ಗುರುವಾರ , ಏಪ್ರಿಲ್ 15, 2021
22 °C

ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವರದಿ

ಗುಲ್ಬರ್ಗ:
ಸ್ನಾತಕೋತ್ತರ ಪದವಿಯಲ್ಲಿ ಭೌತಶಾಸ್ತ್ರ ಓದಿ ಅದರ ಒಂದು ಭಾಗವೇ ಆಗಿರುವ ಮೆಟೀರಿಯಲ್ ಸೈನ್ಸ್ (ವಸ್ತು ವಿಜ್ಞಾನ) ನಲ್ಲಿ ಎಂ.ಫಿಲ್ ಪದವಿ ಪಡೆದಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಆರು ಜನ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ.2007-08ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದಾಗ  ಶಿವಾನಂದ ಕಲಶೆಟ್ಟಿ, ಸತೀಶಕುಮಾರ, ತನ್ವೀರ್ ಫಾತಿಮಾ ಎಂಬ ವಿದ್ಯಾರ್ಥಿಗಳು ಕೂಡ ಅರ್ಜಿ ಹಾಕಿದ್ದರು. ಆದರೆ ಮೆಟಿರೀಯಲ್ ಸೈನ್ಸ್‌ನಲ್ಲಿ ಎಂ.ಫಿಲ್ ಮುಗಿಸಿದ ಇವರನ್ನು ಸರ್ಕಾರಿ ನಿಯಮಾವಳಿ ಪ್ರಕಾರ ನೇಮಕ ಮಾಡಿಕೊಳ್ಳಲು ಬರುವುದಿಲ್ಲ ಎಂದು ಇವರ ಅರ್ಜಿ ಕೆಪಿಎಸ್‌ಸಿ ತಿರಸ್ಕರಿಸಿತ್ತು.ಇದಕ್ಕೆ ಸಂಬಂಧಿಸಿದಂತೆ ಕುಲಸಚಿವರು ಮತ್ತು ಕುಲಪತಿಗಳನ್ನು ವಿಚಾರಿಸಲಾಗಿ, ಭೌತಶಾಸ್ತ್ರ ವಿಷಯಕ್ಕೆ ಸರಿಸಮಾನ ವಿಷಯ ಎಂದು ಹೇಳಿ (ಪತ್ರಸಂಖ್ಯೆ: ಜಿಯುಜಿ/ಎಸಿಸಿ/ಎಂ.ಫಿಲ್/ 2007-08/ 2934 /ದಿ. 22.012008) ಕೇವಲ ನಮಗೆ ಮಾತ್ರ ಪತ್ರ ಕೊಟ್ಟಿದ್ದಾರೆ ವಿನಃ ಅದರ ಪ್ರತಿಯನ್ನು ಸಂಬಂಧಿಸಿದ ಕೆಪಿಎಸ್‌ಸಿ ಹಾಗೂ ಉನ್ನತ ಶಿಕ್ಷಣ ಸಚಿವಾಲಯಕ್ಕೆ ಕಳುಹಿಸಿಯೇ ಇಲ್ಲ  ಎನ್ನುವುದು ವಿದ್ಯಾರ್ಥಿಗಳ ದೂರು. ಮೆಟಿರೀಯಲ್ ಸೈನ್ಸ್‌ನಲ್ಲಿ ಎಂ.ಫಿಲ್ ಪದವಿ ಪಡೆದ ವಿದ್ಯಾರ್ಥಿಗಳು ಅತ್ತ ನೌಕರಿಯ ಭಾಗ್ಯವೂ ಇಲ್ಲದೆ , ಇತ್ತ ಪಿಎಚ್‌ಡಿಯೂ ಮಾಡಲಾಗದಿರುವ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.ಈ ಬಗ್ಗೆ ಗುಲ್ಬರ್ಗ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಎಸ್.ಎಲ್. ಹಿರೇಮಠ ಅವರ ಗಮನ ಸೆಳೆದಾಗ, “ರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಸ್ನಾತಕೋತ್ತರ ಪದವಿಯಲ್ಲಿ ಭೌತಶಾಸ್ತ್ರ ಓದಿ ಮೆಟಿರೀಯಲ್ ಸೈನ್ಸ್ ನಲ್ಲಿ ಎಂ.ಫಿಲ್ ಪದವಿ ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಕಾಡೆಮಿಕ್ ಇಲ್ಲವೇ ಸಿಂಡಿಕೇಟ್ ಸಭೆ ಸೇರಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಸಮುಜಾಯಿಷಿ ನೀಡಿದರು.ಆದರೆ “ವಸ್ತು ವಿಜ್ಞಾನ” ಅಧ್ಯಯನ ವಿಭಾಗ ಹೊಂದಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಭೌತಶಾಸ್ತ್ರ ಮತ್ತು ವಸ್ತು ವಿಜ್ಞಾನ ಸರಿಸಮ ಎಂದು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಿ ಅದನ್ನು ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕೆಪಿಎಸ್‌ಸಿ ಗಮನ ಸೆಳೆದಿದೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮಾತ್ರ ಈ ವಿಷಯ ನಾಲ್ಕು ವರ್ಷಗಳಿಂದಲೂ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ.ಭೌತಶಾಸ್ತ್ರ ವಿಷಯಕ್ಕೆ ವಸ್ತು ವಿಜ್ಞಾನ ಸರಿಸಮ ಎನ್ನುವುದಕ್ಕೆ ಸರ್ಕಾರದಿಂದ ಆದೇಶ ಅಥವಾ ಸೂಚನೆ ಬಂದಾಗ ಮಾತ್ರ ಆ ವಿದ್ಯಾರ್ಥಿಗಳನ್ನು ನೇಮಕಾತಿ ಸಂದರ್ಭದಲ್ಲಿ ಪರಿಗಣಿಸಲಾಗುವುದು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಗೋನಾಳ ಭೀಮಪ್ಪ ಸ್ಪಷ್ಟಪಡಿಸುತ್ತಾರೆ.ಇನ್ನೂ ಒಂದು ತಿಂಗಳಲ್ಲಿ ಮತ್ತೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗುತ್ತಿದ್ದು, ಅಷ್ಟರೊಳ ಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಭೌತಶಾಸ್ತ್ರ ಓದಿ ಮೆಟೀಯಲ್ಸ್ ಸೈನ್ಸ್ (ವಸ್ತು ವಿಜ್ಞಾನ) ನಲ್ಲಿ ಎಂ.ಫಿಲ್ ಪದವಿ ಪಡೆದಿರುವ ವಿದ್ಯಾರ್ಥಿಗಳ ಆಗ್ರಹವಾಗಿದೆ.ಜ್ಞಾನ ಸಂಪಾದನೆಯ ದೇಗುಲ ಎಂದು ಕರೆಯಲ್ಪಡುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ಧೋರಣೆ ಹಾಗೂ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಸಂಬಂಧಿಸಿದವರು ಇದನ್ನು ಗಮನಿಸಬೇಕೆಂಬ ಕೋರಿಕೆ ವಿದ್ಯಾರ್ಥಿಗಳದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.