ಬುಧವಾರ, ಮೇ 12, 2021
18 °C

ಕೈಗಾರಿಕಾ ಪಟ್ಟಣ: ಸೂತಕದ ಛಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಪಟ್ಟಣದಲ್ಲಿ ಮಾರ್ಚ್ 27ರಿಂದ ನಡೆದಿರುವ ಕಟ್ಟಡ ನೆಲಸಮ ಮತ್ತು ರಸ್ತೆ ವಿಸ್ತರಣೆ ಕಾರ್ಯಾಚರಣೆ ಏ.2 ಕ್ಕೆ ಒಂದು ವಾರ ಮುಗಿಸಿದೆ. ಹಿತಾಚಿ-2 ಮತ್ತು ಜೆಸಿಬಿ-2 ಯಂತ್ರಗಳ ಸದ್ದಿನಿಂದ ಸುಮಾರು 50 ಸಾವಿರ ಜನಸಂಖ್ಯೆ ಶಹಾಬಾದ ಪಟ್ಟಣ ಭೂಕಂಪಕ್ಕೆ ಒಳಗಾದಂತೆ ಕಂಡುಬರುತ್ತಿದ್ದು ಲವಲವಿಕೆ ಕಳೆದುಕೊಂಡಿದೆ.ಮುಖ್ಯರಸ್ತೆ (ಬಡೆಬಜಾರ)- 50 ಅಡಿ, ಬಸವೇಶ್ವರ ವೃತ್ತ- ಶಾಸ್ತ್ರಿ ಚೌಕ್- 76 ಅಡಿ ರಸ್ತೆ ವಿಸ್ತರಣೆ ಮುಗಿದಿದ್ದು ಪ್ರಮುಖ ಕಟ್ಟಡಗಳು ನೆಲಕಚ್ಚಿವೆ. ಕಳೆದ 8-10 ದಿನಗಳಿಂದ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ ಗೊಂಡಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಅಂದಾಜಿದೆ. ಇಲ್ಲಿನ ಪ್ರಮುಖ ಬಟ್ಟೆ, ಹಿತ್ತಾಳೆ, ಸ್ಟೀಲ್, ಸಿಮೆಂಟ್, ಕಿರಾಣಾ, ಬೇಕರಿ, ಪಾನ ಬೀಡಾ ಉದ್ಯಮಗಳು ಸ್ಥಗಿತಗೊಂಡಿವೆ. ವ್ಯಾಪಾರಿಗಳ ಸ್ಥಿತಿ ಹೀಗಾದರೆ, ಜನಸಾಮಾನ್ಯರ ಸ್ಥಿತಿ ಇನ್ನೂ ಭಯಾನಕವಾಗಿದೆ. ಜನವಸತಿ ಪ್ರದೇಶದ ಲೋಹಾರಗಲ್ಲಿ, ವಿಪಿ ಚೌಕ್-ಭಾರತ ಚೌಕ್-50 ಅಡಿ, ಬಸ್‌ನಿಲ್ದಾಣ, ರೈಲ್ವೆನಿಲ್ದಾಣ, ನೆಹರು ಚೌಕ್- 76 ಅಡಿ ರಸ್ತೆ ವಿಸ್ತರಿಸಿದ್ದು ಸಾರ್ವಜನಿಕ ಆಸ್ತಿಪಾಸ್ತಿಗೆ ತೀವ್ರ ಹಾನಿಯಾಗಿದೆ. ಏ.3ರಿಂದ ಕಾರ್ಯಾಚರಣೆ ತಾತ್ಕಾಲಿಕವಾಗಿ ನಿಂತಿದ್ದು 2-3 ದಿನಗಳ ವಿರಾಮದ ನಂತರ ಬಾಕಿ ಪ್ರದೇಶದಲ್ಲಿ ಮತ್ತೆ ಆರಂಭವಾಗಲಿದೆ ಎನ್ನಲಾಗಿದೆ.ಸೂತಕದ ಛಾಯೆ: ಮುಖ್ಯರಸ್ತೆಯಲ್ಲಿ ಕಟ್ಟಡ ಅವಶೇಷ ರಸ್ತೆಯಲ್ಲೆ ಬಿದ್ದಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಅತ್ಯಂತ ಜನನಿಬಿಡ ರಸ್ತೆಗಳೆಸಿಕೊಂಡಿದ್ದ ಬಸ್, ರೈಲ್ವೆ ನಿಲ್ದಾಣದಲ್ಲಿ ಈಗ ಜನಸಂಚಾರ ಕಡಿಮೆಯಾಗಿದೆ. ಇಲ್ಲಿ ನೂರಾರು ವರ್ಷಗಳಿಂದ ಬದುಕಿದ್ದ ಕುಟುಂಬಗಳು ಚಿಂತಾಜನಕ ಸ್ಥಿತಿಗೆ ತಲುಪಿವೆ.ಜನದಟ್ಟಣೆಯ ಲೋಹಾರಗಲ್ಲಿ, ವಿಪಿ ಚೌಕ್ ಮತ್ತು ಭಾರತ ಚೌಕ್‌ನಲ್ಲಿ ಬದುಕು ನಿಶ್ಯಬ್ದವಾಗಿದೆ. ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು ಅಳಿದುಳಿದ ಅವಶೇಷಕ್ಕೆ ಬಟ್ಟೆ, ಪ್ಲಾಸ್ಟಿಕ್ ಕವರ್ ಹೊದಿಸಿ ಆಶ್ರಯ ಪಡೆದು ಬದುಕುವ ಸ್ಥಿತಿ ಬಂದಿದೆ. ಹಳ್ಳಿಯಂತೆ ಕಂಡುಬರುತ್ತಿರುವ ಪಟ್ಟಣದಲ್ಲಿ ಅಲ್ಲಲ್ಲಿ ಮಾತ್ರ ವಿದ್ಯುತ್ ದೀಪಗಳಿವೆ.ಬಹುತೇಕ ಕಡೆ ಅಸಮರ್ಪಕ ವಿದ್ಯುತ್ ಸರಬಾರಾಜು ಇದ್ದು ಬದುಕು ಅಸಹನೀಯವಾಗಿದೆ. ಹಾಗಾಗಿ ಸೂತಕದ ಛಾಯೆಯಲ್ಲಿದ್ದಂತೆ ಆಗಿದೆ ಎನ್ನುತ್ತಾರೆ ಲೋಹಾರಗಲ್ಲಿ ನಿವಾಸಿ ಲಕ್ಷ್ಮಣ ಜಾಧವ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.