕೇಳಿದಾಗ, ‘ಅದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕು’ ಎಂದು ಪ್ರಸಾದ್‌ ಅವರು ಹೇಳಿದರು.

ಸಿಇಒ ಹರೀಶ್‌ ಕುಮಾರ್‌ ಮಾತನಾಡಿ, ‘ಶಿಕ್ಷಣ ಇಲಾಖೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಹಾಗೆ, ಆರೋಗ್ಯ ಇಲಾಖೆಗೂ ಯಾಕೆ ನರ್ಸ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬಾರದು’ ಎಂದು ಪ್ರಸಾದ್‌ ಅವರನ್ನು ಕೇಳಿದರು.

‘ಈ ಬಗ್ಗೆ ಒಂದು ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಜಿಲ್ಲಾ ಪಂಚಾಯಿತಿ ಮೂಲಕ ಸರ್ಕಾರಕ್ಕೆ ಕಳುಹಿಸೋಣ’ ಎಂದು ಬಹುತೇಕ ಸದಸ್ಯರು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಪ್ರಸಾದ್‌ ಅವರು ಶೀಘ್ರದಲ್ಲಿ ಪ್ರಸ್ತಾವನೆ ಸಿದ್ಧಪಡಿಸುವ ಭರವಸೆಯನ್ನು ಸಭೆಗೆ ನೀಡಿದ ಬಳಿಕ, ಚರ್ಚೆ ಮುಕ್ತಾಯವಾಯಿತು.

ಅಂಗನವಾಡಿ ಹಾಜರಾತಿ ಕಡಿಮೆ: ಅಧಿಕಾರಿ ತರಾಟೆಗೆ 

ಜಿಲ್ಲೆಯ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳನ್ನು ಸದಸ್ಯರು ಮಾಡಿದರು. ಹಿರಿಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜು ಅವರು ಇಲಾಖೆಯ ವತಿಯಿಂದ ನಡೆಸಲಾದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. 

ಕಾಂಗ್ರೆಸ್‌ ಸದಸ್ಯ ಮಹೇಶ್‌ ಮಾತನಾಡಿ, ‘ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದೆ. ಕೆಲವು ಅಂಗನವಾಡಿಗಳಲ್ಲಿ 2, 3, 4 ಮಕ್ಕಳು ಇದ್ದಾರೆ. ಸುಳ್ಳು ಹಾಜರಾತಿಯನ್ನು ತೋರಿಸಲಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ’ ಎಂದು ದೂರಿದರು.

ಇವರ ಮಾತಿಗೆ ಸದಸ್ಯರಾದ ಸಿ.ಎನ್‌.ಬಾಲರಾಜು, ಜಯಂತಿ, ನವೀನ್‌, ಇಶ್ರತ್‌ ಭಾನು ಹಾಗೂ ಇತರರು ಧ್ವನಿ ಸೇರಿಸಿದರು. 

ಬಾಲರಾಜು ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಧ್ಯಾಹ್ನ 12 ಗಂ‌ಟೆಗೆ ಚಾಮರಾಜನಗರದಲ್ಲಿ ಇರುತ್ತಾರೆ’ ಎಂದು ಆರೋಪಿಸಿದರು. 

ಸಿಇಒ ಡಾ.ಕೆ. ಹರೀಶ್‌ಕುಮಾರ್‌ ಮಾತನಾಡಿ, ‘ಅಂಗನವಾಡಿಗಳಲ್ಲಿ 5ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿದ್ದರೆ, ಅದನ್ನು ಪಕ್ಕದ ಅಂಗನವಾಡಿಯೊಂದಿಗೆ ವಿಲೀನಗೊಳಿಸಬೇಕು. ಒಂದು ವೇಳೆ 15 ಮಂದಿ ದಾಖಲಾಗಿ ಇಬ್ಬರು ಮಾತ್ರ ಬಂದರೆ, ಅದನ್ನು ವಿಲೀನಗೊಳಿಸುವಂತಿಲ್ಲ. ಕಾರ್ಯಕರ್ತೆಯರು ದಾಖಲಾದ ಮಕ್ಕಳನ್ನು ಅಂಗನವಾಡಿಗೆ ಕರೆಕತರಲು ಪ್ರಯತ್ನಿಸಬೇಕು. ನೀವು ಇದರ ಮೇಲ್ವಿಚಾರಣೆ ಮಾಡಬೇಕು. ನಿಮಗೆ ಸಿಬ್ಬಂದಿ ಕೊರತೆ ಇದ್ದರೆ, ನಾವು ಬೇರೆಯವರನ್ನು ನೇಮಿಸುತ್ತೇವೆ’ ಎಂದು ಬಸವರಾಜು ಅವರಿಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !