ಬುಧವಾರ, ಏಪ್ರಿಲ್ 21, 2021
30 °C

ಹೈ-ಕಕ್ಕೆ 371ನೇ ಸ್ಥಾನಮಾನ: ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟದ ರಾಜಕೀಯ ಸಮಿತಿ ಒಪ್ಪಿಗೆ ನೀಡಿರುವುದಕ್ಕೆ ಜಿಲ್ಲೆಯಲ್ಲಿ ಭಾರಿ ಸಂತಸ ವ್ಯಕ್ತವಾಗಿದೆ. ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶನಿವಾರ ವಿವಿಧ ಸಂಘಟನೆಗಳು ಸಂಭ್ರಮ ಆಚರಿಸಿದವು.ಜಿಪಂ ಹರ್ಷ: ಹೈಕೋರ್ಟ್ ಸಂಚಾರಿ ಪೀಠ, ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ, ಬೀದರ್ ಪಶುವೈದ್ಯಕೀಯ ವಿ.ವಿ, ಬೀದರ್-ಶ್ರೀರಂಪಟ್ಟಣ ರಾ.ಹೆದ್ದಾರಿ ಮತ್ತಿತರ ಮಹತ್ವದ ಯೋಜನೆಗಳನ್ನು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ತಂದಿರುವ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮ ಸಿಂಗ್ ಈಗ ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿ ಒಪ್ಪಿಗೆಗೆ ಕಾರಣರಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕ್‌ನಾಗ್ ಪುಣ್ಯ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಒಪ್ಪಿಗೆ ನೀಡಲು ಈ ನಾಯಕರು ಕಾರಣ ಎಂದ ಅವರು, ಲೋಕಸಭಾ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ರಾಹುಲ್ ಗಾಂಧಿ ಗುಲ್ಬರ್ಗದಲ್ಲಿ ಭರವಸೆ ನೀಡಿದ್ದರು.ಭರವಸೆಯನ್ನು ಈಡೇರಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಳಜಿಯೂ ಇದೆ ಎಂದು ಹೇಳಿದ ಅವರು, ಈ ಭಾಗದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಹೋರಾಟಗಾರರು, ಸಂಸದರು, ಶಾಸಕರು, ರಾಜ್ಯ ಸರ್ಕಾರ, ಎಲ್ಲ ಜನಪ್ರತಿನಿಧಿಗಳ ಪ್ರಯತ್ನ ಇದರ ಹಿಂದಿದ್ದು, ಅವರಿಗೆ ಜಿಲ್ಲಾ ಪಂಚಾಯಿತಿ ಹಾಗೂ ಯುವ ಕಾಂಗ್ರೆಸ್ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಹೋರಾಟ: ಹೈದರಾಬಾದ್‌ಕರ್ನಾಟಕ ಹೋರಾಟಗಳ ಸಮನ್ವಯ ಸಮಿತಿ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿಸಿ ನರ್ತಿಸಿದರು. ಅರುಣ್‌ಕುಮಾರ್ ಪಾಟೀಲ್, ಸುರೇಶ್ ಬಡಿಗೇರ, ವಿಜಯಕುಮಾರ ತೇಗಲತಿಪ್ಪಿ ಮತ್ತಿತರರು ಇದ್ದರು. ಪಂಚ ಜಿಲ್ಲೆ: ಪಂಚ ಜಿಲ್ಲೆ ಜನಪರ ಹೋರಾಟ ಸಮಿತಿಯ ಎಂ. ಎಸ್. ಪಾಟೀಲ್ ಸೂಚನೆ ಮೇರೆಗೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜಗದೇವಿ ನಿಲೇಗಾರ, ರಾಜು ಹರ್ವಾಳ, ಸುವರ್ಣ ವಾಡೇ, ಸಿವಾನಿ ಪೋದ್ದಾರ್, ರಾಜೇಶ್ವರಿ ಮೇತ್ರಿ, ಭಂಡಮ್ಮಾ ಮಠಪತಿ, ಇಂದ್ರಾ ಬನಶೆಟ್ಟಿ, ನರಸಮ್ಮಾ ಕ್ವಾಮಟಗಿ ಮೊದಲಾದವರು ಇದ್ದರು.ಅಲ್ಲಮ ಪ್ರಭು ಪಾಟೀಲ್ ಸಂತಸ


ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿರುವುದನ್ನು ಸ್ವಾಗತಿಸಿ ವಿಧಾನ ಪರಿಷತ್ ಸದಸ್ಯ ಅಲ್ಲಮ ಪ್ರಭು ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.ಎಚ್.ಕೆ.ಸಿ.ಸಿ.ಐ. ಹರ್ಷ

ಭಾರತೀಯ ಸಂವಿಧಾನದ ಕಲಂ 371ರ ಅನ್ವಯ ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ವಿಶೇಷ ಸ್ಥಾನ ಕಲ್ಪಿಸಲು ಮುಂದಾಗಿರುವುದನ್ನು ಗುಲ್ಬರ್ಗದ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಸ್ವಾಗತಿಸಿದೆ.ಇದಕ್ಕಾಗಿ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಹೈದರಾಬಾದ್ ಕರ್ನಾಟಕದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಹಾಗೂ ವೈಜನಾಥ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ರಾಜಕೀಯ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ಈ ನಿರ್ಣಯದಿಂದ ಈ ಭಾಗದ ಜನತೆಗೆ ಶಿಕ್ಷಣ ಹಾಗೂ ಉದ್ಯೋಗಾವಕಾಶದಲ್ಲಿ ಅಪಾರ ಅನುಕೂಲವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಉಮಾಕಾಂತ ಬಿ. ನಿಗ್ಗುಡಗಿ ಹಾಗೂ ಗೌರವ ಕಾರ್ಯದರ್ಶಿ ಬಸವರಾಜ ಎಸ್. ಹಡಗಿಲ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

2002ನೇ ಇಸವಿಯಲ್ಲಿ ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಎಚ್.ಕೆ.ಸಿ.ಸಿ.ಐ. ಸದಸ್ಯರು ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕೇಂದ್ರ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿ ಈ ತಿದ್ದುಪಡಿಗಾಗಿ ಆಗ್ರಹಿಸಿತ್ತು.

 

ಅಲ್ಲದೆ ಎಚ್.ಕೆ.ಸಿ.ಸಿ.ಐ. ಈ ವಿಷಯ ಕುರಿತಂತೆ ಯುವ ಜನತೆಯಲ್ಲಿ ಅರಿವು ಮೂಡಿಸಲು ಸಮ್ಮೇಳಗಳನ್ನು ನಡೆಸಿದ್ದಲ್ಲದೆ, ಸತ್ಯಾಗ್ರಹ, ಪ್ರತಿಭಟನೆ, ಬಂದ್ ಮೊದಲಾದವುಗಳನ್ನು ನಡೆಸಿ ಹೋರಾಟ ನಡೆಸಿತ್ತು. 2010 ರಲ್ಲಿ ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಅವರನ್ನು ಆಸ್ಕರ್ ಫೆರ್ನಾಂಡಿಸ್ ಸಮ್ಮುಖದಲ್ಲಿ ಸಂಸ್ಥೆಯ ನಿಯೋಗ ಭೇಟಿ ಮಾಡಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಿದ್ದುಪಡಿ ನಿರ್ಧಾರಕ್ಕೆ ಸ್ವಾಗತ

ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಕೇಂದ್ರ ಸರ್ಕಾರ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ನಿರ್ಧಾರ ಕೈಗೊಂಡಿರುವುದು ಸ್ವಾಗತ ಕ್ರಮವಾಗಿದೆ ಎಂದು ಗುಲ್ಬರ್ಗ ಹಡಪದ ಅಪ್ಪಣ್ಣ ಸಮಾಜದ ಮುಖಂಡ ಸುಭಾಶ್ಚಂದ್ರ ಸಿ.ಹಡಪದ ತಿಳಿಸಿದ್ದಾರೆ.  371ನೇ ವಿಧಿ ಜಾರಿಗೆ ಸಂತಸ


ಪ್ರಾದೇಶಿಕ ಅಸಮತೋಲನದಿಂದಾಗಿ ಹಿಂದುಳಿದಿರುವ ಗುಲ್ಬರ್ಗ ಸೇರಿದಂತೆ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲು 371ನೇ ವಿಧಿ ಜಾರಿಗೊಳಿಸಲು ಕೇಂದ್ರ ಸರ್ಕಾರದ ರಾಜಕೀಯ ಸಮಿತಿ ಅನುಮೋದನೆ ನೀಡಿರುವುದಕ್ಕೆ ಪಂಚ ಜಿಲ್ಲೆಗಳ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃಧ್ಧಿಗೆ ಪೂರಕವಾಗಿರುವ ಈ ತೀರ್ಮಾನದಿಂದ ಸಹಜವಾಗಿ ಈ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಹೆಚ್ಚಳವಾಗಲಿವೆ. ಆದಷ್ಟು ಶೀಘ್ರ ಸಂಸತ್‌ನಲ್ಲೂ 371ನೇ ವಿಧಿ ತಿದ್ದುಪಡಿ ಮಸೂದೆ ಅಂಗೀಕಾರ ಪಡೆಯುವಂತಾಗಲಿ ಎಂದು ಪ್ರಕಟಣೆ ಮೂಲಕ ಆಶಿಸಿದ್ದಾರೆ.ಸುಲಫಲ ಸ್ವಾಮೀಜಿ ಹರ್ಷ

ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ರಾಜಕೀಯ ಸಮಿತಿ ಸಮ್ಮತಿ ಸೂಚಿಸಿರುವುದು ಹೈದರಾಬಾದ್ ಕರ್ನಾಟಕ ಮತ್ತು ವಿಶೇಷವಾಗಿ ಗುಲ್ಬರ್ಗ ಕಂದಾಯ ವಿಭಾಗದ ಜನರಿಗೆ ಸಂತಸದ ವಿಷಯ ಎಂದು ಸುಲಫಲ ಮಠದ ಮಹಾಂತ ಶಿವಾಚಾರ್ಯರು ತಿಳಿಸಿದ್ದಾರೆ.ಮಾಜಿ ಸಚಿವ ವೈಜನಾಥ ಪಾಟೀಲ ಅವರ 20 ವರ್ಷದ ಹೋರಾಟ ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಮತ್ತಿತರರ ಇಚ್ಛಾಶಕ್ತಿ ಹಾಗೂ ಕನ್ನಡಪರ ಸಂಘಟನೆಗಳ ನಿತರಂತರ ಚಳವಳಿಯ ಪರಿಣಾಮದಿಂದಾಗಿ ಈ ಮಹತ್ವದ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಆದಷ್ಟು ಶೀಘ್ರದಲ್ಲೇ ಈ ವಿಷಯ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಸ್ತಾಪಕ್ಕೆ ಬಂದು ಎಲ್ಲರೂ ಒಕ್ಕೊರಲಿನಿಂದ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಭಾಗದ ಬಹು ದಿನದ ಬೇಡಿಕೆಯೊಂದು ಈಡೇರಿಸಲು ಸಹಕರಿಸಿದ ಎಲ್ಲ ರಾಜಕೀಯ ಮುಖಂಡರಿಗೆ, ವಿವಿಧ ಸಂಘಟನೆಯ ಪದಾಧಿಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.ನೌಕರರ ಮಹಾ ಮಂಡಳ ಹರ್ಷ

ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಲು ಮುಂದಾಗಿರುವುದನ್ನು ಸ್ವಾಗತಿಸಿ ನಗರದ ಈಶಾನ್ಯ ವಲಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳವು ಹರ್ಷ ವ್ಯಕ್ತಪಡಿಸಿದೆ.ಈ ಸಾಧನೆಗೆ ಶ್ರಮಿಸಿದ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಮಂಡಳದ ಅಧ್ಯಕ್ಷ ಚಂದ್ರಕಾಂತ ಗದ್ಲಗಿ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.ಕಾಡುಕುರುಬ ಸಂಘ ಸಂತಸ

ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿರುವುದನ್ನು ಸ್ವಾಗತಿಸಿ ನಗರದ ಜಿಲ್ಲಾ ಗೊಂಡ, ಕಾಡುಕುರುಬ ಸಂಘದ ಅಧ್ಯಕ್ಷ ಮಹಾಂತೇಶ ಎಸ್. ಕೌಲಗಿ, ಪ್ರಧಾನ ಕಾರ್ಯದರ್ಶಿ ಧರ್ಮವೀರ ಎಸ್. ಪಟ್ಟಣ ಹಾಗೂ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಈ ಸಾಧನೆಗೆ ಶ್ರಮಿಸಿದ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ ಅವರಿಗೆ ಸಂಘ ಅಭಿನಂದಿಸಿದೆ ಎಂದು ಪ್ರಕಟಣೆ ತಿಳಿಸಿದೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.