ಭಾನುವಾರ, ಏಪ್ರಿಲ್ 18, 2021
29 °C

ಉತ್ಸವಕ್ಕೆ ಉಪ್ಪಿನ ತೋಟ ಅಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸೂರ್ಯನಗರಿಯ ತಾಪಮಾನದಂತೆಯೇ ‘ಗುಲ್ಬರ್ಗ ಉತ್ಸವ’ದ ಸಿದ್ಧತೆಯೂ ಕಾವೇರುತ್ತಿದೆ. ನಾಗನಹಳ್ಳಿ ರಸ್ತೆಯ ಉಪ್ಪಿನವರ ತೋಟವು ಉತ್ಸವಕ್ಕೆ ಆಣಿಯಾಗುತ್ತಿದೆ. ‘ನೀಲನಕ್ಷೆ’ ರೆಡಿಯಾಗಿದ್ದು, ಗಡಿಬಿಡಿಯ ಕಾಮಗಾರಿ ಶುರುವಾಗಿದೆ. ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಗುರುವಾರ ತಮ್ಮ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.ಉತ್ಸವ ನಡೆಯುವ ಉಪ್ಪಿನವರ ತೋಟದ 37 ಎಕರೆ ಪ್ರದೇಶದ ನೀಲ ನಕಾಶೆ ಸಿದ್ಧಗೊಂಡಿದೆ. ನಾಲ್ಕು ದ್ವಾರ ನಿರ್ಮಿಸಲಾಗಿದ್ದು, ಮೂರು ಸಾರ್ವಜನಿಕರಿಗಾಗಿ ಒಂದು ಗಣ್ಯಾತಿಗಣ್ಯರಿಗಾಗಿ ಮೀಸಲಾಗಿದೆ ಎಂದು ಉತ್ಸವದ ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಡಾ. ರಜನೀಶ್ ಗೋಯಲ್ ಹೇಳಿದರು.  50 ಸಾವಿರ ಸಭಿಕರ ಸಭಾಂಗಣದಲ್ಲಿ 100x50 ಅಡಿ ಅಗಲದ ವೇದಿಕೆ ರಚಿಸಲಾಗುವುದು. ವೇದಿಕೆ ಹಿನ್ನೆಲೆಯಲ್ಲಿ ಪಾರಂಪರಿಕ ಸ್ಥಳಗಳ ಚಿತ್ರಣ ಇರಲಿದೆ. ಉಳಿದಂತೆ ಆಹಾರ ಸೇರಿದಂತೆ ವಸ್ತು ಪ್ರದರ್ಶನ ಮತ್ತು ಮಾರಾಟದ 409 ಮಳಿಗೆಗಳನ್ನು ಆಯೋಜಿಸಲಾಗಿದೆ ಎಂದರು.ವಸ್ತು ಪ್ರದರ್ಶನಕ್ಕೆ 309 ಹಾಗೂ ಆಹಾರ ವೈವಿಧ್ಯಕ್ಕಾಗಿ 100 ಮಳಿಗೆಗಳು ಇರಲಿವೆ. ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಕ್ಕಾಗಿ 30 ಮಳಿಗೆ ಮತ್ತು ಆರೋಗ್ಯ ಮೇಳಕ್ಕಾಗಿ 10 ಮಳಿಗೆಗಳನ್ನು ಬಾಡಿಗೆ ರಹಿತವಾಗಿ ನೀಡಲಾಗುವುದು. ಪುಸ್ತಕ, ಬ್ಯಾಂಕ್, ಉದ್ಯೋಗ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಮತ್ತು ನೈಸರ್ಗಿಕ ಕೃಷಿ, ವಿಜ್ಞಾನ ಮೇಳಗಳು ಮತ್ತು ಫಲಪುಷ್ಪ ಪ್ರದರ್ಶನ, ಜಾನುವಾರು, ಕೃಷಿ ಪರಿಕರ ಪ್ರದರ್ಶನಗಳು, ಬಂಡವಾಳ ಹೂಡಿಕೆದಾರರ ವಲಯ, ಬಾಲ ವಲಯ,  ಇಲಾಖಾವಾರು ಮಳಿಗಳಿವೆ ಎಂದು ಅವರು ಹೇಳಿದರು.ನಗರದ ವಿವಿಧೆಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. 15ರಂದು ಸಂಜೆ 5ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮೆರವಣಿಗೆ ನಡೆಯಲಿದ್ದು, ಪುಷ್ಫವೃಷ್ಟಿ ಮಾಡಲಾಗುವುದು ಎಂದರು.ಔಷಧಿಯಿಂದ ದೂರವಿರಿ...: ‘ಆರೋಗ್ಯದ ರಕ್ಷಣೆಗಾಗಿ ಔಷಧಿಯಿಂದ ದೂರವಿರಿ’ ಧ್ಯೇಯದ, ಪ್ರಜಾವಾಣಿಯ ‘ಸ್ವಾಸ್ಥ್ಯ ಸೌಖ್ಯ’ ಅಂಕಣಕಾರ ಪ್ರೊ. ಬಿ.ಎಂ. ಹೆಗ್ಡೆ ಹಾಗೂ ಬುಡಕಟ್ಟು ಜನರಿಗಾಗಿ ಜೀವನ ಮೀಸಲಿಟ್ಟ ಡಾ.ಸುದರ್ಶನ್ ಅವರು ಆರೋಗ್ಯ ಮೇಳದ ಕೇಂದ್ರಬಿಂದು. ಏ.13ರಿಂದ19ರ ತನಕ ನಡೆಯುವ ಆರೋಗ್ಯ ಮೇಳಕ್ಕೆ ಅವರು ಆಗಮಿಸಲಿದ್ದಾರೆ.  

ಆರೋಗ್ಯ ತಪಾಸಣೆ ಹಾಗೂ ತಿಳಿವಳಿಕೆ ನೀಡಲು 4 ಅತ್ಯಾಧುನಿಕ ತಂತ್ರಜ್ಞಾನಾಧರಿತ ಆಸ್ಪತ್ರೆಗಳು ಒಪ್ಪಿಗೆ ನೀಡಿವೆ. ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಪ್ರಮುಖ ಖಾಸಗಿ ವೈದ್ಯರು ಸೇರಿದಂತೆ ನೂರಕ್ಕೂ ಅಧಿಕ ವೈದ್ಯರು ಪಾಲ್ಗೊಳ್ಳುವರು. ಬಿ.ಎಂ. ಹೆಗ್ಡೆ ಅವರು 13ರಂದು ವೈದ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರದರ್ಶನದಲ್ಲಿ ಶವವನ್ನು ಸೀಳುವ ಮೂಲಕದ ದೇಹದ ಅಂಗಾಂಗ ಹಾಗೂ ಕಾರ್ಯವೈಖರಿಯನ್ನು ತಿಳಿಸುವ ಪ್ರಯೋಗ ನಡೆಯಲಿದೆ ಎಂದು ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.ನೆಲ-ಜಲ-ವಾಯು ಸಾಹಸ: ಜನರಲ್ ತಿಮ್ಮಯ್ಯ ಅಕಾಡೆಮಿ ಹಾಗೂ ಇತರರ ಸಹಯೋಗದಲ್ಲಿ ನೆಲ, ಜಲ ಮತ್ತು ವಾಯು ಸಾಹಸ ಕ್ರೀಡೆಗಳು ನಡೆಯಲಿವೆ. ಮೈಕ್ರೋ ಲೈಟಿಂಗ್ ವಾಯುಯಾನ ಶಿಬಿರವು ನಗರದ ಹಾಗರಗಾ ಗುರುಕುಲ ಶಾಲೆಯ ಹತ್ತಿರ ಹಮ್ಮಿಕೊಂಡಿದ್ದು, 10 ನಿಮಿಷದಂತೆ ಮೊದಲು ನಮೂದಿಸಿದ ಸುಮಾರು 150 ಜನರಿಗೆ ಹಾರಾಟ ವ್ಯವಸ್ಥೆ ಇದೆ. 700 ರೂ. ಟಿಕೆಟ್ ಇರುತ್ತವೆ.ಮೇಳದಲ್ಲಿ ಸಾಲ...: ಗುಲ್ಬರ್ಗ ಉತ್ಸವದಲ್ಲಿ ಬ್ಯಾಂಕ್ ಮೇಳವೂ ನಡೆಯಲಿದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಸೇರಿದಂತೆ 24 ಬ್ಯಾಂಕ್‌ಗಳು ಪಾಲ್ಗೊಳ್ಳಲಿವೆ. ಕೆಲವು ಬ್ಯಾಂಕ್‌ಗಳು ವಿವಿಧ ಯೋಜನೆಗಳಿಗೆ ಸಾಲಗಾರರ ಆಯ್ಕೆಯನ್ನೂ ಮಾಡಲಿವೆ. ಠೇವಣಿ, ಸಾಲ, ಬಡ್ಡಿ ಮತ್ತಿತರ ಮಾಹಿತಿಯನ್ನು ಪಡೆಯಬಹುದು.ಓದುಗರ ಉತ್ಸಾಹ: ಸರ್ವ ಶಿಕ್ಷಣ ಅಭಿಯಾನವು ಪುಸ್ತಕ ಮೇಳವನ್ನು ಆಯೋಜಿಸಿದೆ. ಒಟ್ಟು 72 ಪುಸ್ತಕ ಮಳಿಗೆಗಳು ಇರಲಿವೆ. ವಿವಿಧ ಭಾಷೆ, ಪ್ರಕಾರಗಳ ಪುಸ್ತಕಗಳ ಮಾರಾಟ ನಡೆಯಲಿವೆ. ಪಾಲ್ಗೊಳ್ಳಲು ಇಚ್ಛಿಸುವ ಪ್ರಕಾಶಕರು ತಮ್ಮ ನೋಂದಾವಣಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಕಣ ಇಲಾಖೆಯ ಕಚೇರಿ (ಮೊಬೈಲ್ ಸಂಖ್ಯೆ: 9448999397) ಅನ್ನು ಸಂಪರ್ಕಿಸಲು ಕೋರಲಾಗಿದೆ.ವಿಜ್ಞಾನದ ವಿಶೇಷಗಳು...: ಜಿಲ್ಲಾ ವಿಜ್ಞಾನ ಕೇಂದ್ರವು 10 ಮಳಿಗೆಗಳನ್ನು ಇಡಲಿದೆ. ಜಿಲ್ಲೆಯ ವಿದ್ಯಾರ್ಥಿಗಳು ವಿಜ್ಞಾನ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ಕೆಲವು ಮಾದರಿಗಳನ್ನು ಸಹ ಇಡಲಾಗುವುದು. ಸುಮಾರು 32 ಮಳಿಗೆಗಳು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿ-ಮಾಹಿತಿ ಪ್ರದರ್ಶಿಸಲಿವೆ.ಸರ್ಕಾರದ್ದೂ ಸಾಧನೆ...: ಸರ್ಕಾರಿ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಿ ಇಲಾಖೆಗಳ 50 ಮಳಿಗೆಯನ್ನು ಸ್ಥಾಪಿಸಲಾಗಿದ್ದು, ಯೋಜನೆ, ಸೌಲಭ್ಯ, ಕಾರ್ಯಗಳ ಬಗ್ಗೆ ಜನತೆಗೆ ಮಾಹಿತಿ ದೊರೆಯಲಿದೆ. ಬಾಡಿಗೆ, ಬಾಯಾರಿಕೆ, ಶುಚಿತ್ವ...: ವಾಣಿಜ್ಯ ಉದ್ದೇಶಕ್ಕಾಗಿ ಮಳಿಗೆ ಹಾಕಲು ಇಚ್ಛಿಸುವವರು ಪಾಲಿಕೆ ಆಯುಕ್ತ ಅಥವಾ ಜಿಪಂ ಉಪಕಾರ್ಯದರ್ಶಿ ಅವರ ಕಚೇರಿಯನ್ನು ಸಂಪರ್ಕಿಸಬಹುದು.  100 ಮಳಿಗೆಗಳನ್ನು ಒಟ್ಟು 5,000 ರೂಪಾಯಿ ಬಾಡಿಗೆಗೆ ನೀಡಲಾಗುವುದು. ಮೂರು ದಿನ ಒಟ್ಟು 4ರಿಂದ5 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ಪಾಲಿಕೆ ಆಯುಕ್ತ ಮನೋಜ್ ಜೈನ್ ತಿಳಿಸಿದರು.ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೊರಗಡೆ ಎಂಟು ನಳ ಹಾಗೂ ಒಳಗಡೆ 10 ಮಳಿಗೆಗಳಲ್ಲಿ ನೀರು ಪೂರೈಸಲಾಗುವುದು. ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.