ಗುರುವಾರ , ಏಪ್ರಿಲ್ 15, 2021
20 °C

ಬಿಸಿಲಿಗೆ ಸುಸ್ತಾದ ಮುಖಂಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಡೇರಿ ಆವರಣದಲ್ಲಿ ಬುಧವಾರ ನವೀಕರಣಗೊಂಡ ಡೇರಿ ಉದ್ಘಾಟನೆಗೆ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಬಂದಿದ್ದು ಎರಡೂವರೆ ತಾಸು ವಿಳಂಬವಾಗಿ!

ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಹೀಗಾಗಿ ಮಾಧ್ಯಮ ಪ್ರತಿನಿಧಿಗಳು ಸರಿಯಾದ ಸಮಯಕ್ಕೆ ಬಂದರೆ ಕೆಎಂಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರತುಪಡಿಸಿದರೆ ಬೇರೆ ಜನರೇ ಇರಲಿಲ್ಲ.‘ಇನ್ನೇನು ಅಧ್ಯಕ್ಷರು ಬರ್ತಾರೆ...’, ‘ಈಗ ಐವಾನ್ ಶಾಹಿ ಬಿಟ್ರು... ಇನ್ ಹತ್ತು ನಿಮಿಷದಾಗ ಇಲ್ಲಿಗೆ ಬರ್ತಾರ್ರಿ’ ಎಂದು ಅಧಿಕಾರಿಗಳು ಸಬೂಬು ಹೇಳುತ್ತಲೇ ಇದ್ದರು. ಆದರೆ ಇದಾವುದನ್ನೂ ಗಮನಿಸದೇ ಸೋಮಶೇಖರ ರೆಡ್ಡಿ ತಮ್ಮ ಎಲ್ಲ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ ಒಂದೂವರೆ ಗಂಟೆಗೆ ಡೇರಿ ಆವರಣ ಪ್ರವೇಶಿಸಿದರು. ಬಿಸಿಲಿನ ಝಳಕ್ಕೆ ಹೆದರಿಕೊಂಡೋ, ಬೇರಾವುದೇ ಕಾರಣಕ್ಕೋ ಜನರೇ ಇರಲಿಲ್ಲ.ಅಧ್ಯಕ್ಷರ ಮೇಲೆ ಪುಷ್ಪದಳ ಹಾಕಿ, ಸ್ವಾಗತಿಸುವ ಕೆಲಸವನ್ನು ಯುವತಿಯರಿಗೆ ವಹಿಸಲಾಗಿತ್ತು. ಬಿಸಿಲಿಗೆ ಬೇಗೆಗೆ ಬಸವಳಿದಿದ್ದ ಅವರ ಪಾಡು ಯಾರಿಗೂ ಬೇಡ ಎಂಬಂತಾಗಿತ್ತು. ಉದ್ಘಾಟನೆ ಹಾಗೂ ಶಿಲಾನ್ಯಾಸ ಮುಗಿಸಿಕೊಂಡು ಪತ್ರಿಕಾಗೋಷ್ಠಿಗೆ ಆಗಮಿಸಿದ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರ ಹಿಂದೆಯೇ ಬೆಂಬಲಿಗರ ದೊಡ್ಡ ಗುಂಪೊಂದು ಕೊಠಡಿಗೆ ನುಗ್ಗಿತು. ಕೆಎಂಎಫ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಅವರು ಎಲ್ಲ ನಾಯಕರಿಗೂ ಕುರ್ಚಿ ಹಾಕುವಂತೆ ಸೂಚಿಸಿದರು. ಪಕ್ಷದ ಹತ್ತಾರು ನಾಯಕರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಕುಳ್ಳರಿಸುವ ಬದಲಿಗೆ ಸುದ್ದಿಗೋಷ್ಠಿ ನಡೆಯುತ್ತಿದ್ದ ಕೊಠಡಿಯಲ್ಲೇ ಕುರ್ಚಿ ಹಾಕಿ ಕುಳಿತುಕೊಳ್ಳಲು ಹೇಳಿದ್ದು ಅಚ್ಚರಿ ಮೂಡಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.