ಗುರುವಾರ , ಮೇ 6, 2021
31 °C
ನೇಮಕಾತಿ ಸ್ಥಗಿತಗೊಳಿಸದಿದ್ದರೆ ಹೋರಾಟ

ರಾಜ್ಯಮಟ್ಟದಲ್ಲೂ ಮೀಸಲು: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಜನಸಂಖ್ಯೆ ಆಧಾರದ ಮೇಲೆ ರಾಜ್ಯಮಟ್ಟದಲ್ಲೂ ವಿವಿಧ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಆಗ್ರಹಿಸಿದರು.ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ)ನೇ ಕಲಂ ತಿದ್ದುಪಡಿ ಮಸೂದೆಯಲ್ಲೇ ದೋಷ ಇದೆ. ಈ ಭಾಗಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲು ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಈ ಭಾಗಕ್ಕಷ್ಟೇ ಸೀಮಿತಗೊಳಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಮಟ್ಟದಲ್ಲೂ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು.ಕೇಂದ್ರವು ರಾಜ್ಯ ಸರ್ಕಾರಕ್ಕೆ ತಿದ್ದುಪಡಿ ಮಸೂದೆಯ ಪ್ರತಿ ಕಳುಹಿಸಿದ ನಂತರವೂ ಅನುಷ್ಠಾನ ವಿಳಂಬವಾಗಿದೆ. ನಗರಸಭೆ ಹಾಗೂ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆಯೂ ವಿಳಂಬಕ್ಕೆ ಕಾರಣವಾಯಿತು ಎಂದು ಹೇಳಿದರು.ನಿಯಮಾವಳಿ ರಚನೆ ಆಗುವವರೆಗೆ ಈ ಭಾಗದಲ್ಲಿ ನೇಮಕಾತಿ ಸ್ಥಗಿತಗೊಳಿಸಿ ಈ ಹಿಂದೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದಾಗಿಯೂ ಕೆಲಕಡೆ ನೇಮಕಾತಿ ನಡೆದಿವೆ. ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿ ನೇಮಕಾತಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.ಹೊಸ ನಿಯಮಾವಳಿಗಳನ್ನು ರೂಪಿಸಿದ ನಂತರವೇ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 23 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಬಾರಿಯ ವೃತ್ತಿಪರ ಕೋರ್ಸ್‌ಗಳ ನೇಮಕಾತಿ ಪ್ರಕ್ರಿಯೆಯನ್ನೂ ತಡೆಹಿಡಿದರೆ ಒಳ್ಳೆಯದು. ಹಾಗಾದಲ್ಲಿ ಈ ಭಾಗದ ಸುಮಾರು 250 ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಕೋಟಾದಡಿ ಉಚಿತ ಸೀಟುಗಳು ಸಿಗಲಿವೆ. ಸರ್ಕಾರ ಈ ಬಗೆಗೆ ಚಿಂತನೆ ನಡೆಸಬೇಕು ಎಂದರು.ಡಿಪಿಎಆರ್ ಕಾರ್ಯದರ್ಶಿ ಸಂಜೀವಕುಮಾರ್ ಅವರ ಅಧ್ಯಕ್ಷತೆಯ ಸಮಿತಿಯು `ಡಿ' ದರ್ಜೆಯಲ್ಲಿ ಶೇ 100, `ಸಿ' ದರ್ಜೆಯಲ್ಲಿ ಶೇ 80 ಮತ್ತು `ಬಿ' ದರ್ಜೆಯಲ್ಲಿ ಶೇ 70 ರಷ್ಟು ಸರ್ಕಾರಿ ಹುದ್ದೆಗಳನ್ನು ಆಯಾ ಜಿಲ್ಲೆಗೇ ಮೀಸಲಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಅದರಂತೆಯೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.ನಿಯಮಾವಳಿ ಬಗ್ಗೆ ಸಲಹೆ ಸೂಚನೆ ಪಡೆಯಲು ಮಖ್ಯಮಂತ್ರಿಗಳು ಸಭೆ ಕರೆಯಬೇಕು ಎಂದು ಬೇಡಿಕೆ ಮಂಡಿಸಿದರು. ಸಮಿತಿಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಬೆಲ್ದಾರ್, ಜಿಲ್ಲಾ ಗೌರವಾಧ್ಯಕ್ಷ ಪ್ರೊ. ದೇವೇಂದ್ರ ಕಮಲ್, ಜಿಲ್ಲಾ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಪ್ರಮುಖರಾದ ಶಂಕರೆಪ್ಪ ಹೊನ್ನಾ, ಗುಣವಂತರಾವ್ ಮಂಗಳೂರೆ, ಚನ್ನಬಸಪ್ಪ ಹಾಲಹಳ್ಳಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.