ಸೋಮವಾರ, ಏಪ್ರಿಲ್ 19, 2021
32 °C

ವನ್ಯಜೀವಿ ಪ್ರಬೇಧ ನಾಶ: ಆತಂಕ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ವನ್ಯಜೀವಿ ಪ್ರಬೇಧ ನಾಶ: ಆತಂಕ

ಚಿಂಚೋಳಿ: ಕಾಡು ಅಂದರೆ ಅದು ಬರೀ ಗಿಡ ಮರಗಳ ಪೊದೆಯಲ್ಲ. ಅಂದು ಜೀವವೈವಿಧ್ಯದ ತಾಣ. ಬಗೆ-ಬಗೆಯ ಗಿಡಮರ, ಬಳ್ಳಿಗಳು, ಪ್ರಾಣಿ, ಪಕ್ಷಿ ಮತ್ತು ಸರಿಸೃಪಗಳ ನಿಗೂಢ ಜಗತ್ತು. ಭೂಮಿಯ ಕೊಡು ಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಜೀವಜಾಲದ ಮಹಾಪೋಷಕವಾಗಿವೆ ಅರಣ್ಯಗಳು.ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ ಗೈಯುವ ಮಾನವನ ದುರಾಸೆಗೆ ಕಾಡನ್ನೇ ಆಶ್ರಯಿಸಿದ್ದ ನೂರಾರು ಬಗೆಯ ವನ್ಯಜೀವಿಗಳು ಕಣ್ಮರೆಯಾಗಿವೆ. ತಜ್ಞರ ಪ್ರಕಾರ ಕ್ರಿಶ. 1600ರಿಂದ 1900ವರೆಗೆ ಪ್ರತಿ ನಾಲ್ಕು ವರ್ಷಕ್ಕೆ ಒಂದು ಜೀವಿಯ ಪ್ರಬೇಧ ನಾಶವಾದರೆ, 1900ರಿಂದ ಈಚೆಗೆ ಪ್ರತಿವರ್ಷಕ್ಕೆ ಒಂದು ಜೀವಿಯ ಪ್ರಬೇಧ ನಾಶವಾಗುತ್ತಿದೆ ಎಂಬ ವಾದಗಳಿವೆ. ಕಳೆದ 50 ವರ್ಷಗಳಲ್ಲಿಯೇ 40 ವಿವಿಧ ಪ್ರಾಣಿಗಳ ಪ್ರಬೇಧ ಅವಸಾನ ಹೊಂದಿವೆ ಎಂಬುದು ಇದಕ್ಕೆ ಸಾಕ್ಷಿ. 1950ರ ನಂತರ ಇದು ಮತ್ತಷ್ಟು ತೀವ್ರವಾಗಿದೆ.ಹೈದರಾಬಾದ ಕರ್ನಾಟಕ ಅಥವಾ ಗುಲ್ಬರ್ಗ ಜಿಲ್ಲೆ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಕೇವಲ ಕೆಂಡ ಕಾರುವ ಸೂರ್ಯ. ಬಿಸಿಲಿಗೆ ಬಸವಳಿದ ಜನ! ಆದರೆ ಇಲ್ಲಿ ಅನೇಕ ತಂಪು ತಾಣಗಳು ಹಾಗೂ ಜೀವವೈವಿಧ್ಯ ಮತ್ತು ವನ್ಯಜೀವಿಗಳು ಹೊಂದಿರುವ ಕೊಂಚಾವರಂ ಅರಣ್ಯ ಇರುವುದು ಅನೇಕರಿಗೆ ಗೊತ್ತಿಲ್ಲ!ಇಲ್ಲಿ ಬೆಲೆ ಬಾಳುವ ಸಾಗವಾನಿ, ರಕ್ತ ಚಂದನ, ಮತ್ತಿ, ತೇಗ, ಹಿಪ್ಪೆ, ದಿಂಡಿಲು, ಧೂಪ, ಶ್ರೀಗಂಧ, ತಾರೆ, ಸ್ವಾಮಿ, ಬಿಲ್ವಪತ್ರೆ ಮರಗಳಿವೆ. ವನ್ಯಜೀವಿಗಳಾದ ಚಿರತೆ, ಕಾಡು ಕುರಿ, ಜಿಂಕೆ, ಚುಕ್ಕಿಜಿಂಕೆ, ನರಿ, ಮೊಲ, ತೋಳ, ಕಾಡು ಬೆಕ್ಕು, ಕಾಡು ಹಂದಿ, ಮುಳ್ಳು ಹಂದಿ, ಮುಂಗುಸಿ, ಹೆಬ್ಬಾವು, ಉಡ, ಮಂಗ, ಕೋತಿ ಹಾಗೂ ನವಿಲು, ಪಾರಿವಾಳ, ಹದ್ದು, ರಣ ಹದ್ದು, ಗುಬ್ಬಿ, ಕಾಡು ಗುಬ್ಬಿ, ಗಿಣಿ. ಗೂಬೆ, ಬಾವಲಿ ಮುಂತಾದ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವೂ ಹೌದು.ಪ್ರವಾಸಿ ತಾಣ: ಈ ಕಾಡು ಪ್ರವಾಸಿ ತಾಣಗಳ ಆಗರ. ನೈಸರ್ಗಿಕ ಸೌಂದರ್ಯದ ಬೀಡಾದ ಪ್ರಾಗೈತಿಹಾಸಿಕ ಕಾಲದ ಕುರುಹು ಹೊಂದಿರುವ ಗೊಟ್ಟಂಗೊಟ್ಟ ಬೆಟ್ಟ, ಈ ಕಾಡಿನ ಹೃದಯ ಭಾಗದಲ್ಲಿ ಬರುವ ಆನೆ ಪಳಗಿಸುವ ಶಾಲೆ(ಹಾಥಿ ಪಗಡಿ), ಎತ್ತಿಪೋತ ಜಲಪಾತ, ಚಂದ್ರಂಪಳ್ಳಿ ಜಲಾಶಯ, ಮಂಡಿ ಬಸವಣ್ಣ ಕ್ಯಾಂಪ್, ಶೇರಿ ಭಿಕನಳ್ಳಿ ಜೀವ ವೈವಿಧ್ಯತಾಣ. ಲಾಲ್ ತಾಲಾಬ್, ಧರ್ಮಾಸಾಗರ ಕೆರೆ ಮೈಮರೆಸುತ್ತವೆ.ವನ್ಯಧಾಮದತ್ತ ಮೊದಲ ಹೆಜ್ಜೆ!

ಈ ಕಾಯ್ದಿಟ್ಟ ಅರಣ್ಯ ನಿಧಾನವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಮನ ಸೆಳೆಯುವತ್ತ ಧಾಪುಗಾಲು ಇಡುತ್ತಿದೆ. ದಾಂಡೇಲಿಯ ಕಾಡನ್ನು ಹೋಲುವ ಇದು ಒಟ್ಟು 22 ಸಾವಿರ ಹೆಕ್ಟೇರ್ ವಿಸ್ತಾರ ಹೊಂದಿದೆ ಎಂದು ವಲಯ ಅರಣ್ಯಾಧಿಕಾರಿ ಬಸವರಾಜ ಡಾಂಗೆ ತಿಳಿಸಿದ್ದಾರೆ.ಈ ಅರಣ್ಯವನ್ನು ವನ್ಯಜೀವಿ ತಾಣವಾಗಿ ಘೋಷಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಪರಿಸರ ಹಾಗೂ ವನ್ಯಪ್ರೇಮಿಗಳಲ್ಲಿ ಹರ್ಷ ಮೂಡಿಸಿದೆ. ನಶಿಸುತ್ತಿರುವ ಸಸ್ಯ ಹಾಗೂ ಜೀವಿ ಸಂಪತ್ತುಗಳ ಬಗ್ಗೆ ಅಧ್ಯಯನ ನಡೆಸಿ ಸಂರಕ್ಷಿಸುವ ಉದ್ದೇಶದಿಂದ ಶೇರಿ ಭಿಕನಳ್ಳಿ ಕಾಯ್ದಿಟ್ಟ ಜೀವ ವೈವಿಧ್ಯ ತಾಣವಾಗಿ ಘೋಷಿಸಲಾಗಿದೆ. ಕಾಡು ಪ್ರಾಣಿಗಳ ಸಂರಕ್ಷಣೆಗೆ ನೆರವಾಗುವ ವನ್ಯಜೀವಿ ಧಾಮವಾಗಿಸಲು ಕೇಂದ್ರದ ಪರಿಸರ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಜತೆಗೆ ಗೊಟ್ಟಂಗೊಟ್ಟ ಅರಣ್ಯವನ್ನು ದೇವವನವಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವ ಇಲಾಖೆ ಮುಂದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.