ಗುರುವಾರ , ಜೂನ್ 17, 2021
28 °C

ಕರಗುತ್ತಿದೆ ಗಾಂಧಿಯ ನೆರಳೂ

ಚಂದ್ರಶೇಖರ ತಾಳ್ಯ Updated:

ಅಕ್ಷರ ಗಾತ್ರ : | |

Prajavani

ನಿನ್ನ ನೆರಳೂ ಕರಗುತ್ತಿದೆ
ಬಿಸಿಲ ಕೋಲಂತೆ ಕಂಗೊಳಿಸಿ
ಕಣ್ಣೊತ್ತಿನಲ್ಲೆ ಕುಲಗೆಡಿಸಿ
ಹಬ್ಬಿದ ಮಬ್ಬಿನಲ್ಲೇ ಸರಿ ಸರಿದು
ಸರ ಸರನೆ ಚಲಿಸುತ್ತಿದೆ...
ಕಾಲಸ್ವಾಮಿಯ ಮಹಾ ಕಥನದಲ್ಲಿ
ನಿನ್ನ ನೆರಳಿನ ಗತಿಯೂ ಹೀಗೇ...

ವಿಷದ ಮಡಕೆಯ ಸುತ್ತ
ಗಿರ ಗಿರನೆ ಸುತ್ತುವ ಬೆಂತರಾತ್ಮಗಳ ಸಂತೆ
ಬಹುಕೃತ ವೇಷದ, ವಿವಿಧ ರಂಗುಗಳ
ವಿವಿಧ ಆಕಾರಗಳ, ಅದ್ಭುತ ಮೇಕಪ್ಪಿನ
ಬಂಧದ ಕಬಂಧದಲ್ಲಿ
ಬಿಡುಗಡೆಯ ಹಸಿರೊಣಗಿ
ಅದರ ತರಗೆಲೆಯ ಮೇಲೆ
ನಿನ್ನ ಹೆಜ್ಜೆಯ ಪರ ಪರ ಸದ್ದು!

ಅರೆಬೆತ್ತಲೆಯನೂ ಸುಲಿದು
ಕತ್ತಲಿನ ಪೀತಾಂಬರ ಉಡಿಸಿ
ಕೈ ಕೋಲ ಕಸಿದು, ದಾರಿಗೆ ಮುಳ್ಳು ಸುರಿದು
ದಿಕ್ಕು ದಿಕ್ಕಿನಲ್ಲೂ ಕಾವಲಿನ ಮೊಳೆ ಹೊಡೆದು
ಅಂಬರಕೆ ತೂರಿ ಹಾರಿಸಿದಂತೆ
ನಿನ್ನ ಸ್ಥಿತಿಯೂ ಕಂಗಾಲು.

ಯಾರು ಬಂದವರಾಗ, ಯಾರು ಹೋದದ್ದೀಗ
ಚಕ್ರ ತಿರುಗಿದಂತೆ
ನೂತ ನೂಲೇ ಕುಣಿಕೆಯಾಗಿ
ಸಂದಣಿಸಿದ ಸೂತಕದಲ್ಲಿ
ಅಹಿಂಸೆ ಹಿಂಸೆ ವ್ಯತ್ಯಾಸವಳಿದು
ಬಟ್ಟೆ ತೊಟ್ಟೂ ಬರಿದೆ ಬೆತ್ತಲಾದ
ನಿನ್ನ ಪ್ರತಿಮೆಗಳ ಚೂರೂ
ಚಕಣಾ ಚೂರು
ಭುವಿಯ ಉದ್ದಗಲಕ್ಕೂ...

ಟೊಂಗೆ ಟೊಂಗೆಗಳಲ್ಲಿ
ಅರಳಿದ ಅಸಂಖ್ಯ ಬಣ್ಣದ ಮೋಹಕ ಹೂವುಗಳ
ಸೌಂದರ್ಯದ ಅಸಾಮಾನ್ಯ ನೋಟವೂ
ಮಂಕು ಮಂಕಾಗಿ
ಏಕ ವರ್ಣದ ಭೂತ ಕುಣಿಕುಣಿದು
ಕುಪ್ಪಳಿಸುವಾಗ
ಭೂಮ್ಯಾಕಾಶಗಳ ನುಂಗಿ ನೊಣೆಯುತ್ತಿರುವಾಗ
ನಿನ್ನ ನೆರಳೂ ನಡುಗುವುದ
ಕದ್ದೂ ಮುಚ್ಚಿ ನೋಡುತ್ತಲೇ ಇರುವೆ!

ತ್ರಿವರ್ಣಗಳು ಕಲೆಸಿ
ಜನಗಣ ಮನ ನಿರ್ಗುಣ
ಆಸೇತು ಹಿಮಾಚಲ ತಲ್ಲಣ
ದನದ ಸಂತೆಯಲ್ಲಿ
ದೇವರ ಗುಡಿಯ ಗೋಪುರದಲ್ಲಿ
ನೀತಿಯ ಹರಾಜಿನಲ್ಲಿ
ಅರಾಜಕದ ಪ್ರಭುಸಂಹಿತದ ಗಗನದೆತ್ತರದಲ್ಲಿ
ನಿನ್ನ ಅಸಂಖ್ಯಾತ ನಿರ್ಜೀವದ ಪ್ರತಿಕೃತಿಯ ಬಾವುಟ!

ಹಸಿ ಹಣತೆಗೆ ಅದ್ವಾನದ ಬತ್ತಿ ಹೊಸೆದು
ಭಂಗದ ಎಣ್ಣೆ ಸುರಿದು, ಭ್ರಮೆಯ ಬೆಳಕಲ್ಲಿ
ಹೊಯ್ದಾಡುವ ಗಾಳಿಯ ಹುಚ್ಚು ರಭಸದಲ್ಲಿ
ಅಯೋಮಯ ದಿಗ್ಭ್ರಮೆಯ ದೋಣಿ
ತೇಲುವ ಮುಳುಗುವ ಆಟ
ಇಲ್ಲದ ಹರಿವಿನ ನದಿಯ ಒಡಲಲ್ಲಿ!

ನಮ್ಮದೇ ಶವದ ವಾಸನೆ
ನಮ್ಮದೇ ಉಸಿರ ದುರ್ಗಂಧ
ನಮ್ಮದೇ ಕಣ್ಣೋಟದ ಕಳಂಕ
ಸೆಂಟು ಪೂಸಿ, ಕರ್ಪೂರದಾರತಿ ಎತ್ತಿ
ಚಟ್ಟ ಸಿಂಗಾರದ ಅರಮನೆಯಲ್ಲಿ
ಇನ್ನೆಷ್ಟು ದಿನ, ಇನ್ನೆಷ್ಟು ಕಾಲ
ಜ್ಯೋತಿ ಆರದಂತೆ
ಮೈಗೆಡಲೀಯದಂತೆ
ನಮ್ಮಾತ್ಮಗಳ ಜತನ.

ಬೆವರಿನ ಹೊದಿಕೆ ಹೊದ್ದಿದ್ದೇನೆ
ಗದಗುಡುವ ಭಯದ ನೆರಳ ಹಾಸಿದ್ದೇನೆ
ಕಾಯುತ್ತಲೇ ಇದ್ದೇನೆ
ನಿನ್ನ ನಿಜಾಕೃತಿಯ ದರ್ಶನಕ್ಕಾಗಿ
ಅಪಾರ ಶಾಂತಿಯ ನೆಮ್ಮದಿಗಾಗಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.