ಗುರುವಾರ , ಏಪ್ರಿಲ್ 15, 2021
22 °C

ಬರಕ್ಕೆ ಸೃಷ್ಟಿಯೇ ಕಾರಣವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬರಕ್ಕೆ ಸೃಷ್ಟಿ ಮಾತ್ರವೇ ಕಾರಣವಲ್ಲ. ಶಾಶ್ವತ ಪರಿಹಾರ ಕಂಡುಕೊಳ್ಳದ ಸರ್ಕಾರ ಮತ್ತು ನಾವೂ-ನೀವೂ ಕಾರಣ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ (ಧಂಗಾಪುರ) ಹೇಳಿದರು. 

ಕೃಷಿ ಮತ್ತು ಸಂಬಂಧಿತ ಇಲಾಖೆಗಳು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ `ಕೃಷಿ ಮಾಹಿತಿ/ ಜಾಗೃತಿ ಆಂದೋಲನ~ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.

ನೇರ-ನಿಷ್ಠುರವಾಗಿ ಮಾತನಾಡಿದ ಹಿರಿಯ ಕೃಷಿಕ ಪಾಟೀಲ್, `ಸರ್ಕಾರವು ಸಾಲ ಮನ್ನಾ ಮತ್ತಿತರ ತಾತ್ಕಾಲಿಕ ಪರಿಹಾರದ ಜೊತೆಗೆ ನೀರಾವರಿ, ಹಸಿರು ಬೆಳೆಸುವ, ಮಣ್ಣು ಕಾಪಾಡುವ ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ಯಾವುದೇ ಯೋಜನೆ ರೂಪಿಸುವ ಮೊದಲು ರೈತರ ಜೊತೆ ಚರ್ಚೆ ನಡೆಸಬೇಕು~ ಎಂದರು.

ರೈತರು ಉತ್ಪಾದನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಸೋತಿದ್ದಾರೆ. ಹೆಚ್ಚು ಬೆಳೆದರೂ, ಬೆಳೆಯದೇ ಇದ್ದರೂ ಮಧ್ಯವರ್ತಿಗಳೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ನಿಯಂತ್ರಿಸಬೇಕು. ದೊಡ್ಡ ದೊಡ್ಡ ಕೈಗಾರಿಗಳಿಗೆ ಸಬ್ಸಿಡಿ, ಅನುದಾನ ನೀಡುವ ಮೊದಲು ನೆಲವನ್ನು ಕಾಪಾಡುವ ರೈತರಿಗೆ ನೆರವಾಗುವ ಬದ್ಧತೆ ಹೊಂದಬೇಕು ಎಂದ ಅವರು, ಸರ್ಕಾರದ ಸಬ್ಸಿಡಿಗಿಂತ ಕಡಿಮೆ ದರದಲ್ಲಿ ಕೃಷಿ ಸಲಕರಣೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಪರಿಸ್ಥಿತಿಯನ್ನು ನೀವೇ ಅವಲೋಕಿಸಿ ಎಂದರು.

ಕೃಷಿ ಜೊತೆ ಉಪಕಸುಬು ಮಾಡಿದ ರೈತರು ಬರಗಾಲದಲ್ಲೂ ಸೋತಿಲ್ಲ. ಮಾರುಕಟ್ಟೆಯ ಷಡ್ಯಂತ್ರಕ್ಕೆ ಬಲಿಯಾಗದೇ ಲಾಭದಾಯಕ, ಸುಸ್ಥಿರ, ನೆಲ-ಜಲವನ್ನು ಕಾಪಾಡಬಲ್ಲ ಕೃಷಿ ಮಾಡಬೇಕು. ಪ್ರೀತಿಯಿಂದ ಕೃಷಿ ಮಾಡಿ ಎಂದ ಅವರು, ಸರ್ಕಾರ ನಮಗೆ ಸಾಲ ನೀಡಬಹುದು, ಮಣ್ಣನ್ನು ಅಲ್ಲ. ಅದನ್ನು ನಾವೇ ಕಾಪಾಡಬೇಕು ಎಂದರು.

ರಾಜಕಾರಣಿ ಮಗ ರಾಜಕಾರಣಿ, ವಕೀಲರ ಮಗ ವಕೀಲ, ವೈದ್ಯರ ಮಗ ವೈದ್ಯ ಆಗುತ್ತಾನೆ. ಆದರೆ ರೈತರ ಮಗ ರೈತನಾಗುವುದಿಲ್ಲ. ಕನಿಷ್ಠ ಕೃಷಿ ವಿವಿಗಳಲ್ಲಿ ಸೀಟು ಪಡೆಯಲೂ ಸಾಧ್ಯವಾಗುವುದಿಲ್ಲ ಎಂದು ಉದಾಹರಣೆ ನೀಡಿ ವಿವರಿಸಿದರು.

ಪಶುಸಂಗೋಪನೆ, ಗ್ರಂಥಾಲಯ, ಸಣ್ಣ ಉಳಿತಾಯ ರಾಜ್ಯ ಲಾಟರಿ ಹಾಗೂ ವಯಸ್ಕರ ಶಿಕ್ಷಣ ಇಲಾಖೆಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಸಮಾವೇಶ ಉದ್ಘಾಟಿಸಿದರು. ಶಾಸಕಿ ಅರುಣಾ ಚಂದ್ರಶೇಖರ್ ಪಾಟೀಲ್, ಕರ್ನಾಟಕ ಕೃಷಿ ಮಿಷನ್ ಸದಸ್ಯ ಬಸವರಾಜ ಇಂಗಿನ, ಜಂಟಿ ಕೃಷಿ ನಿರ್ದೇಶಕ ಐ.ಈ.ಬಳತ್ಕರ್, ಅಶೋಕ ಸಾವಳೇಶ್ವರ, ಬಸವರಾಜ ಸಾವಣಗಿ, ಗಣೇಶ್ ನಾಯಕ್, ಬಸವರಾಜ ಪಾಟೀಲ್, ಬಸವರಾಜ ಬಸರೀಗಿಡ, ವೀರಶೆಟ್ಟಿ, ಡಾ.ಎಲ್.ಶೆಟ್ಟಿ, ದೇವಪ್ಪ ಗೌಡ ಪಾಟೀಲ, ನಿಂಗಣ್ಣ ಪೂಜಾರಿ, ಸಂಜೀವ   ಮತ್ತಿತರರು ಇದ್ದರು.

ಇದಕ್ಕೆ ಮೊದಲು ಜಿಲ್ಲಾಧಿಕಾರಿ ಕಚೇರಿಯಿಂದ ಆಕರ್ಷಕ ಸ್ತಬ್ಧ ಚಿತ್ರ ಮೆರವಣಿಗೆ ನಡೆಯಿತು. ಮಾಲತಿ ಕಣವಿ ಹಾಗೂ ತಂಡದವರು ಪ್ರಾರ್ಥನಾ ಗೀತೆ, ನಾಡಗೀತೆ, ರೈತ ಗೀತೆಯನ್ನು ಸುಮಧುರವಾಗಿ ಹಾಡಿದರು. ಬಳಿಕ ವಿವಿಧ ಗೋಷ್ಠಿಗಳು, ಸಮಾರೋಪ ಸಮಾರಂಭ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.