ಭಾನುವಾರ, ಮೇ 22, 2022
26 °C

ಮೌಲ್ಯಗಳಿಗೆ ಬದ್ಧರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸ್ವ-ಸಾಮರ್ಥ್ಯದಲ್ಲಿ ನಂಬಿಕೆ ಹಾಗೂ ದೃಢ ನಿರ್ಧಾರದೊಂದಿಗೆ ಮೌಲ್ಯಗಳಿಗೆ ಬದ್ಧರಾಗಿ ಮುನ್ನಡೆಯಬೇಕು ಎಂದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದೆಹಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಎಸ್.ಎಸ್. ಮಂಥಾ ಸಲಹೆ ನೀಡಿದರು.ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.ಸಮಾಜದ ಪರಿವರ್ತನೆಗೆ ಸಣ್ಣ ಸಕಾರಾತ್ಮಕ ಚಿಂತನೆ ಸಾಕಾಗುವುದಿಲ್ಲ ಎನ್ನುವ ಕೀಳಿರಿಮೆ ಬೇಡ. ಹನಿಹನಿ ನೀರು ನಿರಂತರವಾಗಿ ಬಿದ್ದರೆ ಬಂಡೆಗಲ್ಲು ಕೂಡಾ ಒಡೆಯುವುದಕ್ಕೆ ಕಾರಣವಾಗುತ್ತದೆ ಎಂದು ಮಾರ್ಮಿಕವಾಗಿ             ಹೇಳಿದರು.ಅವಕಾಶ ಹೇಗೆ, ಯಾವಾಗ ಬಂದರೂ ಕೈಯಿಂದಾಗುವ ಸಹಾಯ ಮಾಡುವುದನ್ನು ಮರೆಯಬಾರದು. ಯಶಸ್ಸಿನ ನಿಜವಾದ ಗುಟ್ಟು ಇದೇ ಆಗಿದೆ. ವೈಫಲ್ಯತೆ ಜೀವನಕ್ಕೆ ಪಾಠ ಕಲಿಸುತ್ತದೆ. ಆದರೆ ಮುಕ್ತ ಮನಸ್ಸಿದ್ದರೆ ಎಂತಹ ಸ್ಪರ್ಧೆಯಲ್ಲೂ ಗೆಲ್ಲಬಹುದು. ಸುತ್ತಲಿದ್ದವರನ್ನು ನಿರ್ಲಕ್ಷಿಸಿ ಗೆಲ್ಲಬೇಕೆನ್ನುವ ಮನೋರೋಗಕ್ಕೆ ಒಳಗಾಗಬೇಡಿ ಎಂದು ಕಿವಿಮಾತು ಹೇಳಿದರು.ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಮಾತನಾಡಿ, `ವಿಶ್ವಬ್ಯಾಂಕ್ ಯೋಜನೆ, ಕೇಂದ್ರ ಸರ್ಕಾರದ ಟೆಕಿಪ್ ಯೋಜನೆಗಳನ್ನು ಹೊಂದಿರುವ ರಾಜ್ಯ 14 ಕಾಲೇಜುಗಳ ಪೈಕಿ ಪಿಡಿಎ ಕೂಡಾ ಒಂದಾಗಿದೆ. ಕಾಲೇಜಿನ ಮೂಲ ಸೌಕರ್ಯ ಹಾಗು ಸಿಬ್ಬಂದಿ ಅಭಿವೃದ್ಧಿಗಾಗಿ ಅನುದಾನವನ್ನು ಸಮರ್ಕವಾಗಿ ಬಳಸಿರುವುದಕ್ಕೆ ಅನುದಾನ ನೀಡಿದ ಸಂಸ್ಥೆಗಳು ತೃಪ್ತಿ ವ್ಯಕ್ತಪಡಿಸಿವೆ' ಎಂದರು.`ಶೀಘ್ರದಲ್ಲೆ 120 ಕಂಪ್ಯೂಟರ್ ಒಳಗೊಂಡ ತಾಂತ್ರಿಕ ತರಬೇತಿ ಕೇಂದ್ರವೊಂದನ್ನು ತೆರೆಯಲಾಗುವುದು. ಇದರಲ್ಲಿ ಆನ್‌ಲೈನ್ ಪರೀಕ್ಷೆ ನಡೆಸಲು ಸಾಧ್ಯವಾಗಲಿದೆ. ಎಚ್‌ಕೆಇ ಆಡಳಿತ ಮಂಡಳಿಯು 12 ಅಂಶಗಳ ಕಾರ್ಯಕ್ರಮ ಯೋಜಿಸಿದ್ದು, ಎಲ್ಲವನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲು ಉತ್ಸುಕವಾಗಿದೆ' ಎಂದು ಹೇಳಿದರು.