ಗುರುವಾರ , ಮೇ 6, 2021
27 °C
ಹೊಸ ಸರ್ಕಾರದ ಮೊದಲ `ಪ್ರಗತಿ ಪರಿಶೀಲನಾ' ಸಭೆ

ಬದಲಾವಣೆ ಭರಾಟೆ: ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಿತ್ತನೆ ಬೀಜ, ರಸಗೊಬ್ಬರದ ಸಮರ್ಪಕ ವಿತರಣೆ, ಕುಡಿಯುವ ನೀರಿಗೆ ಪ್ರಥಮ ಆದ್ಯತೆ, ಅಕ್ರಮ ಮರಳುಗಾರಿಕೆಗೆ ಕಡಿವಾಣ, ಮಳೆ ವರದಿಯ ಮರುಪರಿಶೀಲನೆ, ಆರೋಗ್ಯಕ್ಕೆ ಆದ್ಯತೆ, ಜುಲೈ ಅಂತ್ಯಕ್ಕೆ ವೈದ್ಯರ ಹುದ್ದೆ ಭರ್ತಿಯ ಭರವಸೆ, ನಗರ ಯೋಜನೆಗಳಿಗೆ ಹೆಚ್ಚಿನ ಒತ್ತು, ಬೇಸಿಗೆಯ ಮೇವಿಗೆ ಈಗಲೇ ಯೋಜನೆ...-ಸರ್ಕಾರ ಬದಲಾದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಥಮ ಪ್ರಗತಿ ಪರಿಶೀಲನಾ ಸಭೆಯ ಪ್ರಮುಖ ಅಂಶಗಳಿವು.

ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅಧ್ಯಕ್ಷೆಯಲ್ಲಿ ಸಭೆ ನಡೆಯಿತು. ಖಮರುಲ್ ಹಾಗೂ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಅಭಿವೃದ್ಧಿಗೆ ಅಧಿಕಾರಿಗಳು ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು. ಬೆಳಿಗ್ಗೆ 10ರಿಂದ ಸಂಜೆ 5.30ರ ವರೆಗೆ  ಜನಸಾಮಾನ್ಯರಿಗೆ ಕಚೇರಿಯಲ್ಲಿ ದೊರೆಯಬೇಕು. ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ತಮ್ಮ ಇಲಾಖಾ ವ್ಯಾಪ್ತಿಯಿಂದ ಯೋಜನೆಗಳು ಫಲಾನುಭವಿಗಳಿಗೆ ತಲುಪುವ ಬಗ್ಗೆ ಪರಿಶೀಲಿಸಬೇಕು. ಆ ಮೂಲಕ ಆಡಳಿತದಲ್ಲಿ ಬದಲಾವಣೆ ಬರಬೇಕು ಎಂದು ಉಸ್ತುವಾರಿ ಸಚಿವರಾದ ಖಮರುಲ್ ಇಸ್ಲಾಂ ಹೇಳಿದರು. ಕುಡಿವ ನೀರು: `ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಸಕರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಸಬೇಕು.    ತಹಶೀಲ್ದಾರ್ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಿ, ಪ್ರಮುಖ ಆದ್ಯತೆ ನೀಡಿ ಸಮಸ್ಯೆ ಬಗೆ ಹರಿಸಬೇಕು' ಎಂದು ಸಚಿವ ಖಮರುಲ್ ಆದೇಶಿಸಿದರು.ಇದಕ್ಕೆ ಮೊದಲು ಜಿಲ್ಲೆಯ 220 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,769 ಜನವಸತಿ ಪೈಕಿ  287 ಕಡೆಗಳಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲಾಗಿದೆ. ಜಿಲ್ಲೆಯ 674 ಜನ ವಸತಿಯ ಕುಡಿಯುವ ನೀರಿನಲ್ಲಿ ರಾಸಾಯನಿಕ ಅಂಶವಿದೆ. ಈ ಪೈಕಿ 349 ಪ್ರದೇಶದ ಸಮಸ್ಯೆ ಬಗೆಹರಿಸಲಾಗಿದೆ. 2013-14ರೊಳಗೆ ಎಲ್ಲ ಸಮಸ್ಯೆ ಪರಿಹರಿಸಲಾಗುವುದು' ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮಕ್ಕನವರ್ ಸಭೆಗೆ ಮಾಹಿತಿ ನೀಡಿದರು.ಮಳೆ ಬಂದರೂ ಬಿತ್ತನೆ ಇಲ್ಲ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಳತ್ಕರ್ ಮಾಹಿತಿ ನೀಡಿ, `ಜಿಲ್ಲೆಯಲ್ಲಿ ಶೇ 52 ವಾಡಿಕೆ ಮಳೆಯಾಗಿದ್ದು, ಶೇ 4 ಬಿತ್ತನೆ ಆಗಿದೆ' ಎಂದರು. ತಕ್ಷಣವೇ ಗರಂ ಆದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು `ಮಳೆ ಮಾಪನ ವರದಿ ಅವಾಸ್ತವಿಕ.ಅಧಿಕಾರಿಗಳ ತಪ್ಪು ಮಾಹಿತಿಯಿಂದ ಜಿಲ್ಲೆಗೆ ಬರುವ ಅನುದಾನ ಕುಂಠಿತಗೊಳ್ಳುತ್ತಿದೆ. ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೂಡಲೇ ವಾಸ್ತವಿಕ ವರದಿ ತಯಾರಿಸಬೇಕು' ಎಂದು ಒತ್ತಾಯಿಸಿದರು. `ಕಚೇರಿಯಲ್ಲಿ ಕುಳಿತು ಅವಾಸ್ತವಿಕ ವರದಿ ತಯಾರಿಸಬೇಡಿ' ಎಂದು ಶಾಸಕ ಬಿ.ಆರ್. ಪಾಟೀಲ್, ಉಮೇಶ್ ಜಾಧವ್ ಹಾಗೂ ಅಲ್ಲಂಪ್ರಭು ಪಾಟೀಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  `ಒಟ್ಟು ಬಿತ್ತನೆ ಬಗ್ಗೆ ಮಾಹಿತಿ ಸಂಗ್ರಹಿಸುವ ವಿಧಾನವೂ ಸರಿಯಾಗಿಲ್ಲ. ಜಂಟಿ ನಿರ್ದೇಶಕರು ಕೂಡಲೇ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ, ಸ್ಥಳೀಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು' ಎಂದು ಸಚಿವ ಶರಣ ಪ್ರಕಾಶ್ ಆದೇಶಿಸಿದರು. ಮುಂಬಯಿಗೆ ಮೇವು: ರೈಲಿನ ಮೂಲಕ ಜಿಲ್ಲೆಯಿಂದ ಮುಂಬಯಿಗೆ ಮೇವು ಸಾಗಾಟ ಮಾಡಲಾಗುತ್ತಿದೆ ಎಂದು  ಕೆ.ಬಿ.ಶಾಣಪ್ಪ ಆರೋಪಿಸಿದರು. `2012ರ ಜಾನುವಾರು ಗಣತಿ ಆಧಾರದಲ್ಲಿ ಬೇಸಿಗೆ ಕಾಲದಲ್ಲೂ ಮೇವು ಕೊರತೆ ಬಾರದಂತ ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ' ಎಂದು ಸಚಿವರು ಸೂಚಿಸಿದರು.ಆರೋಗ್ಯ: ಎಂಬಿಬಿಎಸ್ ಪೂರೈಸಿದ ಬಳಿಕ ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಪೂರೈಸಬೇಕು ಎಂಬ ನಿಯಮದ ಮಸೂದೆ ಶೀಘ್ರವೇ ಜಾರಿಗೆ ಬರಲಿದೆ. ಬಳಿಕ ಜಿಲ್ಲೆಯ ವೈದ್ಯರ ಕೊರತೆ ನೀಗಲಿದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು. ರೋಗ ಶಂಕಿತ ಪ್ರದೇಶಗಳ ಬಗ್ಗೆ ಸ್ಥಳೀಯಾಡಳಿಕ್ಕೆ ಆರೋಗ್ಯ ಇಲಾಖೆ ಪ್ರತಿವಾರ ಮಾಹಿತಿ ನೀಡಬೇಕು. ಅವರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕರಿಗೆ ಸೂಚಿಸಿದರು.ಆರೋಗ್ಯ ಇಲಾಖೆಯ 142 ಹುದ್ದೆಗಳ ಪೈಕಿ 124 ಖಾಲಿ ಇವೆ. ವಿವಿಧ ಯೋಜನೆ ಅಡಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದರೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ವೈದ್ಯರು ಸಿಗುತ್ತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ ಸಜ್ಜನಶೆಟ್ಟಿ ಹೇಳಿದರು.`ಚಿಂಚೋಳಿಯಲ್ಲಿ ವೈದ್ಯರು ಇಲ್ಲದ ಕಾರಣ ರೋಗಿಗಳು ಮಂತ್ರವಾದಿಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಸಾವು ಸಂಭವಿಸುತ್ತಿದೆ `ಎಂದು ಶಾಸಕ ಉಮೇಶ್ ಜಾಧವ್ ದೂರಿದರು. ಮರಳುಗಾರಿಕೆ: `ಲೋಕೋಪಯೋಗಿ ಇಲಾಖೆಯು ನದಿ ಪಾತ್ರದಿಂದ ಮರಳನ್ನು ಎತ್ತಿ ನಿರ್ದಿಷ್ಟ ಜಾದಲ್ಲಿ ಶೇಖರಣೆ ಮಾಡಬೇಕು. ಅಲ್ಲಿಂದ ನೇರವಾಗಿ ಜನರಿಗೆ ಮಾರಾಟ ಮಾಡಬೇಕು. ಇಲಾಖೆಯಲ್ಲಿ ಸೂಕ್ತ ಯಂತ್ರಗಳಿರದಿದ್ದರೆ, ಖಾಸಗಿಯಿಂದ ಬಾಡಿಗೆ ಪಡೆಯಬೇಕು. ಈ ಇಲಾಖೆ ಹೊರತು ಪಡಿಸಿ ಬೇರೆಯವರು ಮರಳುಗಾರಿಕೆ ನಡೆಸದಂತೆ ತಾಲ್ಲೂಕು ಮಟ್ಟದಲ್ಲಿ ಕಂದಾಯ, ಪೊಲೀಸ್ ಹಾಗೂ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ನಿಗಾ ಇಡಬೇಕು. ಇಲಾಖೆಗೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ನಿಯೋಜಿಸಬೇಕು. ತಪ್ಪಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು' ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಪಾಟೀಲ್ ತೆಲ್ಕೂರ್, ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ್ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನ ಕುಮಾರ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ್ ತಳಕೇರಿ ಇದ್ದರು.

ಯುವ ಶಾಸಕರ ಗೈರು: ಶಾಣಪ್ಪ ಲೇವಡಿ

ಶಾಸಕ ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ರಾಮಕೃಷ್ಣ ಜಿ, ಮಾಲೀಕಯ್ಯ ಗುತ್ತೇದಾರ್ ಸಭೆಗೆ ಗೈರಾಗಿದ್ದರು. ಇದನ್ನು ಪ್ರಶ್ನಿಸಿ `ಯುವ ಶಾಸಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಬಗ್ಗೆ ಕಾಳಜಿ ಇರಬೇಕು. ಸಚಿವ ಗಾದಿ ಕೇಳುವವರು ಮೊದಲು ಜನರ ಬೇಡಿಕೆ ಈಡೇರಿಕೆಗೆ ಯತ್ನಿಸಬೇಕು. ಅದಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಬೇಕು' ಎಂದು ವಿಧಾನಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ವ್ಯಂಗ್ಯವಾಡಿದರು.ಸಚಿವ ಶರಣಪ್ರಕಾಶ್ ಪಾಟೀಲ್, ಅಲ್ಲಂ ಪ್ರಭು ಪಾಟೀಲ್ ತಮ್ಮ ಪಕ್ಷದ ಶಾಸಕರನ್ನು ಸಮರ್ಥಿಕೊಳ್ಳಲು ಯತ್ನಿಸಿದರು. `ಸಮರ್ಥಿಸಿ ಪ್ರಯೋಜನವಿಲ್ಲ. ಸಕ್ರಿಯವಾಗಿ ಪಾಲ್ಗೊಳ್ಳಲು ಹೇಳಿ' ಎಂದು ಶಾಣಪ್ಪ ಕಿವಿಮಾತು ಹೇಳಿದರು.ನೀವೂ ವಿರೋಧ ಪಕ್ಷದ ಸಾಲಿಗೆ...

ಹಿಂದಿನ ಆಡಳಿತವು ಕೆಲಸ ಮಾಡದ ಕಾರಣ ಈ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ ಎಂದು ಸಚಿವ ಶರಣ ಪ್ರಕಾಶ್ ಹಾಗೂ ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಆರೋಪಿಸಿದರು. ತಕ್ಷಣ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ, `ನಾವು ವಿರೋಧ ಪಕ್ಷದ ಸಾಲಿಗೆ ಬಂದಿದ್ದೇವೆ. ಈಗ ನೀವು ಕೆಲಸ ಮಾಡದಿದ್ದರೆ, ನಮ್ಮ ಸಾಲಿಗೆ ಬರುತ್ತೀರಿ' ಎಂದು ಲೇವಡಿ ಮಾಡಿದರು.ಆಪರೇಷನ್ ಸಕ್ಸಸ್, ಪೇಷಂಟ್ ಡೆಡ್

`ಜೇವರ್ಗಿ ತಾಲ್ಲೂಕಿನ ನೇಲೋಗಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ತಲಾ 10 ಲಕ್ಷ, ಬಳಿಕ 16 ಲಕ್ಷ ,ಮತ್ತೆ 50 ಲಕ್ಷ ನೀಡಿದರೂ ಪ್ರಯೋಜನ ಆಗಿಲ್ಲ. ಕಾಮಗಾರಿ ನಡೆದರೂ ಕುಡಿಯುವ ನೀರಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು' ಎಂದು ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಆಗ್ರಹಿಸಿದರು.`ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಆದರೆ ನೀರು ಪೂರೈಕೆ ಆಗುತ್ತಿಲ್ಲ' ಎಂದು ಅಧಿಕಾರಿಗಳು ಒಪ್ಪಿಕೊಂಡರು.  ಸಚಿವ ಖಮರುಲ್ ಇಸ್ಲಾಂ ಹಾಗೂ ಶಾಸಕ ಬಿ.ಆರ್. ಪಾಟೀಲ್ ಪ್ರತಿಕ್ರಿಯಿಸಿ `ನಮ್ಮ ಜಿಲ್ಲೆಯ ಯೋಜನೆಗಳು ಆಪರೇಷನ್ ಸಕ್ಸಸ್, ಪೇಷಂಟ್ ಡೆಡ್ ಆಗಿವೆ. ಕಠಿಣ ಕ್ರಮಕೈಗೊಳ್ಳಬೇಕಾಗಿದೆ' ಎಂದರು.ರಸಗೊಬ್ಬರ ವಿತರಣೆ: ಪ್ರಕಾಶ್ ಗರಂ

`ರೈತರು ಕೇಳಿದ ಬಿತ್ತನೆ ಬೀಜ ಹೊರತು ಪಡಿಸಿ ಬೇರೆ ಕಂಪೆನಿ ಬೀಜ ಖರೀದಿಗೆ ಒತ್ತಡ ಹೇರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಸಚಿವ ಶರಣ ಪ್ರಕಾಶ ಎಚ್ಚರಿಸಿದರು.ರಸ ಗೊಬ್ಬರ ಸರಬರಾಜು ಮಾಡುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, `ಗೊಬ್ಬರ ದಾಸ್ತಾನು ಕೇಂದ್ರೀಕೃತ ವ್ಯವಸ್ಥೆ ಮಾಡಿಕೊಂಡು ಕಾಳಸಂತೆ ಬೇಡಿಕೆ ಹೆಚ್ಚಿಸಬೇಡಿ. ದಾಸ್ತಾನು ವಿಕೇಂದ್ರೀಕರಣಗೊಳಿಸಿ. 2 ದಿನಗಳ ಒಳಗೆ ಬೇಡಿಕೆಗೆ ಅನುಗುಣವಾಗಿ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ದಾಸ್ತಾನು ಇರಿಸಿ' ಎಂದು ನಿರ್ದೇಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.