ಶುಕ್ರವಾರ, ಆಗಸ್ಟ್ 7, 2020
25 °C

ಮಣ್ಣಿನ ಮಕ್ಕಳ `ಮಣ್ಣೆತ್ತಿನ ಅಮಾವಾಸ್ಯೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣ್ಣಿನ ಮಕ್ಕಳ `ಮಣ್ಣೆತ್ತಿನ ಅಮಾವಾಸ್ಯೆ'

ಗುಲ್ಬರ್ಗ:   ಮುಂಗಾರು ಮಳೆ ಶುರುವಾಗಿದೆ. ರೈತರ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಕೃಷಿ ಚಟುವಟಿಕೆ ಆರಂಭಿಸುವ ಮುನ್ನ ರೈತಾಪಿ ವರ್ಗ ತಮ್ಮ ಜೀವನಕ್ಕೆ ಬೆಳುಕು ನೀಡುವ ಎತ್ತುಗಳಿಗೆ ನಮ್ರತೆಯ ಭಾವದಿಂದ ಪೂಜೆ ಸಲ್ಲಿಸುತ್ತಾರೆ. ಯಾವುದೇ ಕಷ್ಟ ಕಾರ್ಪಣ್ಯ ಬರದಂತೆ ಕಾಪಾಡು ಎಂದು ಭಕ್ತಿ ಪೂರ್ವಕವಾಗಿ, ಪಾದಗಳಿಗೆ ಎರುಗುವ ಮೂಲಕ ಕೃಷಿ ಕಾರ್ಯಗಳಿಗೆ ಚಾಲನೆ ನೀಡುತ್ತಾರೆ.  ಜುಲೈ 8 ರ ಸೋಮವಾರ ಮಣ್ಣೆತ್ತಿನ ಅಮಾವಾಸ್ಯೆ. ಎಲ್ಲೆಡೆ ಸಂಭ್ರದಿಂದ ಆಚರಣೆ ಮಾಡುವ ಹಬ್ಬ. ಇಂಥ ಸಂಭ್ರಮದ ಹೊಸ್ತಿಲಲ್ಲಿರುವ ರೈತನಿಗೆ ಬಾಳನ್ನು ಹಸನು ಮಾಡುವ ಎತ್ತುಗಳಿಗೆ ಪೂಜೆ ಸಲ್ಲಿಸುವ ದಿನ. ಎತ್ತಿನ ಮಣ್ಣಿನ ಮೂರ್ತಿ ಮಾಡಿ ಪೂಜಿಸುವುದು ರೂಢಿ. ಹಾಗಾಗಿ ಗುಲ್ಬರ್ಗ ಸೇರಿದಂತೆ ವಿವಿಧ ಭಾಗಗಳಲ್ಲಿ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು (ಮಣ್ಣೆತ್ತು) ಮಾರಾಟ ಮಾಡಲಾಗುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್: `ಹೈದರಾಬಾದ್‌ನಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ತರಿಸಿ ಅದರಿಂದ ಎತ್ತುಗಳ ಮೂರ್ತಿ ತಯಾರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ವ್ಯಾಪಾರ ಚೆನ್ನಾಗಿದೆ. 30 ರೂಪಾಯಿಂದ  200 ರೂಪಾಯಿವರೆಗೆ ಒಂದು ಜೋಡಿ ಎತ್ತನ್ನು ಮಾರಾಟ ಮಾಡುತ್ತೇವೆ. ಹೆಚ್ಚಾಗಿ ಚಿಕ್ಕ ಎತ್ತುಗಳನ್ನು ರೈತರು

ಖರೀದಿಸುತ್ತಾರೆ. ಇದರ ಜೊತೆಗೆ ದೋಣಿ ಉಚಿತವಾಗಿ ನೀಡುತ್ತೇವೆ. ಎಲ್ಲ ಮಟ್ಟದ ಎತ್ತುಗಳಿಗೆ ಒಂದೇ ತರನಾದ ದೋಣಿ ಮಾಡಲಾಗಿದೆ. ಇದು ಬಿಟ್ಟರೆ ಕುಡಿ ಮಡಿಕೆಗಳನ್ನು ಮಾರಾಟ ಮಾಡುತ್ತೇವೆ. ಬರುವ ಮನೆಯ ಹೆಂಗಸರನ್ನು ಕರೆ ತಂದಿರುತ್ತೇವೆ. ಅವರು ನಮಗೆ ಸಹಾಯ ಮಾಡುತ್ತಾರೆ' ಎನ್ನುತ್ತಾರೆ ಗುಲ್ಬರ್ಗದಲ್ಲಿ ವ್ಯಾಪಾರ ಮಾಡುತ್ತಿರುವ ಲಾತೂರ್‌ನ ಉದ್ಗೀರ್‌ದಿಂದ ಬಂದ ವಸಂತ ಕುಂಬಾರ.`ಕಾರ ಹುಣ್ಣೆಮೆಗೆ ಎರಡು ದಿನ ಮೊದಲೇ ಇಲ್ಲಿಗೆ ಬರುತ್ತೇವೆ. ಇಲ್ಲಿಯೇ ಎತ್ತಿನ ಮೂರ್ತಿಗಳನ್ನು ತಯಾರಿಸುತ್ತೇವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಆದ್ದರಿಂದ ಒಣಗಲು ಹೆಚ್ಚು ಸಮಯಬೇಕಿಲ್ಲ. ಗಂಡಸರು ಮಾಡಿಕೊಟ್ಟ ಎತ್ತುಗಳಿಗೆ ಬಣ್ಣ ಬಳಿದು ಅಂತಿಮ ಸ್ಪರ್ಶ ಕೊಡೋದು ನಮ್ಮ ಕೆಲಸ' ಎಂದು ಕಾರ ಹುಣ್ಣಿಮೆಯಿಂದ ಅಪ್ಪನ ಕೆರೆಯ ಹಿಂಬದಿಯಲ್ಲಿ ಮೂರ್ತಿ ಮಾರಾಟ ಮಾಡುವ ಆಶಾ ತಿಳಿಸುತ್ತಾರೆ.ಪೂಜೆ: `ಮಣ್ಣೆತ್ತುಗಳನ್ನು ತಂದು ಸಿಂಗರಿಸಿ, ಹೋಳಿಗೆ, ಇಲ್ಲವೇ ಶಾವಿಗೆ ಪಾಯಸ ಮಾಡಿ ನೈವೇದ್ಯ ಮಾಡಿ ಪೂಜೆ ನೆರವೇರಿಸಲಾಗುತ್ತದೆ. ಅದರ ಜೊತೆಗೆ ತಂದ ಮಣ್ಣಿನ ದೋಣಿಯಲ್ಲಿ ಕಾಳುಗಳನ್ನು ಹಾಕಿ ಬೆಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಲಾಗುತ್ತದೆ. ಸಂಜೆ ಎಲ್ಲರ ಮನೆಯ `ಬಸವಣ್ಣ'ನನ್ನು(ಮೂರ್ತಿ) ಮೆರವಣಿಗೆ ಮಾಡಿ ಅಗಸಿಯಲ್ಲಿರುವ ಬಾವಿಕಟ್ಟೆಗೆ ತರಲಾಗುತ್ತದೆ. ಅಲ್ಲಿ ಎಲ್ಲ ಬಸವಣ್ಣಗಳಿಗೆ ಪೂಜೆ ನೆರವೇರಿಸಿ ಬಾವಿಯಲ್ಲಿ  ಹಾಕಲಾಗುತ್ತದೆ.ಗ್ರಾಮೀಣ ಸ್ಪರ್ಧೆ: ಇದಕ್ಕೂ ಮೊದಲು ಅಗಸಿ ಬಾಗಿಲಲ್ಲಿ ಸಾಲಾಗಿ ಹುಡುಗರನ್ನು ನಿಲ್ಲಿಸಿ ಅವರ ಕೈಯಲ್ಲಿ ಒಂದು ಬಸವಣ್ಣನನ್ನು ಇರಿಸಿದ ತಟ್ಟೆ ಕೊಟ್ಟು ಓಡಿಸಲಾಗುತ್ತದೆ. ಒಂದು ನಿಮಿಷದ ಅವಧಿಯೊಳಗೆ ಯಾರು ಹೆಚ್ಚು ಮುಂದೆ ಓಡುತ್ತಾರೋ ಅವರಿಗೆ ಬಹುಮಾನ ನೀಡಲಾಗುತ್ತದೆ. ಕೃಷಿಕರಿಗೆ ಭೂ ತಾಯಿ ಉಳುಮೆಯ ಪರಿಕರಗಳ ಪೂಜೆಯ ದಿನ ಇದು. ಮಕ್ಕಳಿಗೆ ಮನರಂಜನೆ ನೀಡುತ್ತದೆ ಈ ಹಬ್ಬ' ಎನ್ನುತ್ತಾರೆ ಗೃಹಿಣಿ ಮಹೇಶ್ವರಿ ಇಂಡಿ.ಮಣ್ಣಿನ ಎತ್ತುಗಳು

`ಇಂದಿನ ಆಧುನಿಕ ಯುಗದಲ್ಲಿ ಅಂದ, ಚಂದ, ನೋಡುತ್ತಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನೋಡೋಕೆ ಅಂದವಾಗಿರುವುದರಿಂದ ನಮ್ಮ ಮೂಲ ವೃತ್ತಿ ಕುಂಬಾರಿಕೆ ವೃತ್ತಿಗೆ ಪೆಟ್ಟು ಬಿದ್ದಿದೆ. ಪರಂಪರಾಗತವಾಗಿ ಮಾಡಿಕೊಂಡು ಬಂದ ಕಸುಬು ಬಿಡಬಾರದು ಎನ್ನುವ ಕಾರಣಕ್ಕಾಗಿ ಈ ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರತಿ ವರ್ಷದಂತೆ   ಈ ವರ್ಷವೂ  ವ್ಯಾಪಾರ ಅಷ್ಟಕ್ಕಷ್ಟೆ. ಮನೆಮಂದಿ ಎಲ್ಲ ಸೇರಿ ಮೂರು- ನಾಲ್ಕು ತಿಂಗಳು ಮುಂಚೆಯೇ ಹುತ್ತಿನಮಣ್ಣು ಹುಡುಕಾಡಿ ತಂದು ಅದರಿಂದ ಎತ್ತುಗಳನ್ನು ತಯಾರಿಸುತ್ತೇವೆ. ಹುತ್ತಿನ ಮಣ್ಣ ಪೂಜೆಗೆ ಶ್ರೇಷ್ಠವಾದ್ದರಿಂದ. ಪರಿಸರ ಪ್ರೇಮಿಗಳು, ಹಬ್ಬದ ಬಗ್ಗೆ ಜಾಗೃತಿ ಇರುವವರು ಮಣ್ಣಿನ ಎತ್ತುಗಳನ್ನೇ ಹುಡುಕಾಡಿಕೊಂಡು ಬಂದು ತೆಗೆದುಕೊಂಡು ಹೋಗುತ್ತಾರೆ' ಎನ್ನುತ್ತಾರೆ ಅಪ್ಪನ ದೇವಸ್ಥಾನದ ಹತ್ತಿರ ಮಣ್ಣೆತ್ತುಗಳನ್ನು ಮಾರಾಟ ಮಾಡುತ್ತಿರುವ ಶಿವರಾಜ್ ಕುಂಬಾರ್ .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.