ಮಹಾಗಾಂವ ತಾಲ್ಲೂಕು ರಚಿಸಲು ಆಗ್ರಹ

7
ಒಂದೂವರೆ ಗಂಟೆ ರಾಷ್ಟ್ರೀಯ ಹೆದ್ದಾರಿ ಬಂದ್

ಮಹಾಗಾಂವ ತಾಲ್ಲೂಕು ರಚಿಸಲು ಆಗ್ರಹ

Published:
Updated:
ಮಹಾಗಾಂವ ತಾಲ್ಲೂಕು ರಚಿಸಲು ಆಗ್ರಹ

ಕಮಲಾಪುರ: ರಾಜ್ಯ ಸರ್ಕಾರವು ಮಹಾಗಾಂವ ನೂತನ ತಾಲ್ಲೂಕು ರಚಿಸದೆ ಇರುವುದನ್ನು ಆಕ್ಷೇಪಿಸಿ ಶನಿವಾರ ಗ್ರಾಮಸ್ಥರು ಬೀದರ್- ಶ್ರೀರಂಗಪಟ್ಟಣ ಮಧ್ಯದ ರಾಷ್ಟ್ರೀಯ ಹೆದ್ದಾರಿ 218ರ ಮಹಾಗಾಂವ ಕ್ರಾಸ್ ಬಳಿ ರಸ್ತೆ ತಡೆ ನಡೆಸಿದರು. ಇದರಿಂದ ಒಂದೂವರೆ ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.ಪ್ರತಿಭಟನಾಕಾರರು ಬಳಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಹುಮನಾಬಾದನಿಂದ ಚಿಟಗುಪ್ಪಾ 12 ಕಿ.ಮೀ ದೂರದಲ್ಲಿದೆ.  ಬಸವಕಲ್ಯಾಣನಿಂದ ಹುಲಸೂರ 18 ಕಿ.ಮೀ, ಗುಲ್ಬರ್ಗ- ಶಹಾಬಾದ 24 ಕಿ.ಮೀ, ಶಹಾಬಾದ- ಕಾಳಗಿ 20 ಕಿ.ಮೀ, ಬಳ್ಳಾರಿ ಜಿಲ್ಲೆಯಲ್ಲಿ  ಕೂಡ್ಲಗಿಯಿಂದ ಕೊಟ್ಟೂರು 10 ಕಿ. ಮೀ, ಕಂಪ್ಲಿಯಿಂದ ಕುರಗೋಡು 12 ಕಿ. ಮೀ ಇರುತ್ತದೆ. ಆದರೆ ಇವೆಲ್ಲವುಗಳನ್ನು ತಾಲ್ಲೂಕು ಕೇಂದ್ರವಾಗಿ ಮಾಡಲಾಗಿದೆ.ಮಹಾಗಾಂವ ಗ್ರಾಮವು ಗುಲ್ಬರ್ಗದಿಂದ 23 ಕಿ.ಮೀ. ದೂರವಿದ್ದರೂ ಸರ್ಕಾರವು ತಾಲ್ಲೂಕು ರಚಿಸಿಲ್ಲ ಎಂದು ಆಕ್ಷೇಪಿಸಿದರು.

ಮಹಾಗಾಂವ ಮತ್ತು ಕಮಲಾಪುರ ನಡುವೆ ಹತ್ತು ಕಿ.ಮೀ ಅಂತರವಿದ್ದು ಮಹಾಗಾಂವವನ್ನೂ ತಾಲ್ಲೂಕಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.ಸರ್ಕಾರ ಮತ್ತೆ ಹತ್ತು ಹೊಸ ತಾಲ್ಲೂಕು ರಚಿಸುವಾಗ ಮಹಾಗಾಂವ ಗ್ರಾಮವನ್ನೂ ತಾಲ್ಲೂಕಾಗಿ ಪ್ರಕಟಿಸಬೇಕು. ಈ ವ್ಯಾಪ್ತಿಯಲ್ಲಿ ಇಪ್ಪತ್ತು ಗ್ರಾಮ ಪಂಚಾಯಿತಿ ಹಾಗೂ 110 ಹಳ್ಳಿಗಳಿವೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ.ಮಹಾಗಾಂವ ಗ್ರಾಮ ಹನ್ನೆರಡನೇ ಶತಮಾನದಿಂದಲು ಮಹಾಗ್ರಾಮವಾಗಿದೆ. ಇದನ್ನು ತಾಲ್ಲೂಕು ಮಾಡಿದರೆ ಆಳಂದ ತಾಲ್ಲೂಕಿನ ವಿ.ಕೆ. ಸಲಗರ, ಚಿಂಚನಸೂರ, ಕಮಲಾನಗರ, ಬಬಲಾದ ಐ.ಕೆ. ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ ಎಂದು ವಿವರಿಸಿದ್ದಾರೆ. ಇದೇ ಭಾಗದ ಸಚಿವ ರೇವುನಾಯಕ ಬೆಳಮಗಿಯವರು ಗ್ರಾಮವನ್ನು ತಾಲ್ಲೂಕು ಮಾಡಲು ಹಿಂಜರಿಯುತ್ತಿದ್ದಾರೆ ಎಂದು ದೂರಿದರಲ್ಲದೆ  ಸಚಿವರ ಪ್ರತಿಕೃತಿ ದಹಿಸಿದರು. ಕ್ರಾಸ್‌ನ ಎಲ್ಲ ಅಂಗಡಿಗಳು ಮುಚ್ಚಿದ್ದವು. ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.ಅಮರ ತಡಕಲ ಮಹಾಗಾಂವ, ವೈಜನಾಥ ತಡಕಲ, ರಘುನಾಥ ಕುಲಕರ್ಣಿ ನಾಗೂರ, ಸುಭಾಷ ಕಪಾಟೆ, ಅಮೃತಪ್ಪ ಮಲ್ಕಪಗೋಳ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸೇವಂತಿಬಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಜರ್ ಅಲಿ, ನಿರಂಜನಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮಹಾಗಾಂವ ತಾಲ್ಲೂಕು ರಚಿಸುವಂತೆ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಾದ ಅಮರನಾಥ ಪಾಟೀಲ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲರು ಪಾಲ್ಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry