ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಮೀಸಲಾತಿ ಮುಂದುವರೆಸುತ್ತೇವೆ ಎಂದು ಹೇಳಿದ್ದು ಬಿಜೆಪಿಯವರು:ಸಿದ್ದರಾಮಯ್ಯ

Published 25 ಏಪ್ರಿಲ್ 2024, 8:22 IST
Last Updated 25 ಏಪ್ರಿಲ್ 2024, 8:22 IST
ಅಕ್ಷರ ಗಾತ್ರ

ಬೀದರ್‌: ‘ಮುಸ್ಲಿಮರಿಗೆ ನೀಡಲಾಗಿರುವ ಶೇ 4ರಷ್ಟು ಮೀಸಲಾತಿಯನ್ನು ಮುಂದುವರೆಸುತ್ತೇವೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಹಿಂದಿನ ಬಿಜೆಪಿ ಸರ್ಕಾರವೇ ಹೇಳಿದೆ. ಈಗಲೂ ಮುಸ್ಲಿಮರ ಮೀಸಲಾತಿ ಹಿಂದಿನಂತೆ ಮುಂದುವರೆದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್‌ ಪಕ್ಷವು ಎಸ್ಸಿ/ಎಸ್ಟಿಗಳ ಮೀಸಲಾತಿ ಮುಸ್ಲಿಮರಿಗೆ ಕೊಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿಯವರು ಆರೋಪಿಸಿರುವ ಕುರಿತು ನಗರದಲ್ಲಿ ಗುರುವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಚಿನ್ನಪ್ಪ ರೆಡ್ಡಿ ಆಯೋಗವು ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕೊಡಬೇಕು ಎಂದು ಹೇಳಿತ್ತು. ಅದರಂತೆ ಸುಮಾರು 20 ವರ್ಷಗಳಿಂದ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಮುಂದುವರೆದಿದೆ. ಹಿಂದೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು, ನಾವು ಮುಸ್ಲಿಮರ ಮೀಸಲಾತಿ ಮುಂದುವರೆಸುತ್ತೇವೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಹೇಳಿದೆ ಎಂದರು.

ನೇಹಾ ಹಿರೇಮಠ ಕೊಲೆಯನ್ನು ಈಗಾಗಲೇ ಖಂಡಿಸಿದ್ದೇನೆ. ಈಗಲೂ ಅದನ್ನು ಖಂಡಿಸುತ್ತೇನೆ. ಪ್ರಕರಣವನ್ನು ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಲಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಈ ಸಂಬಂಧ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜೊತೆ ಮಾತನಾಡಿದ್ದೇನೆ. ‘ಕ್ಯಾಪಿಟಲ್‌ ಇಂಪ್ರಿಸನ್‌ಮೆಂಟ್‌’ ಅಂತ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕೆಂದು ಹೇಳಿದ್ದೇನೆ. ನಾನು ಅವರ ತಂದೆ ಜೊತೆಗೂ ಮಾತನಾಡಿದ್ದೇನೆ. ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ವಿವರಿಸಿದ್ದೇನೆ. ಸಿಐಡಿ ಕೂಡಲೇ ಚಾರ್ಜ್‌ಶೀಟ್‌ ಹಾಕಬೇಕು ಎಂದು ಹೇಳಿದರು.

ಬಿಜೆಪಿಯವರು ಇದುವರೆಗೆ ಯಾವುದಾದರೂ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೇನು? ಅವರು ಅಧಿಕಾರದಲ್ಲಿ ಇದ್ದಾಗ ಈ ಕೆಲಸ ಮಾಡಿದ್ರಾ? ಅವರಿಗೆ ಈಗ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಹಿಂದೆ ನಾನು ಮುಖ್ಯಮಂತ್ರಿ ಇದ್ದಾಗ ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ. ಈ ಕೊಲೆ ಪ್ರಕರಣದಲ್ಲಿ ಅವರು ರಾಜಕೀಯ ಮಾಡಬಾರದು. ನೇಹಾ ಕೊಲೆ ಆಗಿರುವುದು ಅನ್ಯಾಯ. ಅದನ್ನು ಖಂಡಿಸಿದ್ದೇನೆ. ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಘೋರ ಶಿಕ್ಷೆ ವಿಧಿಸಬೇಕೆಂದು ಸರ್ಕಾರದ ಕಡೆಯಿಂದ ಹೇಳಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಸಂಪತ್ತು ಹಂಚಿಕೆ ಬಗ್ಗೆ ಸ್ಯಾಮ್‌ ಪಿತ್ರೋಡ ನೀಡಿರುವ ಹೇಳಿಕೆ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ ಬಗ್ಗೆ ಏನು ಹೇಳುವಿರಿ ಎಂದು ಪತ್ರಕರ್ತರು ಕೇಳಿದಾಗ, ಮೋದಿಯವರು ಹೇಳಿದ್ದೆಲ್ಲ ಜಾರಿಗೆ ತರುತ್ತಾರೇನು? ಕಪ್ಪು ಹಣ ತಂದು ಪ್ರತಿಯೊಬ್ಬರಿಗೆ ₹15 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರು. ಅದನ್ನು ಕೊಟ್ರಾ? ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಉದ್ಯೋಗ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ಆ ಕೆಲಸ ಮಾಡಿದ್ರಾ? ರೂಪಾಯಿ ಮೌಲ್ಯ ಹೆಚ್ಚಿಸುವುದಾಗಿ ಹೇಳಿದ್ದರು. ರೂಪಾಯಿ ಮೌಲ್ಯ ಹೆಚ್ಚಾಗಿದೆಯಾ? ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ಎಂದು ಹೇಳಿದ್ದರು. ಅಗತ್ಯ ವಸ್ತುಗಳ ಬೆಲೆ ಇಳಿದಿದೆಯಾ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಹಾಕಿದರು.

ಪರಿಸರ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ , ಮಾಜಿ ಸಚಿವರಾದ ರಾಜಶೇಖರ ಪಾಟೀಲ ಹುಮನಾಬಾದ್‌, ಬಾಬುರಾವ ಚಿಂಚನಸೂರ್‌, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಮುಖಂಡರಾದ ಆನಂದ ದೇವಪ್ಪ, ಗೀತಾ ಪಂಡಿತರಾವ್‌ ಚಿದ್ರಿ, ದತ್ತು ಮೂಲಗೆ, ಪರಿಹಾರ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT