ಪ್ರಯೋಗದ ಮೂಲಕ ವಿಜ್ಞಾನ ಕಲಿಕೆ

7

ಪ್ರಯೋಗದ ಮೂಲಕ ವಿಜ್ಞಾನ ಕಲಿಕೆ

Published:
Updated:

ಗುಲ್ಬರ್ಗ: ವಿಜ್ಞಾನವನ್ನು ಪ್ರಯೋಗದ ಮೂಲಕ ಕಲಿಸಬೇಕಾದ ಹೊಣೆ ವಿಜ್ಞಾನ ಶಿಕ್ಷಕರ ಮೇಲೆ ಇದೆ ಎಂದು ಎಂದು ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.ಇಲ್ಲಿನ ಚಂದ್ರಕಾಂತ ಪಾಟೀಲ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ `ವಿದ್ಯಾರ್ಥಿ- ವಿಜ್ಞಾನಿ' ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪ್ರಯೋಗವಿಲ್ಲದ ವಿಜ್ಞಾನ ಬೋಧನೆಯಿಂದ ಮಕ್ಕಳು ವಿಜ್ಞಾನದ ವಿದ್ಯಾರ್ಥಿಗಳಾಗುತ್ತಿದ್ದಾರೆಯೇ ವಿನಃ ವಿಜ್ಞಾನಿಗಳಾಗುತ್ತಿಲ್ಲ” ಎಂದು ವಿಷಾದಿಸಿದರು.ವಿದ್ಯಾರ್ಥಿಗಳಲ್ಲಿ ಅಗಾಧ ಪ್ರಮಾಣದ ಬುದ್ಧಿಶಕ್ತಿ ಇದೆ. ಮಕ್ಕಳಿಗೆ ಚಟುವಟಿಕೆ ಮತ್ತು ಪ್ರಯೋಗದ ಮೂಲಕ ವಿಜ್ಞಾನ ಕಲಿಸುವ ಕೆಲಸ ಆಗಬೇಕಾಗಿದೆ ಎಂದ ಅವರು, ವಿಜ್ಞಾನದಲ್ಲಿ ಅಪಾರ ಸಾಮರ್ಥ್ಯವಿದ್ದು ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಿಂತನೆ ನಡೆಯಬೇಕು ಎಂದರು.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಞಾನಿ ಡಾ. ಜೆ.ಆರ್.ಮದಕವಿ ಮಾತನಾಡಿ, ಪಠ್ಯಪುಸ್ತಕದಲ್ಲಿ ವಿಜ್ಞಾನಿಗಳ ಬದುಕಿನ ಪಾಠವನ್ನು ಸೇರ್ಪಡೆ ಮಾಡುವ ಕೆಲಸವಾಗುತ್ತಿಲ್ಲ ಎಂದು ವಿಷಾದಿಸಿದರು. ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಡಾ. ಟಿ.ಪಿ.ಕೃಷ್ಣಕಾಂತ, ವಿಜಾಪುರದ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಜಿ.ಆರ್.ನಾಯಕ ವೇದಿಕೆಯಲ್ಲಿ ಇದ್ದರು. ಎಸ್.ಬಿ.ಪಾಟೀಲ ಗ್ರೂಪ್ಸ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ಬಿ.ಜಿ.ಪಾಟೀಲ ಅಧ್ಯಕ್ಷತೆ     ವಹಿಸಿದ್ದರು.ಶ್ರೀಶೈಲ ಘೂಳಿ ಸ್ವಾಗತಿಸಿದರು. ಗಿರೀಶ ಕಡ್ಲೇವಾಡ ಪ್ರಾಸ್ತಾವಿಕ ಮಾತನಾಡಿದರು. ಡಾ. ಎಸ್.ಎಸ್.ಗುಬ್ಬಿ ವಂದಿಸಿದರು. ಚಂದ್ರಕಾಂತ ಕ್ಷೀರಸಾಗರ ನಿರೂಪಿಸಿದರು. ಜಿಲ್ಲೆಯ ವಿವಿಧ ಪ್ರೌಢ, ಪದವಿಪೂರ್ವ ಕಾಲೇಜಿನಿಂದ 300ಕ್ಕೂ ಹೆಚ್ಚು ಬಾಲವಿಜ್ಞಾನಿಗಳು ಭಾಗವಹಿಸಿದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಸಂವಾದ ನಡೆಯಿತು.  27ರಂದು ಸಂಜೆ 4ಕ್ಕೆ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry