ಮಂಗಳವಾರ, ಏಪ್ರಿಲ್ 20, 2021
25 °C

ಬಹುಜನ ಹಿತ: ರಸ್ತೆ ವಿಸ್ತರಣೆ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಜನಸಂಖ್ಯೆ ಆಧಾರಿತ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ನಗರಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯ ಹಮ್ಮಿಕೊಂಡಿದೆ. ಇದರಿಂದ ಕೆಲವರಿಗೆ ತೊಂದರೆಯಾದರೂ ಬಹುತೇಕ ಜನರಿಗೆ ಪ್ರಯೋಜನವಾಗಲಿದೆ. ಸಹಕಾರ ನೀಡಿದರೆ ಶಹಾಬಾದ ಮಾದರಿ ನಗರವಾಗಬಲ್ಲ ವಿಶ್ವಾಸವಿದೆ. ಇಂಥ ಕೆಲಸಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದು ಸೇಡಂ ಉಪವಿಭಾಗ ಸಹಾಯಕ ಆಯುಕ್ತೆ ಲತಾ ಕುಮಾರಿ ಮನವಿ ಮಾಡಿದರು.    ನಗರಸಭೆ ಸಭಾಂಗಣದಲ್ಲಿ ಸೋಮವಾರ ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಅವರು ಮಾತನಾಡಿ, ಮಂಗಳವಾರದಿಂದ ರಸ್ತೆ ವಿಸ್ತರಣೆ ಕುರಿತಿ ಮಾಹಿತಿ ನೀಡಿದರು. ಸುಪ್ರೀಂಕೋರ್ಟ್ ಆದೇಶದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸರ್ಕಾರಿ ಆಸ್ತಿ ಅಥವಾ ರಸ್ತೆ ಒತ್ತುವರಿ ಮಾಡಿಕೊಂಡವರು ಸ್ವಯಂಪ್ರೇರಣೆಯಿಂದ ಕ್ರಮ ತೆಗೆದುಕೊಂಡರೆ ಸರಿ. ಇರದಿದ್ದಲ್ಲಿ ಮಂಗಳವಾರ ‘ಗುರುತು’ ಹಾಕುವ ಕಾರ್ಯದ ನಂತರ ಯಾವುದೆ ಸಂದರ್ಭದಲ್ಲಿ ಕಟ್ಟಡಗಳ ನೆಲಸಮ ಕಾರ್ಯ ನಡೆಯಲಿದೆ ಎಂದು ಎಚ್ಚರಿಸಿದರು.ತಹಸೀಲ್ದಾರ ಡಾ.ಎಸ್.ಎಸ್.ವಣಕ್ಯಾಳ, ಮುಖ್ಯರಸ್ತೆ 60-70 ಅಡಿ, ಒಳರಸ್ತೆ 40-50 ಅಡಿ, ಉಳಿದಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪರಿವರ್ತನೆ ರಸ್ತೆಗಳು 120-130 ಅಡಿ ವಿಸ್ತರಿಸುವ ಯೋಜನೆ ಕುರಿತು ವಿವರಿಸಿದರು.ಮಾಜಿ ಸಚಿವ ಸಿ.ಗುರುನಾಥ ಸಲಹೆ ನೀಡಿ, ಕಾರ್ಯಾಚರಣೆಯಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಲಿವೆ. ಈ ಕುರಿತು ಸರ್ಕಾರ ಅಗತ್ಯ ಚಿಂತನೆ ಮಾಡಬೇಕೆಂದರು.

ನಗರಸಭೆ ಮಾಜಿ ಅಧ್ಯಕ್ಷ ಶರಣಪ್ಪ ಹದನೂರ, ಪರೀಕ್ಷೆ, ಮದುವೆ ಸಂದರ್ಭವಾಗಿದ್ದು ಕಾಲಾವಕಾಶ ಅಗತ್ಯ. ‘ಗುರುತು’ ಹಾಕಿ 5 ತಿಂಗಳ ಸಮಯ ನೀಡುವಂತೆ ಕೋರಿದರು.ನಗರಸಭೆ ಅಧ್ಯಕ್ಷ ಮ.ರಫೀಕ್ ಕಾರೋಬಾರಿ, ಉಪಾಧ್ಯಕ್ಷೆ ಗೀತಾ ಎಸ್.ಬೋಗುಂಡಿ, ಸದಸ್ಯರು, ಪೌರಾಯುಕ್ತ ನಡುವಿನಮನಿ, ಡಿವೈಎಸ್ಪಿ ಎಸ್.ಬಿ.ಸಾಂಬಾ, ಸಿಪಿಐ ವಿ.ಎಚ್.ವಿಜಯಕುಮಾರ, ಅಧಿಕಾರಿಗಳು ಉಪಸ್ಥಿತರಿದ್ದರು.ನಿರಂಜನ ಗೋಳೇದ, ತಿಪ್ಪಣ್ಣ ಬೋರಗಾಂವಕರ್, ಡಾ.ರಶೀದ, ಅನಿಲ ಇಂಗಿನಶೆಟ್ಟಿ, ಭೀಮಾಶಂಕರ ಮುತ್ತತ್ತಿ, ಡಾ.ಅಶೋಕ ಜಿಂಗಾಡೆ, ಸುಭಾಷ ಚೌಧರಿ, ಸುಭಾಷ ಪಂಚಾಳ, ವಿಜಯಕುಮಾರ ಮುತ್ತತ್ತಿ, ಕೃಷ್ಣಾ ನಾಯಕ, ಸಂತೋಷ ಇಂಗಿನಶೆಟ್ಟಿ ಸೇರಿದಂತೆ ನೂರಾರು ವ್ಯಾಪಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.