ಎಂಜಿನಿಯರಿಂಗ್ ಪದವಿ ವಿಭಾಗದ 660 ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ವಿಭಾಗದ 136 ವಿದ್ಯಾರ್ಥಿಗಳಿಗೆ ಪದವಿಪತ್ರ ಪ್ರದಾನ ಮಾಡಲಾಯಿತು. ಪ್ರತಿ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಾಬುರಾವ ಮಂಗಾಣೆ, ಕಾರ್ಯದರ್ಶಿ ಶರದ್ ಎಂ. ರಾಂಪುರೆ, ಡಾ. ಸಂಪತಕುಮಾರ್ ಲೋಯಾ, ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್. ಹೆಬ್ಬಾಳ, ಉಪ ಪ್ರಾಂಶುಪಾಲ ಡಾ. ಜಿ. ಕೆ. ಪುರೋಹಿತ, ಕಲ್ಯಾಣ ಅಧಿಕಾರಿ ಡಾ. ಎಸ್. ಆರ್. ಪಾಟೀಲ, ಡಾ. ಎಸ್. ಆರ್. ಮೀಸೆ ಮತ್ತಿತರರು ಇದ್ದರು.ನಿದಾ ಮುಡಿಗೆ ಐದು ಚಿನ್ನದ ಪದಕ

ಮೂಲತಃ ಗುಲ್ಬರ್ಗದವರಾದ ಸದ್ಯ ಮಹಾರಾಷ್ಟ್ರದ ಪುಣೆ ವಾಸಿಯಾಗಿರುವ `ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್' ಪದವಿ ವಿದ್ಯಾರ್ಥಿನಿ ನಿದಾ ಸುಮೆಯಾ ಅವರು ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಮೂರು, ವಿದ್ಯಾರ್ಥಿನಿಯರಲ್ಲಿ ಗರಿಷ್ಠ ಅಂಕ ಪಡೆದಿದ್ದಕ್ಕೆ ಒಂದು ಹಾಗೂ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದಿದ್ದಕ್ಕೆ ಒಂದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.ಮೂವರು ಸಹೋದಯರಿಯಲ್ಲಿ ನಿದಾ ಚಿಕ್ಕವಳಾಗಿದ್ದು, ತನ್ನ ಅಕ್ಕ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದುಕೊಂಡಿರುವುದನ್ನೇ ಮಾದರಿಯಾಗಿಟ್ಟುಕೊಂಡು ಅಧ್ಯಯನ ಕೈಗೊಂಡು ಯಶಸ್ಸು ಸಾಧಿಸಿದ್ದಾರೆ. ಅಕ್ಕನಂತೆ `ಚಿನ್ನದ ಹುಡುಗಿ'ಯಾಗಿದ್ದಕ್ಕೆ ಖುಷಿಯಾಗಿದ್ದರು.ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಗೆ ಈಗಾಗಲೇ ನಿದಾ ಆಯ್ಕೆಯಾಗಿದ್ದು, ಮೈಸೂರಿನ ಇನ್ಫೋಸಿಸ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಿದಾ ಅವರ ಸಂತೋಷದಲ್ಲಿ ಭಾಗಿಯಾಗಬೇಕಿದ್ದ ತಂದೆ-ತಾಯಿ ಮಾತ್ರ ತೀರಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.