`ವಸ್ತ್ರಸಿರಿ' ಖಾದಿ ಖದರು!

7

`ವಸ್ತ್ರಸಿರಿ' ಖಾದಿ ಖದರು!

Published:
Updated:

ಗುಲ್ಬರ್ಗ: ಖಾದಿ ನಮ್ಮ ನೆಲದ ಅಭಿಮಾನದ ಬಟ್ಟೆ. ಇಂದಿನ ಫ್ಯಾಷನ್ ಯುಗದಲ್ಲಿ ಆಕರ್ಷಕ ವಿನ್ಯಾಸ ಹಾಗೂ ವಿವಿಧ ಬಣ್ಣದ ಬಟ್ಟೆಗಳ ಮಧ್ಯೆ ಇಂದು ಮರೆಯಾಗುತ್ತಿದೆ. ಅಂತಹ ಖಾದಿ ಬಟ್ಟೆಗಳನ್ನು ಮಾರಾಟಕ್ಕೆಂದೇ ದೇಶದ ವಿವಿಧ ಮೂಲೆಗಳಿಂದ `ವಸ್ತ್ರಸಿರಿ ವಿಶೇಷ ಕೈಮಗ್ಗಮೇಳ-2012' ನಗರದ ಕನ್ನಡ ಭವನದಲ್ಲಿ ಆಗಮಿಸಿದೆ.ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ ಹಾಗೂ ರಾಜ್ಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾದ ಈ `ವಸ್ತ್ರಸಿರಿ ವಿಶೇಷ ಕೈಮಗ್ಗಮೇಳ-2012' ಡಿ. 22ರಿಂದ ಆರಂಭವಾಗಿದ್ದು, ಜನವರಿ 5ರವರೆಗೆ ಜರುಗಲಿದೆ.ಈ ಮೇಳದಲ್ಲಿ ಕೈಮಗ್ಗದಿಂದ ತಯಾರಿಸಿದ ನಾರಿಯರಿಗೆ ಇಷ್ಟವಾಗುವಂತ ವಿವಿಧ ವಿನ್ಯಾಸದ ರೇಷ್ಮೆ ಸೀರೆಗಳು, ಗದ್ವಾಲ್ ಸೀರೆ, ಶಿಫಾನ್ ಜಾರ್‌ಜೆಟ್, ವರ್ಕ್ ಸ್ಯಾರಿಸ್, ಉತ್ತರ ಕರ್ನಾಟಕದ ಇಳಕಲ್ ಸೀರೆಗಳು, ಚೂಡಿದಾರ್ ಮಟಿರಿಯಲ್ಸ್, ಮಕ್ಕಳಿಗಾಗಿ ಘಾಗ್ರಾ ಚೋಲಿ, ಪುರುಷರಿಗಾಗಿ ಜುಬ್ಬಾ ಪೈಜಾಮ್, ಲುಂಗಿ, ಕುರ್ತಾ, ಓವರ್‌ಕೋಟ್, ಡಬಲ್ ಕ್ಲಾಥ್ ಕಾಟನ್ ಬಟ್ಟೆ, ರೇಷ್ಮೆ ಬಟ್ಟೆ ಇತ್ಯಾದಿ. ಮನೆ ಬಳಕೆಯ ವಸ್ತುಗಳಾದ ಪ್ರಿಂಟೆಡ್ ಬೆಡ್‌ಶೀಟ್, ಚಾದರ್ ಜಾಡಿ ಪಟ್ಟಿ, ಜಮ್ಖಾನ್, ಪಿಲ್ಲೋ, ಪಿಲ್ಲೋ ಕವರ್, ಡೋರ್ ಕರ್ಟನ್, ವಿಂಡೋ ಕರ್ಟನ್, ಟವೆಲ್, ಕೈವಸ್ತ್ರ. ಇಲ್ಲಿಯ ಇನ್ನೊಂದು ವಿಶೇಷವೇನೆಂದರೆ ಕುರಿಗಳ ಉಣ್ಣೆಯಿಂದ ತಯಾರಿಸಿದ ಕಂಬಳಿ, ಶಾಲು, ರಗ್ಗು, ಪೂಜಾ ಕಂಬಳಿ ಹಾಗೂ ರೈತರ ಕಂಬಳಿಗಳು ಸಿಗುತ್ತವೆ.ಗ್ರಾಮೀಣ ಭಾಗದ ಮಹಿಳೆಯರು ಸ್ವತಃ ಕೈಯಿಂದ ತಯಾರಿಸಿದ ಉಪ್ಪಿನ ಕಾಯಿ, ಹಪ್ಪಳ ಇತ್ಯಾದಿ ಖಾದ್ಯ ಹಾಗೂ ಮುತ್ತಿನ ಹಾರಗಳು, ಗೋಡೆ ಅಲಂಕಾರಿಕ ವಸ್ತುಗಳಾದ ಗಣೇಶ, ಕೃಷ್ಣ-ರುಕ್ಮಿಣಿ, ಕುಬೇರನ ಮೂರ್ತಿಗಳು, ಎತ್ತಿನಗಾಡಿ, ಹೂವಿನ ತೋರಣಗಳು, ಅಲಂಕಾರಿಕ ಕಮಲದ ಹೂವು, ಹೂ ದಾನಿ, ಜೂಟ್ ಬ್ಯಾಗ್, ವೈಯರ್ ಬ್ಯಾಗ್‌ಗಳು ದೇಸಿಯತೆಯನ್ನು ಮೆರೆಯುತ್ತಿವೆ.   `ಈವರೆಗೆ ಬಂದ ಮೇಳಗಳಗಿಂತಲೂ ಈ ಮೇಳ ವಿಶೇಷವಾಗಿದೆ. ನಾವು ಧರಿಸುವ ಬಟ್ಟೆಯಿಂದಿಡಿದು ಗೃಹ ಬಳಕೆ ವಸ್ತುಗಳು ಒಂದೇ ಸೂರಿನಡಿ ದೊರೆಯುತ್ತಿರುವುದು ನಿಜಕ್ಕೂ ಸಂತಸ ಉಂಟು ಮಾಡಿದೆ. ಈ ಬಾರಿ ತುಂಬಾ ವಿಭಿನ್ನ ರೀತಿಯ ಸೀರೆಗಳು ಬಂದಿವೆ.ಅದರಲ್ಲಿಯೂ ಕೈಮಗ್ಗದ್ದಾದರೂ ಲೈಟ್‌ವ್ಹೇಟ್ ಮೊಳಕಾಲ್ಮೂರು ರೇಷ್ಮೆ ಸೀರೆ ಹಾಗೂ ಟ್ರಾನ್ಸ್‌ಫರೆಂಟ್ ವಿಥ್ ಬ್ರಾಸೋ ನೋಡಿದ ತಕ್ಷಣ ತೆಗೆದುಕೊಳ್ಳುಂತೆ ಎಂಥವರಿಗೂ ಆಸೆ ಹುಟ್ಟುತ್ತದೆ. ಅದಕ್ಕಾಗಿ ಈ ಎರಡು ಸೀರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ' ಎನ್ನುತ್ತಾರೆ ಖರೀದಿಗೆ ಬಂದ ಭಾರತಿ ದೇಸಾಯಿ.`ಕಡಿಮೆ ದರದಲ್ಲಿ ಬೇಕಾದ ವಿನ್ಯಾಸದ ವಸ್ತು ಹಾಗೂ ಬಟ್ಟೆಗಳು ಇಲ್ಲಿ ದೊರೆಯುತ್ತಿರುವುದು ಖುಷಿ ನೀಡಿದೆ. ಕೈಮಗ್ಗದ ವಸ್ತುಗಳನ್ನು ಕಡೆಗಾಣಿಸುವ ಇಂದಿನ ದಿನಗಳಲ್ಲಿ ಇಂತಹ ಮೇಳಗಳು ನಮಗೆ ಹಬ್ಬದ ವಾತಾವರಣವನ್ನು ನಿರ್ಮಿಸಿದೆ' ಎನ್ನುತ್ತಾರೆ ಗ್ರಾಹಕ ಕೆ. ಗಿರಿಮಲ್ಲ.ಭಾರತೀಯ ಹೆಣ್ಣುಮಕ್ಕಳ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಇಂದು ಬದಲಾವಣೆಯಾಗಿರಬಹುದು. ಏನೇ ಬದಲಾವಣೆಗಳಾದರೂ ಹಬ್ಬ ಹರಿದಿನಗಳಲ್ಲಿ ಸೀರೆ ಉಡಲು ಇಷ್ಟಪಡುತ್ತಾರೆ. ವಿವಿಧ ರೀತಿ ಹಾಗೂ ವಿನ್ಯಾಸದ ಸೀರೆಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿವೆ. ನಿಮಗೂ ಇಷ್ಟವಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry