ಕೇಳೋ ತಮ್ಮ ನಾ ಹೇಳೋ ಮಾತ..!

7
ಜೈ ಕಿಸಾನ್ ಯುವ ಕಲಾ ತಂಡದಿಂದ `ಏಡ್ಸ್' ಜಾಗೃತಿ ಕಾರ್ಯಕ್ರಮ

ಕೇಳೋ ತಮ್ಮ ನಾ ಹೇಳೋ ಮಾತ..!

Published:
Updated:

ಗುಲ್ಬರ್ಗ: `ಹುಟ್ಟಿ ಬಂದೆ ನಾ ಯಲ್ಲಮ್ಮನಾಗಿ, ನಿನ್ನ ಮದುವಿಯ ಮಾಡಿ ಕೊಟ್ಟರಾವ್ವ ಜಮದಗ್ನಿಗೆ' ಎನ್ನುವ ಸವದತ್ತಿ ಯಲ್ಲಮ್ಮನ ಕುರಿತಾದ ಈ ಚೌಡಕಿ (ಜೋಗತಿ) ಪದ ಯಾರು ತಾನೆ ಕೇಳಿಲ್ಲ! ಇದೇ ದಾಟಿಯಲ್ಲಿಯೇ, `ಕೇಳೋ ತಮ್ಮ ನಾ ಹೇಳುವ ಮಾತ, ಇದು ನಿನಗೇನ ಗೊತ್ತ, ಬರಬಾರದಿತ್ತ ನಿನಗ ಇಂಥ ಆಪತ್ತ, ಎಚ್‌ಐವಿ ಎನ್ನುವ ಸೋಂಕ ಬಂತ, ಜನರು ಜಾಗೃತಿ ಆಗಬೇಕಂತ!' ಎಂದು ಹಾಡುತ್ತಿದ್ದರೆ ಎಲ್ಲರೂ ಬೆಕ್ಕಸ ಬೆರಗಾಗಿ ಕೇಳುತ್ತ, ನೋಡುತ್ತ ನಿಲ್ಲುತ್ತಾರೆ.ಅಂದಮಾತ್ರಕ್ಕೆ ಇದು ಕೇವಲ ಮನರಂಜನೆಗಾಗಿ ನಡೆಸುವ ನೃತ್ಯ ಅಥವಾ ರೂಪಕ ಅಲ್ಲ; ಎಚ್‌ಐವಿ ಮತ್ತು ಏಡ್ಸ್ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮದ ಜೈ ಕಿಸಾನ್ ಯುವ ಕಲಾ ತಂಡದವರು ಹಮ್ಮಿಕೊಂಡಿದ್ದರು. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು ವತಿಯಿಂದ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಭಾನುವಾರ ಬೆಳಿಗ್ಗೆ ಕಲಾ ಪ್ರದರ್ಶನ ನಡೆಸಿದರು.ಕಲಾ ತಂಡದ ಯುವಕ-ಯುವತಿಯರು ಸಾರ್ವಜನಿಕರನ್ನು ತಮ್ಮೆಡೆಗೆ ಸೆಳೆಯುವುದಕ್ಕಾಗಿ ಆರಂಭದಲ್ಲಿ ಸವದತ್ತಿ ಯಲ್ಲಮ್ಮನ ಫೋಟೋ ಇರುವ ಕೊಡ ಹೊತ್ತು ನೃತ್ಯ ಆರಂಭಿಸುತ್ತಾರೆ. ಹಾಡಿನ ಮೂಲಕವೇ `ಎಚ್ಚರ ವಹಿಸದಿದ್ದರೆ ಎಚ್.ಐ.ವಿ. ಮತ್ತು ಏಡ್ಸ್ ಯಾರಿಗೆ ಬೇಕಾದರೂ ಬರಬಹುದು' ಎಂಬ ರೂಪಕವನ್ನು ಪ್ರದರ್ಶಿಸಿಸುವ ಮೂಲಕ ಏಡ್ಸ್ ಹರಡುವ ರೀತಿ, ಅದನ್ನು ನಿಯಂತ್ರಣ ಮಾಡುವ ಬಗೆಯನ್ನು ವಿವರಿಸುತ್ತಾರೆ.`ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಆದರೆ ಎಚ್.ಐ.ವಿ. ಸೋಂಕು ಹಚ್ಚಿಕೊಂಡು ಸಾಯುವುದು ಬೇಕೇ? ನೀವೂ ಬದಕಿ ಇತರರನ್ನು ಬದಕಲು ಬಿಡಿ'. ಎಚ್‌ಐವಿ ಸೋಂಕಿತರನ್ನು ಮುಟ್ಟುವುದಿಂದಾಗಲಿ ಅಥವಾ ಮಾತಾಡುವುದರಿಂದ ಬರುವುದಿಲ್ಲ. ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡಿಸದೆ ರಕ್ತ ಪಡೆಯುವುದು, ಸಂಸ್ಕರಿಸದ ಸೂಜಿ ಅಥವಾ ಸಿರಿಂಜ್ ಬಳಕೆ, ಎಚ್‌ಐವಿ ಸೋಂಕಿತ ತಾಯಿಯಿಂದ ಸೋಂಕು ಹರಡಬಹುದು ಎಂಬ ನಾಲ್ಕು ಬಗೆಯನ್ನು ಸ್ಥಳದಲ್ಲಿಯೇ ತಿಳಿಸಿ ಹೇಳುತ್ತಾರೆ.“ನಮ್ಮದು 11 ಜನ ಪದವೀಧರರನ್ನು ಒಳಗೊಂಡಿರುವ ಕಲಾ ತಂಡ. ಇದರಲ್ಲಿ 4 ಜನ ಯುವತಿಯರು, 7 ಜನ ಯುವಕರು ಇದ್ದಾರೆ. 2004ರಿಂದ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಎರಡು ಪ್ರದರ್ಶನ ಸೇರಿ, ಸಂಸ್ಥೆಯವರು ಒಂದು ದಿನಕ್ಕೆ ನಮಗೆ ರೂ. 4,760 ಕೊಡುತ್ತಾರೆ. ಹಣಕ್ಕಿಂತ ಮುಖ್ಯವಾಗಿ ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸದಲ್ಲಿ ತೃಪ್ತಿಯಿದೆ. ಗುಲ್ಬರ್ಗ ತಾಲ್ಲೂಕಿನಲ್ಲಿಯೇ ನಾಲ್ಕು ದಿನ ಕಲಾ ಪ್ರದರ್ಶನದ ಮೂಲಕ ಜನರಲ್ಲಿ ತಿಳಿವಳಿಕೆ ನೀಡಲಿದ್ದೇವೆ” ಎಂದು ಕಲಾ ತಂಡದ ನಾಯಕ ಪ್ರಕಾಶ ಚಂದನವರ್ ತಿಳಿಸುತ್ತಾರೆ.ಎಚ್.ಐ.ವಿ. ಮತ್ತು ಏಡ್ಸ್ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಕಲಾ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾತ್ರ ಅತ್ಯಂತ ಪರಿಣಾಮಕಾರಿ ಎನ್ನಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry