ರಸಿಕರ ಮನಗೆದ್ದ ಕಲಾ ತಂಡ

7

ರಸಿಕರ ಮನಗೆದ್ದ ಕಲಾ ತಂಡ

Published:
Updated:

ಗುಲ್ಬರ್ಗ: ವಿವಿಧ ರಾಜ್ಯಗಳ ಸಾಂಸ್ಕೃತಿಕ ಸಮಾಗಮಕ್ಕೆ ಸಾಕ್ಷಿಯಾದ `ಜ್ಞಾನಗಂಗಾ' ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ 28ನೇ ದಕ್ಷಿಣ ವಲಯ ಯುವ ಜನೋತ್ಸವ `ಗುಲ್‌ಫೆಸ್ಟ್-2012'ರ ಎರಡನೇ ದಿನವಾದ ಭಾನುವಾರ, ಯುವ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಿ ಜನರ ಮನಸೂರೆ   ಗೊಂಡರು.ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಬುಡಕಟ್ಟು ಜನಾಂಗದ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸಿತು. ನೃತ್ಯದ ಮೂಲಕ ನಾಡಿನ ಜನರಿಗೆ ವಿವಿಧ ರೀತಿಯ ಸಂದೇಶ ರವಾನಿಸಿದರು. ಬುಡಕಟ್ಟು ಜನಾಂಗದ ಜೀವನ ಶೈಲಿ, ಅವರ ಉಡುಪು, ಸರಳ ವೇಷಭೂಷಣಗಳು ನೋಡುಗರ ಚೆಪ್ಪಾಳೆ ಗಿಟ್ಟಿಸಿದವು.ಜುಂಬಕ ಜುಂಬ.. ಜುಂಬಕ ಜುಂಬಕ ಜುಂಬಾಲೆ ಕಾಡಿನ ತಾಯಿ ಹಸಿರುಟ್ಟು ನಲಿದಾಳೆ ಎನ್ನುವ ಹಾಡಿಗೆ ಕಾಡು ವೇಷ ಧರಿಸಿ ನೃತ್ಯ ಪ್ರದರ್ಶನ ಮಾಡುತ್ತಿದ್ದರೆ, ಕಾಡು ಜನರ ಜೀವನ ಶೈಲಿ, ಅವರದೇ ಆದ ಒಂದು ವೈಶಿಷ್ಟ್ಯದ ಬಗ್ಗೆ ಇಲ್ಲಿ ಸಂದೇಶ ಸಾರುವಂತಿತ್ತು. ಕಾಡು ಜನರು ಪರಿಸರದ ಮೇಲೆ ಅತಿಯಾದ ಕಾಳಜಿ ಹೊಂದಿರುವವರಾಗಿತ್ತಾರೆ. ವೃಕ್ಷ ದೇವತೆಯನ್ನು ಪೂಜಿಸುವುದು ಅವರ ಕಾಯಕ ಇದನ್ನು ನಾಡಿನ ಜನರು ತಿಳಿದು ಉಳಿಸಲು ಯತ್ನಿಸುವುದು ಒಳಿತು ಎನ್ನುವ ಸಂದೇಶ ಈ ಹಾಡಿನಲ್ಲಿತ್ತು.ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಳ್ಳಿಯ ಸಾಂಸ್ಕೃತಿಕ ಸೊಗಡಿನ ಚಿತ್ರವನ್ನು ಈ ನೃತ್ಯದಲ್ಲಿ ಭಿತ್ತರಿಸಿ ಗಮನ ಸೆಳೆದರು. ಕೃಷಿ ಚಟುವಟಿಕೆ, ಹಳ್ಳಿಯಲ್ಲಿ ಬೆಳಿಗ್ಗೆಯಿಂದ ನಡೆಯುವ ವ್ಯವಸಾಯ ಚಟುವಟಿಕೆಯನ್ನು ಪ್ರದರ್ಶಿಸಿದರು. ಗ್ರಾಮೀಣ ಸೊಗಡು, ಪತಿ- ಪತ್ನಿ  ಸಾಮರಸ್ಯ ಹಾಗೂ ಹೊಂದಾಣಿಕೆಯ ಜೀವನ ಕುರಿತು ಜನಪದ ಸಾಹಿತ್ಯದ ಮುಖಾಂತರ ಪ್ರದರ್ಶನ ನೀಡಿದರು.ಬುಡಕಟ್ಟು ಜನಾಂಗದ ನೃತ್ಯ ಪ್ರದರ್ಶನದಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ಕಾಲಡಿಯ ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾಲಯ, ಚೆನ್ನೈನ ಮಧುರೆ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ತಿರುಚಿನಾಪಳ್ಳಿ ಭಾರತಿದಾಸನ್ ವಿಶ್ವವಿದ್ಯಾಲಯ, ಕಡಪ ಯೋಗಿ ವೆಮನಾ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ವಿಜಾಪುರ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಗುಂಟೂರು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ತಿರುಪತಿ ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ಮಚಲಿಪಟ್ಟಣಮ್ ಕೃಷ್ಣಾ ವಿಶ್ವವಿದ್ಯಾಲಯ, ಕೇರಳ ತಿರುವನಂತಪುರ ವಿಶ್ವವಿದ್ಯಾಲಯ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ಹೀಗೆ ನೆರೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು.ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ನೆರೆ ರಾಜ್ಯದ 11 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ವಸಂತ ರೇಖಾ, ಸಂಜಯಕುಮಾರ ಜೋಶಿ, ಅಲೇಖಾ ಪೂಜಾರಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.ಬೆಳಿಗ್ಗೆ 9ಕ್ಕೆ ನಡೆದ ಶಾಸ್ತ್ರೀಯ ಸಂಗೀತ ಗಾಯನದಲ್ಲಿ 16 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಬ್ರಹಾಂ ಸ್ಪರ್ಧೆಯಲ್ಲಿದ್ದರು. ತಬಲಾ ಸಾತ್ ಪ್ರಶಾಂತ್ ಹಾಗೂ ವಿಶ್ವನಾಥ ಆರ್ಮೋನಿಯಂ ಸಾತ್ ನೀಡಿದರು.ಕ್ಯಾಲಿಗರ್ ಕೃಷ್ಣ ವಿಶ್ವವಿದ್ಯಾಲಯದ ಮಾಳವಿಕಾ, ಅನಿಲಕುಮಾರ ಸಂಗೀತ ಹಾಡಿದರು. ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ 11 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಇದ್ದರು.ಸಸ್ಯಶಾಸ್ತ್ರ ವಿಭಾಗದಲ್ಲಿ ಜರುಗಿದ ಚರ್ಚಾ ಸ್ಪರ್ಧೆಯಲ್ಲಿ 23 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ವಿಷಯ ಮಂಡಿಸಿದರು. ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಜರುಗಿದ ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ 17 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಭಾಸ್ಕರ್ ಸಭಾಂಗಣದಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ 18ವಿಶ್ವವಿದ್ಯಾಲಯದ ವಿವಿಧ ರಾಜ್ಯದ ವಿದ್ಯಾರ್ಥಿಗಳು ತಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು, ರಾಜ ಮಹಾರಾಜರ ಕಾಲದ ಗ್ರಾಮೀಣ ಪ್ರದೇಶದ ಜನಜೀವನ, ಬೆಳೆಯುತ್ತಿರುವ ತಂತ್ರಜ್ಞಾನ, ಮಹಿಳೆಯರ ಇಂದಿನ ಸ್ಥಿತಿಗತಿ ಕುರಿತು ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಅದೇ ರೀತಿ ಕೊಲೇಜ್, ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳು ನಡೆದವು.18ರಂದು `ಸಾಂಸ್ಕೃತಿಕ ಸಂಜೆ'

ವಿಶ್ವವಿದ್ಯಾಲಯದ ಮಹಾದೇವಪ್ಪ ರಾಂಪುರೆ ಬಯಲು ರಂಗಮಂದಿರದಲ್ಲಿ ಗುಲ್‌ಫೆಸ್ಟ್-2012ರ ನಿಮಿತ್ತ                 18ರಂದು ಸಂಜೆ 6.30ರಿಂದ 8.30ರವರೆಗೆ `ಸಾಂಸ್ಕೃತಿಕ ಸಂಜೆ' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಸಂಚಾಲಕ ಶಂಕ್ರಯ್ಯ ಆರ್.ಘಂಟಿ ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು 10 ನಿಮಿಷ ಕಾಲಾವಕಾಶ ನೀಡಲಾಗುವುದು. ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಅಲ್ಲಿನ ಭಾಷಾ ಸೊಗಡು, ಅಲ್ಲಿನ ವೈಶಿಷ್ಟ್ಯದ ಬಗ್ಗೆ ಭಿತ್ತರಿಸಲು ಅವಕಾಶ ನೀಡಲಾಗಿದೆ. ವಿವಿಧ ರೀತಿಯ ಕೌಶಲ ಅನಾವರಣಕ್ಕೆ ಇದು ವೇದಿಕೆಯಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ಮಾಹಿತಿಗಾಗಿ 94482 52168ಗೆ ಸಂಪರ್ಕಿಸುವಂತೆ ಕೋರಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry