ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC ಫಲಿತಾಂಶ ಕುಸಿತ: ಪ್ರದೀಪ್ ಈಶ್ವರ್ -ಸುಧಾಕರ್ ಮಧ್ಯೆ ರಾಜಕೀಯ ಜಟಾಪಟಿ

Published 10 ಮೇ 2024, 5:25 IST
Last Updated 10 ಮೇ 2024, 5:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಈ ಬಾರಿ 18ನೇ ಸ್ಥಾನಕ್ಕೆ ತಲುಪಿದೆ. ಈ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಸ್ಥಾನ ಮತ್ತು ಶೇಕಡಾವಾರು ಪ್ರಮಾಣದಲ್ಲಿಯೂ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. 

ಈ ಫಲಿತಾಂಶ ಕುಸಿತ ಜಿಲ್ಲೆಯಲ್ಲಿ ತೀವ್ರ ಚರ್ಚೆಗೂ ಕಾರಣವಾಗಿದೆ. ಶಿಕ್ಷಕರು, ಅಧಿಕಾರಿಗಳು, ಶಿಕ್ಷಣ ತಜ್ಞರು, ರಾಜಕೀಯ ನಾಯಕರು ಹೀಗೆ ವಿವಿಧ ವಲಯಗಳ ಜನರು ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. 

ಈ ಬಾರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 20 ಕೇಂದ್ರಗಳನ್ನು ಕಡಿತಗೊಳಿಸಲಾಗಿತ್ತು. 2023ರಲ್ಲಿ 72 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ಈ ಬಾರಿ ಜಿಲ್ಲೆಯ 52 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. 

ಜಿಲ್ಲೆಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡಿಸಲಾಗುತ್ತಿತ್ತು ಎನ್ನುವ ಆರೋಪಗಳು ಈ ಹಿಂದಿನಿಂದಲೂ ವ್ಯಾಪಕವಾಗಿದ್ದವು. ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿಯೇ ಈ ಅಕ್ರಮ ನಡೆಯುತ್ತಿದೆ ಎನ್ನುವ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಇತ್ತು.

ಈ ಬಾರಿ ಒಟ್ಟು ಪರೀಕ್ಷಾ ಕೇಂದ್ರಗಳ ಪೈಕಿ ಶೇ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಹೀಗೆ ಇಡೀ ಪರೀಕ್ಷಾ ವ್ಯವಸ್ಥೆಯ ಮೇಲೆ ಕಣ್ಗಾವಲು ಇತ್ತು. ಇದರಿಂದ  ಬಂದೋಬಸ್ತ್ ಕಾರಣದಿಂದ ಅಕ್ರಮಗಳಿಗೆ ತಡೆ ಬಿದ್ದಿದೆ ಎನ್ನುವ ಮಾತುಗಳು ಜಿಲ್ಲೆಯಲ್ಲಿವೆ.

ರಾಜಕೀಯ ಜಟಾಪಟಿ: ಫಲಿತಾಂಶ ಕುಸಿತವು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿಯೂ ಚರ್ಚೆ ಆಗುತ್ತಿದೆ. 

ಶಾಸಕ ಪ್ರದೀಪ್ ಈಶ್ವರ್ ‘ಸೂಪರ್‌@60’ ಹೆಸರಿನ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಓದಿಸಿದ್ದರು.

‘60 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪೂಜಾ ಅವರಿಗೆ 593 ಅಂಕಗಳು ಬಂದಿದ್ದು ಗರಿಷ್ಠ ಅಂಕ ಪಡೆದವರಾಗಿದ್ದಾರೆ. ಸೂಪರ್ 60 ಕಾರ್ಯಕ್ರಮ ಯಶಸ್ವಿ ಆಗಿದೆ’ ಎಂದು ಶಾಸಕರು ತಿಳಿಸಿದ್ದಾರೆ.

ಮತ್ತೊಂದು ಕಡೆ ಮಾಜಿ ಸಚಿವ ಡಾ.ಕೆ.ಸುಧಾಕರ್, ‘ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕೈಗೊಂಡಿದ್ದ ಕ್ರಮಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿ ಇತ್ತು’. ಆದರೆ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯದ ಪರಿಣಾಮ 18ನೇ ಸ್ಥಾನಕ್ಕೆ ಕುಸಿದಿದೆ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಈ ಬಗ್ಗೆ ಪರ–ವಿರೋಧದದ ಬರಹಗಳು, ಟ್ರೋಲ್‌ಗಳು ನಡೆಯುತ್ತಿವೆ.

ಬಿಗಿಯಾದ ಪರೀಕ್ಷೆ

ರಾಜ್ಯದಲ್ಲಿ ಈ ಬಾರಿ ಪರೀಕ್ಷೆಯನ್ನು ಬಿಗಿಯಾಗಿ ನಡೆಸಿದೆ. ಅಲ್ಲದೆ ಫಲಿತಾಂಶ ಸುಧಾರಣೆಗೆ ಮೂರು ಪರೀಕ್ಷೆಗಳನ್ನು ನೀಡಲಾಗಿದೆ. ಶೇ 73 ಒಳ್ಳೆಯ ಫಲಿತಾಂಶ ಎಂದು ಶಿಕ್ಷಣ ತಜ್ಞ ಪ್ರೊ.ಕೋಡಿ ರಂಗಪ್ಪ ತಿಳಿಸಿದರು.  ಫಲಿತಾಂಶ ಕಡಿಮೆಯಾದ ಕಾರಣ ವ್ಯವಸ್ಥೆ ಬೈಯುವುದರಲ್ಲಿ ಅರ್ಥವಿಲ್ಲ. ಮತ್ತಷ್ಟು ದೃಢವಾಗಿ ಕೆಲಸ ಮಾಡಬೇಕು ಎನ್ನುವುದನ್ನು ತೋರುತ್ತಿದೆ. ನಾವು ಹೇಗಾದರೂ ಪರೀಕ್ಷೆ ಮಾಡಿ ಶೇ 80ರಷ್ಟು ಅಂಕ ಪಡೆಯುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದರು.  ಶಿಕ್ಷಕರು ಸಹ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಲಾಖೆಯಿಂದಲೂ ಲೋಪವಾಗಿಲ್ಲ. ಯಾವ ರೀತಿ ಪರೀಕ್ಷೆಯನ್ನು ಮಾಡಬೇಕಾಗಿತ್ತೊ ಆ ರೀತಿಯಲ್ಲಿ ಮಾಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT