ಮಂಗಳವಾರ, ನವೆಂಬರ್ 19, 2019
28 °C

ತಾಂತ್ರಿಕ ಶಿಕ್ಷಣ: ನೇಮಕಾತಿ ತಡೆಗೆ ಆಗ್ರಹ

Published:
Updated:

ಗುಲ್ಬರ್ಗ: ಸಂವಿಧಾನದ 371ನೇ ಜೆ ಕಲಂ ತಿದ್ದುಪಡಿ ಅನ್ವಯ ಹೊಸ ನಿಯಮವು ಜಾರಿಗೆ ಬರುವ ಮೊದಲೇ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದಾರೆ. ಇದನ್ನು ತಡೆಹಿಡಿಯದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಎಚ್ಚರಿಸಿದೆ.ಸಂವಿಧಾನದ ತಿದ್ದುಪಡಿ 371ನೇ ಜೆ ಕಲಂ ಅನ್ವಯ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಹೊಸ ನಿಯಮವನ್ನು ರಾಜ್ಯ ಸರ್ಕಾರ ರೂಪಿಸಬೇಕಾಗಿದೆ. ಇದು ಜಾರಿಗೆ ಬರುವ ತನಕ ಯಾವುದೇ ನೇಮಕಾತಿ ಮಾಡಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇಮಕಾತಿ ತಡೆಹಿಡಿಯಲು ಆದೇಶಿಸಿದ್ದರು.

ಆದರೆ ರಾಜ್ಯ ಸರ್ಕಾರದ ಆದೇಶವಿದ್ದರೂ ತಾಂತ್ರಿಕ ಇಲಾಖೆ ನಿರ್ದೇಶಕರು ರಾಜ್ಯದ 9 ಅನುದಾನಿತ ಎಂಜಿನಿಯರಿಂಗ್ ಹಾಗೂ 30 ಪಾಲಿಟೆಕ್ನಿಕ್‌ಗಳ ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದರಿಂದ ಹೈಕದಲ್ಲಿರುವ ಒಂದು ಎಂಜಿನಿಯರಿಂಗ್ ಕಾಲೇಜು ಮತ್ತು ಆರು ಪಾಲಿಟೆಕ್ನಿಕ್‌ಗಳ ಸುಮಾರು 50 ಹುದ್ದೆಗಳ ನೇಮಕಾತಿಯಲ್ಲಿ ಈ ಭಾಗದ ಜನತೆಗೆ ಅನ್ಯಾಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಯನ್ನು ತಕ್ಷಣವೇ ತಡೆ ಹಿಡಿಯಬೇಕು ಎಂದು ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.  ನಾಗಲಿಂಗಯ್ಯ ಮಠಪತಿ, ಲಿಂಗರಾಜ ಸಿರಗಾಪುರ, ಕಲ್ಯಾಣರಾವ ಪಾಟೀಲ್, ಧರಂ ಸಿಂಗ್ ತಿವಾರಿ ಇದ್ದರು.

ಪ್ರತಿಕ್ರಿಯಿಸಿ (+)