ಶುಕ್ರವಾರ, ಮೇ 7, 2021
21 °C
ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

371: `ಸೀಟು' ಹಂಚಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಂವಿಧಾನದ 371(ಜೆ) ತಿದ್ದುಪಡಿ ಅನ್ವಯವೇ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಯಾಗಬೇಕು. ವಾರದೊಳಗೆ ಬೇಡಿಕೆ ಈಡೇರದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಈಶಾನ್ಯ ಕರ್ನಾಟಕ ಶಿಕ್ಷಕರ ವೇದಿಕೆ ಎಚ್ಚರಿಸಿದೆ.ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕನ್ನಡ ಭವನದಲ್ಲಿ ಸಮಾವೇಶಗೊಂಡು ಮಿನಿ ವಿಧಾನಸೌಧದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಸರ್ಕಾರಿ ಖಾಲಿ ಹುದ್ದೆಗಳ ನೇಮಕಾತಿ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ. ಆದರೆ ವೃತ್ತಿಪರ ಸೀಟು ಹಂಚಿಕೆಯಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದಿದ್ದರೆ ಸರ್ಕಾರ ಅನ್ಯಾಯ ಮಾಡಿದಂತಾಗುತ್ತದೆ. ಸರ್ಕಾರ ರಚನೆಯಾಗುವವರೆಗೂ ಕಾಯಲು ತಿಳಿಸಿದ್ದವರು, ಇದೀಗ ಸರ್ಕಾರ ರಚನೆಯಾದರೂ ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನದ ನಿಯಮಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಎಂ.ಬಿ. ಅಂಬಲಗಿ ಗುರುವಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು.ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರದಲ್ಲಿ ನಿರ್ಧಾರವಾಗಿದ್ದರೂ ರಾಜ್ಯಮಟ್ಟದಲ್ಲಿ ಇನ್ನೂ ಅದರ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಜೂ. 15ರಂದು ಸಿಇಟಿ ವಿದ್ಯಾರ್ಥಿಗಳಿಗೆ ವೃತ್ತಿಪರ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿರುವುದಕ್ಕೆ ತಡೆ ನೀಡಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ನೀಡಿ ಸೀಟು ಹಂಚಿಕೆ ಆರಂಭಿಸಬೇಕು ಎಂದರು.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಹಾಗೂ ಹಿರಿಯ ಹೋರಾಟಗಾರ ವೈಜನಾಥ ಪಾಟೀಲ ಅವರು ರಾಜ್ಯ ಸರ್ಕಾರಕ್ಕೆ ಒತ್ತಡ ತರಬೇಕು. ಈ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಚ್ಚಿನ ಸೀಟು ದೊರೆಯುವಂತೆ ಮಾಡಬೇಕು. ಬಿಇಡಿ, ಡಿಇಡಿ ಹಾಗೂ ಎಲ್‌ಎಲ್‌ಬಿ ಮುಂತಾದ ಕೋರ್ಸ್ ಕಲಿತು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತಿದ್ದಾರೆ. ಶೀಘ್ರ 371 (ಜೆ) ಜಾರಿಯಾದರೆ ಮಾತ್ರ ಈ ಭಾಗದ ಯುವಕರಿಗೆ ಉದ್ಯೋಗಾವಕಾಶ ದೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಪಂಚ ಜಿಲ್ಲೆಗಳ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಮಾತನಾಡಿ, `ಮೇ 4ರಂದು ಬೆಂಗಳೂರಿನಲ್ಲಿ ನಡೆದ ಈ ಭಾಗದ ಜನಪ್ರತಿನಿಧಿಗಳ ಸಭೆಯಲ್ಲಿ ವಿಶೇಷ ಸ್ಥಾನಮಾನದ ಕುರಿತು ಚರ್ಚಿಸಲಾಯಿತು. ಕೇಂದ್ರಕ್ಕಿಂತ ರಾಜ್ಯದಲ್ಲೆ ಈ ಬಗ್ಗೆ ನೀತಿ ರೂಪಿಸಲು ವಿಳಂಬವಾಗುತ್ತಿರುವುದು ಸ್ಪಷ್ಟವಾಗಿದ್ದು, ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ನ್ಯಾಯ ದೊರೆಯುವುದು. ಮನವಿಗೆ ಸ್ಪಂದಿಸದಿದ್ದರೆ, ಆನಂತರ ಜನಪ್ರತಿನಿಧಿಗಳು ಅಡ್ಡಾಡದಂತೆ ದಿಗ್ಬಂಧನ ಹಾಕಿ ಪ್ರತಿಭಟನೆ ಆರಂಭಿಸಬೇಕು' ಎಂದರು.ಪ್ರಹ್ಲಾದ ಕುಳಲಿ, ವಿಜಯಕುಮಾರ ತೇಗಲತಿಪ್ಪಿ, ಸುರೇಶ ಬಡಿಗೇರ, ಜಂಬನಗೌಡ ಶೀಲವಂತ ಮತ್ತಿತರರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.