ಮಾರುಕಟ್ಟೆಗೆ ಹಸಿರು ಕಾಳು, ಹಣ್ಣು; ದರವು ಸುಗ್ಗಿ!

7

ಮಾರುಕಟ್ಟೆಗೆ ಹಸಿರು ಕಾಳು, ಹಣ್ಣು; ದರವು ಸುಗ್ಗಿ!

Published:
Updated:

ಬೀದರ್: ಇನ್ನೇನು ಎಳ್ಳು ಅಮಾವಾಸ್ಯೆ, ಸಂಕ್ರಾಂತಿ ಹಬ್ಬಗಳು ಸಮೀಪಿಸುತ್ತಿವೆ. ಇದರ ಬೆನ್ನಲ್ಲೆ, ಮಾರುಕಟ್ಟೆಗೆ ಸುಗ್ಗಿಯ ಹಸಿರು ಕಾಳು, ತರಕಾರಿ ಮತ್ತು ಹಣ್ಣುಗಳು ನಗರದ ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿವೆ.ಈ ಬಾರಿ ದರವು ಹೆಚ್ಚಿದ್ದು, ಬೆಲೆ ಸುಗ್ಗಿಯೂ ಕಾಣಿಸಿಕೊಂಡಿದೆ!ಕಡಲೆಕಾಳು, ತೊಗರಿ ಕಾಳು, ತೆಳು ಬಟಾಣಿ, ದಪ್ಪ ಬಟಾಣಿ, ಅವರೆ, ಕಡಲೆಪಲ್ಲೆ,  ಗಜರಿ, ಬಾರೆಹಣ್ಣು, ಜಾಪುಳ ಮತ್ತಿತರ ಹಣ್ಣು, ತರಕಾರಿಗಳು ಕಳೆದ ಒಂದು ವಾರದಿಂದ ನಗರದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹಸಿರು ಕಾಳು, ತರಕಾರಿ ಮತ್ತು ಹಣ್ಣುಗಳ ಬೆಲೆ ಈ ಬಾರಿ ದ್ವಿಗುಣ ಆಗಿದೆ. ಅದಾಗಿಯೂ ಮಾರಾಟ ಮಾತ್ರ ಭರ್ಜರಿಯಾಗಿ ನಡೆದಿದೆ.ಮಾರುಕಟ್ಟೆಯಲ್ಲೆಗ ಎಲ್ಲೆಡೆ ಸುಗ್ಗಿಯ ಹಸಿರು ಕಾಳು, ಕಾಯಿಪಲ್ಲೆ, ಹಣ್ಣುಗಳದ್ದೇ ಸರದಿ.  ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಅದನ್ನು ಬಿಟ್ಟು ಹಸಿರು ಕಾಳು, ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ. ಪರಿಣಾಮವಾಗಿ, ಡಿಸಿಸಿ ಬ್ಯಾಂಕ್, ಹಾರೂರಗೇರಿ, ಜಿಲ್ಲಾ ಸರ್ಕಾರ ಆಸ್ಪತ್ರೆ ಸೇರಿದಂತೆ ನಗರದ ವಿವಿಧೆಡೆ ಇಂಥ 30-35 ಅಂಗಡಿಗಳು ತಲೆ ಎತ್ತಿವೆ.ಹಸಿರು ಕಾಳಗಳಾದ ತೆಳು ಬಟಾಣಿ, ದಪ್ಪ ಬಟಾಣಿಗಳ ಬೆಲೆ ಸುಗ್ಗಿ ಆರಂಭದಲ್ಲಿ  ಗಗನಮುಖಿಯಾಗಿತ್ತು. ತೆಳು ಬಟಾಣಿ ಕೆ.ಜಿ.ಗೆ. ರೂ. 100 ಮತ್ತು ದಪ್ಪ ಬಟಾಣಿ ಕೆ.ಜಿ.ಗೆ. ರೂ. 70 ರಂತೆ ಬಿಕರಿಯಾಗಿದ್ದವು. ಇದೀಗ ಮಾರುಕಟ್ಟೆಯಲ್ಲಿ ತೆಳು ಬಟಾಣಿ ರೂ. 60 ಹಾಗೂ ದಪ್ಪ ಬಟಾಣಿ ರೂ. 50ಕ್ಕೆ ಕೆ.ಜಿ.ಯಂತೆ ಮಾರಾಟವಾಗುತ್ತಿವೆ.

