ಮಂಗಳವಾರ, ಮೇ 17, 2022
27 °C

ಜಾತ್ರಾ ಮೈದಾನ ಸಂಸ್ಥಾನದ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಶರಣಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ನಡೆಯುವ ಮೈದಾನದ ನಿರ್ವಹಣಾ ಉಸ್ತುವಾರಿಯನ್ನು ಶರಣಬಸವೇಶ್ವರ ಸಂಸ್ಥಾನವೇ ನಿರ್ವಹಿಸಲಿದೆ. ಜಾತ್ರಾ ಮಹೋತ್ಸವದ ಮೈದಾನದ ಉಸ್ತುವಾರಿಯನ್ನು ಮಹಾನಗರ ಪಾಲಿಕೆ ವಹಿಸಿಕೊಳ್ಳಲಿದೆ ಎಂದು ಆಯುಕ್ತರು ಮಾರ್ಚ್ 14ರಂದು ಸಂಸ್ಥಾನಕ್ಕೆ ನೋಟಿಸ್ ನೀಡಿದ್ದರು. ಈ ನೋಟಿಸ್ ಅನ್ನು ಪ್ರಶ್ನಿಸಿ ಸಂಸ್ಥಾನವು ಗುಲ್ಬರ್ಗದ ಸಂಚಾರಿ ಹೈಕೋರ್ಟ್ ಪೀಠದ ಮೆಟ್ಟಿಲೇರಿತ್ತು. ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಪ್ರತಿವಾದಿಗಳಾಗಿದ್ದ ಅಹವಾಲಿನ ವಿಚಾರಣೆ ನಡೆಸಿದ ಪೀಠವು ಮಧ್ಯಂತರ ತೀರ್ಪು ನೀಡಿದೆ ಎಂದು ವಕೀಲ ಎಸ್.ವಿ.ನಿಷ್ಠಿ ತಿಳಿಸಿದ್ದಾರೆ.44 ಸಾವಿರ ಚದರ ಮೀಟರ್ ವಿಸ್ತೀರ್ಣದ (ಸುಮಾರು 10 ಎಕರೆ) ಈ ಜಾತ್ರಾ ಮೈದಾನವು 189 ವರ್ಷಗಳಿಂದ ಸಂಸ್ಥಾನದ ಅಧೀನದಲ್ಲಿದೆ. ಪ್ರತಿ ಬಾರಿಯೂ ಸಂಸ್ಥಾನವೇ ಈ ಮೈದಾನದ ಉಸ್ತುವಾರಿಯನ್ನು ವಹಿಸಿಕೊಂಡು ಬರುತ್ತಿದೆ. ಇದು ಸಂಸ್ಥಾನದ ಪೀಠಾಧಿಪತಿಗಳ ಆನುವಂಶೀಯ ಆಸ್ತಿಯಾಗಿದ್ದು, ಹಕ್ಕು ಅವರಿಗೆ ಇರುತ್ತದೆ ಎಂಬುದು ಸಂಸ್ಥಾನದ ವಾದವಾಗಿತ್ತು.ಜಾತ್ರೆ ನಡೆಯುವ ಮೈದಾನದ ನೈರ್ಮಲ್ಯ ನಿರ್ವಹಣೆ, ಮಳಿಗೆಗಳಿಗೆ ಸ್ಥಳ ಹಂಚಿಕೆ ಸೇರಿದಂತೆ ಮೂಲಸೌಕರ್ಯ ಸೃಷ್ಟಿಸುವ ಕಾರ್ಯವನ್ನು ಪಾಲಿಕೆಯೇ ಕೈಗೆತ್ತಿಕೊಳ್ಳಲಿದೆ ಎಂದು ಆಯುಕ್ತರು ನೀಡಿದ್ದ ನೋಟಿಸ್‌ನಲ್ಲಿ ತಿಳಿಸಿದ್ದರು.  ಜಾತ್ರಾ ಕಾರ್ಯಕ್ರಮ ನಿರ್ವಹಿಸುವ ಕುರಿತು ವ್ಯಾಪಾರಿಗಳ ಹಿತ ರಕ್ಷಣಾ ಸಂಘದವರು ಫೆ.17ರಂದು ಪಾಲಿಕೆಗೆ ಪತ್ರ ಬರೆದಿದ್ದರು. ಸೂಕ್ತ ಕ್ರಮಕೈಗೊಳ್ಳುವಂತೆ ಗುಲ್ಬರ್ಗದ ಪ್ರಾದೇಶಿಕ ಆಯುಕ್ತರಿಗೂ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ಸೂಚನೆಯಂತೆ ಪಾಲಿಕೆಯು ನೋಟಿಸ್ ನೀಡಿತ್ತು ಎಂದು ತಿಳಿದುಬಂದಿದೆ.ಇದು ಸಾರ್ವಜನಿಕ ಆಸ್ತಿ. ಇದನ್ನು ಪಾಲಿಕೆ ರಕ್ಷಿಸಿಕೊಂಡು ಬರಬೇಕು. ಜಾತ್ರೆ ಸಂದರ್ಭ ನೈರ್ಮಲ್ಯ ಕಾಪಾಡಬೇಕು. ಮೂಲಸೌಕರ್ಯಗಳ ನಿರ್ವಹಣೆ ಇಲ್ಲದ ಪರಿಣಾಮ ಈ ಪ್ರದೇಶವೇ ಕೊಚ್ಚೆಯ ಆಗರವಾಗಿದೆ. ರೋಗ ರುಜಿನ ಹಬ್ಬುವ ಅಪಾಯವೂ ಇದೆ. ಜಾತ್ರೆಗೆ ಬರುವ ಭಕ್ತಾದಿಗಳ ಹಿತದೃಷ್ಟಿಯಿಂದ ಪಾಲಿಕೆ ಕಾರ್ಯನಿರ್ವಹಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.