ಸೋಮವಾರ, ಮೇ 17, 2021
21 °C

ದಲಿತರ ದನಿ ಬಸವಣ್ಣ: ಶಂಕರ ದೇವನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಶತ ಶತಮಾನಗಳಿಂದಲೂ ಶೋಷಣೆಗೆ ಒಳಗಾಗುತ್ತಿದ್ದ ಕೆಳ ಸಮುದಾಯದವರಿಗೆ ದನಿ ಬಂದದ್ದು ಬಸವಣ್ಣನವರ ಕಾಲದಲ್ಲಿ ಎಂದು ಕಾರವಾರದ ಗಣೇಶ ಗುಡಿಯ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಎಂಜಿನಿಯರ್ ಶಂಕರ ದೇವನೂರ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗುಲ್ಬರ್ಗ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಭಾರತೀಯ ಎಂಜಿನಿಯರ್ಸ್‌ ಸಂಸ್ಥೆಯ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ ಗೋಷ್ಠಿಯಲ್ಲಿ `ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು' ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. 12ನೇ ಶತಮಾನದಲ್ಲಿ ಅಸ್ಪೃಶ್ಯರು ಸ್ಪೃಶ್ಯರ ಕೇರಿಗೆ ಹೋದರೆ ಒದೆ ತಿನ್ನಬೇಕಾಗಿತ್ತು, ಇಂತಹ ಸಂದರ್ಭದಲ್ಲಿ ದಲಿತರ ಪರವಾಗಿ ನಿಂತು ವಿಚಾರಣೆಗೆ ಒಳಪಟ್ಟ ಮೊದಲ ವ್ಯಕ್ತಿ ಬಸವಣ್ಣ ಎಂದರು.ಅಧ್ಯಾತ್ಮದ ಜೊತೆ ಸಾಮಾಜಿಕ ಕಳಕಳಿ, ಜೀವನ ಮೌಲ್ಯವನ್ನು ಪ್ರತಿಪಾದಿಸಿದ್ದ ಬಸವಣ್ಣರಲ್ಲಿ ಬುದ್ಧ, ಕೃಷ್ಣ, ಮಹಾವೀರ, ಮಹಮ್ಮದ್ ಪೈಗಂಬರ್ ಇವರೆಲ್ಲರೂ ಪ್ರತಿಪಾದಿಸಿದ್ದ ಮೌಲ್ಯಗಳನ್ನು ಕಾಣಬಹುದು. ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಹಣಕಾಸಿನ ಅಧಿಕಾರಿಯಾಗಿದ್ದರೂ ಕಾಸಿಗೆ ಕವಡೆ ಕಿಮ್ಮತ್ತು ನೀಡದ ಮಹಾನ್ ದಾರ್ಶನಿಕ. ಇಂದು ಅಧಿಕಾರ ಸೂತ್ರ ಹಿಡಿದಿರುವ ರಾಜಕಾರಣಿಗಳು ಬಸವಣ್ಣನವರ ತತ್ವವನ್ನು ಪಾಲಿಸಿ ಸಾರ್ವಜನಿಕ ಸಂಪತ್ತನ್ನು ಕಾಪಾಡಬೇಕು ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು. ಶರಣರಿಗೆ ನಿಸರ್ಗ ಪ್ರೀತಿಯಿತ್ತು. ಅವರು ತಮ್ಮ ಬದುಕನ್ನು ನಿಸರ್ಗದೊಂದಿಗೆ ಏಕೀಕರಿಸಿಕೊಂಡಿದ್ದರು. ಆದರೆ ಇಂದು ಅಭಿವೃದ್ಧಿಶೀಲತೆ, ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ನಿಸರ್ಗದೊಂದಿಗಿನ ಕರುಳು ಬಳ್ಳಿಯ ಸಂಬಂಧ ಕಡಿದುಕೊಳ್ಳುತ್ತಿದ್ದಾನೆ ಎಂದು ಖೇದ ವ್ಯಕ್ತಪಡಿಸಿದರು.ಬಸವಾದಿ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದವರು. ರಾಜನಾಗಲಿ, ಮಂತ್ರಿಯಾಗಲಿ ಅನುಭವ ಮಂಟಪಕ್ಕೆ ಪ್ರವೇಶಿಸಬೇಕಾದರೆ ಕಾಯಕ ಅಗತ್ಯವಾಗಿತ್ತು. ಇಂತಹ ವಚನಕಾರರ ವಚನಗಳು ಸರ್ವ ಕಾಲಕ್ಕೂ ಸಂದೇಶ ನೀಡುವಂಥವುಗಳು. ವಚನ ಸಿದ್ಧಾಂತಗಳು ಮಾನವನ ವಿಕಾಸಕ್ಕೂ ಕಾರಣವಾಗಬಲ್ಲವು ಎಂದು ಹೇಳಿದರು. ಸಮ್ಮೇಳನದ ಸರ್ವಾಧ್ಯಕ್ಷೆ ವಿಲಾಸವತಿ ಖೂಬಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.