ಬುಧವಾರ, ಆಗಸ್ಟ್ 12, 2020
27 °C

ಪವಿತ್ರ ರಂಜಾನ್, ಶ್ರಾವಣಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪವಿತ್ರ ರಂಜಾನ್, ಶ್ರಾವಣಕ್ಕೆ ಸಿದ್ಧತೆ

ಗುಲ್ಬರ್ಗ: ಶ್ರಾವಣ ಮಾಸ ಹಿಂದುಗಳಿಗೆ ಹೇಗೆ ಪವಿತ್ರವೋ ಅದೇರೀತಿ ಮುಸ್ಲಿಂ ಜನಾಂಗದವರಿಗೆ ರಂಜಾನ್ ಮಾಸ ಅತ್ಯಂತ ಪವಿತ್ರ. ಆದರೆ ಈ ಬಾರಿ ಹಿಂದೂ-ಮುಸ್ಲಿಂರ ಪವಿತ್ರ ದಿನಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ನಗರದ ಮಾರುಕಟ್ಟೆಗಳು ಸದಾ ಜನರಿಂದ ಗಿಜಿಗುಡುತ್ತಿವೆ.ಹೀಗಾಗಿ ನಗರದ ಎ್ಲ್ಲಲೆಡೆ ಸಡಗರ-ಸಂಭ್ರಮದ ವಾತಾವರಣ ಮನೆ ಮಾಡಿದೆ. ಶ್ರಾವಣ ಮಾಸದ ಅಂಗವಾಗಿ ಎಲ್ಲ ಹಿಂದೂಗಳು ವಿವಿಧ ಬಗೆಯ ತಿಂಡಿ, ತಿನಿಸು ತಯಾರಿಕೆಗೆ ಅಗತ್ಯವಾದ ಪದಾರ್ಥಗಳ ಖರೀದಿಗಾಗಿ ಎಲ್ಲರೂ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.ಪವಿತ್ರ ರಂಜಾನ್ ಹಬ್ಬ ಇದೇ ತಿಂಗಳಲ್ಲಿ ಆರಂಭವಾಗಿರುವುದರಿಂದ ಮುಸ್ಲಿಂ ಜನಾಂಗದವರು ತಮ್ಮ ಉಪವಾಸ ವ್ರತಕ್ಕೆ ಅಗತ್ಯವಾದ ಖಜೂರಿ, ಹಣ್ಣು ಮುಂತಾದ ಒಣ ಪದಾರ್ಥಗಳಿಗೆ ಮೊರೆ ಹೋಗುತ್ತಿದ್ದಾರೆ.ಜನರ ಈ ಬೇಡಿಕೆಯನ್ನು ಗಮನಿಸಿದ ವ್ಯಾಪಾರಸ್ಥರು ನಗರದ ಆಯಕಟ್ಟಿನ ಸ್ಥಳದಲ್ಲಿ ತಮ್ಮ ವ್ಯಾಪಾರ ವಹಿವಾಟು ಶುರು ಮಾಡಿದ್ದಾರೆ. ನಾಗರ ಪಂಚಮಿ ಹಬ್ಬಕ್ಕೆ ಬೇಕಾದ ಅಳ್ಳು, ಬೆಲ್ಲ, ಕೊಬ್ಬರಿ, ಜೋಕಾಲಿ ಹಗ್ಗ ಮುಂತಾದ ಪದಾರ್ಥಗಳ ಜೊತೆಗೆ ಪವಿತ್ರ ಶ್ರಾವಣಕ್ಕೆ ಬೇಕಾದ ವಿವಿಧ ಬಗೆಯ ಪೂಜಾ ಸಾಮಗ್ರಿಗಳ ಮಾರಾಟವೂ ಜೋರಾಗಿ ನಡೆದಿದೆ.ಶನಿವಾರದಿಂದ ಆರಂಭವಾಗಿರುವ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಒಂದು ತಿಂಗಳ ಪರ್ಯಂತ ಮುಸ್ಲಿಂ ಬಾಂಧವರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಸೂರ್ಯೋದಯದಿಂದ ಆರಂಭಗೊಳ್ಳುವ ಉಪವಾಸ ಸೂರ್ಯಾಸ್ತಮಾನದ ನಂತರ ಮುಕ್ತಾಯವಾಗುತ್ತದೆ. ಹೀಗಾಗಿ ಪೌಷ್ಟಿಕ ಪದಾರ್ಥಗಳಾದ ಖಜೂರಿ, ವಿವಿಧ ಬಗೆಯ ಹಣ್ಣು, ಹಾಲು, ಮೊಟ್ಟೆ, ತರಕಾರಿಗಳನ್ನು ಅವರು ಬಳಸುತ್ತಾರೆ.ರಂಜಾನ್ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ವಿವಿಧ ಬಗೆಯ ಹಣ್ಣು, ತರಕಾರಿ ಹಾಗೂ ತಿನಿಸುಗಳ ಮಾರಾಟ ಭರದಿಂದ ನಡೆದಿದೆ. ಶ್ರಾವಣ ಹಾಗೂ ರಂಜಾನ್ ಪ್ರಯಕ್ತ ನಗರದ ವಿವಿಧ ಬಟ್ಟೆ ಅಂಗಡಿಗಳಲ್ಲಿ ಕೂಡ ಆಕರ್ಷಕ ಬಗೆಯ ನವನವೀನ, ನಾನಾ ನಮೂನೆಯ ಬಟ್ಟೆ ಹಾಗೂ ಸಿದ್ಧಪಡಿಸಿದ ಉಡುಪುಗಳ ಮಾರಾಟವೂ ನಡೆದಿದೆ.ಹಿಂದೂ-ಮುಸ್ಲಿಮರು ಭಾವೈಕ್ಯದಿಂದಿರುವ ಈ ನಗರದಲ್ಲಿ ಶ್ರಾವಣ ಮತ್ತು ರಂಜಾನ್ ಏಕಕಾಲಕ್ಕೆ ಬಂದಿರುವುದರಿಂದ ಎಲ್ಲರೂ ಸೇರಿ ಒಟ್ಟಾಗಿ, ಒಂದಾಗಿ ತಮ್ಮ , ತಮ್ಮ ಪವಿತ್ರ ಹಬ್ಬ ಆಚರಿಸುತ್ತಿದ್ದಾರೆ. ಹಿಂದು-ಮುಸ್ಲಿಮರ ಸೌಹಾರ್ದಕ್ಕೆ ಮಾರುಕಟ್ಟೆಗಳು ಸಹ ಸಾಕ್ಷಿಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.