ಇನ್ನುಳಿದಂತೆ ಮಾರುಕಟ್ಟೆಯಲ್ಲಿ ಕೆ.ಜಿ. ತೊಗರಿ ಕಾಳು ಬೆಲೆ ರೂ. 30, ಅವರೆ ಬೆಲೆ ರೂ. 30, ಕಡಲೆ ಪಲ್ಲೆ ರೂ. 20, ಹೈಬ್ರಿಡ್ ಬಾರೆಹಣ್ಣು ರೂ. 30, ಗಜರಿ ರೂ. 30, ಜಾಪುಳ ಹಣ್ಣು ರೂ. 40 ಆಗಿದೆ ಎಂದು ತಿಳಿಸುತ್ತಾರೆ ಸ್ಥಳೀಯ ವ್ಯಾಪಾರಿ ಮಹಮ್ಮದ್ ಯಾಸೀನ್.ಬಹುತೇಕ ಹಸಿರು ಕಾಳು, ತರಕಾರಿಗಳು ಸುತ್ತಮುತ್ತಲಿನ ಗ್ರಾಮಗಳಿಂದ ನಗರಕ್ಕೆ ಬರುತ್ತವೆ. ಹೈಬ್ರಿಡ್ ಬಾರೆಹಣ್ಣು ಮತ್ತು ದಪ್ಪ ಬಟಾಣಿ ಕಾಳುಗಳನ್ನು ಸೋಲಾಪುರ ಮತ್ತು ಗುಲ್ಬರ್ಗದಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ ಅವರು.ಹಸಿರು ಕಾಳು, ತರಕಾರಿ, ಸುಗ್ಗಿ ಹಣ್ಣು ಹಳ್ಳಿಗರಿಗೆ ಸಾಮಾನ್ಯ. ಆದರೆ, ನಗರದ ಜನರಿಗೆ ಮಾತ್ರ ಬಲು ಅಪರೂಪ. ಹೀಗಾಗಿ ನಗರದ ಜನ ಇವುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಮಾರಾಟ ಜೋರಾಗಿದೆ. ತೆಳು ಬಟಾಣಿ ಮತ್ತು ಕಡಲೆಪಲ್ಲೆಗೆ ಅತಿಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ.ಈ ಬಾರಿ ಇಳುವರಿ ಕಡಿಮೆ ಆಗಿರುವುದು ಮತ್ತು ಸಾರಿಗೆ ವೆಚ್ಚ ಹೆಚ್ಚಾಗಿರುವುದು ಬೆಲೆ ದುಬಾರಿ ಆಗಲು ಕಾರಣವಾಗಿದೆ ಎಂದು ವಿಶ್ಲೇಷಿಸುತ್ತಾರೆ. ಸುಗ್ಗಿಯ ಹಸಿರು ಕಾಳು, ತರಕಾರಿ ಮತ್ತು ಹಣ್ಣುಗಳ ಮಾರಾಟ ಭರಾಟೆ ಎಳ್ಳಮಾವಾಸೆ,  ಸಂಕ್ರಾಂತಿವರೆಗೆ ಇರಲಿದೆ ಎಂದು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆ ದುಬಾರಿ ಆಗಿದ್ದರೂ, ಸುಗ್ಗಿಯ ಹಸಿರು ಕಾಳು, ತರಕಾರಿ ಹಾಗೂ ಹಣ್ಣುಗಳ ಸವಿಗೆ ಮಾರು ಹೋಗಿರುವ ಜನ ಮಾತ್ರ ಹಿಂದೆಮುಂದೆ ನೋಡದೇ ಖರೀದಿಯಲ್ಲಿ ತೊಡಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry