ಶುಕ್ರವಾರ, ಏಪ್ರಿಲ್ 23, 2021
22 °C

ಆವರಿಸಿದ ಬರದ ಛಾಯೆ ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಮುಂಗಾರು ಬಿತ್ತನೆಗೆ ಸರಿಯಾಗಿ ಮಳೆ ಬೀಳದ ಕಾರಣ,

ಇದುವರೆಗೆ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಅದು ಮುಂಗಾರು ಹಂಗಾಮಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.ಪ್ರಸಕ್ತ 2012-13ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ 1,10,830 ಹೆಕ್ಷೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ

ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಅಲ್ಪ-ಸ್ವಲ್ಪ ಬಿದ್ದ ಮಳೆಯಿಂದ ಭೂಮಿ ಹದಗೊಳಿಸಲು ಸಹಕಾರಿಯಾಗಿದೆಯಷ್ಟೆ.ಬಿತ್ತನೆಗೆ ಬೇಕಾದಷ್ಟು ಮಳೆಯಾಗದ ಕಾರಣ ರೈತರು ಮುಗಿಲು ನೋಡುವಂಥ ಪರಿಸ್ಥಿತಿ ಎದುರಾಗಿದೆ. ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಸಮರ್ಪಕ ಮಳೆ ಬೀಳದ ಕಾರಣ ರೈತರಲ್ಲಿ ಆತಂಕ ಮೂಡಿದೆ.ತಾಲ್ಲೂಕಿನಲ್ಲಿ ಒಣಹವೆ ಮುಂದುವರೆದಿದ್ದು ಬರದ ಛಾಯೆ ಆವರಿಸಿದೆ. ಮಳೆ ಬಾರದ ಕಾರಣ ಮೇವಿನ ಕೊರತೆ ಎದುರಾಗಿದೆ. ಮಳೆಯಾದರೆ ಹುಲ್ಲು-ಮೇವು ಬೆಳೆಯಲು ಸಾಧ್ಯವಾಗುತ್ತಿತ್ತು. ಜೂನ್ ತಿಂಗಳಲ್ಲಿ ಬಿದ್ದ ಮಳೆಯಿಂದ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದರು. ಮುಂಗಾರು ಬಿತ್ತನೆಗೆ ಬೇಕಾದ ರಸಗೊಬ್ಬರ-ಬೀಜಗಳನ್ನು ದಸ್ತಾನು ಮಾಡಿಕೊಂಡ ರೈತಾಪಿ ವರ್ಗ ಮಳೆಗಾಗಿ ಕಾಯುತ್ತಿದ್ದರು. ಆದರೆ ಜುಲೈ 15ರವರೆಗೂ ಬಿತ್ತನೆಗೆ ಮಳೆ ಬಾರದ ಕಾರಣ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಸಜ್ಜೆ, ಶೇಂಗಾ, ಸೂರ್ಯಕಾಂತಿ ಮತ್ತಿತರ ಬೆಳೆ ಬೆಳೆಗೆ ಕಂಟಕ ಬಂದೋದಗಿದೆ.

 ಮಳೆ ಪ್ರಮಾಣ: ತಾಲ್ಲೂಕಿನಲ್ಲಿ ಏಪ್ರಿಲ್ ತಿಂಗಳ ಸರಾಸರಿ 25ಮಿ.ಮೀ ಮಳೆಗೆ ಪ್ರತಿಯಾಗಿ 38.8 ಮಿ.ಮೀ ಮಳೆಯಾಗಿತ್ತು.ಮೇ ತಿಂಗಳಲ್ಲಿ  ಸರಾಸರಿ 40ಮಿ.ಮೀ ಮಳೆಗೆ ಪ್ರತಿಯಾಗಿ, 21.3 ಮಿ.ಮೀ ಮಳೆ ಬಿದ್ದಿತ್ತು. ಜೂನ್ ತಿಂಗಳ ಸರಾಸರಿ ಮಳೆಯ ಪ್ರಮಾಣ 125 ಮಿ.ಮೀ ಆಗಿದ್ದರೆ, ಈ ಅವಧಿಯಲ್ಲಿ ಕೇವಲ 19.03 ಮಿ.ಮೀ ಮಳೆಯಾಗಿದೆ.ಬಿತ್ತನೆಗೆ ಹಿನ್ನಡೆ: ಮುಂಗಾರು ಮಳೆ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಬಾರದ ಕಾರಣ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಹುರಳಿ, ಅಲಸಂದಿ, ಅವರೆ, ಮಟಕಿ, ಗುರೆಳ್ಳು, ಏಳ್ಳು ಮುಂತಾದ ಬೆಳೆಗಳ ಬಿತ್ತನೆಗೆ ಹಿನ್ನಡೆಯುಂಟಾಗಿದೆ. ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಗುರೆಳ್ಳು, ಹತ್ತಿ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗುತ್ತಿದೆ. ಬಿತ್ತನೆಯ ಸಮಯ ಮುಗಿಯುವ ಹಂತ ತಲುಪುತ್ತಿದೆ. ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರದ ಛಾಯೆ ಆವರಿಸಿರುವುದರಿಂದ ರಾಜ್ಯ ಸರ್ಕಾರ ರೈತರ ಸಹಾಯಕ್ಕೆ ಧಾವಿಸಬೇಕಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.