ಶುಕ್ರವಾರ, ಮೇ 7, 2021
23 °C

ಅಕ್ರಮ ಮದ್ಯ: ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: `ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿದೆ. ಹಳ್ಳಿ, ತಾಂಡಾ, ದಲಿತರ ಬಡಾವಣೆಗಳಲ್ಲಿ  ಮದ್ಯ ಮಾರಾಟ ನಡೆಯುತ್ತಿದೆ. ನಾವು ನಮ್ಮ ಪತಿ, ಮಕ್ಕಳಿಗೆ ಮದ್ಯ ಸೇವಿಸದಿರಲು ತಿಳಿಸಿದರೆ, ಅವರು ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ' ಎಂದು ಮಹಿಳೆಯರು ತಹಶೀಲ್ದಾರ ಜಗನ್ನಾಥರೆಡ್ಡಿ ಎದುರು ಅಲವತ್ತುಕೊಂಡರು.ಗುರುವಾರ ಇಲ್ಲಿನ ಮಿನಿ ವಿಧಾನ ಸೌಧದ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಮ್ಮಿಕೊಂಡ ಧರಣಿಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಅಧಿಕ ಮಹಿಳೆಯರು, ತಾವು ನಿತ್ಯ ಅನುಭವಿಸುತ್ತಿರುವ ಗೋಳನ್ನು ಅಧಿಕಾರಿಗಳ ಎದುರು  ತೋಡಿಕೊಂಡರು.`ನಾವು ಬುದ್ದಿವಾದ ಹೇಳಿದರೆ, ನಮ್ಮ ಮಾತು ಕೇಳುವುದಿಲ್ಲ, ಮದ್ಯ ಸೇವನೆಗೆ ಹಣ ನೀಡುವಂತೆ ಪೀಡಿಸುತ್ತಾರೆ. ಹಣ ಕೊಡದಿದ್ದರೆ ಬೆಂಕಿಹಚ್ಚಿಕೊಂಡು ಸಾಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಾವು ನಮ್ಮ ಕೊರಳಲ್ಲಿರುವ ತಾಳಿ ಅಡವಿಟ್ಟು ಮದ್ಯ ಸೇವನೆಗೆ ಹಣ ತಂದುಕೊಡುವ ಸ್ಥಿತಿ ಎದುರಾಗಿದೆ. ನೀವು ಏನಾದರೂ ಮಾಡಿ ನಮ್ಮ ಊರಿನಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯಕ್ಕೆ ಕಡಿವಾಣ ಹಾಕಿ. ನಮ್ಮ ಸಂಸಾರ ಬೀದಿ ಪಾಲಾಗುವುದನ್ನು ತಡೆಯಿರಿ' ಎಂದು ಧರಣಿ ನಿರತ ಮಹಿಳೆಯರು ಅಬಕಾರಿ, ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.ಐನೋಳ್ಳಿಯ ದಲಿತರ ಬಡಾವಣೆ, ಚಿಂಚೋಳಿ, ಚಿಮ್ಮನಚೋಡ ಮತ್ತು ಚಂದನಕೇರಾ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಮದ್ಯದ ಅಂಗಡಿ ಸ್ಥಳಾಂತರಿಸಬೇಕು, ನೂರು ಮನೆಗಳಿರುವ ಚಿಂತಕುಂಟಾ ಗ್ರಾಮದಲ್ಲಿ 4 ಕಡೆ ಅಕ್ರಮ ಮದ್ಯ ಮಾರಾಟ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ. ಹಳ್ಳಿ, ತಾಂಡಾಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಸಭ್ಯರು, ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.`ಈ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸದೇ ಹೋದರೆ ಮತ್ತು ಅಕ್ರಮ ಮಾರಾಟ ತಡೆಯದಿದ್ದರೆ, ಉಗ್ರ ಹೋರಾಟ ನಡೆಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.ಹೋರಾಟದ ನೇತೃತ್ವವನ್ನು ಸಂಘದ ಜಿಲ್ಲಾ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷೆ ಮಲ್ಲಮ್ಮೋ ಕೋಡ್ಲಿ, ತಾಲ್ಲೂಕು ಅಧ್ಯಕ್ಷ ಗೋಪಾಲ ಭಜಂತ್ರಿ, ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಕುಪೇಂದ್ರ ಐನೋಳಿ, ಚಂದ್ರಮ್ಮೋ ಪೋಚಾವರಂ, ಅನಂತಮ್ಮೋ ಮಿರಿಯಾಣ, ಸಿದ್ದಲಿಂಗಯ್ಯ ಯಂಪಳ್ಳಿ, ಪ್ರದೀಪ ತಿರ್ಲಾಪುರ, ಮಾರುತಿ ಜಮಾದಾರ ಮುಂತಾದವರು ವಹಿಸಿದ್ದರು.ಅಬಕಾರಿ ಇನ್ಸ್‌ಪೆಕ್ಟರ್ ಬಾಲಕೃಷ್ಣ ಮುದುಕಣ್ಣ ಮಾತನಾಡುತ್ತ, `ನಿಮ್ಮ ಗಂಡಂದಿರನ್ನು ನಿಯಂತ್ರಿಸಲು ಆಗದಿದ್ದರೆ ಹೇಗೆ?' ಎಂದು ಮಹಿಳೆಯರನ್ನು ಪ್ರಶ್ನಿಸಿ, `ನಾನು ತಾಲ್ಲೂಕು ನಿಯಂತ್ರಿಸುವುದು ಸಾಧ್ಯವೆ?' ಎಂದು ಹಗುರವಾಗಿ ಮಾತನಾಡಿದಾಗ, ಶರಣಬಸಪ್ಪ ಮಮಶೆಟ್ಟಿ ಹಾಗೂ ಮಹಿಳೆಯರು ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಯೂ ನಡೆಯಿತು.ಸಬ್ ಇನ್ಸ್‌ಪೆಕ್ಟರ್ ಸುರೇಶ ಬೆಂಡಗುಂಬಳ, ತಹಶೀಲ್ದಾರ ಜಗನ್ನಾಥರೆಡ್ಡಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.