ಭಾನುವಾರ, ನವೆಂಬರ್ 17, 2019
29 °C

ಮತ್ತೆ ಮಳೆ: ರೈತರಲ್ಲಿ ನಿರೀಕ್ಷೆ

Published:
Updated:

ಗುಲ್ಬರ್ಗ: ಜಿಲ್ಲೆಯಲ್ಲಿ ಕೆಲ ದಿನ ಮರೆಯಾಗಿದ್ದ ಮಳೆ ಮತ್ತೆ ಸುರಿಯಲು ಆರಂಭಿಸಿದ್ದು, ರೈತರಲ್ಲಿ ಮತ್ತೆ ಭರವಸೆ ಮೂಡಿಸಿದೆ.ಜೂನ್ ತಿಂಗಳಲ್ಲಿ ಮುಂಗಾರು ಜಿಲ್ಲೆಗೆ ಪ್ರವೇಶಿಸಿದ್ದರೂ, ಸಮರ್ಪಕ ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ.  ಜೂನ್‌ತಿಂಗಳ ವಾಡಿಕೆ ಮಳೆ 122 ಮಿ.ಮೀ ಆಗಿದ್ದು, ಈ ಬಾರಿ 113 ಮಿ.ಮೀ. ಮಾತ್ರ ಬಿದ್ದಿದೆ. ಜುಲೈ ಆರಂಭದಲ್ಲೂ ನಿರೀಕ್ಷಿತ ಮಳೆ ಬಿದ್ದಿಲ್ಲ. ಇದರಿಂದ ಬಿತ್ತನೆ ವಿಳಂಬಗೊಂಡಿದೆ. `ಈ ಬಾರಿ ಜಿಲ್ಲೆಯಲ್ಲಿ ಒಟ್ಟು 5.71 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದೆ. ಈ ಪೈಕಿ ಈ ತನಕ  ಶೇ 40ರಷ್ಟು ಮಾತ್ರ ಬಿತ್ತನೆ ಆಗಿದೆ. ಮಳೆ ವಿಳಂಬದ ಕಾರಣ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಗುಲ್ಬರ್ಗದಲ್ಲಿ  ಆಗಸ್ಟ್ ಅಂತ್ಯದ ತನಕ ಬಿತ್ತನೆ ಕಾರ್ಯ ನಡೆಯುತ್ತದೆ. ಹೀಗಾಗಿ ಮಳೆ ಸುರಿದರೆ, ಇನ್ನಷ್ಟು ಬಿತ್ತನೆ ಆಗುವ ಭರವಸೆ ಇದೆ' ಎಂದು ಕೃಷಿ ಇಲಾಖೆ ಜಂಟಿ ಉಪ ನಿರ್ದೇಶಕ ಎ.ಇ.ಬಳತ್ಕರ್ ಹೇಳಿದರು.ಈ ಬಾರಿ 3.65 ಲಕ್ಷ ಪ್ರದೇಶದಲ್ಲಿ ತೊಗರಿ ಬಿತ್ತನೆ ನಿರೀಕ್ಷೆ ಇದೆ. ಆದರೆ ವಾಡಿಕೆಗಿಂತ ಕಡಿಮೆ ಹಾಗೂ ಎಲ್ಲಡೆ ಮಳೆ ಬೀಳದ ಕಾರಣ ಬಿತ್ತನೆ ಕಡಿಮೆಯಾಗಿದೆ. ಬಿತ್ತನೆ ಬೀಜ ಹಾಗೂ ರಸ  ಗೊಬ್ಬರ ದಾಸ್ತಾನು ಇದೆ ಎಂದರು.

ಜಿಲ್ಲೆಯಲ್ಲಿ ಸುರಿದ ಮಳೆ ಪ್ರಮಾಣ

ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 8ಕ್ಕೆ ತನಕ ಸುರಿದ 24 ಗಂಟೆಗಳ ಮಳೆ ಪ್ರಮಾಣ ವಿವರ ಇಂತಿವೆ. ಚಿಂಚೋಳಿ- 12.6 ಮಿ.ಮೀ, ಚಿತ್ತಾಪುರ-0ಮಿ.ಮೀ, ಆಳಂದ-4 ಮಿ.ಮೀ, ಗುಲ್ಬರ್ಗ-3 ಮಿ.ಮೀ, ಅಫಜಲಪುರ-20 ಮಿ.ಮೀ,        ಜೇವರ್ಗಿ-1 ಮಿ.ಮೀ ಮಳೆಯಾಗಿದೆ. ಮಂಗಳವಾರ ಸಂಜೆ ಮತ್ತೆ ಮೋಡ ಕವಿದ ವಾತಾವರಣವಿದ್ದು, ತಾಪಮಾನವೂ ತಂಪಾಗಿದೆ. ಮಳೆಯ ಆಶಾಕಿರಣ ಮೂಡಿದೆ.

ಪ್ರತಿಕ್ರಿಯಿಸಿ (+)